ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಳಿ ನದಿ: ಇನ್ನೂ ತೆರವಾಗದ ಅವಶೇಷ

ದುರ್ಘಟನೆ ಸಂಭವಿಸಿ ತಿಂಗಳು ಸಮೀಪಿಸಿದರೂ ನೆರವೇರದ ಕಾರ್ಯಾಚರಣೆ
Published 31 ಆಗಸ್ಟ್ 2024, 22:30 IST
Last Updated 31 ಆಗಸ್ಟ್ 2024, 22:30 IST
ಅಕ್ಷರ ಗಾತ್ರ

ಕಾರವಾರ: ಕಾಳಿನದಿಯ ಹಳೆ ಸೇತುವೆ ಕುಸಿದು ಬಿದ್ದು ತಿಂಗಳು ಸಮೀಪಿಸುತ್ತಿದ್ದರೂ ಅದರ ಅವಶೇಷ ತೆರವು ಆಗಿಲ್ಲ. ಮುರಿದು ಬಿದ್ದ ಸೇತುವೆಯು ಜನರಲ್ಲಿ ಭೀತಿ ಸೃಷ್ಟಿಸುವ ಜತೆಗೆ ನದಿಯಲ್ಲಿ ಮೀನುಗಾರಿಕೆಗೆ ಅಡ್ಡಿಯಾಗಿದೆ.

ಸಂಚಾರಕ್ಕೆ ಆಸರೆಯಾದ ಹೊಸ ಸೇತುವೆ ಮೇಲೆ ವಾಹನ ದಟ್ಟಣೆ ಹೆಚ್ಚಿದೆ. ಪಕ್ಕದಲ್ಲೇ ಮುರಿದು ಬಿದ್ದ ಹಳೆಯ ಸೇತುವೆಯತ್ತ ಸವಾರರ ದೃಷ್ಟಿ ಹರಿಯುತ್ತಿದೆ. ಮತ್ತೊಂದು ಅವಘಢ ಸಂಭವಿಸುವುದೇ ಎಂಬ ಆತಂಕದಲ್ಲಿ ಸಾಗುತ್ತಾರೆ.

1983ರಲ್ಲಿ ಉದ್ಘಾಟನೆಗೊಂಡಿದ್ದ ಸೇತುವೆಯು, ಆಗಸ್ಟ್ 6ರ ತಡರಾತ್ರಿ ಲಾರಿ ಸಮೇತ ಕುಸಿದು ಬಿತ್ತು. 665 ಮೀಟರ್ ಉದ್ದದ ಸೇತುವೆಯಲ್ಲಿ 300 ಮೀ.ನಷ್ಟು ಭಾಗ ಕುಸಿದು ನದಿಗೆ ಬಿದ್ದಿದೆ. ವ್ಯಾಪಕ ಪ್ರಮಾಣದ ಕಾಂಕ್ರೀಟ್ ಸ್ಲ್ಯಾಬ್, ಸೇತುವೆಗೆ ಅಳವಡಿಸಿದ್ದ ಕೇಬಲ್, ಡಾಂಬರು ರಸ್ತೆ, ಕಬ್ಬಿಣದ ಸರಳು ನದಿಯಲ್ಲಿ ಸಿಲುಕಿಕೊಂಡಿವೆ.

‘ಹಳೆಯ ಸೇತುವೆಯ ಅರ್ಧಕ್ಕೂ ಹೆಚ್ಚು ಭಾಗ ಕುಸಿಯದೆ ನಿಂತಿದ್ದು, ಯಾವುದೇ ಕ್ಷಣ ಕುಸಿದು ಬೀಳಬಹುದು. ಈ ಸೇತುವೆ ಕುಸಿದರೆ ಪಕ್ಕದ ಹೊಸ ಸೇತುವೆಗೆ ಧಕ್ಕೆ ಆಗಬಹುದು. ಆದಷ್ಟು ಬೇಗ ಕುಸಿದು ಬಿದ್ದ ಸೇತುವೆಯ ಅವಶೇಷ, ಹಳೆಯ ಸೇತುವೆ ಭಾಗ ತೆರವುಗೊಳಿಸುವುದು ಸೂಕ್ತ’ ಎಂದು ಸ್ಥಳೀಯರಾದ ರೂಪೇಶ ಕೊಠಾರಕರ್ ತಿಳಿಸಿದರು.

‘ಸೇತುವೆ ನಿರ್ಮಾಣದ ವೇಳೆ ಅಳವಡಿಸಿದ್ದ ಸಣ್ಣ ಕೇಬಲ್ ರಾಶಿಗಳು ಜೋತಾಡುತ್ತಿರುವ ಕಾರಣ ದೋಣಿಗಳು ಸುಗಮವಾಗಿ ಸಾಗಲು ಆಗುತ್ತಿಲ್ಲ. ಸೇತುವೆಯ ಉಳಿದ ಭಾಗ ಕುಸಿದು ಬೀಳುವ ಆತಂಕದಿಂದ ಮೀನುಗಾರರು ಸಮೀಪ ಸಾಗಲು ಭಯಪಡುತ್ತಾರೆ’ ಎಂದು ಮೀನುಗಾರ ಮುಖಂಡ ರವಿ ತಾರಿ ‘ಪ್ರಜಾವಾಣಿ’ಗೆ ತಿಳಿಸಿದರು.

ಸೇತುವೆಯ ಅವಶೇಷ ತ್ವರಿತವಾಗಿ ತೆರವಗೊಳಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚಿಸಲಾಗಿದೆ. ಅವರು ಆದಷ್ಟು ಬೇಗ ಕ್ರಮ ಕೈಗೊಳ್ಳಬಹುದು.
ಕೆ.ಲಕ್ಷ್ಮಿಪ್ರಿಯಾ ಜಿಲ್ಲಾಧಿಕಾರಿ

‘ಅವಶೇಷ ವಿಲೇವಾರಿಗೆ ಸಿಗದ ಜಾಗ’ ‘ಸೇತುವೆ ಅವಶೇಷ ತೆರವಿಗೆ ಹೆದ್ದಾರಿ ನಿರ್ಮಾಣದ ಗುತ್ತಿಗೆ ಪಡೆದಿರುವ ಐಆರ್‌ಬಿ ಕಂಪನಿಗೆ ಸೂಚಿಸಲಾಗಿದೆ. ಸೇತುವೆಯ ಉಳಿದ ಭಾಗ ಒಡೆದು ತೆರವಿಗೆ ಅಗತ್ಯ ಉಪಕರಣ ಅವಶೇಷ ಎತ್ತಿ ಸಾಗಿಸಲು ಕ್ರೇನ್ ಸಹಿತ ಬಾರ್ಜ್ ತರಿಸಲು ಕಂಪನಿ ಪ್ರಕ್ರಿಯೆ ಆರಂಭಿಸಿದೆ. ಆದರೆ ತೆರವುಗೊಳಿಸಿದ ಅವಶೇಷ ಎಲ್ಲಿ ವಿಲೇವಾರಿ ಮಾಡಬೇಕೆಂದು ಜಿಲ್ಲಾಡಳಿತಕ್ಕೆ ಕೇಳಲಾಗಿದೆ. ಜಾಗ ಇನ್ನೂ ಅಂತಿಮವಾಗಿಲ್ಲ’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT