ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕುಮಟಾ: ಮಹಾತ್ಮ ಗಾಂಧಿ ಮೈದಾನದಲ್ಲಿ ಸೌಲಭ್ಯ ಕೊರತೆ

Published : 18 ಡಿಸೆಂಬರ್ 2023, 7:27 IST
Last Updated : 18 ಡಿಸೆಂಬರ್ 2023, 7:27 IST
ಫಾಲೋ ಮಾಡಿ
Comments

ಕುಮಟಾ: ಇಲ್ಲಿಯ ಕೆನರಾ ಎಜುಕೇಶನ್ ಸೊಸೈಟಿ ಮಾಲೀಕತ್ವದ ಪಟ್ಟಣದ ಹೃದಯ ಭಾಗದಲ್ಲಿರುವ ಪ್ರತಿಷ್ಠಿತ ಮಹಾತ್ಮ ಗಾಂಧಿ ಕ್ರೀಡಾಂಗಣ ಹಲವು ಸೌಲಭ್ಯಗಳಿಂದ ವಂಚಿತವಾಗಿದ್ದರೂ ಹಲವು ಮಹತ್ವದ ಸಾರ್ವಜನಿಕ ಕಾರ್ಯಕ್ರಮಗಳ ಸಾಕ್ಷೀಕರಿಸುವ ವೇದಿಕೆಯಾಗಿದೆ.

ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಸುಮಾರು ಏಳು ಎಕರೆಯಷ್ಟು ವಿಸ್ತಾರವಾಗಿರುವ ಈ ಮೈದಾನ ಈಗಾಗಲೇ ದೊಡ್ಡ ದೊಡ್ಡ ಕಾರ್ಯಕ್ರಮಗಳಿಗೆ ವೇದಿಕೆಯಾಗಿದೆ. ಜನ ಬಂದು ಹೋಗಲು, ವಾಹನ ನಿಲುಗಡೆಗೆ ಅನುಕೂಲವಿರುವ ಮೈದಾನದಲ್ಲಿ ಕುಮಟಾ ಹಬ್ಬ, ಕುಮಟಾ ಉತ್ಸವ, ಕುಮಟಾ ವೈಭವ, ರವಿರಾಜ ಟ್ರೋಫಿ ಕ್ರಿಕೆಟ್ ಪಂದ್ಯ, ಧ್ವನಿ-ಬೆಳಕಿನ `ಕರ್ನಾಟಕ ವೈಭವ' ಕಾರ್ಯಕ್ರಮ ದಕ್ಷಿಣ ಭಾರತ ಹಾಗೂ ರಾಜ್ಯ ಮಟ್ಟದ ಕ್ರೀಡಾ ಪಂದ್ಯಾವಳಿ, ಕಳೆದ ವರ್ಷ ನಡೆದ ಜಿಲ್ಲಾ ಮಟ್ಟದ ಜನಪ್ರತಿನಿಧಿಗಳ ಕ್ರೀಡೋತ್ಸವ ‘ಹೊಳಪು’ ಕಾರ್ಯಕ್ರಮ, ಹತ್ತು ಹಲವು ರಾಜಕೀಯ ಸಮಾವೇಶ ನಡೆದಿದೆ.

‘ಕೊಯ್ನಾ ಭೂಕಂಪವಾದಾಗ ಸಂತ್ರಸ್ತರ ನೆರವಿನ ಸಹಾಯಾರ್ಥ ಇದೇ ಮೈದಾನದಲ್ಲಿ ಕರ್ನಾಟಕ ಮತ್ತು ಮಹರಾಷ್ಟ್ರ ನಡುವಿನ ಮಹತ್ವದ ಕ್ರಿಕೆಟ್ ಪಂದ್ಯ ನಡೆದಿತ್ತು. ಪಂದ್ಯಕ್ಕೆ ಅಜಿತ್ ವಾಡೇಕರ್ ಮಹಾರಾಷ್ಟ್ರ ತಂಡದ ಹಾಗೂ ಇ.ಎ.ಎಸ್ ಪ್ರಸನ್ನ ಕರ್ನಾಟಕ ತಂಡದ ನಾಯಕರಗಿದ್ದರು. ಎರಡೂ ರಾಜ್ಯಗಳ ಪ್ರಮುಖ ಕ್ರಿಕೆಟ್ ತಾರೆಗಳು ಪಂದ್ಯದಲ್ಲಿ ಆಡಿದ್ದರು. ಅಷ್ಟು ದೊಡ್ಡ ಪಂದ್ಯವನ್ನು ಕುಮಟಾದಲ್ಲಿ ಅಯೋಜಿಸುವಷ್ಟು ಮಹಾತ್ಮ ಗಾಂಧಿ ಕ್ರೀಡಾಂಗಣ ಆಗಲೇ ಹೆಸರು ಮಾಡಿತ್ತು' ಎಂದು ಶಾಸಕ ದಿನಕರ ಶೆಟ್ಟಿ ಮೈದಾನದಲ್ಲಿ ನಡೆದ ಕ್ರಿಕೆಟ್ ಪಂದ್ಯ ನೆನಪಿಸಿಕೊಂಡರು.

‘ಈ ಮೈದಾನದಲ್ಲಿ ಈಗಲೂ ಶೌಚಾಲಯ, ನೀರು ಮುಂತಾದ ಅಗತ್ಯ ಸೌಲಭ್ಯಗಳ ಕೊರತೆ ಇದೆ. ಗಣ್ಯ ವ್ಯಕ್ತಿಗಳು ಈ ಮೈದಾನದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಬಂದರೆ ಶೌಚಾಲಯ ಅಗತ್ಯಗಳಿಗೆ ಅವರು ಪಕ್ಕದ ಹೋಟೆಲ್‌ಗೆ ಹೋಗುವಂಥ ಸ್ಥಿತಿ ಇದೆ. ಆದರೆ ಅತಿ ಕಡಿಮೆ ಶುಲ್ಕದಲ್ಲಿ ಯಾವುದೇ ಕಾರ್ಯಕ್ರಮ ನಡೆಸುವುದಕ್ಕೂ ಸಮಿತಿಯವರು ಸಾರ್ವಜನಿಕರಿಗೆ ಮೈದಾನ ನೀಡುತ್ತಿರುವುದು ಹೆಮ್ಮೆಯ ಸಂಗತಿ’ ಎಂದು ಇಲ್ಲಿ ಕಾರ್ಯಕ್ರಮ ನಡೆಸಿದ ಅನೇಕ ಸಂಘಟಕರು ತಿಳಿಸುತ್ತಾರೆ.

‘ಹಿಂದೆ ಈ ಮೈದಾನಕ್ಕೆ ಮಹಾತ್ಮ ಗಾಂಧೀಜಿಯವರು ಭೇಟಿ ನೀಡಿದ್ದರಿಂದ ಮಹಾತ್ಮ ಗಾಂಧಿ ಮೈದಾನ ಎಂದು ಹೆಸರು ಬಂದಿತು. ಈಗ ಇಡೀ ಮೈದಾನಕ್ಕೆ ಕಾಂಪೌಂಡ್ ನಿರ್ಮಿಸುತ್ತಿದ್ದೇವೆ. ಎಲ್ಲ ಕಾರ್ಯಕ್ರಮಗಳಿಗೆ ಅತಿ ಕಡಿಮೆ ಶುಲ್ಕ ಪಡೆಯುತ್ತಿದ್ದೇವೆ. ಸರ್ಕಾರಿ ಕಾರ್ಯಕ್ರಮಗಳಿಗೆ ಶುಲ್ಕವಿಲ್ಲದೆ ಮೈದಾನ ನೀಡುತ್ತಿದ್ದೇವೆ. ಕಾರ್ಯಕ್ರಮ ನಡೆದ ನಂತರ ಮೈದಾನ ಶುಚಿ ಕಾರ್ಯವನ್ನು ಸಮಿತಿಯೇ ನಿರ್ವಹಿಸುತ್ತದೆ. ಅಗತ್ಯ ಸೌಲಭ್ಯಗಳಾದ ಪೆವಿಲಿಯನ್, ಶೌಚಾಲಯ, ನೀರು, ಉತ್ತಮ ವೇದಿಕೆ ಎಲ್ಲವನ್ನು ಹಂತ ಹಂತವಾಗಿ ನಿರ್ಮಿಸಲಾಗುವುದು. ಆದರೆ ಮೈದಾನದ ಆಚೆಯೇ ಪ್ರಾಚ್ಯ ವಸ್ತು ಸ್ಮಾರಕ ಇರುವುದರಿಂದ ಕೆಲವೊಂದು ಅಭಿವೃದ್ಧಿ ಕೆಲಸಕ್ಕೆ ಪ್ರಾಚ್ಯ ವಸ್ತು ಇಲಾಖೆ ಕಾನೂನು ಅಡ್ಡಿಯುಂಟಾಗುತ್ತಿದೆ' ಎಂದು ಕೆನರಾ ಎಜುಕೇಶನ್ ಸೊಸೈಟಿ ಆಡಳಿತ ಸಮಿತಿ ಮಾಹಿತಿ ನೀಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT