ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಲ್ಲಾಪುರದಲ್ಲಿ ರಾಜಕೀಯ ಅಸ್ತಿತ್ವಕ್ಕಾಗಿ ಪಕ್ಷಾಂತರಿಗಳ ಜಿದ್ದಾಜಿದ್ದಿ

ಯಲ್ಲಾಪುರದಲ್ಲಿ ಬಿಜೆಪಿ, ಕಾಂಗ್ರೆಸ್ ನಡುವೆ ನೇರ ಪೈಪೋಟಿ
Published 8 ಮೇ 2023, 5:46 IST
Last Updated 8 ಮೇ 2023, 5:46 IST
ಅಕ್ಷರ ಗಾತ್ರ

ಶಿರಸಿ: ಯಲ್ಲಾಪುರ ಕ್ಷೇತ್ರದಲ್ಲಿ ಪ್ರಸ್ತುತ ರಾಜಕೀಯ ಅಸ್ತಿತ್ವಕ್ಕಾಗಿ ಇಬ್ಬರು ಪಕ್ಷಾಂತರಿಗಳ ನಡುವೆ ನೇರ ಜಿದ್ದಾಜಿದ್ದಿ ಏರ್ಪಟ್ಟಿರುವುದು ಕದನ ಕಣದ ಕುತೂಹಲ ಹೆಚ್ಚಿಸಿದೆ.

ಯಲ್ಲಾಪುರ ಹಾಗೂ ಮುಂಡಗೋಡ ತಾಲ್ಲೂಕು, ಶಿರಸಿಯ ಬನವಾಸಿ ಹೋಬಳಿ ಕ್ಷೇತ್ರ ವ್ಯಾಪ್ತಿಗೆ ಸೇರಿದೆ. ಇಲ್ಲಿ ಆರಂಭದಿಂದಲೂ ಬಿಜೆಪಿ, ಕಾಂಗ್ರೆಸ್ ಸಮಬಲದ ಪೈಪೋಟಿ ನಡೆಸುತ್ತಿವೆ. 2018ರ ಚುನಾವಣೆಯಂತೆ ಈ ಬಾರಿಯೂ ಕಾಂಗ್ರೆಸ್ ಮತ್ತು ಬಿಜೆಪಿ ಮುಖಾಮುಖಿಗೆ ಸಿದ್ಧವಾಗಿವೆ. ಆದರೆ, ಕಣದಲ್ಲಿರುವ ಅಭ್ಯರ್ಥಿಗಳು ಮಾತ್ರ ಅದಲು ಬದಲಾಗಿರುವುದು ಕ್ಷೇತ್ರದ ವೈಶಿಷ್ಟ್ಯವಾಗಿದೆ. 

2019ರ ಉಪಚುನಾವಣೆ ವೇಳೆ ಬಿಜೆಪಿಯಲ್ಲೇ ಇದ್ದು ಶಿವರಾಮ ಹೆಬ್ಬಾರಗೆ ಬೆಂಬಲವಾಗಿದ್ದ ವಿ.ಎಸ್.ಪಾಟೀಲ್​ ಈಗ ಕಾಂಗ್ರೆಸ್ ಪಕ್ಷದ ಹುರಿಯಾಳು. ಕಾಂಗ್ರೆಸ್​ನಿಂದ ಆಯ್ಕೆಯಾಗಿದ್ದ ಶಿವರಾಮ ಹೆಬ್ಬಾರ, ಬಿಜೆಪಿ ಸೇರಿ ಉಪಚುನಾವಣೆಯಲ್ಲಿ ಜಯಗಳಿಸಿದ್ದಲ್ಲದೇ ಸಚಿವರೂ ಆಗಿದ್ದಾರೆ. ಪುನರಾಯ್ಕೆ ಬಯಸಿ ಬಿಜೆಪಿಯಿಂದ ಮತ್ತೆ ಕಣಕ್ಕೆ ಧುಮುಕಿದ್ದಾರೆ. ಜೆಡಿಎಸ್‍ನಿಂದ ನಾಗೇಶ ನಾಯ್ಕ ಕಾಗಾಲ ಕಣದಲ್ಲಿದ್ದಾರೆ.

ಕ್ಷೇತ್ರದಲ್ಲಿ ಒಟ್ಟೂ 1,70,510 ಮತದಾರರಿದ್ದು, ಮರಾಠಾ, ಹವ್ಯಕ, ಲಿಂಗಾಯಿತ, ನಾಮಧಾರಿ ಸಮುದಾಯದ ಮತದಾರರ ಸಂಖ್ಯೆ ಹೆಚ್ಚಿವೆ. ಮುಂಡಗೋಡ ಭಾಗದಲ್ಲಿ ಪರಿಶಿಷ್ಟರ ಮತ ಗಣನೀಯವಾಗಿದೆ. ಗೌಳಿ, ಸಿದ್ದಿ, ಕುಂಬ್ರಿ ಬುಡಕಟ್ಟು ಸಮುದಾಯಗಳ ಮತ ಗೆಲುವಿಗೆ ಮೆಟ್ಟಿಲಾಗಲಿದೆ.

2008ರ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಶಿವರಾಮ ಹೆಬ್ಬಾರ ಬಿಜೆಪಿಯ ವಿ.ಎಸ್.ಪಾಟೀಲ್ ಎದುರು ಸೋಲು ಕಂಡಿದ್ದರು. ಬಳಿಕ 2013, 2018ರಲ್ಲಿ ಕಾಂಗ್ರೆಸ್‍ನಿಂದ ಸ್ಪರ್ಧಿಸಿ ಗೆದ್ದಿದ್ದರು. 2019ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಹೆಬ್ಬಾರ ಕಾಂಗ್ರೆಸ್‍ನ ಭೀಮಣ್ಣ ನಾಯ್ಕ ವಿರುದ್ಧ ಗೆದ್ದು, ಸರ್ಕಾರದಲ್ಲಿ ಸಚಿವ ಸ್ಥಾನ ಪಡೆದಿದ್ದರು. 

ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾರಣರಾದ ಹೆಬ್ಬಾರ ಅವರನ್ನು ಮಣಿಸುವುದು ಕಾಂಗ್ರೆಸ್ ಗುರಿ. ಕಾಂಗ್ರೆಸ್ ಅಭ್ಯರ್ಥಿ ಪಾಟೀಲ ಬಿಜೆಪಿಯ ಅತೃಪ್ತರ ಬೆಂಬಲ ಪಡೆಯಲೂ ಯತ್ನಿಸಿದ್ದಾರೆ. ಕೋವಿಡ್ ವೇಳೆಯಲ್ಲಿ ಜನರಿಂದ ದೂರ ಇದ್ದರು ಎಂಬ ಆರೋಪ ವಿ.ಎಸ್.ಪಾಟೀಲ್ ಮೇಲಿದೆ. ಇದು ಕಾಂಗ್ರೆಸ್‍ಗೆ ಹಿನ್ನಡೆಯಾದರೆ ಅಚ್ಚರಿ ಏನಿಲ್ಲ.

ಶಿವರಾಮ ಹೆಬ್ಬಾರ ಕ್ಷೇತ್ರದಲ್ಲಿ ತಾವು ತಂದ ನೀರಾವರಿ ಯೋಜನೆ ಹಾಗೂ ಅಭಿವೃದ್ಧಿ ಪರ ಕಾರ್ಯ ಮುಂದಿಟ್ಟು ಪ್ರಚಾರ ನಡೆಸುತ್ತಿದ್ದಾರೆ. ಇಬ್ಬರಿಗೂ ವೈಯಕ್ತಿಕ ವರ್ಚಸ್ಸಿನ ಮೇಲೆ ಮತ ಸೆಳೆಯುವ ಸಾಮರ್ಥ್ಯ ಇದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಮೂಲ ಬಿಜೆಪಿಗರ ಕಡೆಗಣನೆ, ಸ್ವಜನ ಪಕ್ಷಪಾತದ ಆರೋಪ ಹೆಬ್ಬಾರ​​ ಗೆಲುವಿಗೆ ಕಂಟಕವಾಗಲೂಬಹುದು. ಇದರ ನಡುವೆ ಕ್ಷೇತ್ರದಲ್ಲಿ ನೆಲೆ ಕಂಡುಕೊಳ್ಳುವಲ್ಲಿ ಜೆಡಿಎಸ್  ಎಡವಿದ್ದು, ಸಾಂಪ್ರದಾಯಿಕ ಮತಗಳಿಗಷ್ಟೇ ತೃಪ್ತಿಪಟ್ಟುಕೊಳ್ಳುವ ಸಾಧ್ಯತೆಯಿದೆ.

ಕಣದಲ್ಲಿರುವ ಅಭ್ಯರ್ಥಿಗಳು 

ಶಿವರಾಮ ಹೆಬ್ಬಾರ: ಬಿಜೆಪಿ

ವಿ.ಎಸ್. ಪಾಟೀಲ್: ಕಾಂಗ್ರೆಸ್ 

ನಾಗೇಶ ನಾಯ್ಕ ಕಾಗಾಲ: ಜೆಡಿಎಸ್

ಸಂತೋಷ ರಾಯ್ಕರ್: ಕಲ್ಯಾಣ ರಾಜ್ಯ ಪ್ರಗತಿ ಪಕ್ಷ

ಮಂಜುನಾಥ ಕುಲುಮಕರ್: ಆಮ್ ಆದ್ಮಿ

ಮಂಜುನಾಥ ಶಿರಹಟ್ಟಿ: ಕರ್ನಾಟಕ ರಾಷ್ಟ್ರ ಸಮಿತಿ

ಚಿದಾನಂದ ಹರಿಜನ: ಪಕ್ಷೇತರ

ಆನಂದ ಭಟ್: ಪಕ್ಷೇತರ

ಲಕ್ಷ್ಮಣ ಬನ್ಸೋಡೆ: ಪಕ್ಷೇತರ           

ಯಲ್ಲಾಪುರ ವಿಧಾನಸಭಾ ಕ್ಷೇತ್ರ 

2013

ಗೆಲುವು: ಶಿವರಾಮ ಹೆಬ್ಬಾರ (ಕಾಂಗ್ರೆಸ್–58025)

ಸಮೀಪದ ಪ‍್ರತಿಸ್ಪರ್ಧಿ: ವಿ.ಎಸ್. ಪಾಟೀಲ್ (ಬಿಜೆಪಿ–33533)

ಗೆಲುವಿನ ಅಂತರ: 24492

2018

ಗೆಲುವು: ಶಿವರಾಮ ಹೆಬ್ಬಾರ (ಕಾಂಗ್ರೆಸ್–66290)

ಸಮೀಪದ ಪ‍್ರತಿಸ್ಪರ್ಧಿ: ವಿ.ಎಸ್.ಪಾಟೀಲ್ (ಬಿಜೆಪಿ–64807)

ಗೆಲುವಿನ ಅಂತರ: 1483 2019 

ಉಪಚುನಾವಣೆ

ಗೆಲುವು: ಶಿವರಾಮ ಹೆಬ್ಬಾರ (ಬಿಜೆಪಿ–80442)

ಸಮೀಪದ ಪ‍್ರತಿಸ್ಪರ್ಧಿ: ಭೀಮಣ್ಣ ನಾಯ್ಕ (ಕಾಂಗ್ರೆಸ್–49034)

ಗೆಲುವಿನ ಅಂತರ: 31408

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT