ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರಿಗುಡಿಯಲ್ಲಿ ಸ್ತನ್ಯಪಾನ ಕೇಂದ್ರ

ರೋಟರಿ ಕ್ಲಬ್‌ನಿಂದ ಸ್ಥಾಪನೆ
Last Updated 19 ಡಿಸೆಂಬರ್ 2019, 14:50 IST
ಅಕ್ಷರ ಗಾತ್ರ

ಶಿರಸಿ: ಎದೆಹಾಲುಣಿಸುವ ತಾಯಂದಿರ ಅನುಕೂಲಕ್ಕಾಗಿ ಇಲ್ಲಿನ ಮಾರಿಕಾಂಬಾ ದೇವಾಲಯದ ಆವರಣದಲ್ಲಿ ಸ್ತನ್ಯಪಾನ ಕೇಂದ್ರ ಆರಂಭಿಸಲಾಗಿದೆ. ಜಿಲ್ಲೆಯಲ್ಲಿ ಆರಂಭವಾಗಿರುವ ಮೊದಲ ಕೇಂದ್ರ ಇದಾಗಿದೆ.

ಸ್ಥಳೀಯ ರೋಟರಿ ಕ್ಲಬ್ ನೆರವಿನ ಈ ಕೇಂದ್ರವನ್ನು ರೋಟರಿ ಜಿಲ್ಲೆ 3170ರ ಪ್ರಾಂತಪಾಲ ಡಾ.ಗಿರೀಶ ಮಾಸೂರಕರ್ ಗುರುವಾರ ಉದ್ಘಾಟಿಸಿದರು. ಚಿಕ್ಕ ಮಗುವನ್ನು ಕರೆದುಕೊಂಡು ಬರುವ ತಾಯಂದಿರಿಗೆ ಸಾರ್ವಜನಿಕ ಸ್ಥಳದಲ್ಲಿ ಹಾಲುಣಿಸಲು ಆಗುವ ಸಮಸ್ಯೆ ನಿವಾರಿಸಲು ಈ ಕೇಂದ್ರ ನಿರ್ಮಿಸಲಾಗಿದೆ. ಇದರ ಗೋಡೆಯ ಮೇಲೆ ಮಕ್ಕಳಿಗೆ ಹಾಕುವ ಲಸಿಕೆ, ತಾಯಿ ಹಾಲಿನ ಮಹತ್ವ ಮೊದಲಾದ ಮಾಹಿತಿಗಳನ್ನು ತಿಳಿಸಲಾಗಿದೆ.

‘ಮಧುರಾ ಇಂಡಸ್ಟ್ರೀಸ್‌ನ ಶ್ರೀಕಾಂತ ಹೆಗಡೆ ಕೇಂದ್ರದ ಯೋಜನೆ ರೂಪಿಸಿದ್ದಾರೆ. ಈ ಕೇಂದ್ರದ ಬಳಕೆ ಆಧರಿಸಿ, ಹಳೇ ಬಸ್ ನಿಲ್ದಾಣ, ಸರ್ಕಾರಿ ಆಸ್ಪತ್ರೆಯಲ್ಲಿ ಮತ್ತೆರಡು ಕೇಂದ್ರ ಪ್ರಾರಂಭಿಸುವ ಯೋಜನೆಯಿದೆ. ಮುಂಬರುವ ಮಾರಿಕಾಂಬಾ ಜಾತ್ರೆಯಲ್ಲೂ ತಾತ್ಕಾಲಿಕ ಕೇಂದ್ರ ಪ್ರಾರಂಭಿಸಲು ಯೋಚಿಸಲಾಗಿದೆ’ ಎಂದು ರೋಟರಿ ಕ್ಲಬ್ ಅಧ್ಯಕ್ಷ ಡಾ.ಶಿವರಾಮ ಕೆ.ವಿ ತಿಳಿಸಿದರು.

‘ಹಿಂದಿನ ವರ್ಷ ಸ್ಥಾಪಿಸಿರುವ ಹಿರಿಯ ನಾಗರಿಕರ ಜಿಮ್‌ಗೆ ಉತ್ತಮ ಸ್ಪಂದನೆ ದೊರೆತಿದೆ. ಸರ್ಕಾರಿ ಆಸ್ಪತ್ರೆಯಲ್ಲಿರುವ ಎನ್‌ಐಸಿಯು ಘಟಕ ಉನ್ನತೀಕರಣ, ಐದು ಶಾಲೆಗಳಲ್ಲಿ ಹೆಪ್ಪಿ ಸ್ಕೂಲ್ ಯೋಜನೆ ಜಾರಿ, ಧನ ಸಂಗ್ರಹಕ್ಕೆ ನಾಟಕ ಪ್ರದರ್ಶನ, ಮಾರ್ಚ್‌ನಲ್ಲಿ ನೀರು ನಿರ್ವಹಣೆ ಕುರಿತ ವಿಚಾರ ಸಂಕಿರಣ ಆಯೋಜಿಸಲಾಗುವುದು. ಸ್ಕೊಡ್‌ವೆಸ್ ಜೊತೆ ಸೇರಿ ಕೌಶಲಾಭಿವೃದ್ಧಿ ಕಾರ್ಯಕ್ರಮ ಜಾರಿಗೊಳಿಸಲಾಗುವುದು’ ಎಂದು ಹೇಳಿದರು.

ರೋಟರಿ ಪ್ರಮುಖರಾದ ಪಾಂಡುರಂಗ ಪೈ, ಗಣಪತಿ ಭಟ್ಟ, ವಿಶಾಖ್ ಇಸಳೂರು, ಶ್ರೀನಿವಾಸ ನಾಯ್ಕ, ಮಾರಿಗುಡಿ ಅಧ್ಯಕ್ಷ ವೆಂಕಟೇಶ ನಾಯ್ಕ, ಉಪಾಧ್ಯಕ್ಷ ಮನೋಹರ ಮಲ್ಮನೆ, ಧರ್ಮದರ್ಶಿಗಳಾದ ಶಾಂತಾರಾಮ ಹೆಗಡೆ, ಲಕ್ಷ್ಮಣ ಕಾನಡೆ, ಶಶಿಕಲಾ ಚಂದ್ರಾಪಟ್ಟಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT