ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರವಾರ: ಮಳೆಗಾಲದ ಸುಂದರಿ ‘ಗೊಲ್ಲಾರಿ’

ಹಾಲ್ನೊರೆಯಾಗಿ ಧುಮ್ಮಿಕ್ಕುವ ಜಲಪಾತ ವೀಕ್ಷಿಸಲು ಪ್ರವಾಸಿಗರ ದಂಡು
Published 7 ಜುಲೈ 2024, 6:06 IST
Last Updated 7 ಜುಲೈ 2024, 6:06 IST
ಅಕ್ಷರ ಗಾತ್ರ

ಕಾರವಾರ: ನದಿ, ತೊರೆಗಳೊಂದಿಗೆ ಪಶ್ಚಿಮ ಘಟ್ಟವನ್ನು ಒಳಗೊಂಡ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಸೃಷ್ಟಿಯಾಗುವ ಜಲಪಾತಗಳು ಪ್ರಕೃತಿಯ ಸೊಬಗು ಹೆಚ್ಚಿಸುತ್ತವೆ. ಹೀಗೆ ಸೃಷ್ಟಿಯಾದ ಕೆಲವೇ ಜಲಪಾತಗಳು ಪ್ರವಾಸಿಗರನ್ನು ಬರಸೆಳೆಯುತ್ತವೆ. ಅವುಗಳಲ್ಲಿ ತಾಲ್ಲೂಕಿನ ತೊಡೂರು ಸಮೀಪದಲ್ಲಿರುವ ‘ಗೊಲ್ಲಾರಿ ಜಲಪಾತ’ ಕೂಡ ಸ್ಥಾನ ಪಡೆದಿದೆ.

ತೊಡೂರು ಗ್ರಾಮದ ಬದಿಯಲ್ಲಿರುವ ಎತ್ತರದ ಪರ್ವತದಿಂದ ಹರಿದು ಬರುವ ಹಳ್ಳಕೊಳ್ಳಗಳು ಬಂಡೆಕಲ್ಲುಗಳಿಂದ ಧುಮ್ಮಿಕ್ಕಿ ಸೃಷ್ಟಿಸುವ ಜಲಪಾತಗಳು ಹಲವಾರಿದೆ. ಗ್ರಾಮದ ದಟ್ಟ ಅರಣ್ಯದ ನಡುವೆ ನೇತ್ರಹಳ್ಳ ಜಲಪಾತ ಸೇರಿದಂತೆ ಸಣ್ಣಪುಟ್ಟ ಜಲಪಾತಗಳಿಗೆ ಲೆಕ್ಕವಿಲ್ಲ. ಆದರೆ, ಎತ್ತರದಿಂದ ಧುಮ್ಮಿಕ್ಕುತ್ತ ದಟ್ಟ ಅರಣ್ಯದೊಳಗೆ ಸೊಗಿನ ತಾಣ ಸೃಷ್ಟಿಸಿದ ‘ಗೊಲ್ಲಾರಿ’ಗೆ ವಿಶೇಷ ಸ್ಥಾನವಿದೆ.

ಸುಮಾರು 65 ಅಡಿ ಎತ್ತರದಿಂದ ಹಾಲ್ನೊರೆಯಂತೆ ಧುಮ್ಮಿಕ್ಕುವ ಈ ಜಲಪಾತ ನೋಡುಗರ ಕಣ್ಮನ ಸೆಳೆಯುತ್ತದೆ. ಜಲಪಾತದ ಬುಡದಲ್ಲಿಯೂ ಹೆಚ್ಚು ಆಳವಿಲ್ಲದ ಕಾರಣಕ್ಕೆ ಪ್ರವಾಸಿಗರು ನೀರು ಧುಮ್ಮಿಕ್ಕುವ ಜಾಗದ ಬಳಿ ನಿಂತು ಖುಷಿಪಡಲು ಅವಕಾಶವಿದೆ. ಹೆಚ್ಚು ಅಪಾಯವಿಲ್ಲದ ಕಾರಣಕ್ಕೆ ಗೊಲ್ಲಾರಿ ಕಣ್ತುಂಬಿಕೊಳ್ಳಲು ಬರುವವರ ಸಂಖ್ಯೆ ಸಾಕಷ್ಟಿದೆ.

ಕಾರವಾರ ನಗರದಿಂದ 14 ಕಿ.ಮೀ ದೂರದಲ್ಲಿರುವ ತೊಡೂರು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ–66 ರಿಂದ ಒಳಗಿನ ಅರಣ್ಯ ಪ್ರದೇಶದಲ್ಲಿ ಸುಮಾರು ಮೂರು ಕಿ.ಮೀ ವರೆಗೆ ಸಾಗಬೇಕು. ಅಲ್ಲಿಯವರೆಗೆ ವಾಹನ ಸಂಚರಿಸಲು ಸಾಧ್ಯವಿದ್ದು, ಸುಮಾರು ಎರಡು ಕಿ.ಮೀ ದೂರದವರೆಗೆ ಅರಣ್ಯದಲ್ಲಿ ಕಾಲ್ನಡಿಗೆಯಲ್ಲಿ ಸಾಗುವುದು ಅನಿವಾರ್ಯ.

ಗೊಲ್ಲಾರಿ ಜಲಪಾತಕ್ಕೆ ಸಾಗುವ ಅರಣ್ಯ ಪ್ರದೇಶದಲ್ಲಿ ಆಕರ್ಷಕ ಪ್ರವೇಶ ದ್ವಾರ, ಮಾರ್ಗದುದ್ದಕ್ಕೂ ಎಚ್ಚರಿಕೆ ಮತ್ತು ಸೂಚನಾ ಫಲಕವನ್ನು ಅರಣ್ಯ ಇಲಾಖೆ ಹಾಗೂ ತೊಡೂರು ಗ್ರಾಮ ಅರಣ್ಯ ಸಮಿತಿಯಿಂದ ಅಳವಡಿಸಲಾಗಿದೆ. ಜಲಪಾತದ ಬಳಿ ಆಸನದ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.

‘ಬಹುತೇಕ ಜಲಪಾತಗಳನ್ನು ದೂರದಿಂದ ಕಣ್ತುಂಬಿಕೊಳ್ಳಬೇಕಾಗುತ್ತದೆ. ಆದರೆ, ಗೊಲ್ಲಾರಿ ಜಲಪಾತವನ್ನು ಅತಿ ಹತ್ತಿರದಿಂದ ವೀಕ್ಷಿಸಬಹುದು. ಇದೇ ಕಾರಣಕ್ಕೆ ಜಲಪಾತ ವೀಕ್ಷಣೆಗೆ ನಿತ್ಯ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ. ದೂರದ ಊರುಗಳಿಂದಲೂ ವಾರಾಂತ್ಯದ ವೇಳೆ ಪ್ರವಾಸಿಗರು ಬರುತ್ತಾರೆ’ ಎಂದು ಸ್ಥಳೀಯ ಗುರುಪ್ರಸಾದ ಮಾಹೇಕರ ಹೇಳುತ್ತಾರೆ.

ತ್ಯಾಜ್ಯ ರಾಶಿಯ ಕಿರಿಕಿರಿ
‘ಗೊಲ್ಲಾರಿ’ ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರು ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಬಾಟಲು ಮದ್ಯದ ಖಾಲಿ ಬಾಟಲಿಗಳು ಊಟ ಮಾಡಿದ ಪ್ಲೇಟ್ ಗ್ಲಾಸ್ ಸೇರಿದಂತೆ ತ್ಯಾಜ್ಯ ರಾಶಿಯನ್ನು ಎಲ್ಲೆಂದರಲ್ಲಿ ಎಸೆದು ಹೋಗುತ್ತಿರುವುದು ಪ್ರವಾಸಿ ತಾಣದ ಅಂದಗೆಡಿಸುತ್ತಿದೆ ಎಂಬುದು ಸ್ಥಳೀಯರ ದೂರು. ‘ಮಳೆಗಾಲದ ಆರಂಭದ ದಿನಗಳಿಂದಲೇ ಇಲ್ಲಿಗೆ ಪ್ರವಾಸಿಗರು ಭೇಟಿ ನೀಡಲು ಆರಂಭಿಸುತ್ತಾರೆ. ವಾರಾಂತ್ಯಗಳಲ್ಲಿ ಇಲ್ಲಿ ನಡೆಯುವ ಮೋಜು ತಡೆಯಲು ಕಷ್ಟವಾಗುತ್ತಿದೆ. ಮದ್ಯ ಸೇವನೆ ಮಾಡಿ ಗಲಾಟೆ ಮಾಡುವವರಿಂದ ಸಭ್ಯ ಪ್ರವಾಸಿಗರಿಗೂ ಕಿರಿಕಿರ ಉಂಟಾಗುತ್ತಿದೆ’ ಎಂದು ಗ್ರಾಮಸ್ಥರೊಬ್ಬರು ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT