ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭಾ ಚುನಾವಣೆ: ಬಿಜೆಪಿಗರ ‘ಆತ್ಮಬಲ’ ವೃದ್ಧಿಸಿದ ಗೆಲುವು

ಸೋತು ಗೆದ್ದ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ
Published 5 ಜೂನ್ 2024, 6:19 IST
Last Updated 5 ಜೂನ್ 2024, 6:19 IST
ಅಕ್ಷರ ಗಾತ್ರ

ಶಿರಸಿ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಸೋತಿದ್ದ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಲೋಕಸಭಾ ಚುನಾವಣೆಯಲ್ಲಿ ಗೆಲುವು ದಕ್ಕಿಸಿಕೊಳ್ಳುವ ಮೂಲಕ ಇಡೀ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರ ಬಲ ಹಿಗ್ಗಲು ಕಾರಣರಾಗಿದ್ದಾರೆ.

ಅಂಕೋಲಾ ವಿಧಾನಸಭಾ ಕ್ಷೇತ್ರ, ಶಿರಸಿ- ಸಿದ್ದಾಪುರ ವಿಧಾನಸಭಾ ಕ್ಷೇತ್ರದಿಂದ ನಿರಂತರ ಆರು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು 2023ರ ಮೇ 13ರಂದು ವಿಧಾನಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಸೋಲು ಕಂಡಿದ್ದರು. ಇದರಿಂದ 30 ವರ್ಷಗಳಿಂದ ಬಿಜೆಪಿಯ ಭದ್ರ ನೆಲೆಯಾಗಿದ್ದ ಶಿರಸಿ ಸಿದ್ದಾಪುರ ಕ್ಷೇತ್ರದಲ್ಲಿ ‘ಕೈ’ ಕಾರ್ಯಕರ್ತರ ಉತ್ಸಾಹ ಇಮ್ಮಡಿಸಿತ್ತು. ಇದು ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಹತಾಶ ಸ್ಥಿತಿಗೆ ಕಾರಣವಾಗಿತ್ತು. ಸಂಘಟನೆ ಜಾತಿವಾರು ವಿಭಜನೆಯ ಹಂತ ತಲುಪಿತ್ತು. ಆದರೆ ರಾಜ್ಯ ರಾಜಕಾರಣದಲ್ಲಿ ಸೋಲುಂಡು ವರ್ಷದೊಳಗೆ ಮತ್ತೆ ಕೇಂದ್ರ ರಾಜಕಾರಣದಲ್ಲಿ ಗೆಲುವಿನ ನಗೆ ಬೀರುವ ಮೂಲಕ ಕಾಗೇರಿ, ಬಿಜೆಪಿಗರನ್ನು ಹುರಿದುಂಬಿಸುವ ಕಾರ್ಯ ಮಾಡಿದ್ದಾರೆ’ ಎಂಬುದು ಬಿಜೆಪಿ ಕಾರ್ಯಕರ್ತರ ಅಭಿಪ್ರಾಯ. 

‘ಕಳೆದ ವಿಧಾನಸಭೆ ಚುನಾವಣೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಆರು ಕ್ಷೇತ್ರದಲ್ಲಿ ನಾಲ್ಕು ಹಾಗೂ ಕಿತ್ತೂರು, ಖಾನಾಪುರ ಕ್ಷೇತ್ರದಲ್ಲಿ ಒಂದು ಶಾಸಕ ಸ್ಥಾನ ಕಳೆದುಕೊಂಡಿದ್ದ ಬಿಜೆಪಿಗೆ ಭದ್ರವಾಗಿ ನೆಲೆ ನಿಲ್ಲಲು ತೊಡಕಾಗಿತ್ತು‌. ಇದು ಕಾರ್ಯಕರ್ತರ ಆತ್ಮವಿಶ್ವಾಸಕ್ಕೆ ಧಕ್ಕೆ ನೀಡುತ್ತಿತ್ತು. ಆದರೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದಿರುವುದು ಈ ಭಾಗದ ಪಕ್ಷದ ಕಾರ್ಯಕರ್ತರ ಬಲ ಹಿಗ್ಗಲು ಕಾರಣವಾಗಿದೆ. ಮನೆಯ ಸದಸ್ಯ ಚುನಾವಣೆಗೆ ನಿಂತಿದ್ದಾನೆ ಎಂಬ ಮನಸ್ಥಿತಿಯಲ್ಲಿ ಪ್ರತಿಯೊಬ್ಬ ಬಿಜೆಪಿಗನೂ ಪ್ರಚಾರದಲ್ಲಿ ತೊಡಗಿದ್ದರು. ಕಾಗೇರಿ ಗೆಲುವು ಕೇವಲ ಗೆಲುವಷ್ಟೇ ಅಲ್ಲ ಬಿಜೆಪಿಗರ ಆತ್ಮಬಲವೂ ಆಗಿದೆ’ ಎನ್ನುತ್ತಾರೆ ಬಿಜೆಪಿ ಶಿರಸಿ ನಗರ ಮಂಡಲ ಅಧ್ಯಕ್ಷ ಆನಂದ ಸಾಲೇರ್. 

‘ಚುನಾವಣೆಯಲ್ಲಿ ಸೋಲಾಯಿತೆಂದು ಪಕ್ಷ ಸಂಘಟನೆ ಬಿಟ್ಟಿರಲಿಲ್ಲ. ಪಕ್ಷದಲ್ಲಿ ಭಿನ್ನಾಭಿಪ್ರಾಯ ಇರುವ ನಾಯಕರ ಭೇಟಿ ಮಾಡಿ ಮೋದಿ ನಾಯಕತ್ವಕ್ಕೆ ಸಹಕರಿಸುವಂತೆ ಕೋರುತ್ತಿದ್ದರು. ನಿರಂತರ ಓಡಾಟ, ಕೇಂದ್ರ, ರಾಜ್ಯ ನಾಯಕರ ಸಂಪರ್ಕ, ತಳಮಟ್ಟದಲ್ಲಿ ಕಾರ್ಯಕರ್ತರ ಸಂಘಟನೆ, ಸ್ಥಳೀಯ ನಾಯಕರಿಗೆ ಮಾರ್ಗದರ್ಶನಕ್ಕೆ ಹೆಚ್ಚಿನ ಮಹತ್ವ ನೀಡಿದ್ದರು. ಹಾಲಿ ಸಂಸದರ ಬದಲಿಗೆ ಕಾಗೇರಿ ಅವರಿಗೆ ಕ್ಷೇತ್ರದ ಟಿಕೆಟ್ ಆದಾಗ ಕಾರ್ಯಕರ್ತರಲ್ಲಿ ಸ್ವಲ್ಪ ಗೊಂದಲವಿತ್ತು. ಆದರೆ ಕಾಗೇರಿಯವರು ಕಾರ್ಯಕರ್ತರ ಮನವೊಲಿಸಲು ಸಫಲರಾದರು. ತಮ್ಮ ಸರಳತೆ ಹಾಗೂ ಸಂಘಟನಾ ಚತುರತೆಯ ಕಾರಣ ಪ್ರಧಾನಿ ನರೇಂದ್ರ ಮೋದಿಯವರನ್ನು ಶಿರಸಿಗೆ ಕರೆಸುವಲ್ಲಿ ಯಶಸ್ವಿಯಾದರು. ಇದು ಅವರ ಗೆಲುವಿಗೆ ಸಾಕಷ್ಟು ಸಹಾಯವಾಯಿತು’ ಎಂಬುದು ಗ್ರಾಮೀಣ ಮಂಡಲದ ಅಧ್ಯಕ್ಷೆ ಉಷಾ ಹೆಗಡೆ ಮಾತು. 

‘ಸಿದ್ಧಾಂತದಲ್ಲಿ ರಾಜಿಯಿಲ್ಲದ ಪಕ್ಷ ಹಾಗೂ ಕೇಂದ್ರ ನಾಯಕತ್ವದ ಮೇಲೆ ವಿಶ್ವಾಸವಿಟ್ಟ ಮತದಾರರಿಂದ ಇಂಥದ್ದೊಂದು ಗೆಲುವು ಸಾಧ್ಯವಾಗಿದೆ. ವಿಧಾನಸಭೆ ಚುನಾವಣೆಯಲ್ಲಾದ ಸೋಲಿನ ಹತಾಶೆಯಿಂದ ಹೊರಬರಲು ಪ್ರತಿಯೊಬ್ಬರೂ ಬಿಜೆಪಿಯೊಟ್ಟಿಗೆ  ಸಂಘಟಿತರಾಗಿದ್ದು ಈ ಚುನಾವಣೆಯಲ್ಲಿ ಸಾಬೀತಾದಂತಾಗಿದೆ’ ಎಂಬುದು ಮೊದಲ ಬಾರಿಗೆ ಸಂಸದರಾಗಿ ಪ್ರಮಾಣವಚನ ಸ್ವೀಕರಿಸಲಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಮನದಿಂಗಿತವಾಗಿದೆ.

ಬಿಜೆಪಿ ಕಾರ್ಯಕರ್ತರಿಗೆ ವ್ಯಕ್ತಿಗಿಂತ ಪಕ್ಷ ಮುಖ್ಯ ಎಂಬುದನ್ನು ಪಕ್ಷ ಸಂಘಟನೆಯಲ್ಲಿ ತೊಡಗಿದರೆ ವಿಧಾನಸಭೆ ಚುನಾವಣೆಯಲ್ಲಿ ಸೋತರೂ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಬಹುದು ಎಂಬುದಕ್ಕೆ ಈ ಚುನಾವಣೆ ಫಲಿತಾಂಶ ಸಾಕ್ಷಿಯಾಗಿದೆ.
–ಸದಾನಂದ ಭಟ್, ಬಿಜೆಪಿ ಉತ್ತರ ಕನ್ನಡ ಜಿಲ್ಲಾ ವಕ್ತಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT