ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ | ಗ್ರಾಹಕರ ಕೈಗೆಟುಕದ ಲಿಂಬೆ, ಎಳನೀರು

ಕರಾವಳಿಯಲ್ಲಿ ದುಪ್ಪಟ್ಟಾದ ಲಿಂಬೆ ದರ: ಪೂರೈಕೆಯಾಗದ ಎಳನೀರು
Published 16 ಏಪ್ರಿಲ್ 2024, 4:48 IST
Last Updated 16 ಏಪ್ರಿಲ್ 2024, 4:48 IST
ಅಕ್ಷರ ಗಾತ್ರ

ಕಾರವಾರ: ಬಿಸಿಲ ಝಳ ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗಿದ್ದು, ಉಷ್ಣತೆಯನ್ನು ನಿಯಂತ್ರಣದಲ್ಲಿಡಲು ಜನರು ಬೇಡಿಕೆ ಇಡುವ ಲಿಂಬೆ ಹಣ್ಣಿನ ದರ ಗಗನಕ್ಕೇರಿದ್ದರೆ, ಎಳನೀರು ಪೂರೈಕೆಯೆ ಕಡಿಮೆಯಾಗಿರುವುದು ಚಿಂತೆಗೆ ತಳ್ಳಿದೆ.

ಕರಾವಳಿ ಭಾಗದಲ್ಲಿ ಬಿಸಿಲ ಝಳದ ಜತೆಗೆ ಆರ್ದೃತೆಯ ಪ್ರಮಾಣವೂ ಹೆಚ್ಚಿರುವುದರಿಂದ ಸೆಖೆಯ ವಾತಾವರಣ ಜನರನ್ನು ಹೈರಾಣಾಗಿಸಿದೆ. ಸೆಖೆಯಿಂದ ಪಾರಾಗಲು ಲಿಂಬೆಹಣ್ಣಿನ ಶರಬತ್ತು, ಸೋಡಾ ಶರಬತ್ತು, ಎಳನೀರು ಮುಂತಾದ ತಂಪುಪಾನೀಗಳಿಗೆ ಬೇಡಿಕೆ ಹೆಚ್ಚಿದೆ. ಅಲ್ಲದೇ, ಅಡುಗೆಯಲ್ಲೂ ಲಿಂಬೆ ಹಣ್ಣು ಬಳಕೆ ಹೆಚ್ಚಿದೆ.

ಪ್ರತಿ ಬೇಸಿಗೆಯಲ್ಲೂ ಲಿಂಬೆ ಹಣ್ಣಿಗೆ ಹೆಚ್ಚಿನ ಬೇಡಿಕೆ ಇರುವ ಹಿನ್ನೆಲೆಯಲ್ಲಿ ಇದೇ ಅವಧಿಯಲ್ಲಿ ದರವೂ ದುಪ್ಪಟ್ಟಾಗುತ್ತಿದೆ. ನಗರದ ಮಾರುಕಟ್ಟೆಯಲ್ಲಿ ಸದ್ಯ ಪ್ರತಿ ಲಿಂಬೆ ಹಣ್ಣಿನ ದರ ಸರಾಸರಿ ₹8 ರಿಂದ 10ರ ವರೆಗೂ ಇದೆ. ಚಿಕ್ಕಗಾತ್ರದ ಲಿಂಬೆಗೆ ₹4 ರಿಂದ ₹5 ದರವಿದೆ. ಕಳೆದ ಒಂದು ತಿಂಗಳಿನಿಂದ ಈಚೆಗೆ ದರದಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಒಂದು ತಿಂಗಳ ಹಿಂದೆ ದೊಡ್ಡ ಗಾತ್ರದ ಲಿಂಬೆ ₹4–5 ದರಕ್ಕೆ ಮಾರಾಟವಾಗುತ್ತಿದ್ದರೆ, ಚಿಕ್ಕ ಗಾತ್ರದ ಲಿಂಬು ಎರಡು ರೂಪಾಯಿಗೆ ದೊರೆಯುತ್ತಿತ್ತು.

ಕಳೆದ ಒಂದು ವಾರದಿಂದ ಈಚೆಗೆ ಕಾರವಾರಕ್ಕೆ ಎಳನೀರು ಪೂರೈಕೆ ಕಡಿಮೆಯಾಗಿದೆ. ಬಂದರೂ ಎರಡು ದಿನಕ್ಕಿಂತ ಹೆಚ್ಚು ದಿನ ತಾಜಾ ಎಳನೀರು ಇಟ್ಟುಕೊಳ್ಳುವುದು ಕಷ್ಟ.
ನಾರಾಯಣ ಗೌಡ, ಎಳನೀರು ವ್ಯಾಪಾರಿ

ಇನ್ನೊಂದೆಡೆ ಎಳನೀರು ಪೂರೈಕೆಯೂ ತೀರಾ ಇಳಿಮುಖವಾಗಿದೆ. ಜಿಲ್ಲೆಯ ಬಹುತೇಕ ನಗರ, ಪಟ್ಟಣಗಳಿಗೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ, ಸಾಗರ ಭಾಗದಿಂದ ಎಳನೀರು ಪೂರೈಕೆ ಆಗುತ್ತಿದೆ. ನಗರದ ಬಹುತೇಕ ಗೂಡಂಗಡಿಗಳಲ್ಲಿ ಕೆಲ ದಿನಗಳ ಹಿಂದೆ ರಾಶಿ ರಾಶಿಯಾಗಿ ಕಾಣಸಿಗುತ್ತಿದ್ದ ಎಳನೀರು ಈಗ ಕಾಣಸಿಗದಂತಾಗಿದೆ. ಬೆರಳೆಣಿಕೆಯಷ್ಟು ಅಂಗಡಿಗಳಲ್ಲಿ ಅಲ್ಪ ಪ್ರಮಾಣದಲ್ಲಿ ಎಳನೀರಿನ ರಾಶಿ ಕಾಣಸಿಗುತ್ತಿದೆ. ಸಿಕ್ಕರೂ ಒಣಗಿದ, ಅಲ್ಪ ನೀರು ಹೊಂದಿರುವ ಎಳನೀರು ಸಿಗುತ್ತಿರುವುದು ಗ್ರಾಹಕರಲ್ಲಿ ಬೇಸರ ತರಿಸಿದೆ.

‘ವಿಜಯಪುರ, ಆಂಧ್ರಪ್ರದೇಶದಿಂದ ಆಮದಾಗುವ ಲಿಂಬೆಹಣ್ಣು ಹುಬ್ಬಳ್ಳಿ ಮಾರುಕಟ್ಟೆಯ ಮೂಲಕ ಜಿಲ್ಲೆಗೆ ಪೂರೈಕೆ ಆಗುತ್ತವೆ. ಬೇಸಿಗೆ ಅವಧಿಯಲ್ಲಿ ಲಿಂಬೆ ಹಣ್ಣಿನ ಇಳುವರಿ ಕಡಿಮೆ, ಅಲ್ಲದೇ ಎಲ್ಲೆಡೆ ಬೇಡಿಕೆಯೂ ಹೆಚ್ಚು. ಹೀಗಾಗಿ ದರದಲ್ಲಿ ವ್ಯತ್ಯಾಸ ಸಹಜ. ಹೆಚ್ಚು ದರ ನೀಡಿದರೂ ಬೇಡಿಕೆಯಷ್ಟು ಲಿಂಬೆ ಪೂರೈಕೆ ಆಗದು’ ಎನ್ನುತ್ತಾರೆ ವ್ಯಾಪಾರಿ ಇಮ್ರಾನ್ ಸವಣೂರು.

ಲಿಂಬೆಹಣ್ಣಿನ ದರ ಒಂದು ತಿಂಗಳಲ್ಲಿ ದುಪ್ಪಟ್ಟಾಗಿದೆ. ಸೆಖೆಯ ಪರಿಣಾಮ ಮೂರ್ನಾಲ್ಕು ದಿನದಲ್ಲೇ ಲಿಂಬೆಹಣ್ಣುಗಳು ಒಣಗುತ್ತಿವೆ.
ಸಂಗಮೇಶ ಕಲ್ಯಾಣಿ, ತರಕಾರಿ ವ್ಯಾಪಾರಿ

‘ಬೇಸಿಗೆಯಲ್ಲಿ ಉಷ್ಣತೆಯಿಂದ ಪಾರಾಗಲು ಲಿಂಬೆಹಣ್ಣು, ಎಳನೀರು ಅಗತ್ಯವಿದೆ. ಬೇಡಿಕೆ ಇರುವ ಸಮಯದಲ್ಲೇ ಅವುಗಳ ಲಭ್ಯತೆ ಕಡಿಮೆಯಾಗಿರುವುದು ಜನರಿಗೆ ತೊಂದರೆ’ ಎನ್ನುತ್ತಾರೆ ನಮಿತಾ ಸಾರಂಗ.

ಕಾರವಾರದಲ್ಲಿ ಭಾನುವಾರ ನಡೆಯುವ ಸಂತೆಯಲ್ಲಿ ಗ್ರಾಹಕರೊಬ್ಬರು ಲಿಂಬೆಹಣ್ಣು ಖರೀದಿಸಿದರು.
ಕಾರವಾರದಲ್ಲಿ ಭಾನುವಾರ ನಡೆಯುವ ಸಂತೆಯಲ್ಲಿ ಗ್ರಾಹಕರೊಬ್ಬರು ಲಿಂಬೆಹಣ್ಣು ಖರೀದಿಸಿದರು.
ಕಾರವಾರದಲ್ಲಿ ಎಳನೀರು ವ್ಯಾಪಾರಿಯೊಬ್ಬರು ಗ್ರಾಹಕರಿಗೆ ಎಳನೀರು ಕತ್ತರಿಸಿ ನೀಡುತ್ತಿರುವುದು
ಕಾರವಾರದಲ್ಲಿ ಎಳನೀರು ವ್ಯಾಪಾರಿಯೊಬ್ಬರು ಗ್ರಾಹಕರಿಗೆ ಎಳನೀರು ಕತ್ತರಿಸಿ ನೀಡುತ್ತಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT