ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಂಡಗೋಡ: ‘ಕೊರತೆ’ಗೆ ಬಳಲಿದ ಸರ್ಕಾರಿ ಪಿಯು ಕಾಲೇಜು

ಮೂಲಸೌಕರ್ಯಗಳ ಲಭ್ಯತೆ ಇಲ್ಲದೆ ವಿದ್ಯಾರ್ಥಿಗಳಿಗೆ ಸಮಸ್ಯೆ
Published 2 ಜೂನ್ 2024, 4:50 IST
Last Updated 2 ಜೂನ್ 2024, 4:50 IST
ಅಕ್ಷರ ಗಾತ್ರ

ಮುಂಡಗೋಡ: ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕೊರತೆಗಳ ಪಟ್ಟಿ ಸಾಕಷ್ಟಿದೆ. ಹಲವು ವರ್ಷಗಳಿಂದ ಕಾಯಂ ಉಪನ್ಯಾಸಕರು ಇಲ್ಲದಿರುವುದು, ಪ್ರಯೋಗಾಲಯದ ಕೊಠಡಿ ಇದ್ದರೂ, ಪರಿಕರಗಳು ಇಲ್ಲದಿರುವುದು ವಿಜ್ಞಾನ ಕಲಿಯಬೇಕೆಂಬ ವಿದ್ಯಾರ್ಥಿಗಳ ಆಸೆ ಕಮರುವಂತೆ ಮಾಡುತ್ತಿದೆ.

ಐದಾರು ದಶಕಗಳ ಇತಿಹಾಸ ಹೊಂದಿರುವ ಕಾಲೇಜಿನಲ್ಲಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳಿವೆ. ಭೌತಶಾಸ್ತ್ರ, ಗಣಿತ ವಿಷಯಗಳು ಪಿಯುಸಿ ವಿಜ್ಞಾನ ವಿಭಾಗದಲ್ಲಿ ಪ್ರಾಮುಖ್ಯತೆ ಪಡೆದಿವೆ. ಆದರೆ, ಇಂತಹ ಕಠಿಣ ವಿಷಯಗಳನ್ನು ಕಲಿಸಲು ಕಾಯಂ ಉಪನ್ಯಾಸಕರು ಇಲ್ಲ. ಖಾಸಗಿ ಕಾಲೇಜುಗಳಲ್ಲಿ ಹೆಚ್ಚು ಶುಲ್ಕ ಭರಿಸಲಾಗದೇ, ವಿದ್ಯಾರ್ಥಿಗಳು ಸರ್ಕಾರಿ ಕಾಲೇಜಿನತ್ತ ಮುಖ ಮಾಡಿದರೆ, ಇಲ್ಲಿ ಉಪನ್ಯಾಸಕರಿಂದ ಹಿಡಿದು ಕೊಠಡಿಗಳ ಸಮಸ್ಯೆ ಕಾಡುತ್ತಿದೆ. ಕಳೆದ ಏಳೆಂಟು ವರ್ಷಗಳಲ್ಲಿ ವಿಜ್ಞಾನ ಕಲಿಯಬೇಕೆಂದು ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಏರುತ್ತಿದೆ.

ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಂತೆ ಡೆಸ್ಕ್‌ಗಳ ಕೊರತೆಯೂ ಇದೆ. ಸುಣ್ಣ ಬಣ್ಣ ಕಾಣದ ಕಾಲೇಜು ಕಟ್ಟಡದಲ್ಲಿ, ಮುರಿದ ಕಿಟಕಿಗಳು, ತೇಪೆ ಹಚ್ಚಿದಂತೆ ಕಾಣುವ ಬಾಗಿಲುಗಳು, ತುಕ್ಕು ಹಿಡಿದಿರುವ ಪ್ರವೇಶ ದ್ವಾರದ ಗೇಟ್‌, ಸ್ವಚ್ಛತೆ ಕಾಣದ ಕೊಠಡಿ ಹಿಂಬದಿಯ ಪರಿಸರ, ವಿದ್ಯುತ್‌ ಬೆಳಕಿಗಾಗಿ ಕಾಯುತ್ತಿರುವ ಕೊಠಡಿಗಳು..ಹೀಗೆ ಹತ್ತಾರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಂಡಿದೆ.

‘ಸರ್ಕಾರಿ ಪದವಿ ಪೂರ್ವ ಕಾಲೇಜು ಎದುರಿನ ಆವರಣವನ್ನು ಸಮತಟ್ಟುಗೊಳಿಸಿ, ಸುತ್ತಲೂ ಆವರಣ ಗೋಡೆ ಕಟ್ಟಿಸಬೇಕು. ಇದರಿಂದ ರಜಾ ದಿನಗಳು ಹಾಗೂ ರಾತ್ರಿ ವೇಳೆಗೆ ಅಪರಿಚಿತರು ಕಾಲೇಜು ಆವರಣ ಪ್ರವೇಶಿಸದಂತೆ ತಡೆಯಬಹುದು. ಕಿಟಕಿ ಗಾಜುಗಳನ್ನು ಒಡೆಯುವುದು, ಗ್ರಿಲ್‌ಗಳನ್ನು ಮುರಿದು ಒಳಹೋಗುವ ಕಿಡಗೇಡಿಗಳ ಪ್ರಯತ್ನವನ್ನೂ ತಡೆಗಟ್ಟಬಹುದು’ ಎನ್ನುತ್ತಾರೆ ಕಾಲೇಜಿನ ಹಳೆಯ ವಿದ್ಯಾರ್ಥಿ ಪರುಶುರಾಮ ರಾಣಿಗೇರ.

‘ಕಾಲೇಜಿನಲ್ಲಿ 450ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಕಲಿಯುತ್ತಿದ್ದಾರೆ. ಪ್ರೌಢವಿಭಾಗದ ಕೆಲವು ಕೊಠಡಿಗಳನ್ನು ಕಾಲೇಜು ತರಗತಿಗೆ ಬಳಸಿಕೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳ ಸಂಖ್ಯೆಗೆ ಹೋಲಿಸಿದರೆ ಇನ್ನೂ ಏಳು ಕೊಠಡಿಗಳ ಅಗತ್ಯವಿದೆ. ಈ ಹಿಂದೆ ವಿಜ್ಞಾನ ವಿಭಾಗದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇತ್ತು. ಕಳೆದ ಎರಡು ವರ್ಷಗಳಿಂದ ವಿಜ್ಞಾನ ವಿಭಾಗಕ್ಕೆ 30-35 ವಿದ್ಯಾರ್ಥಿಗಳು ಪ್ರಥಮ ಪಿಯುಸಿಗೆ ಪ್ರವೇಶ ಪಡೆಯುತ್ತಿದ್ದಾರೆ. ಕಾಯಂ ಉಪನ್ಯಾಸಕರು ವರ್ಗಾವಣೆ ಆದ ನಂತರ, ಬೇರೆ ಉಪನ್ಯಾಸಕರು ಬಂದಿಲ್ಲ. ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಂಡು ಶಿಕ್ಷಣ ನೀಡಲಾಗುತ್ತಿದೆ’ ಎಂದು ಪ್ರಾಚಾರ್ಯ ಗುಡ್ಡಪ್ಪ ಕಡೇಮನಿ ಹೇಳಿದರು.

‘ಕೆಲವು ಕೊಠಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಆವರಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವಿದೆ. ಆದರೆ, ಅದರ ದುರಸ್ತಿಗಾಗಿ ₹90ಸಾವಿರದಷ್ಟು ಹಣ ಖರ್ಚಾಗುತ್ತದೆ. ಅನುದಾನದ ಕೊರತೆಯಿಂದ ಇನ್ನೂ ದುರಸ್ತಿ ಮಾಡಿಸಿಲ್ಲ’ ಎಂದು ಅವರು ಹೇಳಿದರು.

ಬೇರೆ ತಾಲ್ಲೂಕುಗಳಲ್ಲಿ ಕಲಿಯುತ್ತಿರುವ ಕೆಲವು ವಿದ್ಯಾರ್ಥಿನಿಯರು ದ್ವಿತೀಯ ಪಿಯುಸಿಗೆ ಪ್ರವೇಶ ಬಯಸಿ ಈಗಾಗಲೇ ಅರ್ಜಿ ಪಡೆದುಕೊಂಡಿದ್ದಾರೆ.
-ಗುಡ್ಡಪ್ಪ ಕಡೇಮನಿ, ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT