ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಟಾ: ಮತ ಎಣಿಕೆ ಕೇಂದ್ರಕ್ಕಾಗಿ ತರಗತಿ ಸ್ಥಳಾಂತರ

Published 6 ಮೇ 2024, 15:07 IST
Last Updated 6 ಮೇ 2024, 15:07 IST
ಅಕ್ಷರ ಗಾತ್ರ

ಕುಮಟಾ: ಪ್ರತಿ ಸಲದಂತೆ ಇಲ್ಲಿಯ ಕೆನರಾ ಕಾಲೇಜು ಸೊಸೈಟಿ ಸಮೂಹ ಶಿಕ್ಷಣ ಸಂಸ್ಥೆಯ ಡಾ. ಎ.ವಿ. ಬಾಳಿಗಾ ಕಲಾ-ವಿಜ್ಞಾನ ಪದವಿ ಕಾಲೇಜಿನಲ್ಲಿ ಈ ಸಲವೂ ಮತ ಎಣಿಕೆ ಕೇಂದ್ರ ಸ್ಥಾಪಿಸಲಾಗಿದ್ದು, ಕಟ್ಟದಲ್ಲಿ ನಡೆಯುತ್ತಿದ್ದ ಎಲ್ಲ ತರಗತಿಗಳನ್ನು ಪಕ್ಕದ ವಾಣಿಜ್ಯ, ಶಿಕ್ಷಣ ಮಹಾವಿದ್ಯಾಲಯ ಹಾಗೂ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಗಳಿಗೆ ಸ್ಥಳಾಂತರಿಸಲಾಗಿದೆ.

ಕಾಲೇಜು ಕಟ್ಟಡದ ನಾಲ್ಕೂ ದಿಕ್ಕುಗಳಿಗೆ ಕಬ್ಬಿಣದ ರಕ್ಷಣಾ ಬೇಲಿ ನಿರ್ಮಿಸಲಾಗಿದೆ. ಮತ ಎಣಿಕೆ ದಿನ ಸಿಬ್ಬಂದಿಗೆ ಹಾಗೂ ಅದಕ್ಕೂ ಮೊದಲು ಮತಗಟ್ಟೆ ಕಾಯುವ ನೂರಾರು ಪೊಲೀಸ್ ಸಿಬ್ಬಂದಿಗೆ ಅನುಕೂಲವಾಗುವಂತೆ ಕಾಲೇಜು ಆವರಣದಲ್ಲಿ ಹಿಂದೆ ತಾತ್ಕಾಲಿಕ ಶೌಚಾಲಯ ನಿರ್ಮಿಸಲಾಗುತ್ತಿತ್ತು. ಆದರೆ ಕಳೆದ ವರ್ಷ ಕಾಲೇಜು ಅಲ್ಯುಮ್ನಿ ಟ್ರಸ್ಟ್ ಹೈಟೆಕ್ ಶೌಚಾಲಯ ನಿರ್ಮಿಸಿಕೊಟ್ಟಿದ್ದರಿಂದ ಚುನಾವಣಾ ಸಿಬ್ಬಂದಿಗೆ ಹೆಚ್ಚಿನ ಅನುಕೂಲವಾಗಲಿದೆ.

ಹೆಚ್ಚಿನ ಮಾಹಿತಿ ನೀಡಿದ ಕೆನರಾ ಕಾಲೇಜು ಸೊಸೈಟಿ ಕಾರ್ಯದರ್ಶಿ ಎಚ್.ಕೆ. ಶಾನಭಾಗ, ‘ಎಲ್ಲ ಚುನಾವಣೆಗಳ ಮತ ಎಣಿಕೆಗಾಗಿ ಹಲವಾರು ವರ್ಷಗಳಿಂದ ನಮ್ಮ ಸಂಸ್ಥೆಯ ಡಾ. ಎ.ವಿ.ಬಾಳಿಗಾ ಕಲಾ-ವಿಜ್ಞಾನ ಪದವಿ ಕಾಲೇಜು ಕಟ್ಟಡ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈ ಸಲ ತರಗತಿ ನಡೆಯುತ್ತಿದ್ದರೂ ಕಟ್ಟಡ ಮತ ಎಣಿಕೆ ಕೇಂದ್ರಕ್ಕೆ ನೀಡಲಾಗಿದೆ’ ಎಂದರು.

‘ಕಾಲೇಜಿನ ಕಲಾ ಹಾಗೂ ವಿಜ್ಞಾನ ವಿಭಾಗದ ಒಟ್ಟೂ ಆರು ತರಗತಿಗಳನ್ನು ಸಂಸ್ಥೆಯ ಪಕ್ಕದ ಕಾಲೇಜುಗಳಿಗೆ ಸ್ಥಳಾಂತರಿಸಲಾಗಿದೆ. ವಿಜ್ಞಾನ ವಿದ್ಯಾರ್ಥಿಗಳು ಪ್ರಯೋಗ ಶಾಲೆಗಾಗಿ ಮೂಲ ಕಟ್ಟಡಕ್ಕೆ ಬರಲು ಪ್ರತ್ಯೇಕ ಪ್ರವೇಶ ದ್ವಾರ ಇಡಲಾಗಿದೆ. ಪ್ರಾಚಾರ್ಯ ಕೊಠಡಿಯನ್ನೂ ಚುನಾವಣಾ ಅಧಿಕಾರಿಗಳು ತುರ್ತು ಸಭೆ ನಡೆಸಲು ಬಳಸಿಕೊಳ್ಳುವ ಸಾಧ್ಯತೆ ಇರುವುದರಿಂದ ಅದನ್ನೂ ಸ್ಥಳಾಂತರಿಸುವ ಬಗ್ಗೆ ಯೋಚನೆ ಮಾಡಲಾಗುತ್ತಿದೆ. ಒಟ್ಟಾರೆ ಮತ ಎಣಿಕೆ ಕೇಂದ್ರಕ್ಕೆ ಅನುಕೂಲ ಕಲ್ಪಿಸಲು ವಿದ್ಯಾರ್ಥಿಗಳಿಗೆ ತೊಂದರೆಯಾದಗ ರೀತಿಯಲ್ಲಿ ಎಲ್ಲ ಪರ್ಯಾಯ ಕ್ರಮ ಕೈಗೊಳ್ಳಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT