ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರವಾರ: ಸ್ವಾಯತ್ತಗೊಂಡರೂ ಹೊಸ ಕೋರ್ಸ್ ಪರಿಚಯಿಸಿಲ್ಲ

ಕೊಠಡಿ, ಪ್ರಯೋಗಾಲಯವಿದ್ದರೂ ಉಪನ್ಯಾಸಕರಿಗೆ ಬರ
Published 15 ಮೇ 2024, 7:27 IST
Last Updated 15 ಮೇ 2024, 7:27 IST
ಅಕ್ಷರ ಗಾತ್ರ

ಕಾರವಾರ: ಜಿಲ್ಲೆಯ ಅತಿ ಹಳೆಯ ಸರ್ಕಾರಿ ಪದವಿ ಕಾಲೇಜ್ ಎನಿಸಿರುವ, ಏಳು ವರ್ಷಗಳ ಹಿಂದೆ ಸ್ವಾಯತ್ತಗೊಂಡ ಇಲ್ಲಿಯ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಈವರೆಗೂ ಹೊಸ ಕೋರ್ಸ್‌ಗಳನ್ನು ಪರಿಚಯಿಸಿಲ್ಲ ಎಂಬ ದೂರು ವ್ಯಾಪಕವಾಗಿದೆ.

2023–24ನೇ ಸಾಲಿನಲ್ಲಿ 1,268 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕಾಲೇಜಿಗೆ ಪ್ರಯೋಗಶಾಲೆಯ ಕೊಠಡಿ ಕಾಮಗಾರಿ ಅರ್ಧಕ್ಕೆ ನಿಂತಿದೆ. ಐದು ವರ್ಷಗಳಿಂದ ನಡೆಯುತ್ತಿರುವ ಸಭಾಭವನ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ.

ಬಿ.ಕಾಂ, ಬಿ.ಎಸ್‍ಸಿ, ಬಿಬಿಎ, ಬಿ.ಎ ಕೋರ್ಸ್‌ಗಳ ಜತೆಗೆ ಪ್ರಾಣಿಶಾಸ್ತ್ರ ಮತ್ತು ಕೈಗಾರಿಕಾ ರಸಾಯನ ಶಾಸ್ತ್ರ ವಿಷಯದಲ್ಲಿ ಎಂ.ಎಸ್‌ಸಿ ವಿಭಾಗಗಳು ಕಾಲೇಜಿನಲ್ಲಿವೆ. ವಿದ್ಯಾರ್ಥಿಗಳಿಲ್ಲದೆ ಮೂರು ವರ್ಷಗಳಿಂದ ಮುಚ್ಚಲ್ಪಟ್ಟಿದ್ದ ಕನ್ನಡ ಎಂ.ಎ ವಿಭಾಗವು ಪ್ರಸಕ್ತ ವರ್ಷದಿಂದ ಪುನರಾರಂಭಗೊಂಡಿದೆ.

ಕಾಲೇಜಿನಲ್ಲಿ ಈಗಿರುವ ಎಲ್ಲ ಕೋರ್ಸ್‌ಗಳಿಗೆ ಸಾಕಷ್ಟು ಸಂಖ್ಯೆಯ ವಿದ್ಯಾರ್ಥಿಗಳಿದ್ದಾರೆ. ಆದರೆ, 2016–17ನೇ ಶೈಕ್ಷಣಿಕ ಸಾಲಿನಿಂದ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಪ್ರತ್ಯೇಕಗೊಂಡು ಸ್ವಾಯತ್ತಗೊಂಡ ಸಂಸ್ಥೆಯಲ್ಲಿ ಹೊಸ ಕೋರ್ಸ್‌ಗಳನ್ನು ಪರಿಚಯಿಸುವ ಕೆಲಸ ಆಗಿಲ್ಲ ಎಂಬುದು ಶಿಕ್ಷಣಪ್ರಿಯರ ದೂರು.

‘ಶಿಕ್ಷಣ ಸಂಸ್ಥೆಯೊಂದು ಸ್ವಾಯತ್ತಗೊಂಡರೆ ಅದು ಶೈಕ್ಷಣಿಕವಾಗಿ ಏಳ್ಗೆ ಸಾಧಿಸಲು ಸಮರ್ಥವಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಕ್ಕೆ ಪೂರಕವಾಗಿರುವ ಮತ್ತು ಇಂದಿನ ಪೈಪೋಟಿ ಯುಗಕ್ಕೆ ಅನುಗುಣವಾದ ಕೋರ್ಸ್‌ಗಳನ್ನು ಪರಿಚಯಿಸುವ ಕೆಲಸ ಮಾಡಬೇಕಾಗುತ್ತದೆ. ಆದರೆ, ಕಾರವಾರದ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಮುಂಚಿನಿಂದ ಇರುವ ಕೋರ್ಸ್‌ಗಳ ಹೊರತಾಗಿ ಯಾವ ಕೋರ್ಸ್‌ಗಳನ್ನೂ ಪರಿಚಯಿಸುವ ಕೆಲಸ ಆಗಿಲ್ಲ’ ಎನ್ನುತ್ತಾರೆ ನಗರದ ಆಶ್ರಮ ರಸ್ತೆಯ ನಿವಾಸಿ ಗಜಾನನ ಶೆಟ್ಟಿ.

‘ಕಾರವಾರದಲ್ಲಿ ಖಾಸಗಿ, ಅನುದಾನಿತ ಕಾಲೇಜುಗಳಲ್ಲಿ ಇರುವ ಬಿಸಿಎ ಮತ್ತು ಎಂ.ಸಿ.ಎ ಕೋರ್ಸ್‍ಗಳನ್ನು ಸರ್ಕಾರಿ ಕಾಲೇಜಿನಲ್ಲಿ ಆರಂಭಿಸಬಹುದಿತ್ತು. ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಓದಲು ಅನುಕೂಲವಾಗುತ್ತಿತ್ತು. ಇವುಗಳ ಹೊರತಾಗಿ ಪ್ರವಾಸೋದ್ಯಮ, ಪತ್ರಿಕೋದ್ಯಮ ಸೇರಿದಂತೆ ವೃತ್ತಿಪರ ಕೋರ್ಸ್‌ಗಳ ಕಲಿಕೆಗೂ ಅವಕಾಶ ಮಾಡಿಕೊಡಬಹುದಿತ್ತು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

‘ಕಾಲೇಜಿನಲ್ಲಿ ಸಾಕಷ್ಟು ಕೊಠಡಿಗಳಿವೆ. ಸೌಕರ್ಯಗಳಿಗೆ ಬರವಿಲ್ಲ. ಆದರೆ, ಅಗತ್ಯದಷ್ಟು ಸಿಬ್ಬಂದಿ ಇಲ್ಲ. ಮಂಜೂರಾದ 44 ಬೋಧಕ ಸಿಬ್ಬಂದಿ ಪೈಕಿ 14 ಮಂದಿ ಮಾತ್ರ ಕೆಲಸ ಮಾಡಬೇಕಾಗಿದೆ. 20 ಮಂದಿ ಬೋಧಕೇತರ ಸಿಬ್ಬಂದಿ ಪೈಕಿ ನಾಲ್ವರು ಕಾರ್ಯನಿರ್ವಹಿಸುತ್ತಿದ್ದಾರೆ. 34 ಮಂದಿ ಅತಿಥಿ ಉಪನ್ಯಾಸಕರ ನೆರವಿನಿಂದ ಬೋಧನೆ ನಡೆಯುತ್ತಿದೆ. ಹೊಸ ಕೋರ್ಸ್‌ಗಳನ್ನು ಆರಂಭಿಸದಿರಲು ಉಪನ್ಯಾಸಕರ ಕೊರತೆಯೂ ಪ್ರಮುಖ ಕಾರಣ’ ಎನ್ನುತ್ತಾರೆ ಕಾಲೇಜಿನ ಪ್ರಾಚಾರ್ಯೆ ವಿದ್ಯಾ ನಾಯಕ.

ಕಾರವಾರದ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಪ್ರಯೋಗಾಲಯ ಕೊಠಡಿಗಳ ನಿರ್ಮಾಣ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿವೆ.
ಕಾರವಾರದ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಪ್ರಯೋಗಾಲಯ ಕೊಠಡಿಗಳ ನಿರ್ಮಾಣ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿವೆ.

ಕಾಲೇಜಿಗೆ ಅಗತ್ಯ ಮೂಲಸೌಕರ್ಯಗಳಿವೆ. ಕೊಠಡಿ ಕಾಮಗಾರಿಗಳು ಪೂರ್ಣಗೊಂಡರೆ ಹಳೆಯ ಕಟ್ಟಡದಿಂದ ಪ್ರಯೋಗಾಲಯ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಗುತ್ತದೆ.

-ವಿದ್ಯಾ ನಾಯಕ, ಕಾಲೇಜಿನ ಪ್ರಾಚಾರ್ಯೆ

ಬ್ಯಾಂಕಿಂಗ್ ಕೋರ್ಸ್ ಆರಂಭ

ಕಾರವಾರದ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ 2024–25ನೇ ಸಾಲಿನಿಂದ ಬ್ಯಾಂಕಿಂಗ್ ಮತ್ತು ಇನ್ಸೂರೆನ್ಸ್ ವಿಷಯದ ಕುರಿತ ಕೋರ್ಸ್ ಆರಂಭಿಸಲು ತಯಾರಿ ನಡೆದಿದೆ. ಇದಲ್ಲದೆ ಎಂ.ಕಾಂ ವಿಭಾಗ ಆರಂಭಿಸಲು ಪ್ರಸ್ತಾವ ಸಲ್ಲಿಕೆಯಾಗಿದೆ. ‘ವಾಣಿಜ್ಯ ಪದವಿ ಜತೆಗೆ ಪ್ರಸ್ತುತ ಹೆಚ್ಚು ಅಗತ್ಯವಿರುವ ಬ್ಯಾಂಕ್ ಮತ್ತು ಇನ್ಸೂರೆನ್ಸ್ ಕ್ಷೇತ್ರದ ಕುರಿತಾಗಿ ಹೆಚ್ಚು ಮಾಹಿತಿ ನೀಡಬಲ್ಲ ಕೋರ್ಸ್ ಆರಂಭಿಸಲು ನಿರ್ಧರಿಸಲಾಗಿದೆ. ಮೊದಲ ವರ್ಷ ಆಯ್ದ 60 ವಿದ್ಯಾರ್ಥಿಗಳಿಗೆ ಪ್ರವೇಶಾತಿ ನೀಡಲು ನಿರ್ಧರಿಸಿದ್ದೇವೆ’ ಎಂದು ಕಾಲೇಜಿನ ಪ್ರಾಚಾರ್ಯೆ ವಿದ್ಯಾ ನಾಯಕ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT