ಮಂಗಳವಾರ, ಡಿಸೆಂಬರ್ 6, 2022
21 °C

ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್: ಚುನಾವಣಾ ಆಯೋಗಕ್ಕೆ ದೂರು- ಡಿ.ಕೆ.ಶಿವಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

PV Photo

ಕಾರವಾರ: ‘ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕಿರುವ ಬಗ್ಗೆ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇನೆ. 27 ಲಕ್ಷ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ನಿಮ್ಮ ನಿಮ್ಮ ಊರಿನ ಮತದಾರರ ಪಟ್ಟಿಯನ್ನು ಪರಿಶೀಲಿಸಿಕೊಳ್ಳಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಕುಮಟಾದಲ್ಲಿ ಗುರುವಾರ ಕಾಂಗ‌್ರೆಸ್ ಪಕ್ಷ ಹಮ್ಮಿಕೊಂಡಿದ್ದ ಜನಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಹಿಂದುಳಿದ ಜಾತಿಯವರು, ಅಲ್ಪಸಂಖ್ಯಾತರು ಸೇರಿದಂತೆ ಕಾಂಗ್ರೆಸ್‌ಗೆ ಮತ ಹಾಕುವವರ ಹೆಸರನ್ನು ಮತದಾರರ ಪಟ್ಟಿಯಿಂದ ಅಳಿಸಿ ಹಾಕಲಾಗಿದೆ. ಇಂಥವು ಬಿಜೆಪಿಯ ಕೊನೆಯ ಆಟ. ಚಿಲುಮೆ ಸಂಸ್ಥೆಯ ಬಗ್ಗೆ ರಾಜ್ಯ ಸರ್ಕಾರದ ಯಾರೋ ದೊಡ್ಡ ಸಚಿವರೊಬ್ಬರು ತಮಗೂ ಆ ಸಂಸ್ಥೆಗೂ ಸಂಬಂಧವಿಲ್ಲ ಎಂದು ಹೇಳಿದ್ದರು. ನಂತರ ಸಂಸ್ಥೆ ತಮಗೆ ಪರಿಚಯವಿದೆ, ಆದರೆ ಅದನ್ನು ದುರ್ಬಳಕೆ ಮಾಡಿಲ್ಲ ಎಂದು ಹೇಳಿದರು. ಡಬಲ್ ಎಂಜಿನ್ ಸರ್ಕಾರದಿಂದ ಯಾರಿಗೂ ಏನೂ ಲಾಭವಾಗಿಲ್ಲ. ಯಾರೂ ಮತದಾನದ ಹಕ್ಕನ್ನು ಮಾರಿಕೊಳ್ಳಬೇಡಿ’ ಎಂದು ಹೇಳಿದರು. 

ಕರಾವಳಿಗೆ ಪ್ರತ್ಯೇಕ ಪ್ರಣಾಳಿಕೆ: 
'ಬಿಜೆಪಿಯವರು ಜಾತಿ, ಧರ್ಮಗಳ ನಡುವೆ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಆದರೆ, ಕಾಂಗ್ರೆಸ್‌ ಪಕ್ಷ  ಹಿಂದೂಗಳು, ಮುಸ್ಲಿಮರು, ಕ್ರೈಸ್ತರು, ಬಂಟರು, ಒಕ್ಕಲಿಗರು, ಬ್ರಾಹ್ಮಣರು... ಹೀಗೆ ಎಲ್ಲರೂ ಒಂದು ಎಂಬ ಭಾವನೆ ಹೊಂದಿದೆ’ ಎಂದರು.

‘ಕರಾವಳಿಯಲ್ಲಿ ಉದ್ಯೋಗ ಸೃಷ್ಟಿ ಮಾಡಬೇಕು. ಪ್ರಕೃತಿಯ ಸೌಂದರ್ಯಕ್ಕೆ ಶಕ್ತಿ ತುಂಬಬೇಕಿದೆ. ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಾವು ಮಾಡ್ತೇವೆ. ಸ್ಥಳೀಯ ಸಮಸ್ಯೆಗಳಿಗೆ ಈ ಬಾರಿ ಕಾಂಗ್ರೆಸ್ ಪಕ್ಷವು ಪ್ರತ್ಯೇಕ ಚುನಾವಣಾ ಪ್ರಣಾಳಿಕೆ ತರುತ್ತೇವೆ. ಕರಾವಳಿಯ ಅಭಿವೃದ್ಧಿ, ಶಾಂತಿ ಉದ್ಯೋಗಕ್ಕಾಗಿ ಇದು ಕೆಲಸ ಮಾಡುತ್ತೇವೆ. ಇದು ಪಕ್ಷದ ವಚನ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು