ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಕರ್ಣ: ಲಸಿಕೆ ನೀಡುವಂತೆ ವೈದ್ಯರಿಗೆ ವಿದೇಶಿಗರ ದುಂಬಾಲು

ಹಣ ಪಾವತಿಸಲೂ ಸಿದ್ಧರಿದ್ದೇವೆ ಎನ್ನುತ್ತಿರುವ ಪ್ರವಾಸಿಗರು
Last Updated 6 ಏಪ್ರಿಲ್ 2021, 14:21 IST
ಅಕ್ಷರ ಗಾತ್ರ

ಗೋಕರ್ಣ: ಇಲ್ಲಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನೀಡುತ್ತಿರುವ ಕೋವಿಡ್ ಲಸಿಕೆಗೆ ವಿದೇಶಿ ಪ್ರವಾಸಿಗರಿಂದಲೂ ಬೇಡಿಕೆ ವ್ಯಕ್ತವಾಗುತ್ತಿದೆ. ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ಬರುವ ವಿದೇಶಿಗರು, ‘ಬೇಕಿದ್ದರೆ ಹಣ ಪಾವತಿಸುತ್ತೇವೆ. ದಯವಿಟ್ಟು ಲಸಿಕೆ ನೀಡಿ’ ಎಂದು ವೈದ್ಯರಿಗೆ ದುಂಬಾಲು ಬೀಳುತ್ತಿದ್ದಾರೆ.

‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ವೈದ್ಯಾಧಿಕಾರಿ ಡಾ.ಜಗದೀಶ ನಾಯ್ಕ, ‘ಗೋವಾ, ಬೆಂಗಳೂರಿಗೆ ಹೋಗುವ ವಿದೇಶಿ ಪ್ರಜೆಗಳು ಗಂಟಲು ದ್ರವ ಪರೀಕ್ಷೆಗೆ ಆರೋಗ್ಯ ಕೇಂದ್ರಕ್ಕೆ ಬರುತ್ತಿದ್ದಾರೆ. ಅವರು ಲಸಿಕೆಯನ್ನೂ ನೀಡುವಂತೆ ಕೇಳುತ್ತಿದ್ದಾರೆ. ಒಂದು ವಾರದ ಅವಧಿಯಲ್ಲಿ 15ಕ್ಕೂ ಹೆಚ್ಚು ವಿದೇಶಿಗರು ಬಂದು ಕೇಳಿದ್ದಾರೆ. ಆದರೆ, ನಮಗೆ ಸರ್ಕಾರದಿಂದ ಯಾವುದೇ ನಿರ್ದಿಷ್ಟ ಆದೇಶ ಬಂದಿಲ್ಲ’ ಎಂದರು.

‘ವಿದೇಶಿ ಪ್ರವಾಸಿಗರ ಆಧಾರ್ ಕಾರ್ಡ್, ‘ಪಾನ್’ ಕಾರ್ಡ್ ಸೇರಿದಂತೆ ಯಾವುದೇ ದಾಖಲೆಗಳಿಲ್ಲದೇ ಲಸಿಕೆಕೊಡಲು ಸಾಧ್ಯವಿಲ್ಲ. ಈಗ ಹಂತಹಂತವಾಗಿ ಜನರಿಗೆ ಲಸಿಕೆ ನೀಡುತ್ತಿರುವ ರೀತಿಯಲ್ಲೇ ವಿದೇಶೀಗರಿಗೂ ದೊರಕಬಹುದು. ಆಗ ಹೇಳುತ್ತೇವೆ’ ಎಂದು ವೈದ್ಯರು ಮನವರಿಕೆ ಮಾಡುತ್ತಿದ್ದಾರೆ.

ಬ್ರಿಟನ್ ಪ್ರಜೆ ವಿಲಿಯಂ ದಿಸ್ಕ್ರೋಲ್ ಪ್ರತಿಕ್ರಿಯಿಸಿ, ‘ನಾನು ಒಂದೂವರೆ ವರ್ಷದಿಂದ ಗೋಕರ್ಣದಲ್ಲಿಯೇ ಇದ್ದೇನೆ. ದೇವರ ದಯೆಯಿಂದ ಯಾವುದೇ ಸಮಸ್ಯೆಯಾಗಿಲ್ಲ. ಯೂರೋಪಿನ ಅನೇಕ ದೇಶಗಳಲ್ಲಿ ಈಗ ಮತ್ತೆ ಲಾಕ್‌ಡೌನ್ ಮಾಡಿದ್ದಾರೆ. ನಾವು ನಿಜಕ್ಕೂ ಅದೃಷ್ಟವಂತರು. ಭಾರತ ತುಂಬ ಆಧ್ಯಾತ್ಮದಿಂದ ಕೂಡಿರುವ ಶಕ್ತಿಶಾಲಿ ದೇಶ. ಇಲ್ಲಿಯೇ ಇದ್ದ ವಿದೇಶಿಯರಿಗೆ ಕೋವಿಡ್ ಲಸಿಕೆ ನೀಡಿದರೆ ತುಂಬ ಉಪಕಾರವಾಗುತ್ತಿತ್ತು’ ಎಂದು ಆಶಿಸಿದರು.

ರಷ್ಯಾದ ಮಹಿಳೆ ನತಾಶಾ ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸಿದರು. ಗೋಕರ್ಣದಲ್ಲಿ 250ಕ್ಕೂ ಹೆಚ್ಚು ವಿದೇಶಿ ಪ್ರವಾಸಿಗರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT