ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಅನುಗ್ರಹ’ ಯೋಜನೆಗೆ ‘ಗ್ರಹಣ’: ಅನುದಾನಕ್ಕಾಗಿ ಜಾನುವಾರು ಮಾಲೀಕರ ಅಲೆದಾಟ

Published : 24 ಸೆಪ್ಟೆಂಬರ್ 2024, 5:46 IST
Last Updated : 24 ಸೆಪ್ಟೆಂಬರ್ 2024, 5:46 IST
ಫಾಲೋ ಮಾಡಿ
Comments

ಶಿರಸಿ: ವಿಮೆ ಸೌಲಭ್ಯ ಹೊಂದಿರದ ಜಾನುವಾರು ಮೃತಪಟ್ಟರೆ ಅದರ ಮಾಲೀಕನಿಗೆ ಸರ್ಕಾರವು ಪರಿಹಾರಾತ್ಮಕವಾಗಿ ₹10 ಸಾವಿರ ನೀಡುವ ‘ಅನುಗ್ರಹ’ ಯೋಜನೆ ಅನುದಾನ ಕೊರತೆಯಿಂದ ಬಳಲುವಂತಾಗಿದೆ.

ರಾಜ್ಯ ಸರ್ಕಾರ ಹೈನುಗಾರಿಕೆಯನ್ನು ಪ್ರೋತ್ಸಾಹಿಸಲು ವಿಮೆ ಮಾಡದ ಜಾನುವಾರುಗಳು ಆಕಸ್ಮಿಕವಾಗಿ ಮರಣ ಹೊಂದಿ ರೈತರು ಸಂಕಷ್ಟಕ್ಕೆ ಒಳಗಾಗಬಾರದೆಂಬ ಹಿನ್ನೆಲೆಯಲ್ಲಿ ಅನುಗ್ರಹ ಯೋಜನೆಯಡಿ ಆರು ತಿಂಗಳ ಮೇಲ್ಪಟ್ಟ ಕುರಿ ಮತ್ತು ಮೇಕೆ ಮೃತಪಟ್ಟರೆ ₹5 ಸಾವಿರ ಹಾಗೂ ಹಸು, ಎಮ್ಮೆ ಮತ್ತು ಎತ್ತುಗಳಿಗೆ ₹10 ಸಾವಿರ ಪರಿಹಾರ ನೀಡುತ್ತದೆ. 

ತಾಲ್ಲೂಕು ವ್ಯಾಪ್ತಿಯಲ್ಲಿ 2024ರ ಮಾರ್ಚ್ ತಿಂಗಳಿನಿಂದ ಆಗಸ್ಟ್ ಅಂತ್ಯದವರೆಗೆ ಜೀವವಿಮೆ ಮಾಡಿಸದ 188  ಜಾನುವಾರುಗಳು ಆಕಸ್ಮಿಕವಾಗಿ ಮೃತಪಟ್ಟಿವೆ. ಇವುಗಳಲ್ಲಿ 122 ಜಾನುವಾರು ಮಾಲೀಕರಿಗೆ ತಲಾ ₹10 ಸಾವಿರ ಪರಿಹಾರ ನೀಡಲಾಗಿದೆ. 66 ಅರ್ಜಿದಾರರಿಗೆ ಪರಿಹಾರ ವಿತರಣೆ ಬಾಕಿಯಿದೆ. ಆದರೆ ಇಲಾಖೆಯಲ್ಲಿ ಅನುದಾನ ಖಾಲಿಯಾಗಿದ್ದು, ಹೊಸ ಅನುದಾನ ಸರ್ಕಾರ ಬಿಡುಗಡೆ ಮಾಡಿಲ್ಲ. ಹೀಗಾಗಿ ಅರ್ಜಿದಾರರು ಪರಿಹಾರ ಮೊತ್ತಕ್ಕಾಗಿ ಪಶುಸಂಗೋಪನಾ ಇಲಾಖೆ ಬಾಗಿಲು ಕಾಯುವಂತಾಗಿದೆ.

‘ಜಾನುವಾರು ಮರಣ ಹೊಂದಿದ್ದ ತಕ್ಷಣ ಸ್ಥಳೀಯ ಪಶು ಆಸ್ಪತ್ರೆಯನ್ನು ಭೇಟಿ ಮಾಡಿ ಮರಣೋತ್ತರ ಪರೀಕ್ಷೆ ನಡೆಸಿ, ಸ್ಥಳೀಯ ಪಶುವೈದ್ಯರಿಂದ ದೃಢೀಕರಣ ಪತ್ರ ಪಡೆದಿದ್ದೇವೆ. ಫೋಟೊ ಜತೆಗೆ ಅರ್ಜಿದಾರರ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಬುಕ್ ಸಮೇತ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಕಚೇರಿ ಅರ್ಜಿ ಸಲ್ಲಿಸಿದ್ದೇವೆ. ಮೂರು ತಿಂಗಳಾದರೂ ಈವರೆಗೆ ಪರಿಹಾರ ಮೊತ್ತ ಮಾತ್ರ ಕೈಸೇರಿಲ್ಲ’ ಎಂಬುದು ಹಲವು ಮೃತ ಜಾನುವಾರು ಮಾಲಕರ ಮಾತಾಗಿದೆ. 

‘ಯೋಜನೆಯಡಿ ಲಭ್ಯವಿದ್ದ ಅನುದಾನದಲ್ಲಿ ಅರ್ಹರಿಗೆ ಪರಿಹಾರ ನೀಡಲಾಗಿದೆ. ಸರ್ಕಾರಕ್ಕೆ ಈ ಕುರಿತು ಪ್ರಸ್ತಾವ ಸಲ್ಲಿಸಲಾಗಿದ್ದು, ಅನುದಾನ ಬಿಡುಗಡೆಯ ನಂತರ ಪರಿಹಾರ ವಿತರಿಸಲಾಗುವುದು’ ಎಂಬುದು ಪಶು ಇಲಾಖೆ ಅಧಿಕಾರಿಗಳ ಮಾತಾಗಿದೆ.

ಅರ್ಜಿ ಸಲ್ಲಿಸಿ ಪರಿಹಾರ ಮೊತ್ತ ಪಡೆಯಲು ಅನಗತ್ಯ ಓಡಾಟ ಮಾಡುವ ಸ್ಥಿತಿಯಿದೆ. ಸರ್ಕಾರ ತಕ್ಷಣ ಅನುದಾನ ನೀಡಬೇಕು
ಪರಮೇಶ್ವರ ನಾಯ್ಕ ಮೃತ ಜಾನುವಾರು ಮಾಲೀಕ
2024ರ ಮಾರ್ಚ್ - ಮೇ ತಿಂಗಳವರೆಗೆ ಮರಣ ಹೊದಿರುವ ರಾಸುಗಳ ಮಾಲೀಕರಿಗೆ ಹಣ ಪಾವತಿ ಮಾಡಲಾಗಿದೆ. 66 ರಾಸುಗಳ ಮಾಲೀಕರಿಗೆ ಪರಿಹಾರ ಪಾವತಿ ಬಾಕಿಯಿದೆ. 
ಡಾ.ಗಜಾನನ ಹೊಸಮನಿ ಎಡಿ ಪಶು ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT