ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಟಾ ವಿಧಾನಸಭೆ ಚುನಾವಣೆ: ಕಾಂಗ್ರೆಸ್ ಟಿಕೆಟ್‌ಗೆ ತೀವ್ರ ಪೈಪೋಟಿ

ದೆಹಲಿ ಮಟ್ಟದವರೆಗೂ ತಲುಪಿದ ಆಕಾಂಕ್ಷಿಗಳ ಲಾಬಿ!
Last Updated 30 ಮಾರ್ಚ್ 2023, 19:30 IST
ಅಕ್ಷರ ಗಾತ್ರ

ಕುಮಟಾ: ವಿಧಾನಸಭೆ ಚುನಾವಣೆಗೆ ದಿನ ನಿಗದಿಯಾಗುತ್ತಿದ್ದಂತೆ ಚುನಾವಣೆ ಕಾವು ಏರತೊಡಗಿದ್ದು, ಕುಮಟಾ–ಹೊನ್ನಾವರ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಪಡೆಯಲು ಮುಖಂಡರ ಪೈಪೋಟಿ ಜೋರಾಗಿದೆ.

ಜಿಲ್ಲೆಯ ಆರು ಕ್ಷೇತ್ರಗಳ ಪೈಕಿ ರಾಷ್ಟ್ರೀಯ ಪಕ್ಷವೊಂದರಿಂದ ಸ್ಪರ್ಧಿಸಲು ಕುಮಟಾದಲ್ಲಿಯೇ ಹೆಚ್ಚು ಆಕಾಂಕ್ಷಿಗಳು ತಯಾರಾಗಿದ್ದರು. ಕೆಲವು ತಿಂಗಳ ಹಿಂದೆ ಕೆ.ಪಿ.ಸಿ.ಸಿ. ಆಕಾಂಕ್ಷಿಗಳಿಂದ ಅರ್ಜಿ ಸ್ವೀಕರಿಸಿದ್ದಾಗ ಸುಮಾರು 16 ಮಂದಿ ಟಿಕೆಟ್ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಪೈಕಿ ಕ್ಷೇತ್ರದ ಈ ಹಿಂದಿನ ಶಾಸಕಿ ಶಾರದಾ ಶೆಟ್ಟಿ ಸೇರಿದಂತೆ ಕ್ಷೇತ್ರದಲ್ಲಿರುವ ಪ್ರಬಲ ಸಮುದಾಯಗಳ ನಾಯಕರು ಇದ್ದಾರೆ. ಈಚೆಗೆ ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವಾ ಪುತ್ರ ನಿವೇದಿತ್ ಆಳ್ವಾ ಕೂಡ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ.

‘ಆಕಾಂಕ್ಷಿಗಳ ಪಟ್ಟಿ ದೊಡ್ಡದಿರುವ ಕಾರಣ ಮೊದಲ ಹಂತದ ಟಿಕೆಟ್ ಘೋಷಣೆಯಲ್ಲಿ ಕುಮಟಾ ಕ್ಷೇತ್ರಕ್ಕೆ ಅಭ್ಯರ್ಥಿ ಆಯ್ಕೆ ಮಾಡಿರಲಿಲ್ಲ. ಮೊದಲೇ ಅಭ್ಯರ್ಥಿ ಅಂತಿಮಗೊಳಿಸಿದರೆ ಭಿನ್ನಮತ ಎದುರಾಗಬಹುದು ಎಂಬ ಲೆಕ್ಕಾಚಾರ ಪಕ್ಷದ ವರಿಷ್ಠರ ಮಟ್ಟದಲ್ಲಿದೆ’ ಎನ್ನುತ್ತಾರೆ ಕಾಂಗ್ರೆಸ್‍ನ ಹಿರಿಯ ಕಾರ್ಯಕರ್ತರೊಬ್ಬರು.

‘ಪಕ್ಷ ಸಂಘಟನೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡ ಹಲವು ಮುಖಂಡರು ಅಭ್ಯರ್ಥಿ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ. ಕೆಲವು ತಿಂಗಳಿನಿಂದಲೂ ಅವರು ಇದಕ್ಕಾಗಿ ಪ್ರಯತ್ನ ನಡೆಸಿದ್ದಾರೆ. ಕೊನೆ ಘಳಿಗೆಯಲ್ಲಿ ನಿವೇದಿತ್‍ರಂತಹವರು ಸ್ಪರ್ಧೆಗೆ ಇಳಿಯಲು ಮುಂದಾಗಿದ್ದು ಆಕಾಂಕ್ಷಿಗಳಲ್ಲಿ ವಿಚಲತೆ ಉಂಟು ಮಾಡಿದೆ. ಹೀಗಾಗಿ ಕೆಲವರು ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿಯಾಗುವ ಪ್ರಯತ್ನ ನಡೆಸಿದ್ದಾರೆ’ ಎಂದೂ ಹೇಳಿದರು.

‘ಕ್ಷೇತ್ರದಲ್ಲಿ ನಿರಂತರವಾಗಿ ಪಕ್ಷ ಸಂಘಟನೆ ಮಾಡಿದ್ದೇನೆ. ಈ ಬಾರಿಯ ಟಿಕೆಟ್ ಪೈಪೋಟಿಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಮಾರ್ಗರೆಟ್ ಆಳ್ವ ರಾಜಕೀಯವಾಗಿ ನಮಗೆ ಹಿಂದಿನಿಂದಲೂ ಬೆಂಬಲಿಸುತ್ತಿದ್ದಾರೆ. ನನ್ನ ಸ್ಪರ್ಧೆಯ ಬಗ್ಗೆ ಅವರಿಗೂ ಮನವರಿಕೆ ಮಾಡಿದ್ದೇನೆ’ ಎಂದು ಮಾಜಿ ಶಾಸಕಿ ಶಾರದಾ ಶೆಟ್ಟಿ ಪ್ರತಿಕ್ರಿಯಿಸಿದರು.

‘20 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ವಿವಿಧ ಹುದ್ದೆಯಲ್ಲಿದ್ದು, ತಾಯಿ ಮಾರ್ಗರೆಟ್ ಆಳ್ವ ಜೊತೆ ಜಿಲ್ಲೆಯಲ್ಲಿ ಓಡಾಡಿ ಕ್ಷೇತ್ರದ ಪರಿಚಯ ಆಗಿದೆ. ಈ ಸಲದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ನನ್ನ ಹೆಸರೂ ಇದೆ. ಕಾರ್ಯಕರ್ತರು, ಮುಖಂಡರು ಸ್ಪರ್ಧಿಸಲು ಒತ್ತಾಯಿಸಿದ್ದಾರೆ’ ಎಂದು ಈಚೆಗಷ್ಟೆ ಕ್ಷೇತ್ರದಲ್ಲಿ ಟಿಕೆಟ್‍ನ ಪ್ರಬಲ ಆಕಾಂಕ್ಷಿಯಾಗಿ ಕಾಣಿಸಿಕೊಂಡಿರುವ ನಿವೇದಿತ್ ಆಳ್ವ ಹೇಳಿದರು.

‘ನನ್ನ ಹೆಸರು ಟಿಕೆಟ್ ಪೈಪೋಟಿಯ ಅಂತಿಮ ಸ್ಪರ್ಧೆಯಲ್ಲಿದೆ’ ಎಂದು ಶಾಸಕ ಆರ್.ವಿ.ದೇಶಪಾಂಡೆ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಶಿವಾನಂದ ಹೆಗಡೆ ಕಡತೋಕ ಆತ್ಮವಿಶ್ವಾಸ ವ್ಯಕ್ತಪಡಿಸಿದರು.

‘ಜಿಲ್ಲೆಯಲ್ಲಿ ನಾಮಧಾರಿ ಸಮಾಜಕ್ಕೆ ಎರಡು ಕ್ಷೇತ್ರದಲ್ಲಾದರೂ ಪಕ್ಷದ ಟಿಕೆಟ್ ನೀಡಬೇಕು ಎನ್ನುವ ಕೂಗು ವ್ಯಾಪಕವಾಗಿದೆ. ಅದರಲ್ಲಿ ಕುಮಟಾ ಮೊದಲ ಸ್ಥಾನದಲ್ಲಿದೆ’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಆಪ್ತ ವಲಯದಲ್ಲಿ ಕಾಣಿಸಿಕೊಂಡಿರುವ ಮಂಜುನಾಥ ನಾಯ್ಕ ಹೇಳಿದರು.

‘ಪಕ್ಷದಲ್ಲಿ ಕ್ಷೇತ್ರದ 12 ಜನ ಆಕಾಂಕ್ಷಿಗಳಲ್ಲಿ ಯಾರಿಗೆ ಟಿಕೆಟ್ ಕೊಟ್ಟರೂ ಅವರಿಗೆ ಉಳಿದವರು ಬೆಂಬಲಿಸಬೇಕು ಎನ್ನುವ ಒಗ್ಗಟ್ಟು ಮೂಡಿಸಿದವನು ನಾನೇ. ಪಕ್ಷದ ನಿರ್ಣಯಕ್ಕೆ ಎಲ್ಲರೂ ಬದ್ಧರಾಗುತ್ತೇವೆ’ ಎಂದು ಆಕಾಂಕ್ಷಿಗಳಲ್ಲಿ ಒಬ್ಬರಾದ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ರತ್ನಾಕರ ನಾಯ್ಕ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT