ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಳಿಯಾಳ | ಪೂರ್ವ ಮುಂಗಾರು ಮಳೆ ಉತ್ತಮ: ಬಿತ್ತನೆ ಆರಂಭ

ಸಂತೋಷ ಕುಮಾರ ಹಬ್ಬು
Published 30 ಮೇ 2024, 4:09 IST
Last Updated 30 ಮೇ 2024, 4:09 IST
ಅಕ್ಷರ ಗಾತ್ರ

ಹಳಿಯಾಳ: ತಾಲ್ಲೂಕಿನಾದ್ಯಂತ ಮೇ ತಿಂಗಳ ಪ್ರಾರಂಭದ ಹಂತದಲ್ಲಿ 3-4 ದಿನಗಳ ಕಾಲ ನಿರಂತರ ಪೂರ್ವ ಮುಂಗಾರು ಮಳೆ ಬಿದ್ದ ಪರಿಣಾಮ ರೈತರು ತಮ್ಮ ಹೊಲ ಗದ್ದೆಯನ್ನು ಹದ ಮಾಡಿ ಕಳೆದ ಒಂದು ವಾರದಿಂದ ಬಿತ್ತನೆ ಕಾರ್ಯ ಪ್ರಾರಂಭಿಸಿದ್ದಾರೆ.

ಈಗಾಗಲೇ ಹದ ಮಾಡಿದ ಹೊಲ ಗದ್ದೆಗಳಲ್ಲಿ ರೈತರು ಭತ್ತ, ಗೋವಿನ ಜೋಳ, ಹತ್ತಿ ಬೀಜಗಳನ್ನು ಬಿತ್ತುತ್ತಿರುವುದು ಕಾಣಬರುತ್ತಿದೆ. ಕೆಲವು ರೈತರು ತೀವ್ರ ನೆಲ ಹದ ಮಾಡಿರುವುದರಿಂದ ಏರಡು ವಾರಗಳ ಹಿಂದೆಯೇ ಭತ್ತ ಬಿತ್ತನೆ ಮಾಡಿದ್ದು ಭತ್ತದ ಮೊಳಕೆ ಒಡೆದು ಚಿಗುರುತ್ತಿದೆ.

ತಾಲ್ಲೂಕಿನಾದ್ಯಂತ ಒಟ್ಟು 21 ಸಾವಿರ ಹೆಕ್ಟೇರ್‌ ಜಮೀನಿದ್ದು ಇವುಗಳಲ್ಲಿ 5,400 ಹೆಕ್ಟೇರ್‌ ಜಮೀನಿನಲ್ಲಿ ಭತ್ತ, 3,100 ಹೆಕ್ಟೇರ್‌ ಜಮೀನಿನಲ್ಲಿ ಗೋವಿನಜೋಳ, 12,200 ಹೆಕ್ಟೇರ್‌ ಜಮೀನಿನಲ್ಲಿ ಕಬ್ಬು, 300 ಹೆಕ್ಟೇರ್‌ ಜಮೀನಿನಲ್ಲಿ ಹತ್ತಿ ಬೆಳೆಸಲಾಗುತ್ತಿದೆ.

ಈಗಾಗಲೇ ಕೃಷಿ ಇಲಾಖೆಯಿಂದ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳಾದ ಹಳಿಯಾಳ, ಮುರ್ಕವಾಡ, ಸಾಂಬ್ರಾಣಿ, ದಾಂಡೇಲಿಯಲ್ಲಿ ರಿಯಾಯಿತಿ ದರದಲ್ಲಿ ಭತ್ತ, ಮೆಕ್ಕೆ ಜೋಳ, ಹತ್ತಿ ಬೀಜಗಳನ್ನು ವಿತರಿಸಲಾಗುತ್ತಿದೆ. ರೈತರು ಸಹ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳಲ್ಲಿ ತೆರಳಿ ಬೀಜಗಳನ್ನು ಕೊಂಡುಕೊಳ್ಳುತ್ತಿದ್ದಾರೆ.

‘ಪೂರ್ವ ಮುಂಗಾರು ಮಳೆಯಾದ ಕಾರಣ ಜಮೀನನ್ನು ಹದ ಮಾಡಿದ್ದೇನೆ. ಜಮೀನಿನಲ್ಲಿಯ ತೇವಾಂಶವನ್ನು ಎರಡು ದಿನಗಳಿಂದ ಈಗಾಗಲೇ ಎರಡು ಎಕರೆ ಜಮೀನಿನಲ್ಲಿ ಭತ್ತವನ್ನು, ನಾಲ್ಕು ಎಕರೆ ಜಮೀನಿನಲ್ಲಿ ಗೋವಿನ ಜೋಳವನ್ನು ಬಿತ್ತಲು ಆರಂಭಿಸಿದ್ದೇನೆ. ಒಟ್ಟು 8 ಎಕರೆ ಜಮೀನು ಹೊಂದಿದ್ದು ಕಬ್ಬನ್ನು ಸಹ ಬೆಳೆಯುತ್ತೇನೆ. ಒಂದು ಎಕರೆ ಭತ್ತದ ಜಮೀನಿನಲ್ಲಿ ಗೊಬ್ಬರ ಹಾಕಲು ಹಾಗೂ ಭತ್ತ ಮೊಳಕೆ ಒಡೆದಾಗ ಭತ್ತದ ಸುತ್ತಲೂ ಬೆಳೆದ ಕಳೆ ತೆಗೆಯಲು ಸುಮಾರು ₹ 50 ಸಾವಿರದಷ್ಟು ವೆಚ್ಚವಾಗುತ್ತದೆ. ಚೆನ್ನಾಗಿ ಸಕಾಲಕ್ಕೆ ಕಾಲಾನುಸಾರವಾಗಿ ಮಳೆ ಆದರೆ ಎರಡು ಎಕರೆಗೆ 40 ಕ್ವಿಂಟಲ್‌ಗಳಷ್ಟು ಭತ್ತ ಬರುತ್ತದೆ. ನಾಲ್ಕು ಎಕರೆ ಗೋವಿನ ಜೋಳ ಬೆಳೆಸಿದ್ದೇನೆ. ಸುಮಾರು ₹ 30 ಸಾವಿರಕ್ಕೂ ಹೆಚ್ಚು ವ್ಯಯವಾಗುತ್ತದೆ. ಇದು ಕೂಡ ಹವಾಮಾನದ ವೈಪರಿತ್ಯದ ಮೇಲೆ ಅನುಸರಿಸಿದೆ’ ಎಂದು ಕಾಳಗಿನಕೊಪ್ಪ ಗ್ರಾಮದ ಮಂಜುನಾಥ ನಾಗೇಶ ವೆಂಕಟಪ್ಪ ಗೌಡ ಹೇಳಿದರು.

ತೋಟಗಾರಿಕೆ ಬೆಳೆ ಬೆಳೆಸುವವರಿಗೆ ಪೂರ್ವ ಮುಂಗಾರು ಹಂಗಾಮು ಸೂಕ್ತ ಕಾಲವಾಗಿದೆ. ತೋಟಗಾರಿಕೆ ಇಲಾಖೆಯಿಂದ ಗೇರು ಸಸಿ, ವೆಂಗುರ್ಲಾ 7, ವೆಂಗುರ್ಲಾ 4 ಬೀಜಗಳು ಈಗಾಗಲೇ ಇಲಾಖೆಯಿಂದ ಲಭ್ಯವಿವೆ. ಅರಶಿ ಕೆರೆ ಎತ್ತರ ತಳಿಯ ತೆಂಗು, ಹೈಬ್ರಿಡ್ ನಿಂಬೆ, ಅಲಂಕಾರಿಕ ಗಿಡ, ಪೌಷ್ಟಿಕ ಸಸಿಗಳನ್ನು ತಾರ್ಸಿ ತೋಟಗಳನ್ನು ನಿರ್ಮಾಣ ಮಾಡಲು ಇಲಾಖೆಯಿಂದ ಅವಶ್ಯಕತೆಗೆ ಅನುಗುಣವಾಗಿ ವಿತರಿಸಲಾಗುತ್ತಿದೆ. ಗ್ರಾಮೀಣ ಭಾಗದ ರೈತರು ಹಾಗೂ ಪಟ್ಟಣದ ರಹವಾಸಿಗಳು ಸಹ ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಬೇಕು ಎಂದು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಎ.ಆರ್. ಹೇರಿಯಾಳ ತಿಳಿಸಿದರು.

ಹಳಿಯಾಳದ ಕೃಷಿ ಇಲಾಖೆಯಲ್ಲಿ ಆರಂಭಿಸಲಾಗಿರುವ ರೈತ ಸಂಪರ್ಕ ಕೇಂದ್ರದಿಂದ ರೈತರು ಭತ್ತ ಹಾಗೂ ಗೋವಿನ ಜೋಳದ ಬೀಜವನ್ನು ಖರೀದಿಸಲು ಸರದಿ ಸಾಲಿನಲ್ಲಿ ನಿಂತಿರುವುದು
ಹಳಿಯಾಳದ ಕೃಷಿ ಇಲಾಖೆಯಲ್ಲಿ ಆರಂಭಿಸಲಾಗಿರುವ ರೈತ ಸಂಪರ್ಕ ಕೇಂದ್ರದಿಂದ ರೈತರು ಭತ್ತ ಹಾಗೂ ಗೋವಿನ ಜೋಳದ ಬೀಜವನ್ನು ಖರೀದಿಸಲು ಸರದಿ ಸಾಲಿನಲ್ಲಿ ನಿಂತಿರುವುದು

‘ಬಿತ್ತನೆಗೆ ಅವಸರ ಮಾಡದಿರಿ’

ರೈತರು ಹಸಿ ಆಕಾರ ಮಳೆಯ ಮುನ್ಸೂಚನೆ ಭೂಮಿಯ ತೇವಾಂಶ ಗಮನಿಸಿ ಬಿತ್ತನೆ ಮಾಡಬೇಕು. ಅವಸರ ಮಾಡಿ ಯಾವುದೇ ಕಾರ್ಯ ಮಾಡಲು ಹೋಗಬೇಡಿ. ಈಗಾಗಲೇ ಭೂಮಿ ತೇವಾಂಶಗೊಂಡಿದ್ದು ಮುಂದೆ 4-5 ದಿನಗಳ ಕಾಲ ಮಳೆ ಆಗದಿದ್ದರೆ ಬಿತ್ತನೆ ಮಾಡಿದ ಕಾಳು ಮೊಳಕೆ ಪ್ರಮಾಣ ಸರಿಯಾಗಿ ಬರಲಿಕ್ಕೆ ಇಲ್ಲ. ರೈತರು ಎಚ್ಚರಿಕೆಯಿಂದ ಹವಾಮಾನದ ಅನುಸಾರವಾಗಿ ಬಿತ್ತನೆ ಕಾರ್ಯ ಮಾಡಬೇಕು. ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರಗಳಲ್ಲಾಗಲಿ ಕೃಷಿ ಇಲಾಖೆ ಅಧಿಕಾರಿ ಸಿಬ್ಬಂದಿಗಳನ್ನಾಗಲಿ ಸಂಪರ್ಕಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಪಿ.ಐ. ಮಾನೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT