ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುಂಡಗೋಡ | ಇಳುವರಿ ಕುಂಠಿತದ ಜೊತೆ ದರವೂ ಕುಸಿತ: ಬೆಳೆಗಾರರಿಗೆ ಸಿಹಿ ಆಗದ ಮಾವು

Published 18 ಮೇ 2024, 6:32 IST
Last Updated 18 ಮೇ 2024, 6:32 IST
ಅಕ್ಷರ ಗಾತ್ರ

ಮುಂಡಗೋಡ: ಮಳೆಯ ಕೊರತೆ, ನಿರೀಕ್ಷೆಯಂತೆ ಬಿಡದ ಹೂವು, ಮಾರುಕಟ್ಟೆಯಲ್ಲಿ ದರ ಕುಸಿತ ಈ ಎಲ್ಲವುಗಳಿಂದ ಹಣ್ಣುಗಳ ರಾಜ ಮಾವು, ಬೆಳೆಗಾರರಿಗೆ ಸಿಹಿ ನೀಡದೇ ಕಹಿಯಾಗಿ ಪರಿಣಮಿಸಿದೆ. ಇಳುವರಿ ಕುಂಠಿತದ ಜೊತೆಗೆ ದರ ಕುಸಿತವೂ ಮಾವು ಬೆಳೆಗಾರರ ಆತಂಕ ಇಮ್ಮಡಿಗೊಳಿಸಿದೆ.

ತಾಲ್ಲೂಕಿನ ಪಾಳಾ ಹೋಬಳಿಯಲ್ಲಿ ಬೆಳೆಯುವ ಆಪೂಸ್‌ ಮಾವು ಮುಂಬಯಿ, ಹುಬ್ಬಳ್ಳಿ, ಶಿರಸಿ ಮಾರುಕಟ್ಟೆಗೆ ಪೂರೈಕೆಯಾಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಸಲ ಮಾವು ಶೇ 30ರಷ್ಟು ಇಳುವರಿಯಲ್ಲಿ ಕುಂಠಿತವಾಗಿದೆ ಎಂದು ರೈತರು ಹೇಳುತ್ತಾರೆ. ಈಚಿನ ವರ್ಷಗಳಲ್ಲಿ ತಾಲ್ಲೂಕಿನಲ್ಲಿ ಅಡಿಕೆ ಬೆಳೆ ಮಾವು ಕ್ಷೇತ್ರವನ್ನು ಹೆಚ್ಚು ವ್ಯಾಪಿಸುತ್ತಿದೆ. ಮಾವಿನ ಬೆಳೆ ಕಡಿಮೆಯಾಗಲು ಇದೂ ಒಂದು ಕಾರಣವಾಗುತ್ತಿದೆ. ಸಾಂಪ್ರದಾಯಿಕ ಬೆಳೆಗಾರರು ಮಾತ್ರ, ಮಾವಿನ ತೋಟವನ್ನು ನಿರ್ವಹಿಸುತ್ತ ಬಂದರೂ, ಮಾರುಕಟ್ಟೆಯ ಸಮಸ್ಯೆ ವರ್ಷದಿಂದ ವರ್ಷಕ್ಕೆ ಜಟಿಲವಾಗುತ್ತಿದೆ. ಸಗಟು ವ್ಯಾಪಾರಿಗಳು ಕೇಳುವ ದರಕ್ಕೇ ಮಾವು ಮಾರಬೇಕಾದ ಅನಿವಾರ್ಯತೆ ಬೆಳೆಗಾರರನ್ನು ಬೆಂಬಿಡದೇ ಕಾಡುತ್ತಿದೆ. ಇದರಿಂದ ಮಾವು ರೈತರ ಕೈ ಹಿಡಿಯುತ್ತಿಲ್ಲ ಎಂದು ರೈತರು ಅಸಹಾಯಕತೆಯಿಂದ ಹೇಳುತ್ತಾರೆ.

ಸಾಮಾನ್ಯವಾಗಿ ಏಪ್ರಿಲ್‌ ತಿಂಗಳಲ್ಲಿಯೇ ಮಾವು ತಾಲ್ಲೂಕಿನ ಮಾರುಕಟ್ಟೆಯಲ್ಲಿ ಘಮಘಮಿಸುತ್ತಿತ್ತು. ರಾಜ್ಯ ಹೆದ್ದಾರಿಯ ಪಕ್ಕ, ಮಾಗಿದ ಹಣ್ಣು ಮಾರುವರ ಸಂಖ್ಯೆ ನಿತ್ಯವೂ ಕಾಣುತ್ತಿತ್ತು. ಮಾಗಿದ ಹಣ್ಣು ಸಿಗುವುದು ಈಗ ಅಪರೂಪ ಎಂಬಂತಾಗಿದೆ. ಹವಾಮಾನ ವೈಪರೀತ್ಯದಿಂದ ಮಾವಿನ ಗಿಡಗಳು ಹೂಗಳಿಂದ ಸಿಂಗಾರಗೊಳ್ಳಲು ತುಸು ಹಿನ್ನಡೆಯಾಗಿದೆ. ಸಿಂಗಾರಗೊಂಡ ಹೂವು ಅರ್ಧದಷ್ಟು ಮೊದಲೇ ಉದುರಿ ಬಿದ್ದಿದೆ. ಇದು ಕಡಿಮೆ ಇಳುವರಿಗೆ ಕಾರಣವಾಗಿ ಮಾವು ಬೆಳೆಗಾರರಿಗೆ ಆರಂಭದಲ್ಲಿಯೇ ಹೊಡೆತ ನೀಡಿತ್ತು.

‘ಕಳೆದ ವರ್ಷಕ್ಕೆ ಹೋಲಿಸಿದರೆ ಮಾವಿನ ಇಳುವರಿ ಅರ್ಧದಷ್ಟು ಕಡಿಮೆ ಬಂದಿದೆ ಎಂದರೂ ತಪ್ಪಾಗಲಿಕ್ಕಿಲ್ಲ. ಹೋದ ವರ್ಷ ಆರಂಭದಲ್ಲಿಯೇ ಪ್ರತಿ ಕೆ.ಜಿಗೆ ₹ 190-200ರಂತೆ ಆಪೂಸ್‌ ಸೇರಿದಂತೆ ಗುಣಮಟ್ಟದ ಮಾವು ಖರೀದಿಯಾಗಿತ್ತು. ಆದರೆ, ಈ ವರ್ಷ ₹ 100- ₹ 110ರ ಆಸುಪಾಸಿನಲ್ಲಿಯೇ ಬಿಕರಿ ಆಗುತ್ತಿದೆ. ಕಡಿಮೆ ಇಳುವರಿ ಬಂದರೆ, ಸಹಜವಾಗಿ ಮಾರುಕಟ್ಟೆಯಲ್ಲಿ ದರ ಏರಬೇಕಿತ್ತು. ಆದರೆ, ಇಳುವರಿ ಹಾಗೂ ದರ ಎರಡರಲ್ಲಿಯೂ ಹೊಡೆತ ನೀಡಿದೆ. ಇದರಿಂದ ಈ ವರ್ಷ ಮಾವು ರೈತರಿಗೆ ಲಾಭದಾಯಕ ಆಗಿಲ್ಲ ಎನ್ನುತ್ತಾರೆ ಮಾವು ಬೆಳೆಗಾರ ಶಿವಕುಮಾರ ಪಾಟೀಲ.

‘ಇದೇ ಮೊದಲ ಬಾರಿಗೆ ಮಾವಿಗೆ ಬೆಳೆ ವಿಮೆ ಕಂತು ತುಂಬಲಾಗಿದೆ. ಇಳುವರಿ ಕುಂಠಿತಗೊಂಡಿರುವುದರಿಂದ ವಿಮೆ ಹಣ ಬರುವ ನಿರೀಕ್ಷೆಯಿದೆ. ಜ್ಯೂಸ್‌ ತಯಾರಿಕೆಗೂ ಪಾಳಾ ಸುತ್ತಮುತ್ತಲಿನ ಮಾವು ಸರಬರಾಜು ಆಗುತ್ತದೆ. ಕಳೆದ ವರ್ಷಕ್ಕಿಂತ ಪ್ರತಿ ಕೆ.ಜಿ.ಗೆ ₹ 10 ಕಡಿಮೆಯಂತೆ ಖರೀದಿ ಪ್ರಕ್ರಿಯೆ ನಡೆದಿದೆ. ಮಳೆ ಬಿದ್ದರೆ ದರ ಮತ್ತಷ್ಟು ಕುಸಿಯುವ ಸಾಧ್ಯತೆಯಿದೆ’ ಎಂದು ಅವರು ಹೇಳಿದರು.

ಇಳುವರಿ ಶೇ 20ರಷ್ಟು ಕಡಿಮೆ
‘ತಾಲ್ಲೂಕಿನಲ್ಲಿ 548 ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆಯಾಗುತ್ತದೆ. ಈ ವರ್ಷ ಹೂವು ಬಿಡುವ ಅವಧಿ ತಡವಾಗಿದ್ದರಿಂದ ಮಾರುಕಟ್ಟೆಗೆ ಮಾವು ಬರಲು ತಡವಾಗಿದೆ. ಇಳುವರಿಯೂ ಶೇ 15ರಿಂದ 20ರಷ್ಟು ಕಡಿಮೆ ಆಗಿದೆ. ಬೇರೆ ಮಾರುಕಟ್ಟೆಗಳಲ್ಲಿ ಮಾವು ಮೊದಲೇ ಬಂದಿದ್ದರಿಂದ ತಾಲ್ಲೂಕಿನಲ್ಲಿ ದರ ಕುಸಿತ ಆಗಿರಬಹುದು. ಮೊದಲ ಬಾರಿಗೆ ಮಾವು ಬೆಳೆಗೆ ವಿಮೆ ಮಾಡಿಸಲಾಗಿದ್ದು, ಹವಾಮಾನ ಆಧಾರಿತವಾಗಿ ಬೆಳೆ ವಿಮೆ ಪರಿಹಾರ ಬರಲಿದೆ’ ಎಂದು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಕೃಷ್ಣ ಕುಳ್ಳೂರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT