ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಡಗೋಡ: ಬೆಡಸಗಾಂವ್‌ ದೊಡ್ಡಕೆರೆಯಲ್ಲಿ ಮತ್ಸ್ಯಬೇಟೆ

ಬಿದಿರಿನಿ ಕುಣಿಯಲ್ಲಿ ಬಂಧಿಯಾದ ಮೀನುಗಳು
Published 4 ಜೂನ್ 2023, 13:40 IST
Last Updated 4 ಜೂನ್ 2023, 13:40 IST
ಅಕ್ಷರ ಗಾತ್ರ

ಮುಂಡಗೋಡ: ತಳ ಕಂಡಿದ್ದ ಕೆರೆಯ ನೀರು ಕದಡಿತ್ತು. ತಪ್ಪಿಸಿಕೊಂಡರೆ ಸಾಕು ಎಂದು ಮೀನುಗಳು ಅತ್ತಿಂದಿತ್ತ ಜಿಗಿಯುತ್ತಿದ್ದವು. ಕುಣಿಯಲ್ಲಿ ಹಿಡಿಯಲೇಬೇಕು ಎಂದು ಪಣ ತೊಟ್ಟಿದ್ದ ನೂರಾರು ಜನರು, ಮೀನಿನ ಹೆಜ್ಜೆಯ ಜಾಡನ್ನು ಹಿಂಬಾಲಿಸಿ ಬೇಟೆಯಾಡುತ್ತಿದ್ದರು. ಕುಣಿಯಲ್ಲಿ ಮೀನು ಸಿಕ್ಕಾಗ ಬೇಟೆಗಾರನ ಸಂತಸ ಇಮ್ಮಡಿಯಾಗುತ್ತಿತ್ತು.

ತಾಲ್ಲೂಕಿನ ಬೆಡಸಗಾಂವ್‌ ಗ್ರಾಮದ ದೊಡ್ಡಕೆರೆಯ ‘ಕೆರೆಬೇಟೆ’ ಭಾನುವಾರ ಜರುಗಿತು. ಅರೆಮಲೆನಾಡಿನ ತಾಲ್ಲೂಕಿನಲ್ಲಿ ಕೆರೆಯ ನೀರು ಕಡಿಮೆ ಆದಾಗ ಸಾಂಪ್ರದಾಯಿಕವಾಗಿ ಮತ್ಸ್ಯಬೇಟೆ ಅಥವಾ ಕೆರೆಬೇಟೆ ನಡೆಸಲಾಗುತ್ತದೆ. ಇದೊಂದು ಗ್ರಾಮೀಣ ಕ್ರೀಡೆಯಂತಲೂ ಕರೆಯಲಾಗುತ್ತದೆ. ಸುಮಾರು ಹನ್ನೊಂದು ಎಕರೆ ವಿಸ್ತೀರ್ಣದ ದೊಡ್ಡ ಕೆರೆಯಲ್ಲಿ ಶಿರಸಿ, ಸಿದ್ದಾಪುರ ತಾಲ್ಲೂಕಿನ ಸಾಹಸಿ ಬೇಟೆಗಾರರು ಹಾಗೂ ಬೆಡಸಗಾಂವ್‌ ಸುತ್ತಲಿನ ಜನರು ಮೀನು ಹಿಡಿಯಲು ನೀರಿಗೆ ಇಳಿದಿದ್ದರು.

ಬಗಲಲ್ಲಿ ಒಂದು ಚೀಲ ಹಾಕಿಕೊಂಡು, ಕೈಯಲ್ಲಿ ಬಿದಿರಿನ ಕುಣಿ (ಮೀನು ಹಿಡಿಯುವ ಪರಿಕರ) ಹಿಡಿದು ಕೆರೆಗೆ ಧುಮುಕಿದರು. ಮೀನು ಹಿಡಿಯಲು ಹೊರಟವರು ಯುದ್ಧಕ್ಕೆ ಹೊರಟಂತೆ ಭಾಸವಾಗುತ್ತಿತ್ತು. ಕೆಲವರು ಮೀನು ಸಿಕ್ಕ ಖುಷಿಯಲ್ಲಿ ಸಂಭ್ರಮಿಸಿದರು. ಇನ್ನೂ ಕೆಲವರು, ಮುಂದಿನ ಜಾಗದಲ್ಲಿ ಮೀನು ಇರಬಹುದು ಎನ್ನುತ್ತ ಕುಣಿಯನ್ನು ಎತ್ತಿ ಮುಂದಕ್ಕೆ ಹಾಕುತ್ತ ಸಾಗುತ್ತಿದ್ದ ದೃಶ್ಯ ಕಂಡುಬಂತು.

ಗ್ರಾಮದ ಮಾರಿಕಾಂಬಾ ದೇವಸ್ಥಾನದ ಕಟ್ಟಡ ಸಹಾಯಾರ್ಥ ಮತ್ಸಬೇಟೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬಿದಿರಿನ ಕುಣಿಯಿಂದ ಮಾತ್ರ ಬೇಟೆ ಆಡುವ ನಿಯಮ ಹಾಕಲಾಗಿತ್ತು. ಒಂದು ಕುಣಿಗೆ ₹ 300 ಪ್ರವೇಶ ದರ ನಿಗದಿ ಮಾಡಲಾಗಿತ್ತು. ಪ್ರಾಕೃತಿಕವಾಗಿ ಬೆಳೆದಿರುವ ಮೀನುಗಳು ಮಾತ್ರ ಈ ಕೆರೆಯಲ್ಲಿದ್ದವು. ಬಿದಿರಿನ ಕುಣಿಯನ್ನು ನೀರಿನಲ್ಲಿ ಹಾಕುವುದರಿಂದ ಜಲದ ಕಣ್ಣು ತೆರೆದು ಕೆರೆಯಲ್ಲಿ ಮತ್ತೆ ನೀರು ಭರ್ತಿಯಾಗುತ್ತದೆ ಎಂಬ ನಂಬಿಕೆ ಹಿಂದಿನಿಂದಲೂ ಇದೆ. ಕೆಲವರಿಗೆ ಇದು ಸಾಹಸ ಕ್ರೀಡೆಯಾಗಿರುವುದರಿಂದ, ದೂರದ ಊರುಗಳಿಂದ ಬರುವ ಬೇಟೆಗಾರರು ಕೆರೆಬೇಟೆಯಲ್ಲಿ ಪಾಲ್ಗೊಳ್ಳುವುದನ್ನು ಕಾಣಬಹುದಾಗಿದೆ ಎಂದು ಗ್ರಾಮಸ್ಥ ದೇವೇಂದ್ರ ನಾಯ್ಕ ಹೇಳಿದರು.

ಯಾವುದೇ ಬಲೆ, ಬಡಗಿ ಸೇರಿದಂತೆ ಇತರ ಪರಿಕರಗಳಿಂದ ಮೀನುಗಳನ್ನು ಹಿಡಿಯುವಂತಿಲ್ಲ. ಶಾಂತರೀತಿಯಿಂದ ಕೆರೆಬೇಟೆಯಲ್ಲಿ ಪಾಲ್ಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿತ್ತು. ಕೆಲವರಿಗೆ ಮೀನು ಬೇಟೆಯಲ್ಲಿ ಪಾಲ್ಗೊಳ್ಳುವುದು ಹವ್ಯಾಸ ಆಗಿರುತ್ತದೆ. ದೂರದ ಊರುಗಳಿಂದ ಹಣ ಖರ್ಚು ಮಾಡಿಕೊಂಡು, ಮತ್ಸ್ಯಬೇಟೆಯಲ್ಲಿ ಪಾಲ್ಗೊಳ್ಳುತ್ತಾರೆ. ಗ್ರಾಮೀಣ ಭಾಗದಲ್ಲಿ ಹೆಚ್ಚು ಪ್ರಸಿದ್ಧಿಯಾಗಿರುವ ಕೆರೆಬೇಟೆಯು ನೋಡುಗರನ್ನು ರೋಮಾಂಚನಗೊಳಿಸುತ್ತದೆ ಎಂದು ಅವರು ಹೇಳಿದರು.

ಕೆರೆಬೇಟೆಯಲ್ಲಿ ಪಾಲ್ಗೊಳ್ಳುವುದು ಒಂಥರಾ ಖುಷಿ ನೀಡುತ್ತದೆ. ಎಷ್ಟು ಮೀನು ಸಿಕ್ಕವು ಎನ್ನುವುದಕ್ಕಿಂತ ಗಂಟೆಗಟ್ಟಲೇ ಕೆರೆಯಲ್ಲಿ ಮೀನು ಹಿಡಿಯಲು ಸಾಹಸ ಪಡುವುದೇ ಒಂದು ರೋಮಾಂಚನ ಆಗಿರುತ್ತದೆ. ಸಿಕ್ತು ಸಿಕ್ತು ಎನ್ನುವಷ್ಟರಲ್ಲಿ ಮೀನು ಜಿಗಿದುಬಿಡುತ್ತದೆ. ಅಲ್ಲಿ ಹೋಗಿ ಕುಣಿ ಹಾಕಬೇಕೆನ್ನುವಷ್ಟರಲ್ಲಿ ಮತ್ತೊಬ್ಬ ಕುಣಿ ಹಾಕಿಬಿಡುತ್ತಾನೆ. ಒಂದು ಕುಣಿಯಲ್ಲಿ ತಪ್ಪಿಸಿಕೊಂಡ ಮೀನು ಮತ್ತೊಂದು ಕುಣಿಯಲ್ಲಿ ಬಂಧಿಯಾಗುತ್ತದೆ. ಮೀನು ಹಿಡಿದಾಗ ದಡದಲ್ಲಿ ನಿಂತವರ ಕೇಕೆಯೂ ಇನ್ನಷ್ಟು ಪ್ರೋತ್ಸಾಹ ನೀಡುತ್ತದೆʼ ಎಂದು ಕೆರೆಬೇಟೆಯಲ್ಲಿ ಪಾಲ್ಗೊಂಡಿದ್ದ ಸಂತೋಷ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT