ಶಿರಸಿ: ಪೌರ ಕಾರ್ಮಿಕರಿಗೆ ಸೂರು ಕಲ್ಪಿಸುವ ಉದ್ದೇಶದಿಂದ ಆರಂಭವಾದ ಒಂದನೇ ಹಂತದ ಗೃಹ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ಎರಡನೇ ಹಂತದಲ್ಲಿ ಅನುಷ್ಠಾನಗೊಂಡ ಕಾಮಗಾರಿಗೆ ವಿಘ್ನ ಎದುರಾಗಿದೆ. ಇದರಿಂದ ಗೃಹಭಾಗ್ಯದ ನಿರೀಕ್ಷೆಯಲ್ಲಿದ್ದ ಪೌರ ಕಾರ್ಮಿಕರಿಗೆ ನಿರಾಸೆಯಾಗಿದೆ.
ಇಲ್ಲಿನ ಮರಾಠಿಕೊಪ್ಪದ ವಿಶಾಲನಗರದಲ್ಲಿ ಪೌರ ಕಾರ್ಮಿಕರಿಗೆ ವಸತಿಗಾಗಿ ಈಗಾಗಲೇ 6 ಮನೆಗಳ ವಸತಿ ಸಮುಚ್ಚಯ ನಿರ್ಮಿಸಲಾಗಿದೆ. ₹47 ಲಕ್ಷ ವೆಚ್ಚದಲ್ಲಿ ನಗರಸಭೆಯು ಈ ಮನೆಗಳ ವಸತಿ ಸಮುಚ್ಚಯ ನಿರ್ಮಿಸಿದೆ. 2017ರಲ್ಲೇ ಆರಂಭಗೊಂಡಿದ್ದ ಕಾಮಗಾರಿ ಕಳೆದ ಮೂರು ವರ್ಷಗಳ ಹಿಂದೆ ಬಳಕೆಗೆ ನೀಡಿತ್ತು. ನಂತರ 18 ಮನೆ ನಿರ್ಮಿಸುವ ಎರಡನೇ ಹಂತದ ಯೋಜನೆಯನ್ನು ನಗರಸಭೆ ಜಾರಿಗೊಳಿಸಿತ್ತು. ಆದರೆ ಕಾಮಗಾರಿ ಅರ್ಧ ನಡೆದಾಗ ಸ್ಥಳೀಯರು ಜಾಗದ ವಿಷಯವಾಗಿ ಕೋರ್ಟ್ ಮೆಟ್ಟಿಲೇರಿದ ಪರಿಣಾಮ ಕಾಮಗಾರಿ ನನೆಗುದಿಗೆ ಬಿದ್ದಿದೆ.
‘ನಗರದ ಸ್ವಚ್ಛತಾ ಕರ್ಮಚಾರಿಗಳಿಗೆ ಸೂರು ಕಲ್ಪಿಸುವ ಉದ್ದೇಶದಿಂದ ₹1.35 ಕೋಟಿ ವೆಚ್ಚದಲ್ಲಿ 18 ಮನೆಗಳನ್ನು ನಿರ್ಮಿಸುವ ಯೋಜನೆಗೆ ವರ್ಷಗಳ ಹಿಂದೆಯೇ ಅನುಮತಿ ದೊರೆತಿದೆ. ವಸತಿ ಸಮುಚ್ಚಯ ನಿರ್ಮಾಣಕ್ಕೆ ಜಾಗವೂ ಅಂತಿಮಗೊಂಡು ನಿರ್ಮಾಣ ಕಾರ್ಯ ನಡೆದಿತ್ತು. ಆದರೆ ವಸತಿ ಸಮುಚ್ಛಯ ನಿರ್ಮಿಸುತ್ತಿರುವ ಜಾಗ ಸರ್ಕಾರದ ಕಟ್ಟಡ, ಸಮುದಾಯ ಭವನ ಇತರ ಸಾಮುದಾಯಿಕ ಕೆಲಸಕ್ಕೆ ಮೀಸಲಿಡಲಾಗಿದೆ. ಜತೆಗೆ, ಸಮುಚ್ಚಯದ ನೀರು ಹೊರ ಹೋಗಲು ವ್ಯವಸ್ಥೆ ಇಲ್ಲದ ಕಾರಣ ನೀಡಿ ಸ್ಥಳೀಯರು ಕೋರ್ಟ್ ಮೆಟ್ಟಿಲೇರಿದ್ದು, ತಡೆಯಾಜ್ಞೆ ತರಲಾಗಿದೆ. ಇದರಿಂದ 18 ವಸತಿ ಗೃಹಗಳ ಕಾಮಗಾರಿ ನಿಂತ ನೀರಾಗಿದೆ' ಎನ್ನುತ್ತಾರೆ ಪೌರ ಕಾರ್ಮಿಕರು.
‘ಸರ್ಕಾರಿ ಉದ್ದೇಶಕ್ಕೆ ಬಳಸಲು ಮೀಸಲಿಟ್ಟ ಜಾಗವನ್ನು ಪೌರ ಕಾರ್ಮಿಕರ ವಸತಿ ಸಮುಚ್ಛಯ ನಿರ್ಮಾಣಕ್ಕೆ ಬಳಸಿಕೊಳ್ಳಲು ಜಿಲ್ಲಾಧಿಕಾರಿ ಈ ಹಿಂದೆಯೇ ಪರಿವರ್ತನೆ ಮಾಡಿ ಕೊಟ್ಟಿದ್ದಾರೆ. ಆದರೆ ಸ್ಥಳೀಯ ಕೆಲವರು ಜಾಗದ ವಿಷಯ ಕೋರ್ಟ್‍ಗೆ ಹಾಕಿದ್ದು, ಶೀಘ್ರದಲ್ಲಿ ಪ್ರಕರಣ ಇತ್ಯರ್ಥ ಆಗುವ ವಿಶ್ವಾಸವಿದೆ‘ ಎಂದು ನಗರಾಡಳಿತದ ಅಧಿಕಾರಿಗಳು ತಿಳಿಸಿದರು.
‘ಐದಾರು ತಲೆಮಾರುಗಳಿಂದ ವಾಸವಿದ್ದರೂ ಸ್ವಂತ ಜಾಗವಿಲ್ಲ. ಅತಿಕ್ರಮಣ ಜಾಗ ಸಕ್ರಮಗೊಳಿಸಿ ಕೊಡುವ ಬೇಡಿಕೆಗೂ ಮನ್ನಣೆ ಸಿಕ್ಕಿಲ್ಲ. ಸ್ವಂತ ಮನೆ ನಿರ್ಮಾಣಕ್ಕೆ ಜಾಗದ ಅಡಚಣೆ ಇದೆ. ಸರ್ಕಾರ ಮನೆ ಮಂಜೂರು ಮಾಡಿದರೂ ಅವುಗಳನ್ನು ಕಟ್ಟಿಕೊಡಲು ವಿಳಂಬ ಮಾಡಲಾಗುತ್ತಿದೆ’ ಎಂದು ಹಲವು ಪೌರಕಾರ್ಮಿಕರು ತಿಳಿಸಿದರು.
ಪೌರಕಾರ್ಮಿಕರು ಸುಸಜ್ಜಿತ ಮನೆ ಇಲ್ಲದಿರುವುದು ದುರಂತ. 18 ಮನೆಗಳ ನಿರ್ಮಾಣ ಕಾಮಗಾರಿ ನಿಂತಿದೆ. ಇದು ಪೌರ ಕಾರ್ಮಿಕರ ಬಗೆಗೆ ಆಡಳಿತ ವ್ಯವಸ್ಥೆ ನಿರ್ಲಕ್ಷ್ಯ ಧೋರಣೆಗೆ ಸಾಕ್ಷಿಯಾಗಿದೆ.-ನಾಗರಾಜ ನಾಯ್ಕ- ಸಾಮಾಜಿಕ ಕಾರ್ಯಕರ್ತ
ಕೋರ್ಟ್‌ನಲ್ಲಿ ಜಾಗದ ವಿಚಾರವಾಗಿ ಉದ್ಭವಿಸಿದ ಪ್ರಕರಣ ಇತ್ಯರ್ಥವಾದ ನಂತರ ಕಾಮಗಾರಿ ಮುಂದುವರೆಸಲಾಗುವುದು.–-ಕಾಂತರಾಜ್, ಪೌರಾಯುಕ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.