ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ | ಕೃಷಿ ಭೂಮಿ ಒಣಗಿಸಿದ ‘ಅನಿಯಮಿತ ವಿದ್ಯುತ್’!

Published 6 ನವೆಂಬರ್ 2023, 4:43 IST
Last Updated 6 ನವೆಂಬರ್ 2023, 4:43 IST
ಅಕ್ಷರ ಗಾತ್ರ

ಕಾರವಾರ: ಒಂದೆಡೆ ಬರದ ಛಾಯೆ ಆವರಿಸಿದೆ. ನಿರೀಕ್ಷೆಯಷ್ಟು ಅಲ್ಲದಿದ್ದರೂ ಅಲ್ಪಸ್ವಲ್ಪ ಬಿದ್ದ ಮಳೆಗೆ ಹಸಿರಾಗಿದ್ದ ಭೂಮಿ ಈಗ ಒಣಗುತ್ತಿದೆ. ಫಸಲು ಕೈಸೇರಲು ಕೆಲವೇ ದಿನಗಳು ಬಾಕಿ ಇರುವ ಹೊತ್ತಲ್ಲಿ ಬೆಳೆ ಉಳಿಸಿಕೊಳ್ಳಬೇಕು ಎಂಬ ರೈತರ ಆಸೆಗೆ ‘ಅನಿಯಮಿತ ವಿದ್ಯುತ್’ ತಣ್ಣೀರು ಎರಚುತ್ತಿದೆ.

ಜಿಲ್ಲೆಯ ಅರೆಮಲೆನಾಡು ಭಾಗದಲ್ಲಿ ಕೃಷಿ ಭೂಮಿಗೆ ಈಗ ನೀರು ಹಾಯಿಸುವ ಕಾಲ. ಆದರೆ, ನೀರು ಹಾಯಿಸಲು ಕೊಳವೆಬಾವಿ, ಕೆರೆ, ಬಾವಿಗಳಲ್ಲಿ ನೀರಿದ್ದರೂ ನೀರೆತ್ತಲು ವಿದ್ಯುತ್ ಸಿಗುತ್ತಿಲ್ಲ ಎಂಬುದು ರೈತರ ದೂರು. ಶಿರಸಿ ತಾಲ್ಲೂಕಿನ ಬನವಾಸಿ ಹೋಬಳಿ, ಮುಂಡಗೋಡ, ಹಳಿಯಾಳ ಭಾಗದಲ್ಲಿ ಈ ಸಮಸ್ಯೆ ಹೆಚ್ಚಿದೆ. ಕಾರವಾರ ಸೇರಿದಂತೆ ಕರಾವಳಿ ಭಾಗದ ಕೆಲವೆಡೆ ಗದ್ದೆಗೆ ನೀರು ಹಾಯಿಸಲು ಸಕಾಲಕ್ಕೆ ವಿದ್ಯುತ್ ಪೂರೈಕೆಯಾಗದೆ ರೈತರು ತೊಂದರೆಪಡುತ್ತಿರುವದೂ ಇದೆ.

ಇನ್ನೊಂದೆಡೆ ಕರಾವಳಿ ಭಾಗದಲ್ಲಿ ವಿಪರೀತ ಸೆಕೆಗೆ ಜನರು ಬಸವಳಿಯುತ್ತಿದ್ದು, ಫ್ಯಾನ್, ಕೂಲರ್ ಮೊರೆಹೋಗಲು ಮುಂದಾದರೆ ಪದೇ ಪದೇ ವಿದ್ಯುತ್ ಕಡಿತಗೊಳಿಸಿ ಜನರ ಸಹನೆ ಕೆಡಿಸುವ ದೂರುಗಳಿವೆ. ಅದರಲ್ಲಿಯೂ ಕಾರವಾರದಲ್ಲಿ ಈ ಸಮಸ್ಯೆ ಹೆಚ್ಚಿದೆ. ನಗರ ಪ್ರದೇಶದಲ್ಲೇ ಪದೇ ಪದೇ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳನ್ನು ವಿಚಾರಿಸಿದರೆ ‘ತಾಂತ್ರಿಕ ಸಮಸ್ಯೆ’ಯ ನೆಪ ಹೇಳುತ್ತಿದ್ದಾರೆ.

ಶಿರಸಿ ತಾಲ್ಲೂಕಿನ ಬನವಾಸಿ ಭಾಗದಲ್ಲಿ ಅಸಮರ್ಪಕ ವಿದ್ಯುತ್ ಪೂರೈಕೆಯ ಕಾರಣಕ್ಕೆ ಪಂಪ್‍ಸೆಟ್ ಮೂಲಕ ನೀರು ಪೂರೈಸಲಾಗದೆ ಬೆಳೆಗಳು ಒಣಗುತ್ತಿವೆ.

ಬಿಸಲಕೊಪ್ಪ, ಅಂಡಗಿ, ಕಂಡ್ರಾಜಿ, ಗುಡ್ನಾಪುರ, ಭಾಶಿ, ಮಧುರವಳ್ಳಿ, ಕಲಕರಡಿ, ಮಾಳಂಜಿ, ಹಾಡಲಗಿ, ಮಳಲಗಾಂವ, ಬಂಕನಾಳ, ನರೂರ, ಕಾಯಿಗುಡ್ಡೆ, ಸುಗಾವಿ, ಬೆಂಗಳೆ, ಮರಗುಂಡಿ, ಕಂತ್ರಾಜಿ ಸೇರಿ ಎಲ್ಲ ಕಡೆ ನಿತ್ಯ 15 ರಿಂದ 20 ಬಾರಿ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದೆ.

‘ಕೊಳವೆ ಬಾವಿಯಲ್ಲಿ ನೀರಿದ್ದರೂ ಬೆಳೆಗಳಿಗೆ ಹಾಯಿಸಲು ವಿದ್ಯುತ್ ಇಲ್ಲದಿರುವುದು ಸಮಸ್ಯೆಯಾಗಿದೆ. ಅನಿಯಮಿತ ಪೂರೈಕೆಯಿಂದ 15ಕ್ಕೂ ಹೆಚ್ಚು ಪಂಪ್​ಸೆಟ್​ಗಳು ಸುಟ್ಟಿವೆ. ನೀರಾವರಿಗಾಗಿ ಪಂಪ್ ಚಾಲನೆ ಮಾಡಲು ಹಿಂದೇಟು ಹಾಕುತ್ತಿದ್ದೇವೆ’ ಎನ್ನುತ್ತಾರೆ ಬನವಾಸಿ ಕೃಷಿಕ  ಶಂಕರ ಗೌಡರ್.

‘ಅಧಿಕೃತ ಲೋಡ್ ಶೆಡ್ಡಿಂಗ್ ಇಲ್ಲ. ಲೋ ವೋಲ್ಟೇಜ್ ಸಮಸ್ಯೆ ಇದೆ. ಬನವಾಸಿ ಗ್ರಿಡ್ ಪ್ರಾರಂಭವಾದರೆ ಸಮಸ್ಯೆ ನಿವಾರಣೆ ಆಗುತ್ತದೆ’ ಎಂಬುದು ಹೆಸ್ಕಾಂ ಅಧಿಕಾರಿ ನಾಗರಾಜ ಪಾಟೀಲ ಪ್ರತಿಕ್ರಿಯೆ.

ಹೊನ್ನಾವರ ತಾಲ್ಲೂಕಿನಲ್ಲಿ ಅಡಿಕೆ ಬೆಳೆಗಾರರ ಸಂಖ್ಯೆ ಹೆಚ್ಚಿದೆ. ಮೈಲುಗಟ್ಟಲೆ ಪೈಪ್ ಅಳವಡಿಸಿ ನದಿ ನೀರನ್ನು ಗುಡ್ಡ ಬೆಟ್ಟಗಳಲ್ಲಿ ಮಾಡಿರುವ ತೋಟಗಳಿಗೆ ಹರಿಸಲಾಗಿದೆ.

ಪಂಪ್‍ಸೆಟ್‌ಗಳು ಹಾಗೂ ಮನೆಗಳ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ದುಪ್ಪಟ್ಟಾಗಿದ್ದು ವಿದ್ಯುತ್ ಬೇಡಿಕೆ ಹೆಚ್ಚುತ್ತಿದೆ. ಸದ್ಯ ತೋಟಗಳಿಗೆ ನೀರು ಹಾಯಿಸುವ ಸ್ಥಿತಿ ಇಲ್ಲದಿದ್ದರೂ ಕೆಲವು ದಿನಗಳಲ್ಲಿ ಅಂತಹ ಸಂದರ್ಭ ಬರುವ ಸಾಧ್ಯತೆ ಅಲ್ಲಗಳೆಯಲಾಗದು. ದುರಸ್ಥಿ ಹಾಗೂ ನಿರ್ವಹಣೆಯ ಕಾರಣ ನೀಡಿ ದಿನಗಟ್ಟಲೆ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳುವುದು ಆಗಾಗ ನಡೆಯುತ್ತಿರುವುದು ರೈತರನ್ನು ಚಿಂತೆಗೆ ದೂಡಿರುವುದು ನಿಜ. ತಾಪಮಾನ ಜಾಸ್ತಿಯಿದ್ದು ಗೃಹಬಳಕೆಯ ವಿದ್ಯುತ್ ಬೇಡಿಕೆ ಹೆಚ್ಚಿದೆ.

‘ವಿದ್ಯುತ್ ಬೇಡಿಕೆಯ ಪ್ರಮಾಣ ಹೆಚ್ಚುತ್ತಿದೆಯಾದರೂ ಸದ್ಯ ವಿದ್ಯುತ್ ಕಡಿತ ಮಾಡುತ್ತಿಲ್ಲ. ಪರಿಸ್ಥಿತಿಯನ್ನು ಅವಲಂಬಿಸಿ ಮುಂದಿನ ಕ್ರಮ ನಿರ್ಧಾರವಾಗಲಿದೆ’ ಎಂದು ಹೆಸ್ಕಾಂ ಎಇಇ ರಾಮಕೃಷ್ಣ ಭಟ್ಟ ಹೇಳುತ್ತಾರೆ.

ಹಳಿಯಾಳ ತಾಲ್ಲೂಕಿನಲ್ಲಿ ಪ್ರಸಕ್ತ ಸಾಲಿನ ಮಳೆ ನಿಗದಿತ ಅವಧಿಗೆ ಬಾರದೆ ಭತ್ತ, ಕಬ್ಬು, ಗೋವಿನ ಜೋಳ ಸಕಾಲಕ್ಕೆ ಬೆಳೆಯಲು ಸಾಧ್ಯವಾಗದೆ ಹವಾಮಾನಕ್ಕೆ ತಕ್ಕಂತೆ ಬಿತ್ತನೆ ಮಾಡಿ ಬೆಳೆಯಲಾಗಿದೆ. ಅನಿಯಮಿತ ವಿದ್ಯುತ್ ಪೂರೈಕೆಯಿಂದ ಕೃಷಿ ಪಂಪ್‌ಸೆಟ್‍ ಕಾರ್ಯಾಚರಿಸಲಾಗದೆ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ.

‘ಬೆಳವಣಿಗೆ ಹಂತದಲ್ಲಿರುವ ಕಬ್ಬಿನ ಬೆಳೆಗೆ ನೀರು ಹಾಯಿಸಬೇಕಾಗುತ್ತದೆ. ಆದರೆ, ಪದೇ ಪದೇ ವಿದ್ಯುತ್ ವ್ಯತ್ಯಯವಾಗುತ್ತಿರುವುದರಿಂದ  ನೀರು ಹಾಯಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಕಬ್ಬಿನ ತೂಕದಲ್ಲಿ ವ್ಯತ್ಯಾಸವಾಗಿ ಅಪಾರ ಪ್ರಮಾಣದಲ್ಲಿ ನಷ್ಟ ಆಗುತ್ತಿದೆ’ ಎನ್ನುತ್ತಾರೆ ಯಡೋಗಾ ಗ್ರಾಮದ ಮಾರುತಿ ಪರಶುರಾಮ ನಾಚನೇಕರ್.

ಯಲ್ಲಾಪುರ ತಾಲ್ಲೂಕಿನಲ್ಲಿ ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು ತೋಟಗದ್ದೆಗಳಿಗೆ ನೀರುಣಿಸುವುದು ಸವಾಲಿನ ಕೆಲಸವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್‌ ಕಣ್ಣುಮುಚ್ಚಾಲೆ ಸದಾ ನಡೆಯುತ್ತಿದ್ದು ವಿದ್ಯುತ್‌ ಇರುವ ಸಮಯ ಹೊಂದಿಸಿ ನೀರು ಹಾಯಿಸಲು ಹರಸಾಹಸ ಪಡಬೇಕಿದೆ. ತ್ರಿಪೆಸ್‌ ವಿದ್ಯುತ್‍ಗೆ ಕಾಯುವ ರೈತರು ಪಂಪ್‍ಸೆಟ್‌ ಮೂಲಕ ನೀರುಹಾಯಿಸಲು ದಿನಗಟ್ಟಲೆ ಕಾದು ಕುಳಿತುಕೊಳ್ಳಬೇಕಿದೆ.

ಸಣ್ಣ ಕೈಗಾರಿಕೆಗಳಿಗೆ ಏಟು

ಕುಮಟಾ ತಾಲ್ಲೂಕಿನಲ್ಲಿ ವಿದ್ಯುತ್ ವ್ಯತ್ಯಯದಿಂದ ಸಣ್ಣ ಕೈಗಾರಿಕೆ ಗೃಹ ಉದ್ಯಮಗಳಿಗೆ ತೊಂದರೆ ಉಂಟಾಗುತ್ತಿದೆ. ಗದ್ದೆ ತೋಟಗಳಿಗೆ ನೀರುಣಿಸುವ ಕೃಷಿ ಪಂಪ್‍ಸೆಟ್ ಗಳಿಗೂ ವಿದ್ಯುತ್ ಅಡಚಣೆಯಾಗುವ ಉಂಟಾಗುವ ಸಾಧ್ಯತೆ ಇದೆ. ‘ಕೈಗಾರಿಕೆ ಹಾಗೂ ಜನವಸತಿ ಪ್ರದೇಶಕ್ಕೆ ವಿದ್ಯುತ್ ಪೂರೈಸುವ ಫೀಡರ್ ಸಾಮಾನ್ಯವಾಗಿದ್ದು ಜನವಸತಿ ಪ್ರದೇಶದಲ್ಲಿ ತೊಂದರೆ ಉಂಟಾದರೆ ಕೈಗಾರಿಕೆಗಳಿಗೆ ವಿದ್ಯುತ್ ಪೂರೈಕೆ ಕಡಿತವಾಗುತ್ತದೆ. ಪಟ್ಟಣದ ಕೈಗಾರಿಕಾ ವಲಯದಲ್ಲಿ ಬೀದಿ ದೀಪ ಸರಿಯಾಗಿಲ್ಲದೆ ರಾತ್ರಿ ಹೊತ್ತು ಕಳ್ಳತನ ಸಾಧ್ಯತೆ ಹೆಚ್ಚಾಗಿದೆ’ ಎಂಬುದು ಸಣ್ಣ ಕೈಗಾರಿಕೆಗಳ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಹರೀಶ ಶೇಟ್ ಅವರ ದೂರು.

ಅನಧಿಕೃತ ಪಂಪ್‍ಸೆಟ್‍ಗಳಿಂದ ಸಮಸ್ಯೆ

ಮುಂಡಗೋಡ ತಾಲ್ಲೂಕಿನಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ನಿಗದಿತ ಪ್ರಮಾಣದಲ್ಲಿ ವಿದ್ಯುತ್‌ ಪೂರೈಕೆ ಆಗುತ್ತಿದೆ. ಆದರೆ ಅನಧಿಕೃತವಾಗಿ ಪಂಪ್‌ಸೆಟ್‌ ಬಳಸುತ್ತಿರುವರ ಸಂಖ್ಯೆ ತುಸು ಹೆಚ್ಚಾಗಿರುವುದರಿಂದ ಅಧಿಕ ಸಾಮರ್ಥ್ಯದ ಒತ್ತಡದಿಂದ ವಿದ್ಯುತ್‌ ಪೂರೈಕೆಯಲ್ಲಿ ಕೆಲವೆಡೆ ವ್ಯತ್ಯಯವಾಗುತ್ತಿದೆ ಎಂಬ ದೂರುಗಳಿವೆ. ಮಳೆಯ ಪ್ರಮಾಣ ಕಡಿಮೆ ಆಗಿರುವುದರಿಂದ ಕೊನೆಯ ಹಂತದಲ್ಲಿರುವ ಬೆಳೆಯನ್ನು ರಕ್ಷಿಸಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿ ರೈತರಿದ್ದಾರೆ. ಕೊಳವೆ ಬಾವಿ ಸಂಪರ್ಕ ಇದ್ದವರು ಬೆಳೆಗೆ ನೀರುಣಿಸಲು ಕಷ್ಟ ಪಡುತ್ತಿದ್ದಾರೆ. ಅಂತರ್ಜಲ ಕುಸಿತದಿಂದ ನಿರಂತರವಾಗಿ ನೀರು ಮೇಲೆ ಬರುತ್ತಿಲ್ಲ. ಅದರಲ್ಲಿಯೇ ಕೆಲ ಹೊತ್ತು ವಿದ್ಯುತ್‌ ವ್ಯತ್ಯಯವಾಗುತ್ತಿರುವುದರಿಂದ ರೈತರ ಆತಂಕ ಇಮ್ಮಡಿಯಾಗುತ್ತಿದೆ. ಕಾಲುವೆ ಮೂಲಕ ಹರಿಯುವ ನೀರನ್ನು ಹಾಗೂ ಸನಿಹದ ಕೆರೆಕಟ್ಟೆಗಳಲ್ಲಿ ಇರುವ ನೀರನ್ನು ಪಂಪ್‌ಸೆಟ್‌ಗಳ ಮೂಲಕ ಗದ್ದೆಗಳಿಗೆ ಹರಿಸುವ ರೈತರ ಸಂಖ್ಯೆಯೂ ದೊಡ್ಡದಿದೆ. ‘ಆಗಾಗ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಇದರಿಂದ ಕೊಳವೆಬಾವಿ ಮೂಲಕ ಗದ್ದೆಗಳಿಗೆ ನೀರು ಹರಿಸಲು ತೊಂದರೆಯಾಗುತ್ತಿದೆ’ ಎಂದು ರೈತ ಶಿವಪ್ಪ ಪೂಜಾರ ಹೇಳಿದರು.

ಯಾರು ಏನು ಹೇಳಿದರು?

ಜಿಲ್ಲೆಯಲ್ಲಿ ಲೋಡ್ ಶೆಡ್ಡಿಂಗ್ ಇಲ್ಲ. ಅಗತ್ಯದಷ್ಟು ವಿದ್ಯುತ್ ಪೂರೈಕೆ ಆಗುತ್ತಿದ್ದು ಕೆಲವು ಕಡೆ ಮಾತ್ರ ತಾಂತ್ರಿಕ ಸಮಸ್ಯೆಯಿಂದ ವ್ಯತ್ಯಯ ಉಂಟಾಗುತ್ತಿದೆ - ದೀಪಕ ಕಾಮತ್ ಹೆಸ್ಕಾಂ ಶಿರಸಿ ವೃತ್ತದ ಅಧೀಕ್ಷಕ ಎಂಜಿನಿಯರ್

ಬೆಳವಣಿಗೆ ಹಂತದಲ್ಲಿರುವ ಕಬ್ಬು ಬೆಳೆಗೆ ಈಗ ನೀರು ಹಾಯಿಸಬೇಕು. ಆದರೆ ಬಹುತೇಕ ರೈತರು ನೀರು ಹಾಯಿಸಲು ತೊಂದರೆಯಾಗುತ್ತಿರುವ ದೂರು ಹೇಳುತ್ತಿದ್ದಾರೆ. ನೀರು ಹಾಯಿಸಲು ಅಡ್ಡಿಯಾದರೆ ಕಬ್ಬಿನ ತೂಕದಲ್ಲಿ ವ್ಯತ್ಯಾಸವಾಗುತ್ತದೆ - ಪಿ.ಐ.ಮಾನೆ ಸಹಾಯಕ ಕೃಷಿ ನಿರ್ದೇಶಕ ಹಳಿಯಾಳ

ವಿದ್ಯುತ್‌ ಪದೇ ಪದೇ ಕೈಕೊಡುತ್ತಿದೆ. ತ್ರಿಪೆಸ್‌ ವಿದ್ಯುತ್‌ ಅಂತೂ ಹೆಚ್ಚಿನ ಸಮಯದಲ್ಲಿ ಇರುವುದಿಲ್ಲ. ಈಗಲೇ ಹೀಗಾದರೆ ಬೇಸಿಗೆಯಲ್ಲಿ ಏನಾದೀತೋ ಎಂಬ ಚಿಂತೆ ಕಾಡುತ್ತಿದೆ - ಗಂಗಾಧರ ಪಟೇಲ್‌ ಬೀಗಾರ ರೈತ

ಬರಗಾಲದ ಸಮಯದಲ್ಲಿ ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆ ತಂದೊಡ್ಡುವ ಮೂಲಕ ಕೃಷಿಕರಿಗೆ ಅನ್ಯಾಯ ಎಸಗಲಾಗುತ್ತಿದೆ. ಅಳಿದುಳಿದ ಬೆಳೆಗಳನ್ನು ರಕ್ಷಿಸಿಕೊಳ್ಳುವ ಸಲುವಾಗಿ ನೀರು ಹಾಯಿಸಲೂ ಆಗುತ್ತಿಲ್ಲ - ರಾಘವೇಂದ್ರ ನಾಯ್ಕ ಕಿರವತ್ತಿ ರೈತ ಮುಖಂಡ

ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ಸಂತೋಷಕುಮಾರ ಹಬ್ಬು, ಎಂ.ಜಿ.ನಾಯ್ಕ, ಎಂ.ಜಿ.ಹೆಗಡೆ, ಶಾಂತೇಶ ಬೆನಕನಕೊಪ್ಪ, ವಿಶ್ವೇಶ್ವರ ಗಾಂವ್ಕರ್.

ಹಳಿಯಾಳ ತಾಲ್ಲೂಕಿನ ಚಿಬ್ಬಲಗೇರಿ ಗ್ರಾಮದ ಗದ್ದೆಯೊಂದರಲ್ಲಿ ಬೆಳೆಸಿದ ಕಬ್ಬಿಗೆ ಬೋರ್‌ ವೆಲ್‌ ನಿಂದ ನೀರಿನ ಸರಬರಾಜು ಮಾಡಿದರು ವಿದ್ಯುತ್‌ ಅಭಾವದಿಂದ ನೀರು ಸರಬರಾಜಿಗೆ ಅಡ್ಡಿಯಾಗಿ ಕಬ್ಬು ಒಣಗುತ್ತಿರುವುದು
ಹಳಿಯಾಳ ತಾಲ್ಲೂಕಿನ ಚಿಬ್ಬಲಗೇರಿ ಗ್ರಾಮದ ಗದ್ದೆಯೊಂದರಲ್ಲಿ ಬೆಳೆಸಿದ ಕಬ್ಬಿಗೆ ಬೋರ್‌ ವೆಲ್‌ ನಿಂದ ನೀರಿನ ಸರಬರಾಜು ಮಾಡಿದರು ವಿದ್ಯುತ್‌ ಅಭಾವದಿಂದ ನೀರು ಸರಬರಾಜಿಗೆ ಅಡ್ಡಿಯಾಗಿ ಕಬ್ಬು ಒಣಗುತ್ತಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT