ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟದ ಮೈದಾನದ ಸೌಲಭ್ಯ ಒದಗಿಸಲು ತಾತ್ಸಾರ: ಶಾಲೆ ಮಕ್ಕಳು ಆಡಿ ನಲಿವುದು ಎಲ್ಲಿ?

Published 1 ಜನವರಿ 2024, 7:09 IST
Last Updated 1 ಜನವರಿ 2024, 7:09 IST
ಅಕ್ಷರ ಗಾತ್ರ

ಕಾರವಾರ: ಸರ್ಕಾರಿ ಶಾಲೆಗಳಿಗೆ ಕೊಠಡಿ ನಿರ್ಮಾಣಕ್ಕೆ ಪ್ರತಿ ವರ್ಷ ಲಕ್ಷಾಂತರ ಅನುದಾನ ನೀಡುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಆಟದ ಮೈದಾನ, ಆವರಣಗೋಡೆ ನಿರ್ಮಾಣಕ್ಕೆ ಆಸಕ್ತಿ ವಹಿಸುತ್ತಿಲ್ಲ ಎಂಬ ಆರೋಪಗಳಿವೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ 350ಕ್ಕೂ ಹೆಚ್ಚು ಶಾಲೆಗಳಿಗೆ ಆವರಣಗೋಡೆಯೇ ಇಲ್ಲ. 400ಕ್ಕೂ ಹೆಚ್ಚು ಶಾಲೆಗಳಿಗೆ ಅರೆಬರೆ ಆವರಣ ಗೋಡೆ ಇದ್ದು, ಅವು ಇದ್ದೂ ಇಲ್ಲದಂತಾಗುತ್ತಿದೆ. ಶಾಲೆಯ ಪುಟ್ಟ ಅಂಗಳವೇ ಮಕ್ಕಳ ಪಾಲಿಗೆ ಆಟದ ಮೈದಾನವಾಗಿದೆ. ಸುಸಜ್ಜಿತ ಮೈದಾನವೂ ಇಲ್ಲದೆ ಮಕ್ಕಳ ಕ್ರೀಡಾ ಪ್ರತಿಭೆಗೆ ಕುತ್ತು ಎದುರಾಗಿದೆ.

ಕಾರವಾರ ನಗರದ ಹೃದಯ ಭಾಗದಲ್ಲಿರುವ ಐದಕ್ಕೂ ಹೆಚ್ಚು ಶಾಲೆಗಳಿಗೆ ಆವರಣಗೋಡೆ ಇಲ್ಲ. ಇದರಿಂದ ಮಕ್ಕಳ ಸುರಕ್ಷತೆಗೆ ನಿಗಾ ಇಡುವುದೇ ಶಿಕ್ಷಕರಿಗೆ ಸವಾಲಿನ ಕೆಲಸವಾಗಿದೆ. ರಾತ್ರಿ ಆಗುತ್ತಿದ್ದಂತೆ ಶಾಲೆ ಆವರಣಕ್ಕೆ ಪುಂಡರು ನುಗ್ಗಿ ಅನೈತಿಕ ಚಟುವಟಿಕೆ ನಡೆಸಲು ಅನುಕೂಲವೂ ಆಗಿದೆ.

‘ಶಾಲೆಗಳಿಗೆ ಕೊಠಡಿ ನಿರ್ಮಿಸಲು ಅನುದಾನ ಸಿಗುತ್ತದೆ. ಆದರೆ ಆವರಣಗೋಡೆ ನಿರ್ಮಿಸಲು ಆಗುತ್ತಿಲ್ಲ. ಆವರಣಗೋಡೆ ಇಲ್ಲದೆ ಕೆಲವು ಕಡೆ ಪಾಲಕರೇ ಹಣ ಭರಿಸಿ ಬೇಲಿ ನಿರ್ಮಿಸಬೇಕಾದ ಸ್ಥಿತಿ ಇದೆ. ಶಾಲೆಗೆ ಆಟದ ಮೈದಾನವನ್ನೂ ನೀಡುತ್ತಿಲ್ಲ. ಅಕ್ಕಪಕ್ಕದ ಖಾಲಿ ಜಾಗದಲ್ಲೇ ಮಕ್ಕಳು ಆಡಬೇಕಾಗುತ್ತಿದೆ. ಕ್ರೀಡಾಪಟುಗಳಾಗುವ ಆಸಕ್ತಿ ಇರುವ ಮಕ್ಕಳಿಗೆ ಆರಂಭಿಕ ಹಂತದಲ್ಲೇ ನಿರಾಸಕ್ತಿ ಎದುರಾಗುತ್ತಿದೆ’ ಎನ್ನುತ್ತಾರೆ ವಿದ್ಯಾರ್ಥಿ ಪಾಲಕ ಸುರೇಶ ಬೇಳೂರಕರ.

ಶಿರಸಿ ತಾಲ್ಲೂಕಿನ 22 ಸರ್ಕಾರಿ ಶಾಲೆಗಳಲ್ಲಿ ಆವರಣ ಗೋಡೆಗಳಿಲ್ಲ. ವಿದ್ಯಾರ್ಥಿಗಳ ಸುರಕ್ಷತೆ ಇಲ್ಲಿ ಸವಾಲಿನ ಕಾರ್ಯವಾಗಿದೆ. 140 ಶಾಲೆಗಳಲ್ಲಿ ಒಂದು, ಎರಡು ಪಾರ್ಶ್ವದಲ್ಲಿ ಮಾತ್ರ ಆವರಣ ಗೋಡೆ ನಿರ್ಮಿಸಿ ಕೈಬಿಡಲಾಗಿದೆ. ಇಂಥ ಶಾಲೆಗಳ ಸುತ್ತ ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಗ್ರಾಮಸ್ಥರು ತಾತ್ಕಾಲಿಕ ಬೇಲಿ ನಿರ್ಮಿಸಿಕೊಳ್ಳುತ್ತಿದ್ದಾರೆ.

‘ನರೇಗಾದಡಿ ಆವರಣ ಗೋಡೆ ನಿರ್ಮಿಸಿಕೊಳ್ಳುವಂತೆ ಇಲಾಖೆಯಿಂದ ಸೂಚನೆಯಿದೆ. ಕೆಲವೆಡೆ ಕಾಮಗಾರಿ ನಡೆದಿದೆ. ಶಿರಸಿ ನಗರದ ಸ್ವಾಮಿ ವಿವೇಕಾನಂದ ಕಿರಿಯ ಪ್ರಾಥಮಿಕ ಶಾಲೆ ಹಾಗೂ ನೆಹರೂನಗರದ ಹಿರಿಯ ಪ್ರಾಥಮಿಕ ಶಾಲೆ ಹೊರತುಪಡಿಸಿ ಉಳಿದೆಡೆ ಕ್ರೀಡಾಂಗಣ ವ್ಯವಸ್ಥೆಯಿದೆ’ ಎಂದು ಬಿಇಒ ನಾಗರಾಜ ನಾಯ್ಕ ಹೇಳಿದರು.

ಯಲ್ಲಾಪುರ ತಾಲ್ಲೂಕಿನಲ್ಲಿ 57 ಪ್ರಾಥಮಿಕ ಶಾಲೆಗಳಿಗೆ ಆಟದ ಮೈದಾನ ಇಲ್ಲದೇ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. 67 ಶಾಲೆಗಳಿಗೆ ಆವರಣಗೋಡೆ ಅಗತ್ಯವಿದೆ. ಹಲವೆಡೆ ಆವರಣಗೋಡೆ ನಿರ್ಮಾಣ ಕೆಲಸ ಅರ್ಧಕ್ಕೆ ಸ್ಥಗಿತಗೊಂಡಿದೆ. ಸೂಕ್ತ ಆವರಣಗೋಡೆ ಇಲ್ಲದ ಕಾರಣ ಶಾಲೆಯ ಆವರಣಕ್ಕೆ ಜನುವಾರುಗಳು ನುಗ್ಗುವ ದೂರುಗಳು ಹೆಚ್ಚಿವೆ.

‘ಹೊನ್ನಗದ್ದೆ ಶಾಲೆಯ ಆವರಣಕ್ಕೆ ಒಂದು ಪಾರ್ಶ್ವಕ್ಕೆ ಮಾತ್ರ ಆವರಣಗೋಡೆ ನಿರ್ಮಿಸಲಾಗಿದೆ. ಉಳಿದ ಭಾಗಕ್ಕೆ ಸುರಕ್ಷತಾ ವ್ಯವಸ್ಥೆ ಇಲ್ಲ. ಹೀಗಾಗಿ ಆವರಣಗೋಡೆ ಇದ್ದೂ ಪ್ರಯೋಜನಕ್ಕೆ ಬರದಂತಾಗಿದೆ’ ಎನ್ನುತ್ತಾರೆ ರವಿ ಭಟ್ಟ ದುಂಡಿ.

ಗೋಕರ್ಣದ ಹೃದಯ ಭಾಗದಲ್ಲಿರುವ ಆಡುಕಟ್ಟೆಯ ಹಿರಿಯ ಪ್ರಾಥಮಿಕ ಶಾಲೆ ನಂ.2 ವಿದ್ಯಾರ್ಥಿಗಳ ಬಹು ಬೇಡಿಕೆಯ ಸರ್ಕಾರಿ ಪ್ರಾಥಮಿಕ ಶಾಲೆಯಾಗಿದೆ. ಆದರೆ ಮಕ್ಕಳಿಗೆ ಅವಶ್ಯಕತೆಯಿರುವ ಕ್ರೀಡಾಂಗಣ ಮಾತ್ರ ಇಲ್ಲದಾಗಿದೆ.

ಶಾಲೆಯಲ್ಲಿ 1 ರಿಂದ 8 ನೇ ತರಗತಿಯವರೆಗೆ ಕಲಿಯುವ ವ್ಯವಸ್ಥೆ ಇದೆ. ಆದರೆ ಮಕ್ಕಳಿಗೆ ತಕ್ಕ ಕ್ರೀಡಾಂಗಣದ ಕೊರತೆ ಮಾತ್ರ ಎದ್ದು ಕಾಣುತ್ತಿದೆ. ಮುಖ್ಯ ರಸ್ತೆಗೆ ತಾಗಿಕೊಂಡೇ ಶಾಲೆ ಇರುವುದರಿಂದ ಶಾಲಾ ಮಕ್ಕಳಿಗೆ ಆಟವಾಡಲು ಸೂಕ್ತ ಸ್ಥಳವಿಲ್ಲದೇ ಮಕ್ಕಳ ವಿಕಸನಕ್ಕೂ ತೊಂದರೆಯಾಗುತ್ತಿದೆ ಎಂಬುದು ಪಾಲಕರ ದೂರು.

ಹಳಿಯಾಳ ತಾಲ್ಲೂಕಿನಲ್ಲಿ 89 ಶಾಲೆಗಳಿಗೆ ಭಾಗಶಃ ಆವರಣ ಗೋಡೆಯೇ ಇಲ್ಲ. 48 ಶಾಲೆಗಳಲ್ಲಿ ಆಟದ ಮೈದಾನಗಳಿಲ್ಲ. ಗ್ರಾಮೀಣ ಭಾಗದ ಶಾಲೆಗೆ ಹೊಂದಿಕೊಂಡು ಅರಣ್ಯ ಇಲಾಖೆಯ ಜಾಗ ಇರುವುದರಿಂದ ಆಟದ ಮೈದಾನ ನಿರ್ಮಾಣಕ್ಕೆ ಅಡ್ಡಿಯಾಗುತ್ತಿದೆ ಎಂಬುದು ಶಿಕ್ಷಕರ ದೂರು.

‘ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗೆ ಜಾಗದ ಅಭಾವವಿರುವ ಶಾಲೆಗಳಿಂದ ಅಗತ್ಯ ಜಾಗದ ಬೇಡಿಕೆ ಕುರಿತು ಪ್ರಸ್ತಾವ ಸಲ್ಲಿಸಲಾಗಿದೆ’ ಎನ್ನುತ್ತಾರೆ ಬಿಇಒ ಪ್ರಮೋದ ಮಹಾಲೆ.

ಪಟ್ಟಣದ ಶಾಸಕರ ಮಾದರಿ ಶಾಲೆ ನಂ.1ರಲ್ಲಿ ಒಂದರಿಂದ ಎಂಟನೇ ತರಗತಿಯವರೆಗೆ ನಡೆಯುತ್ತಿದ್ದು ಸುಮಾರು 1063 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಕ್ರೀಡಾ ಚಟುವಟಿಕೆ ನಡೆಸಲು ಕಿರಿದಾದ ಜಾಗ ಇರುವ ಕಾರಣ ಪಟ್ಟಣದ ಶಿವಾಜಿ ಕ್ರೀಡಾಂಗಣದಲ್ಲಿ ಕ್ರೀಡಾ ಚಟುವಟಿಕೆ ನಡೆಸಲಾಗುತ್ತದೆ.

ಸಿದ್ದಾಪುರ ತಾಲ್ಲೂಕಿನಲ್ಲಿ 44 ಶಾಲೆಗಳಿಗೆ ವ್ಯವಸ್ಥಿತ ಆವರಣ ಗೋಡೆ ಇಲ್ಲ. 13 ಶಾಲೆಗಳಲ್ಲಿ ಕ್ರೀಡಾಂಗಣದ ಕೊರತೆ ಇದೆ.

‘ಆಟದ ಮೈದಾನ ಇಲ್ಲದ ಶಾಲೆಗಳಲ್ಲಿ ಸಮೀಪದ ಪ್ರೌಢಶಾಲೆಯ ಕ್ರೀಡಾಂಗಣ ಅಥವಾ ಖಾಲಿ ಜಾಗವನ್ನು ಬಳಸಿ ಕ್ರೀಡಾ ಚಟುವಟಿಕೆ ನಡೆಸಲಾಗುತ್ತಿದೆ’ ಎನ್ನುತ್ತಾರೆ ಬಿಇಒ ಜಿ.ಐ. ನಾಯ್ಕ.

‘ಹರಕನಹಳ್ಳಿಯಲ್ಲಿರುವ ಕಿರಿಯ ಪ್ರಾಥಮಿಕ ಶಾಲೆಗೆ ಸರಿಯಾದ ಆವರಣಗೋಡೆ ವ್ಯವಸ್ಥೆ ಇಲ್ಲ. ಶಾಲೆಯಲ್ಲಿ ಮಕ್ಕಳ ಸುರಕ್ಷತೆಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು’ ಎಂಬುದು ಪಾಲಕ ವೀರಭದ್ರ ನಾಯ್ಕ ಅವರ ಒತ್ತಾಯ.

ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ಶಾಂತೇಶ ಬೆನಕನಕೊಪ್ಪ, ಎಂ.ಜಿ.ಹೆಗಡೆ, ರವಿ ಸೂರಿ, ಸಂತೋಷಕುಮಾರ ಹಬ್ಬು, ಸುಜಯ್ ಭಟ್, ವಿಶ್ವೇಶ್ವರ ಗಾಂವ್ಕರ.

ವಿದ್ಯಾರ್ಥಿಗಳಿಗೆ ಆಡಿ ನಲಿಯಲು ಆಟದ ಮೈದಾನವೇ ಇಲ್ಲದ ಗೋಕರ್ಣದ ಮಧ್ಯ ಭಾಗದಲ್ಲಿರುವ ಆಡುಕಟ್ಟೆಯ ಹಿರಿಯ ಪ್ರಾಥಮಿಕ ಶಾಲೆ ನಂ.2
ವಿದ್ಯಾರ್ಥಿಗಳಿಗೆ ಆಡಿ ನಲಿಯಲು ಆಟದ ಮೈದಾನವೇ ಇಲ್ಲದ ಗೋಕರ್ಣದ ಮಧ್ಯ ಭಾಗದಲ್ಲಿರುವ ಆಡುಕಟ್ಟೆಯ ಹಿರಿಯ ಪ್ರಾಥಮಿಕ ಶಾಲೆ ನಂ.2
ಮುಂಡಗೋಡ ತಾಲ್ಲೂಕಿನ ಹಳ್ಳದಮನೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುತ್ತಲೂ ಜಾಗವಿದ್ದು ಸಮರ್ಪಕ ಆಟದ ಮೈದಾನ ನಿರ್ಮಿಸಬೇಕಿದೆ
ಮುಂಡಗೋಡ ತಾಲ್ಲೂಕಿನ ಹಳ್ಳದಮನೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುತ್ತಲೂ ಜಾಗವಿದ್ದು ಸಮರ್ಪಕ ಆಟದ ಮೈದಾನ ನಿರ್ಮಿಸಬೇಕಿದೆ
ಶಿರಸಿ ತಾಲ್ಲೂಕಿನ ದಾನಂದಿಯಲ್ಲಿರುವ ಸರ್ಕಾರಿ ಶಾಲೆಯ ಒಂದು ಪಾರ್ಶ್ವದಲ್ಲಿ ಆವರಣ ಗೋಡೆ ಇಲ್ಲದಿರುವುದು
ಶಿರಸಿ ತಾಲ್ಲೂಕಿನ ದಾನಂದಿಯಲ್ಲಿರುವ ಸರ್ಕಾರಿ ಶಾಲೆಯ ಒಂದು ಪಾರ್ಶ್ವದಲ್ಲಿ ಆವರಣ ಗೋಡೆ ಇಲ್ಲದಿರುವುದು
ಆವರಣಗೋಡೆ ಇಲ್ಲದ ಶಾಲೆಗಳಿಗೆ ನರೇಗಾ ಯೋಜನೆ ಅಡಿ ಆವರಣಗೋಡೆ ನಿರ್ಮಿಸಲು ಅವಕಾಶವಿದೆ. ಆದ್ಯತೆ ಮೇರೆಗೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು.
ಲತಾ ನಾಯಕ ಡಿಡಿಪಿಐ ಕಾರವಾರ ಶೈಕ್ಷಣಿಕ ಜಿಲ್ಲೆ
ಶಾಲಾ ಸಾಕ್ಷರತಾ ಅಭಿಯಾನ ಇದ್ದಾಗ ಆವರಣ ಗೋಡೆ ನಿರ್ಮಿಸಲು ಅನುದಾನ ಬರುತ್ತಿತ್ತು. ಈಗ ಶಿಕ್ಷಣ ಇಲಾಖೆಯವರು ಅನುದಾನ ಬಿಡುಗಡೆ ಆಗುತ್ತಿಲ್ಲ ಎನ್ನುತ್ತಿದ್ದಾರೆ
ಅಶೋಕ ಹೆಗಡೆ ಪಾಲಕ
ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪ್ರತಿಯೊಂದು ಶಾಲೆಗೆ ಮೈದಾನ ಸೇರಿದಂತೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸಬೇಕು
ಸುರೇಶ ಕೋಕಿತಕರ ಹಳಿಯಾಳದ ಸರ್ಕಾರಿ ಶಾಸಕರ ಮಾದರಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ
ರಸ್ತೆ ಮೇಲೆ ಆಟವಾಡುವ ವಿದ್ಯಾರ್ಥಿಗಳು
ಮುಂಡಗೋಡ ತಾಲ್ಲೂಕಿನಲ್ಲಿ ಶೇ 70ರಷ್ಟು ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಆಟದ ಮೈದಾನವಿಲ್ಲ. ಅರ್ಧದಷ್ಟು ಶಾಲೆಗಳಿಗೆ ಪೂರ್ಣ ಪ್ರಮಾಣದ ಕಾಂಪೌಂಡ್‌ ಗೋಡೆ ಇಲ್ಲ. ಇದರಿಂದ ಮಕ್ಕಳು ತರಗತಿ ಕೊಠಡಿ ಹಾಗೂ ಶಾಲೆಯ ಮುಂದಿನ ಮಾರುದ್ದ ಜಾಗದಲ್ಲಿಯೇ ಆಟವಾಡಬೇಕಾದ ಪರಿಸ್ಥಿತಿಯಿದೆ. ಗ್ರಾಮೀಣ ಭಾಗದ ಕೆಲವು ಶಾಲೆಗಳ ವಿದ್ಯಾರ್ಥಿಗಳು ಪಂಚಾಯ್ತಿ ಜಾಗದಲ್ಲಿ ರಸ್ತೆ ಮೇಲೆ ಆಟವಾಡುವುದನ್ನು ಕಾಣಬಹುದಾಗಿದೆ. ಕೆಲವು ಶಾಲೆಗಳಲ್ಲಿ ಜಾಗವಿದ್ದರೂ ಅಲ್ಲೊಂದು ಇಲ್ಲೊಂದು ತರಗತಿ ಕೊಠಡಿಗಳನ್ನು ನಿರ್ಮಿಸಿದ್ದರಿಂದ ಇರುವ ಜಾಗವೂ ಸಮರ್ಪಕವಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎನ್ನುವ ಆರೋಪವಿದೆ. ಶಾಲೆಯ ಮುಂದೆ ಕೆಲವೇ ಗುಂಟೆಗಳಷ್ಟು ಜಾಗವಿದ್ದ ಕಡೆಗಳಲ್ಲಿ ಕೈತೋಟ ಮಾಡಿದ್ದಾರೆ. ಕೆಲವು ಶಾಲೆಗಳಲ್ಲಿ ಕೈತೋಟ ಮಾಡಲಿಕ್ಕೂ ಜಾಗವಿಲ್ಲದಂತಾಗಿದೆ. ಒಂದು ವೇಳೆ ಕೈತೋಟ ಮಾಡಿದರೂ ಶಾಲೆಗೆ ಆವರಣಗೋಡೆ ಇಲ್ಲದಿರುವುದರಿಂದ ಕೈತೋಟ ರಕ್ಷಣೆ ಮಾಡಿಕೊಳ್ಳಲಾಗದ ಸ್ಥಿತಿಯಿದೆ. ‘ತಾಲ್ಲೂಕಿನಲ್ಲಿ 80 ಪ್ರಾಥಮಿಕ ಶಾಲೆಗಳಿಗೆ ಆವರಣ ಗೋಡೆ ಇಲ್ಲದಿರುವ ಬಗ್ಗೆ ಈಗಾಗಲೇ ಕ್ರಿಯಾಯೋಜನೆ ತಯಾರಿಸಿ ಕಳಿಸಲಾಗಿದೆ. ದೊಡ್ಡ ಶಾಲೆಗಳಲ್ಲಿ ವಿಶಾಲವಾದ ಜಾಗವಿದ್ದು ಆಟದ ಮೈದಾನವಾಗಿ ಬಳಸಿಕೊಳ್ಳುತ್ತಾರೆ. ಇನ್ನುಳಿದ ಶಾಲೆಗಳಿಗೆ ಇರುವ ಜಾಗದಲ್ಲಿಯೇ ಆಟದ ಮೈದಾನವನ್ನಾಗಿ ಉಪಯೋಗಿಸುತ್ತಾರೆ’ ಎಂಬುದು ಬಿಇಒ ಜಕಣಾಚಾರಿ ಪ್ರತಿಕ್ರಿಯೆ.
ಹೊರಾಂಗಣ ಕ್ರೀಡೆಯಿಂದ ವಂಚಿತ
ಹೊನ್ನಾವರ ತಾಲ್ಲೂಕಿನಲ್ಲಿ 84 ಶಾಲೆಗಳಲ್ಲಿ ಆಟದ ಮೈದಾನ ಇಲ್ಲದಿರುವುದರಿಂದ ಇಂಥ ಶಾಲೆಗಳ ವಿದ್ಯಾರ್ಥಿಗಳು ಹೊರಾಂಗಣ ಕ್ರೀಡೆಗಳಿಂದ ವಂಚಿತರಾಗಿದ್ದಾರೆ. 60 ಶಾಲೆಗಳಿಗೆ ಆವರಣ ಗೋಡೆ ಇಲ್ಲ. ‘ಆಟದ ಮೈದಾನ ಇಲ್ಲದಿದ್ದರೆ ಹೊಸ ಶಾಲೆಗಳಿಗೆ ಅನುಮತಿ ನೀಡಲಾಗುವುದಿಲ್ಲ. ಹಿಂದಿನಿಂದ ಇರುವ ಹಲವು ಶಾಲೆಗಳಿಗೆ ಕೇವಲ ಒಂದೆರಡು ಗುಂಟೆ ಸ್ವಂತ ಜಾಗವಿದ್ದು ಮೈದಾನ ನಿರ್ಮಾಣಕ್ಕೆ ಜಾಗದ ಕೊರತೆ ಇದೆ. ಆಟದ ಮೈದಾನ ಹಾಗೂ ಆವರಣಗೋಡೆ ಅಗತ್ಯವಿರುವೆಡೆ ಈ ಕುರಿತ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ಬಿಇಒ ಜಿ.ಎಸ್.ನಾಯ್ಕ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT