ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಟಾ: ಶತಮಾನ ಕಂಡ ಹಳಕಾರ ಗ್ರಾಮ ಅರಣ್ಯ ಪಂಚಾಯಿತಿ

Published 11 ಫೆಬ್ರುವರಿ 2024, 6:43 IST
Last Updated 11 ಫೆಬ್ರುವರಿ 2024, 6:43 IST
ಅಕ್ಷರ ಗಾತ್ರ

ಕುಮಟಾ: ಹಸಿರು ವಾತಾವರಣ ಹಾಗೂ ಅಂತರ್ಜಲ ಸೆಲೆಯ ಮೇಲೆ ಪ್ರಭಾವ ಬೀರುವ ಹಳಕಾರ ಗ್ರಾಮದ ಅರಣ್ಯವನ್ನು ಜೋಪಾನವಾಗಿ ಕಾಯ್ದುಕೊಂಡು ಬಂದಿರುವ ಹಳಕಾರ ಗ್ರಾಮ ಅರಣ್ಯ ಪಂಚಾಯಿತಿಗೆ ಈಗ  ಶತಮಾನ ಪೂರ್ಣಗೊಂಡಿದೆ.

ಸುಮಾರು 219 ಎಕರೆ ವಿಸ್ತಾರದ ಹಳಕಾರ ಗ್ರಾಮದ ಅರಣ್ಯವು ಪಟ್ಟಣದಿಂದ ಒಂದು ಕಿ.ಮೀ ಅಂತರದಲ್ಲೇ ಇದೆ. ಹೊಲನಗದ್ದೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಈ ಅರಣ್ಯವನ್ನು ಬ್ರಿಟಿಷ್ ಆಳ್ವಿಕೆ ಕಾಲದಲ್ಲಿಯೇ ಗ್ರಾಮ ಅರಣ್ಯ ಪಂಚಾಯಿತಿಯ ಸುಪರ್ದಿಗೆ ನೀಡಲಾಗಿತ್ತು. ರಾಜ್ಯದ ಅತಿ ಹಳೆಯ ಗ್ರಾಮ ಅರಣ್ಯ ಪಂಚಾಯಿತಿ ಎಂಬ ಕೀರ್ತಿ ಇದರದ್ದು.

‘1920ಕ್ಕೂ ಪೂರ್ವದಲ್ಲಿ ಬ್ರಿಟಿಷ್ ಸರ್ಕಾರ ಜಿಲ್ಲೆಯ ಡಿ ದರ್ಜೆ ಅರಣ್ಯಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಜಿ.ಎಫ್.ಎಸ್. ಕಾಲಿನ್ಸ್ ಎನ್ನುವ ಅರಣ್ಯ ವಸಾಹತು ಅಧಿಕಾರಿಯನ್ನು ನೇಮಿಸಿತು. ಅವರು ಎಲ್ಲ ಡಿ ದರ್ಜೆಯ ಅರಣ್ಯ ಅಧ್ಯಯನ ನಡೆಸಿ, ಅಂಥ ಅರಣ್ಯಗಳ ಉತ್ಪನ್ನವನ್ನು ಗ್ರಾಮಸ್ಥರೇ ಬಳಕೆ ಮಾಡಿಕೊಂಡು ಅವುಗಳ ರಕ್ಷಣೆ ಮಾಡುತ್ತಿದ್ದಾರೆ. ಆದ್ದರಿಂದ ಅವುಗಳ ನಿರ್ವಹಣೆಯನ್ನು ಗ್ರಾಮಸ್ಥರಿಗೇ ನೀಡಬೇಕು ಎಂದು ವರದಿ ನೀಡಿದ್ದರು. ಈ ವರದಿ ಆಧರಿಸಿ ಅಂದಿನ ಬಾಂಬೆ ಪ್ರಾಂತ್ಯ ಸರ್ಕಾರ ವಿಲೇಜ್ ಫಾರೆಸ್ಟ್ ಪಂಚಾಯ್ತಿ ಎಂದು ಹೆಸರಿಸಿ ಅವುಗಳನ್ನು ಸ್ಥಳೀಯರ ಸುಪರ್ದಿಗೊಪ್ಪಿಸಿ ಆದೇಶ ಹೊರಡಿಸಿತ್ತು’ ಎಂದು ಇತಿಹಾಸ ವಿವರಿಸುತ್ತಾರೆ ಗ್ರಾಮದ ಹಿರಿಯರೊಬ್ಬರು.

‘1927ರ ಅರಣ್ಯ ಕಾಯ್ದೆ ಪ್ರಕಾರ ತಾಲ್ಲೂಕಿನಲ್ಲಿ ಹಳಕಾರ ಸೇರಿ ಒಟ್ಟೂ 9 ವಿ.ಎಫ್.ಪಿಗಳು ಅಸ್ತಿತ್ವಕ್ಕೆ ಬಂದಿದ್ದವು. 1968–70ರ ಅವಧಿಯಲ್ಲಿ ಎಲ್ಲ ವಿ.ಎಫ್.ಪಿ ಗಳನ್ನು ಅರಣ್ಯ ಇಲಾಖೆಗೆ ಬಿಟ್ಟುಕೊಡಬೇಕು ಎಂದು ಆದೇಶ ಹೊರಡಿಸಿದಾಗ ಹಳಕಾರ ಹಾಗೂ ಕಲ್ಲಬ್ಬೆ ವಿ.ಎಫ್.ಪಿಯವರು ನ್ಯಾಯಾಂಗ ಹೋರಾಟ ನಡೆಸಿ ಗೆಲುವು ಸಾಧಿಸಿದ್ದವು’ ಎನ್ನುತ್ತಾರೆ ಅವರು.

‘ಅರಣ್ಯ ಪ್ರದೇಶವು ಆರು ಸರ್ವೆ ನಂಬರುಗಳನ್ನೊಳಗೊಂಡ 219 ಎಕರೆ ಜಾಗ ಹೊಂದಿದೆ. ಅವುಗಳ ಪೈಕಿ 14 ಎಕರೆ ಜಾಗವನ್ನು 1990ರ ರಲ್ಲಿ ಕೊಂಕಣ ರೇಲ್ವೆ ಮಾರ್ಗಕ್ಕೆ ಬಳಸಿಕೊಳ್ಳಲಾಗಿದೆ. ಈ ಪ್ರದೇಶದಲ್ಲಿ ಚಿತ್ರಿಗಿ-ಹಳಕಾರ- ಹೆಗಡೆ ಗ್ರಾಮ ಸಂಪರ್ಕಿಸುವ 3 ಕಿ.ಮೀ ರಸ್ತೆ ಕೂಡ ಇದೆ. ಸುಮಾರು ಎರಡು ಸಾವಿರಕ್ಕೂ ಹೆಚ್ಚು ಜನ ಸಂಖ್ಯೆಯಿರುವ ಹಳಕಾರ ಗ್ರಾಮದ ಪ್ರತೀ ರೈತ ಕುಟುಂಬ ವಿ.ಎಫ್.ಪಿ ಸದಸ್ಯತ್ವ ಹೊಂದಿದೆ’ ಎಂದು ಹಳಕಾರ ವಿ.ಎಫ್.ಪಿ ಕಾರ್ಯದರ್ಶಿ ಶಾಂತಾರಾಮ ಹರಿಕಂತ್ರ ತಿಳಿಸಿದರು.

ಆಯುಧ ಹಿಡಿದು ಹೋಗುವಂತಿಲ್ಲ
‘ಗ್ರಾಮಸ್ಥರು ಯಾವುದೇ ಆಯುಧ ಹಿಡಿದು ಅರಣ್ಯ ಪ್ರವೇಶಿಸುವಂತಿಲ್ಲ. ತರಗೆಲೆ ಕೈಯಲ್ಲಿ ಮುರಿದುಕೊಂಡು ಬರುವಂಥ ಒಣ ಕಟ್ಟಿಗೆ ಮಾತ್ರ ತರಬಹುದಾಗಿದೆ. ಮನೆ ಕೊಟ್ಟಿಗೆ ಕಟ್ಟಲು ಒಣ ಮರ ಬೇಕಿದ್ದರೆ ಮೊದಲೇ ಅರ್ಜಿ ಕೊಡಬೇಕು. ಪ್ರತೀ ಕುಟುಂಬದವರೂ ಈ ಪ್ರಯೋಜನ ಪಡೆಯಬಹುದಾಗಿದೆ. ಪ್ರತಿ ವರ್ಷ ಶ್ರಮದಾನ ಮೂಲಕ ಸಂಸ್ಥೆಯ ಕಾಡಿನಲ್ಲಿ ಗಿಡ ನೆಡುವ ಶುಚಿಗೊಳಿಸುವ ಕಾರ್ಯಕ್ಕೆ ಮನೆಗೊಬ್ಬ ಸದಸ್ಯರು ಬರುವುದು ಕಡ್ಡಾಯ. ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬಂದಿರುವ ಪರಿಣಾಮದಿಂದ ಕುಮಟಾ ಪಟ್ಟಣ ಮಧ್ಯೆ ಇಂಥ ವಿಶಿಷ್ಟ ಅರಣ್ಯ ಉಳಿದುಕೊಂಡಿದೆ’ ಎಂದು ವಿ.ಎಫ್.ಪಿ ಕಾರ್ಯದರ್ಶಿ ಶಾಂತಾರಾಮ ಹರಿಕಂತ್ರ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT