ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳ್ಳಿಯಲ್ಲಿ ಮಲ ತ್ಯಾಜ್ಯ ಸಂಸ್ಕರಣೆ ಘಟಕ ಸ್ಥಾಪನೆ

ಜಿಲ್ಲೆಯ ಗೋಕರ್ಣ, ತೇರಗಾಂವದಲ್ಲಿ ಪ್ರಾಯೋಗಿಕವಾಗಿ ಜಾರಿ
ಗಣಪತಿ ಹೆಗಡೆ
Published 14 ಫೆಬ್ರುವರಿ 2024, 5:11 IST
Last Updated 14 ಫೆಬ್ರುವರಿ 2024, 5:11 IST
ಅಕ್ಷರ ಗಾತ್ರ

ಕಾರವಾರ: ಶೌಚಾಲಯದ ಇಂಗುಗುಂಡಿ ಭರ್ತಿಯಾದರೆ ಅದನ್ನು ಖಾಲಿ ಮಾಡಲು ನಗರ ಪ್ರದೇಶದಲ್ಲಿ ಸೂಕ್ತ ವ್ಯವಸ್ಥೆ ಇದೆ. ಆದರೆ, ಹಳ್ಳಿಗರು ಏನು ಮಾಡಬೇಕು ಎಂಬ ಚಿಂತೆ ಸಾಮಾನ್ಯ. ಜಿಲ್ಲಾ ಪಂಚಾಯಿತಿ ಈ ಸಮಸ್ಯೆಗೆ ಇತಿಶ್ರೀ ಹಾಡಲು ಮುಂದಡಿ ಇಟ್ಟಿದೆ.

ಗ್ರಾಮೀಣ ಪ್ರದೇಶದಲ್ಲಿ ಮಲ ತ್ಯಾಜ್ಯ ಸಂಸ್ಕರಣೆ ಘಟಕ (ಎಫ್.ಎಸ್.ಟಿ.ಪಿ) ಸ್ಥಾಪನೆಗೆ ಮುಂದಾಗುತ್ತಿದ್ದು, ಈಗಾಗಲೇ ಕುಮಟಾ ತಾಲ್ಲೂಕಿನ ಗೋಕರ್ಣ ಮತ್ತು ಹಳಿಯಾಳ ತಾಲ್ಲೂಕಿನ ತೇರಗಾಂವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಘಟಕ ನಿರ್ಮಾಣ ಮಾಡಲಾಗಿದೆ.

ಸ್ವಚ್ಛ ಭಾರತ ಮಿಷನ್ ಯೋಜನೆ ಅಡಿ ರಾಜ್ಯದ 16 ಜಿಲ್ಲೆಗಳ ಗ್ರಾಮೀಣ ಪ್ರದೇಶದಲ್ಲಿ ಮಲ ತ್ಯಾಜ್ಯ ಸಂಸ್ಕರಣೆ ಘಟಕ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಕೆಲವು ಜಿಲ್ಲೆಗಳಲ್ಲಿ ಯೋಜನೆ ಈಗಾಗಲೇ ಅನುಷ್ಠಾನಗೊಂಡಿದೆ. ಉತ್ತರ ಕನ್ನಡದಲ್ಲಿಯೂ ಮೊದಲ ಹಂತದಲ್ಲಿ ಎರಡು ಕಡೆಗಳಲ್ಲಿ ಘಟಕ ಸ್ಥಾಪನೆಗೊಳ್ಳುತ್ತಿದೆ.

‘ತೇರಗಾಂವದಲ್ಲಿ ₹94 ಲಕ್ಷ ವೆಚ್ಚದಲ್ಲಿ ದಿನವೊಂದಕ್ಕೆ 3 ಸಾವಿರ ಕಿಲೋ ಲೀಟರ್ ಸಂಸ್ಕರಣೆ ಸಾಮರ್ಥ್ಯದ ಘಟಕ ನಿರ್ಮಾಣಗೊಳ್ಳುತ್ತಿದೆ. ಗೋಕರ್ಣದಲ್ಲಿ ₹74 ಲಕ್ಷ ವೆಚ್ಚದಲ್ಲಿ ಪ್ರತಿ ವಾರಕ್ಕೆ 12 ಸಾವಿರ ಕಿಲೋ ಲೀಟರ್‌ ಸಂಸ್ಕರಣೆ ಸಾಮರ್ಥ್ಯದ ಘಟಕ ಸ್ಥಾಪನೆಯಾಗುತ್ತಿದೆ. ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ. ಬಳಿಕ ಟೆಂಡರ್ ಪ್ರಕ್ರಿಯೆ ಮೂಲಕ ಇವುಗಳ ನಿರ್ವಹಣೆಯನ್ನು ಖಾಸಗಿ ಸಂಸ್ಥೆಗೆ ವಹಿಸಲಾಗುತ್ತದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಈಶ್ವರ ಕಾಂದೂ ತಿಳಿಸಿದರು.

‘ನಗರ ಪ್ರದೇಶದಂತೆ ಹಳ್ಳಿಗಳಲ್ಲಿಯೂ ಮನೆಗಳಿಗೆ ತೆರಳಿ ಭರ್ತಿಯಾದ ಶೌಚಾಲಯದ ಇಂಗುಗುಂಡಿ (ಸೆಪ್ಟಿಕ್ ಟ್ಯಾಂಕ್) ಖಾಲಿ ಮಾಡಿ, ಮಲ ತ್ಯಾಜ್ಯವನ್ನು ಘಟಕಕ್ಕೆ ಸಾಗಿಸಲು ವಾಹನದ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಮಲ ಸಂಗ್ರಹಣೆಗೆ ನಿರ್ದಿಷ್ಟ ಶುಲ್ಕ ವಿಧಿಸಲಾಗುತ್ತದೆ. ಘಟಕ ಇರುವ ಅಕ್ಕಪಕ್ಕದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಸಂಗ್ರಹಣೆಗೆ ಅವಕಾಶ ಇರಲಿದೆ. ಘಟಕದಲ್ಲಿ ಮಲ ತ್ಯಾಜ್ಯವನ್ನು ಮೂರು ಹಂತದಲ್ಲಿ ಸಂಸ್ಕರಿಸುವ ವ್ಯವಸ್ಥೆ ಇರಲಿದೆ’ ಎಂದು ಸ್ವಚ್ಛ ಭಾರತ ಮಿಷನ್ ಜಿಲ್ಲಾ ಸಂಯೋಜಕ ಸೂರ್ಯನಾರಾಯಣ ಭಟ್ ತಿಳಿಸಿದರು.

‘ಮಲ ತ್ಯಾಜ್ಯಗಳನ್ನು ದ್ರವರೂಪ, ಘನ ರೂಪವಾಗಿ ಪ್ರತ್ಯೇಕಿಸಲು ಘಟಕದಲ್ಲಿ ಪ್ರತ್ಯೇಕ ಸಂಗ್ರಹಾಗಾರಗಳು ಇರಲಿದೆ. ಕಲ್ಲು, ನೀರು ಬಳಸಿ ಅವುಗಳನ್ನು ಸಂಸ್ಕರಿಸಲು ವ್ಯವಸ್ಥೆ ಮಾಡಲಾಗುತ್ತದೆ. ದ್ರವರೂಪದ ತ್ಯಾಜ್ಯ ಸಂಸ್ಕರಿಸಿ, ಸಸಿಗಳನ್ನು ಬೆಳೆಸಲಾಗುತ್ತದೆ. ಘನರೂಪದ ತ್ಯಾಜ್ಯ ಸಂಸ್ಕರಿಸಿ, ಗೊಬ್ಬರವಾಗಿ ಪರಿವರ್ತಿಸಿ ಮಾರಾಟಕ್ಕೂ ಅವಕಾಶ ಕಲ್ಪಿಸಲಾಗುವುದು’ ಎಂದರು.

ಗೋಕರ್ಣದಲ್ಲಿ ನಿರ್ಮಿಸಿದ ಮಲ ತ್ಯಾಜ್ಯ ಸಂಸ್ಕರಣಾ ಘಟಕ
ಗೋಕರ್ಣದಲ್ಲಿ ನಿರ್ಮಿಸಿದ ಮಲ ತ್ಯಾಜ್ಯ ಸಂಸ್ಕರಣಾ ಘಟಕ

₹1.68 ಕೋಟಿ ವೆಚ್ಚದಲ್ಲಿ ಎರಡು ಘಟಕ ಸ್ಥಾಪನೆ ಹಳ್ಳಿಗಳಲ್ಲಿ ಸಂಚರಿಸಲಿದೆ ಮಲ ತ್ಯಾಜ್ಯ ಸಂಗ್ರಹಣೆ ವಾಹನ ಘಟಕ ನಿರ್ವಹಣೆ ಹೊಣೆ ಖಾಸಗಿ ಸಂಸ್ಥೆಗಳಿಗೆ

ಮೊದಲ ಹಂತದಲ್ಲಿ ಹೆಚ್ಚು ಜನಸಂಖ್ಯೆಯುಳ್ಳ ಎರಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಘಟಕ ಸ್ಥಾಪಿಸಲಾಗಿದ್ದು ಇನ್ನೂ ಐದಾರು ಕಡೆ ಘಟಕ ನಿರ್ಮಾಣಗೊಳ್ಳಲಿದೆ- ಈಶ್ವರ ಕಾಂದೂ ಜಿಲ್ಲಾ ಪಂಚಾಯಿತಿ ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT