ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರವಾರ | ಮೀನುಗಳ ಕೊರತೆ; ಬಂದರಿನಲ್ಲಿ ಬೋಟು, ಆರ್ಥಿಕ ನಷ್ಟದ ಭೀತಿ

Published : 13 ಆಗಸ್ಟ್ 2024, 5:12 IST
Last Updated : 13 ಆಗಸ್ಟ್ 2024, 5:12 IST
ಫಾಲೋ ಮಾಡಿ
Comments

ಕಾರವಾರ: ಯಾಂತ್ರೀಕೃತ ಮೀನುಗಾರಿಕೆ ಆರಂಭಿಕ ಅವಧಿಯಲ್ಲೇ ಹೇರಳ ಪ್ರಮಾಣದಲ್ಲಿ ಮೀನು ಬೇಟೆಯಾಡುತ್ತಿದ್ದ ಟ್ರಾಲ್ ಬೋಟ್‍ ಮೀನುಗಾರರಿಗೆ ಈ ಬಾರಿ ನಿರಾಸೆಯಾಗಿದೆ. ಎರಡು ವಾರವಾದರೂ ನಿರೀಕ್ಷಿತ ಪ್ರಮಾಣದಲ್ಲಿ ಮೀನು ಸಿಗದೆ ಬಹುತೇಕ ಬೋಟ್‍ಗಳು ಬಂದರಿನಲ್ಲೇ ಲಂಗರು ಹಾಕಿವೆ.

‘ಬೈತಕೋಲ, ಮುದಗಾ, ತದಡಿ, ಹೊನ್ನಾವರ, ಭಟ್ಕಳ ಸೇರಿ 3,950 ಟ್ರಾಲ್ ಬೋಟ್‍ಗಳಿವೆ. ಆಗಸ್ಟ್ 2 ರಿಂದ ಶೇ 80ಕ್ಕಿಂತ ಹೆಚ್ಚು ಬೋಟ್‍ಗಳು ಮೀನುಗಾರಿಕೆ ಆರಂಭಿಸಿದ್ದವು. ಕೆಲ ಬೋಟ್‍ನವರಿಗೆ ಅಲ್ಪ ಪ್ರಮಾಣದಲ್ಲಿ ಸಿಗಡಿ ಮತ್ತು ಇತರೆ ಮೀನುಗಳು ಸಿಕ್ಕವು. ಉಳಿದ ಬೋಟ್‌ನವರು ಬರಿಗೈಯಲ್ಲಿ ಮರಳಿದರು’ ಎಂದು ಮೀನುಗಾರರು ತಿಳಿಸಿದರು.

‘ಟ್ರಾಲ್ ಬೋಟುಗಳಿಗೆ ಆಗಸ್ಟ್ ಆರಂಭದ 20 ದಿನ ಮಾತ್ರ ಸಿಗಡಿ ಮೀನು ಸಿಗುತ್ತವೆ. ಪ್ರತಿ ವರ್ಷ ಯಾಂತ್ರೀಕೃತ ಮೀನುಗಾರಿಕೆ ಆರಂಭಗೊಂಡ ಅವಧಿಯಲ್ಲಿ ಹೆಚ್ಚು ಪ್ರಮಾಣದಲ್ಲಿ ಸಿಗಡಿ ಮೀನು ಲಭಿಸುತಿತ್ತು. ಇದೇ ಮೊದಲ ಬಾರಿಗೆ ಆರಂಭಿಕ ಅವಧಿಯಲ್ಲೇ ಮೀನಿನ ಕೊರತೆ ಕಾಡುತ್ತಿದೆ. ಸಮುದ್ರ ಪ್ರಕ್ಷುಬ್ಧವಾಗಿದೆ. ಬಲೆ ಬೀಸಲೂ ಕಷ್ಟವಾಗುತ್ತಿದೆ’ ಎಂದು ಟ್ರಾಲ್ ಬೋಟ್ ಮಾಲೀಕ ಸುಭಾಷ ದುರ್ಗೇಕರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಿಗಡಿ ಮೀನಿಗೆ ದರ ಕಡಿಮೆ. ಆಗಸ್ಟ್ ಮಧ್ಯಂತರದ ಅವಧಿವರೆಗೆ ಟ್ರಾಲ್ ಬೋಟ್‍ಗಳಿಗೆ ಮೀನು ಸಿಕ್ಕರೆ ಮಾತ್ರ ಉತ್ತಮ ಆದಾಯ ನಿರೀಕ್ಷಿಸಬಹುದು. ಎರಡು ವಾರದಲ್ಲಿ ಎಂಟು ದಿನ ಬೋಟ್‌ಗಳು ಮೀನು ಬೇಟೆಗೆ ತೆರಳಿದರೂ ಖಾಲಿ ಮರಳಿವೆ. ಡೀಸೆಲ್, ಕಾರ್ಮಿಕ ವೆಚ್ಚ ಸೇರಿ ಲಕ್ಷಾಂತರ ಮೊತ್ತ ವ್ಯಯಿಸಿದ್ದೇವೆ. ಕನಿಷ್ಠ ₹15 ಸಾವಿರ ಗಳಿಸಲು ಸಾಧ್ಯವಾಗಿಲ್ಲ’ ಎಂದು ನಾಗರಾಜ ತಾಂಡೇಲ ಹೇಳಿದರು.

‘ಪರ್ಸಿನ್ ಬೋಟ್‍ಗಳು ಆಗಸ್ಟ್‌ 10ರಿಂದ ಕಡಲಿಗೆ ಇಳಿದಿದ್ದು, ಅವುಗಳಿಗೂ ಮೀನು ಲಭಿಸುತ್ತಿಲ್ಲ. ಕಾರ್ಮಿಕರು ಆಳ ಸಮುದ್ರದಲ್ಲಿ ಮೀನಿನ ಗುಂಪಿಗೆ ಹುಡುಕಾಟ ನಡೆಸಿದ್ದಾರೆ’ ಎಂದು ಬೋಟ್ ಮಾಲೀಕ ವೆಂಕಟೇಶ ತಿಳಿಸಿದರು.  

ಮೀನಿನ ಕೊರತೆ ಎದುರಾಗಿದೆ. ಕಳೆದ ವರ್ಷವೂ ಆರ್ಥಿಕ ನಷ್ಟ ಅನುಭವಿಸಿದ್ದೇವೆ. ಸರ್ಕಾರ ಮೀನುಗಾರರಿಗೆ ವಿಶೇಷ ಪರಿಹಾರ ಪ್ಯಾಕೇಜ್ ಘೋಷಿಸಬೇಕು.
-ರಾಜು ತಾಂಡೇಲ, ಅಧ್ಯಕ್ಷ ಉತ್ತರ ಕನ್ನಡ ಜಿಲ್ಲಾ ಮೀನು ಮಾರಾಟಗಾರ ಸಹಕಾರ ಫೆಡರೇಶನ್
ಸಿಗಡಿ ಮೀನು ಪಶ್ಚಿಮ ಕರಾವಳಿಯಲ್ಲಿ ವಲಸೆ ಹೋಗುತ್ತವೆ. ಮೊಟ್ಟೆ ಇಡುವುದಕ್ಕೆ ಅವು ಆಗಸ್ಟ್ ಆರಂಭದಲ್ಲಿ ಕಾರವಾರ ಗೋವಾ ಭಾಗದಲ್ಲಿ ಹೆಚ್ಚು ಸಿಗುತ್ತವೆ.
-ಶಿವಕುಮಾರ ಹರಗಿ ಪ್ರಾಧ್ಯಾಪಕ. ಕಡಲಜೀವಶಾಸ್ತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT