ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರವಾರ: ನಿಧಾನಗತಿಯಲ್ಲಿ ಡ್ರೋನ್ ಸರ್ವೆ; 6 ತಿಂಗಳಲ್ಲಿ 55 ಗ್ರಾಮಗಳ ಸಮೀಕ್ಷೆ

ಆರು ತಿಂಗಳಲ್ಲಿ ಕೇವಲ 55 ಗ್ರಾಮಗಳ ಸಮೀಕ್ಷೆ ಪೂರ್ಣ
Published 28 ಜೂನ್ 2024, 4:37 IST
Last Updated 28 ಜೂನ್ 2024, 4:37 IST
ಅಕ್ಷರ ಗಾತ್ರ

ಕಾರವಾರ: ಜಮೀನು ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ಸಲುವಾಗಿ ಡ್ರೋನ್ ಮೂಲಕ ಸರ್ವೆ ನಡೆಸುವ ಕಾರ್ಯ ಕೆಲ ತಿಂಗಳಿನಿಂದ ಜಿಲ್ಲೆಯಲ್ಲಿ ನಡೆಯುತ್ತಿದ್ದು, ಸರ್ವೆ ಪ್ರಕ್ರಿಯೆ ತೀರಾ ನಿಧಾನಗತಿಯಲ್ಲಿ ಸಾಗಿದೆ.

ಜಿಲ್ಲೆಯವರೇ ಆದ ಶಾಸಕ ಆರ್.ವಿ.ದೇಶಪಾಂಡೆ 2019ರಲ್ಲಿ ಕಂದಾಯ ಸಚಿವರಾಗಿದ್ದ ವೇಳೆ ರಾಜ್ಯದ ಐದು ಜಿಲ್ಲೆಗಳಲ್ಲಿ ಡ್ರೋನ್ ಸರ್ವೆ ನಡೆಸುವ ಪ್ರಾಯೋಗಿಕ ಯೋಜನೆ ಜಾರಿಗೆ ತಂದಿದ್ದರು. ಅವುಗಳ ಪೈಕಿ ಉತ್ತರ ಕನ್ನಡ ಜಿಲ್ಲೆಯೂ ಒಂದಾಗಿತ್ತು. 2019ರಲ್ಲಿಯೇ ಯೋಜನೆಗೆ ಚಾಲನೆ ನೀಡಲಾಗಿದ್ದರೂ ಜಿಲ್ಲೆಯಲ್ಲಿ ಡ್ರೋನ್ ಸರ್ವೆ ಆರಂಭಗೊಂಡಿರಲಿಲ್ಲ.

ಕಳೆದ ವರ್ಷದ ಡಿಸೆಂಬರ್ ಅಂತ್ಯದ ವೇಳೆಗೆ ಹೊನ್ನಾವರ ಮತ್ತು ಭಟ್ಕಳ ಭಾಗದಲ್ಲಿ ಡ್ರೋನ್ ಬಳಸಿ ಸರ್ವೆ ನಡೆಸುವ ಕಾರ್ಯ ಆರಂಭಗೊಂಡಿತ್ತು. ಆರು ತಿಂಗಳು ಕಳೆದರೂ ಕೇವಲ 55 ಗ್ರಾಮಗಳಲ್ಲಿ ಮಾತ್ರ ಸರ್ವೆ ಕಾರ್ಯ ನಡೆದಿದೆ. ಜಿಲ್ಲೆಯಲ್ಲಿ ಒಟ್ಟು 1,278 ಗ್ರಾಮಗಳ ಸರ್ವೆ ನಡೆಸಬೇಕಾಗಿದೆ.

1930ರ ಅವಧಿಯಲ್ಲಿ ನಡೆದ ಸರ್ವೆ ಆಧರಿಸಿಯೇ ಜಮೀನುಗಳ ಮೂಲನಕ್ಷೆ ಸಿದ್ಧಪಡಿಸಲಾಗಿದೆ. ಆ ಬಳಿಕ ಪೂರ್ಣಪ್ರಮಾಣದ ಸರ್ವೆ ಪ್ರಕ್ರಿಯೆಗಳು ನಡೆದಿಲ್ಲ. ಹೀಗಾಗಿ, ಡ್ರೋನ್ ತಂತ್ರಜ್ಞಾನದ ಮೂಲಕ ಸರ್ವೆ ನಡೆಸಿ ಪ್ರತಿ ಜಮೀನುಗಳ ಡಿಜಿಟಲ್ ನಕ್ಷೆ ಸಿದ್ಧಪಡಿಸಿ, ಅವುಗಳನ್ನು ಸುರಕ್ಷಿತವಾಗಿಟ್ಟುಕೊಳ್ಳಲು ಭೂದಾಖಲೆಗಳ ಇಲಾಖೆ ಮುಂದಾಗಿದೆ. ಆದರೆ, ನಿಧಾನಗತಿಯ ಡ್ರೋನ್ ಸರ್ವೆ ಪ್ರಕ್ರಿಯೆಯಿಂದ ದಾಖಲೆ ಸಿದ್ಧಪಡಿಸಲು ವಿಳಂಬವಾಗುತ್ತಿದೆ ಎಂಬ ದೂರುಗಳಿವೆ.

‘ಡ್ರೋನ್ ಸರ್ವೆ ಮೂಲಕ ತಾಲ್ಲೂಕುಗಳ ಗಡಿ ಗುರುತಿಸುವ ಕೆಲಸ ನಡೆದಿದೆ. ಎರಡನೇ ಹಂತದಲ್ಲಿ ಆಯಾ ಗ್ರಾಮಗಳ ಸರ್ವೆ ನಡೆಸಲಾಗುತ್ತಿದೆ. ಮುಂದಿನ ಹಂತದಲ್ಲಿ ಪ್ರತಿ ಪ್ಲಾಟುಗಳ ಸರ್ವೆ ನಡೆಸಬೇಕಿದೆ. ಸದ್ಯ ಗ್ರಾಮಗಳ ಸರ್ವೆ ನಿಧಾನಗತಿಯಲ್ಲಿದ್ದು, ಈ ಪ್ರಕ್ರಿಯೆ ಮುಗಿದ ನಂತರ ಪ್ಲಾಟುಗಳ ಸರ್ವೆ ನಡೆಸಲಾಗುತ್ತದೆ’ ಎಂದು ಭೂದಾಖಲೆಗಳ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ರಾಜು ಪೂಜಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಭಾರತೀಯ ಸರ್ವೇಕ್ಷಣಾ ಇಲಾಖೆ ಸಹಕಾರದೊಂದಿಗೆ ಬೆಂಗಳೂರಿನ ಖಾಸಗಿ ಸಂಸ್ಥೆಯೊಂದು ಡ್ರೋನ್ ಸರ್ವೆ ನಡೆಸುತ್ತಿದೆ. ಎರಡು ಡ್ರೋನ್ ಬಳಸಿ ಈವರೆಗೆ 536.53 ಚದರ ಕಿ.ಮೀ ವ್ಯಾಪ್ತಿಯಲ್ಲಿನ 55 ಗ್ರಾಮಗಳ ಸರ್ವೆ ಮಾತ್ರ ಮುಗಿಸಿದೆ. ನಿರೀಕ್ಷೆಯಷ್ಟೆ ವೇಗದಲ್ಲಿ ಸರ್ವೆ ನಡೆಸಲು ತಾಂತ್ರಿಕ ಅಡಚಣೆ ಎದುರಾಗುತ್ತಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಮಳೆ, ವೇಗದ ಗಾಳಿ, ಇನ್ನಿತರ ತಾಂತ್ರಿಕ ಅಡಚಣೆಯಿಂದ ಡ್ರೋನ್ ಹಾರಿಸಲು ಸಮಸ್ಯೆ ಆಗುತ್ತಿದೆ. ಮಳೆಗಾಲದಲ್ಲಿ ಸರ್ವೆ ನಡೆಸುವುದೂ ತೀರಾ ಕಷ್ಟ’ ಎಂದು ಸರ್ವೆ ನಡೆಸುತ್ತಿರುವ ಸಂಸ್ಥೆಯ ಪ್ರತಿನಿಧಿಯೊಬ್ಬರು ಪ್ರತಿಕ್ರಿಯಿಸಿದರು.

ಡ್ರೋನ್ ಸರ್ವೆ ನಡೆಸಿದ ಬಳಿಕ ಜಮೀನುಗಳ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸಂರಕ್ಷಿಸಿಡಲು ಅಗತ್ಯ ವ್ಯವಸ್ಥೆ ರೂಪಿಸಿಕೊಳ್ಳುವ ಸಿದ್ಧತೆಯಲ್ಲಿ ತೊಡಗಿಕೊಳ್ಳಬೇಕಿದೆ
ರಾಜು ಪೂಜಾರ ಭೂದಾಖಲೆಗಳ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT