ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳಚರಂಡಿ ಕಾಮಗಾರಿ ವಿಳಂಬ

ಜಿಲ್ಲಾ ಮಟ್ಟದ ಪ್ರಗತಿಪರಿಶೀಲನಾ ಸಭೆ: ನಗರಾಭಿವೃದ್ಧಿ ಸಚಿವ ಬಸವರಾಜ ಅಸಮಾಧಾನ
Last Updated 3 ಮಾರ್ಚ್ 2021, 3:03 IST
ಅಕ್ಷರ ಗಾತ್ರ

ಕುಮಟಾ: ‘ಪಟ್ಟಣದ ಒಳ ಚರಂಡಿ ಯೋಜನೆಯ ಕಾಮಗಾರಿಯನ್ನು ನೀವೆಲ್ಲ ಅಧಿಕಾರಿಗಳು ಸೇರಿ ಹತ್ತು ವರ್ಷಗಳಿಂದ ಮುಗಿಸುತ್ತಿಲ್ಲ ಎಂದಾದರೆ ಈ ಇಲಾಖೆಯ ಸಚಿವನಾಗಿ ನಾನ್ಯಾಕೆ ಇರಲಿ?' ಎಂದು ಮಂಗಳವಾರ ಕುಮಟಾದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಗತಿಪರಿಶೀಲನಾ ಸಭೆಯಲ್ಲಿ ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ ತರಾಟೆಗೆ ತೆಗೆದುಕೊಂಡರು.

`ಕಾರವಾರದ ನೌಕಾ ನೆಲೆಯಿಂದ ಅಂಕೋಲಾದ ಹಳ್ಳಿಗಳಿಗೆ ನೀರು ಸರಬರಾಜು ಯೋಜನೆ ಅನುಷ್ಠಾನ ಯಾಕೆ ವಿಳಂಬ ಮಾಡುತ್ತಿದ್ದೀರಿ? ಜಿಲ್ಲಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಈ ಕೆಲಸಕ್ಕೆ ಆದ್ಯತೆ ನೀಡಬೇಕು' ಎಂದರು.

ಸಚಿವ ಶಿವರಾಂ ಹೆಬ್ಬಾರ, ಆ ಭಾಗದ ಜನರು ಕೈಗಾ, ಕೊಂಕಣ ರೈಲ್ವೆ, ರಾಷ್ಟ್ರೀಯ ಹೆದ್ದಾರಿ, ಸೀ ಬರ್ಡ್ ಯೋಜನೆಗಳಿಗೆ ತ್ಯಾಗ ಮಾಡಿ ಆಕ್ರೋಶಭರಿತರಾಗಿದ್ದಾರೆ. ಅವರಿಗೆ ಕನಿಷ್ಠ ಕುಡಿಯುವ ನೀರು ಒದಗಿಸಲು ಇಷ್ಟು ವಿಳಂಬವಾದರೆ ಹೇಗೆ?' ಎಂದು ಪ್ರಶ್ನಿಸಿದರು.

ನಡುವೆ ಪ್ರವೇಶಿಸಿದ ಶಾಸಕ ದಿನಕರ ಶೆಟ್ಟಿ, ಕುಮಟಾದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯುತ್ತಿದೆ. ನೀವು ಕಾರವಾರ ವಿಷಯ ಚರ್ಚೆ ಮಾಡುವುದು ಎಷ್ಟು ಸರಿ? ಆ ಮೇಲೆ ಬೆಂಗಳೂರಿಗೆ ಹೋಗಲು ತಡವಾಗುತ್ತದೆ ಎಂದು ನಾಮಕಾವಸ್ಥೆ ಸಭೆ ನಡೆಸಿ ಗಡಿಬಿಡಿಯಲ್ಲಿ ಹೊರಟುಬಿಡುತ್ತೀರಿ. ಆದ್ದರಿಂದ ಮೊದಲು ಕುಮಟಾದ ಒಳ ಚರಂಡಿ ಕಾಮಗಾರಿ ಬಗ್ಗೆ ಚರ್ಚಿಸೋಣ ಎಂದರು.

ನನೆಗುದಿಗೆ ಬಿದ್ದಿರುವ ಕುಮಟಾ ಒಳಚರಂಡಿ ಕಾಮಗಾರಿ ಮತ್ತೆ ಆರಂಭವಾಗುತ್ತದೆಯೋ ಇಲ್ಲವೋ ಎನ್ನುವುದನ್ನು ಸ್ಪಷ್ಟವಾಗಿ ತಿಳಿಸಿ. ಒಳಚರಂಡಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕರೇ, ಮುಖ್ಯ ಎಂಜಿನಿಯರ್ ಅವರೇ ನಿಂತು ಹೋಗಿರುವ ಈ ಕಾಮಗಾರಿ ಬಗ್ಗೆ ನಿಮ್ಮ ಸಚಿವರಿಗೆ ಯಾಕೆ ಮಾಹಿತಿ ನೀಡುತ್ತಿಲ್ಲ ಹೇಳಿ? ಕಾಮಗಾರಿ ಮುಗಿಯದೆ ಗುತ್ತಿಗೆದಾರರಿಗೆ ಯಾಕೆ ಹಣ ಪಾವತಿ ಪಾವತಿಸಿದಿರಿ? ಎಂದು ಪ್ರಶ್ನಿಸಿದರು. ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವ ಬಸವರಾಜ, ಕಾಮಗಾರಿಗೆ ಮಂಜೂರಾದ ₹ 41 ಕೋಟಿಯಲ್ಲಿ ಈಗ ₹ 9 ಕೋಟಿ ಉಳಿದಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ಪಡೆದ ತಕ್ಷಣ ಪೊಲೀಸ್ ರಕ್ಷಣೆಯಲ್ಲಿ ಮಲಿನ ನೀರು ಶುದ್ಧೀಕರಣ ಘಟಕ ಕೆಲಸ ಮುಂದುವರಿಸಿ ಎಂದು ಸೂಚಿಸಿದರು.

ಪ್ರಭಾರಿ ನಗರ ಆಯುಕ್ತ ಆರ್.ಪಿ. ನಾಯ್ಕ, ಕಾರವಾರದ ಕೆಲ ಪ್ರದೇಶಗಳಲ್ಲಿ ಮಾತ್ರ ಒಳಚರಂಡಿ ಕಾಮಗಾರಿ ನಡೆದಿದೆ. ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಯಲ್ಲಿ ಸಿಬ್ಬಂದಿ ಕೊರತೆಯಿಂದ ಹೊಸ ಯೋಜನೆ ಅನುಷ್ಠಾನ ಸಾಧ್ಯವಾಗುತ್ತಿಲ್ಲ. ಸದ್ಯ ವೈಯಕ್ತಿಕ ನಿವೇಶನಗಳಿಗೆ ಅನುಮತಿ ಹಾಗೂ ಕೃಷಿಯೇತರ ಪರಿವರ್ತನೆ ಕಾರ್ಯವಷ್ಟೇ ಮಾಡುತ್ತಿದ್ದೇವೆ ಎಂದರು.

ಸಚಿವ ಬಸವರಾಜ ಮಾತನಾಡಿ, ಮುಂದಿನ ಕೆಲ ತಿಂಗಳ ನಂತರ ಮತ್ತೆ ಜಿಲ್ಲೆಗೆ ಭೇಟಿ ನೀಡುತ್ತೇನೆ. ಆಗ ಎಲ್ಲ ತಾಲ್ಲೂಕುಗಳ ಒಳಚರಂಡಿ ಕಾಮಗಾರಿ ಪ್ರಗತಿಯಲ್ಲಿರಬೇಕು. ಕಾರವಾರದಲ್ಲ್ಲಿ ಬಡಾವಣೆಗಳನ್ನು ನಿರ್ಮಿಸಿ ಜನರಿಗೆ ಹಂಚುವಂಥ ಯೋಜನೆಗಳು ಆರಂಭವಾದರೆ ಜನರಿಗೆ ತಮ್ಮ ಸ್ವಂತ ಮನೆಗಳ ಬಗ್ಗೆ ಭರವಸೆ ಹುಟ್ಟುತ್ತದೆ. ನಗರಾಭಿವೃದ್ಧಿ ಪ್ರಾಧಿಕಾರವೂ ಬೆಳೆಯುತ್ತದೆ. ಇದಕ್ಕೆ ಏನೇನು ಬೇಕು ಎಂದು ಯೋಜನೆ ತಯಾರಿಸಿ. ಕ್ಷೇತ್ರದ ಶಾಸಕರು, ಅಧಿಕಾರಿಗಳೊಂದಿಗೆ ಚರ್ಚಿಸೋಣ ಎಂದರು. ಸಚಿವ ಶಿವರಾಮ ಹೆಬ್ಬಾರ, ಮುಂಡಗೋಡದ ಪ್ರವಾಸಿ ಮಂದಿರ ಪಕ್ಕದ ಓವರ್ ಹೆಡ್ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಮಂಜೂರಾದ ₹ 1.5 ಕೋಟಿ ಮೊತ್ತ ಬೇಗ ಬಿಡುಗಡೆ ಮಾಡಿ ಎಂದರು.

ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಟಿ.ಎಚ್.ಎಂ ಕುಮಾರ, ಮುಖ್ಯ ಎಂಜಿನಿಯರ್ ಕೆ.ವಿ. ಶ್ರೀಕೇಶವ, ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್, ಕುಮಟಾ ಉಪವಿಭಾಗಾಧಿಕಾರಿ ಎಂ. ಅಜಿತ್, ಪುರಸಭೆ ಅಧ್ಯಕ್ಷೆ ಮೋಹಿನಿ ಗೌಡ, ಮುಖ್ಯಾಧಿಕಾರಿ ಎಂ.ಕೆ. ಸುರೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT