ಯಲ್ಲಾಪುರ: ತಾಲ್ಲೂಕು ಕೇಂದ್ರದಿಂದ 12 ಕಿ.ಮೀ ದೂರದಲ್ಲಿರುವ ಮದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ರೈತರು ಕಾಡಾನೆ ದಾಳಿಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇಲ್ಲಿನ ಹೆಗ್ಗಾಪುರ, ಕರಡೊಳ್ಳಿ, ಹುಲಗೋಡ, ಹುಣಶೆಟ್ಟಿಕೊಪ್ಪ, ಕಳಸೂರು ಭಾಗದಲ್ಲಿ ಆನೆಗಳ ಹಾವಳಿ ನಿರಂತರವಾಗಿದೆ.
‘5 ಎಕರೆ ಪ್ರದೇಶದಲ್ಲಿ ಗೋವಿನ ಜೋಳ ಬೆಳೆದಿದ್ದೆ. ಆನೆದಾಳಿಗೆ ಸಂಪೂರ್ಣ ಬೆಳೆ ಹಾನಿಯಾಗಿದೆ’ ಎನ್ನುತ್ತಾರೆ ಹೆಗ್ಗಾಪುರದ ರೈತ ಮೋಹನ ಕೃಷ್ಣ ದೇಸಾಯಿ.
‘ಜೋಳ, ಕಬ್ಬು, ಭತ್ತ ಹೆಚ್ಚಾಗಿ ಬೆಳೆಯಲಾಗುತ್ತಿದ್ದು ಆನೆ ದಾಳಿಯಾಗದಂತೆ ಶಾಶ್ವತ ಪರಿಹಾರ ಕ್ರಮ ಆಗಬೇಕಿದೆ. ಬೆಳೆಹಾನಿಗೆ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು. ಈ ಪ್ರದೇಶದಲ್ಲಿ 9-10 ಆನೆಗಳ ಹಿಂಡು ಸಂಚರಿಸುತ್ತಿದ್ದು ಅವುಗಳನ್ನು ಸ್ಥಳಾಂತರಿಸಬೇಕು’ ಎಂಬುದಾಗಿ ಗ್ರಾಮದೇವಿ ಸಹಕಾರ ಸಂಘದ ಅಧ್ಯಕ್ಷ ಮಹೇಶ ಕೃಷ್ಣ ದೇಸಾಯಿ ಆಗ್ರಹಿಸುತ್ತಾರೆ.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 50ಕ್ಕೂ ಹೆಚ್ಚು ಕೆರೆಗಳಿವೆ. ಆದರೆ ಬೇಸಿಗೆಯ ಅವಧಿಯಲ್ಲಿ ಇಲ್ಲಿನ ಹೆಚ್ಚಿನ ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ಇದೆ. ಮದನೂರು ಗ್ರಾಮದ ತಾವರಕಟ್ಟಾ ಮತ್ತು ಹುಣಶೆಟ್ಟಿಕೊಪ್ಪ ಕೆರೆಗಳ ಹೂಳೆತ್ತುವ ಕೆಲಸ ನಡೆದಿದ್ದು ಈ ಭಾಗದ ಎಲ್ಲ ಕೆರೆಗಳ ಹೂಳೆತ್ತುವ ಮೂಲಕ ಅಂತರ್ಜಲ ಹೆಚ್ಚಿಸಬೇಕು ಎಂಬುದು ಜನರ ಆಗ್ರಹ.
‘ಹಳ್ಳಿಗಳ ನಡುವೆ ದೂರದ ಅಂತರ ಇರುವುದರಿಂದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಅಗತ್ಯ. ಸರ್ಕಾರ ನೀಡುತ್ತಿರುವ ಅನುದಾನ ಎಲ್ಲಿಯೂ ಸಾಕಾಗದು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ವಾರ್ಷಿಕ ₹2-3 ಕೋಟಿ ವ್ಯಯಿಸಲಾಗುತ್ತಿದೆ. ವಸತಿ ರಹಿತರಿಗೆ ವಿವಿಧ ಯೋಜನೆಯಲ್ಲಿ 270ಕ್ಕೂ ಅಧಿಕ ಮನೆ ನೀಡಲಾಗಿದೆ. ಆನೆ ದಾಳಿ ತಡೆಯುವ ನಿಟ್ಟಿನಲ್ಲಿ ಅರಣ್ಯದ ಸುತ್ತ ಐಬೆಕ್ಸ್ ಬೇಲಿ ನಿರ್ಮಿಸಬೇಕು. ಹೆಗ್ಗಾಪುರ ರಸ್ತೆ, ಕಳಸೂರು-ಭದ್ರಾಪುರ ರಸ್ತೆ, ಡೋಮಗೇರಿ-ಧೂಳಿಕೊಪ್ಪ ರಸ್ತೆ ಅಭಿವೃದ್ಧಿ ಆಗಬೇಕಿದೆ’ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ ಗಣಪತಿ ತಿನೇಕರ.
ಹುಣಶೆಟ್ಟಿಕೊಪ್ಪದಲ್ಲಿ ಸೂಕ್ತ ಸ್ಥಳ ಗುರುತಿಸಿ ಸ್ವಂತ ಕಟ್ಟಡದಲ್ಲಿ ಹೈಸ್ಕೂಲ್ ಕಾರ್ಯನಿರ್ವಹಿಸಬೇಕಿದೆ. ಕಾಡಾನೆಗಳ ಹಾವಳಿ ತಡೆಗೆ ಶಾಶ್ವತ ಕ್ರಮವಾಗಬೇಕುರಾಜೇಶ ಗಣಪತಿ ತಿನೇಕರ ಮದನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ
‘ಅಲ್ಕೇರಿ ಗೌಳಿವಾಡಾ ಮಂಗ್ಯಾನತಾವರಗೆರೆ ಹುಣಶೆಟ್ಟಿಕೊಪ್ಪ ಸುತ್ತಮುತ್ತಲ ಭಾಗದ ವಿದ್ಯಾರ್ಥಿಗಳು ಇದುವರೆಗೂ 4-5 ಕಿ.ಮೀ ನಡೆದು ಕಿರವತ್ತಿ ಪ್ರೌಢಶಾಲೆಗೆ ಹೋಗಬೇಕಿತ್ತು. ಆದರೆ ಈಚೆಗೆ ಶೂನ್ಯ ದಾಖಲಾತಿ ಕಾರಣ ರದ್ದಾದ ಕಳಚೆ ಪ್ರೌಢಶಾಲೆಯನ್ನು ಹುಣಶೆಟ್ಟಿಕೊಪ್ಪದ ಪ್ರಾಥಮಿಕ ಶಾಲೆಗೆ ಸ್ಥಳಾಂತರಿಸಲಾಗಿದೆ.
ಇದರಿಂದ ಕರಡೊಳ್ಳಿ ಕಳಸೂರು ಹುಲಗೋಡ ಬಸಳೇಬೈಲ್ ಖಂಡ್ರನಕೊಪ್ಪ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಯಲ್ಲಾಪುರ-ಹೊಸಳ್ಳಿ-ಬೈಲಂದೂರು ಬಸ್‍ಗೆ ಅಲ್ಕೇರಿ ಗೌಳಿವಾಡ ಕ್ರಾಸ್‌ನಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಬೇಕು. ಈ ಭಾಗಕ್ಕೆ ಬಸ್ ಸಂಚಾರ ಹೆಚ್ಚಿಸಬೇಕು’ ಎನ್ನುತ್ತಾರೆ ಸ್ಥಳೀಯರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.