ಕಾರವಾರ: ‘ಕಳೆದ ಬೇಸಿಗೆಯಲ್ಲಿ ಜಿಲ್ಲೆಯಲ್ಲಿ ಟ್ಯಾಂಕರ್ ನೀರು ಪೂರೈಸಿದವರಿಗೆ ಲಕ್ಷಾಂತರ ಮೊತ್ತದ ಬಿಲ್ ಈವರೆಗೂ ಪಾವತಿಸಿಲ್ಲ. ಈಗ ಮತ್ತೆ ನೀರು ಪೂರೈಸುವ ಸ್ಥಿತಿ ಬಂದಿದ್ದು ಪರಿಸ್ಥಿತಿ ಹೇಗೆ ನಿಭಾಯಿಸುತ್ತೀರಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಇಲ್ಲಿನ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಜಿಲ್ಲೆಯ ಬರ ನಿರ್ವಹಣೆಯ ಪೂರ್ವಭಾವಿ ಸಭೆ ನಡೆಸಿದ ಅವರು ಲಕ್ಷಾಂತರ ಮೊತ್ತದ ಬಿಲ್ ಬಾಕಿ ಇರಿಸಿಕೊಂಡ ಹೊನ್ನಾವರ, ಭಟ್ಕಳ, ಕುಮಟಾ, ಅಂಕೋಲಾ ತಾಲ್ಲೂಕು ಪಂಚಾಯ್ತಿ ಇಒಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
‘1.42 ಕೋಟಿ ಬಿಲ್ ಪಾವತಿಸುವುದು ಬಾಕಿ ಇದೆ. ಸದ್ಯ ₹47 ಲಕ್ಷ ಬಿಡುಗಡೆಯಾಗಿದ್ದು ಅವುಗಳನ್ನು ಆಯಾ ತಾಲ್ಲೂಕುಗಳಿಗೆ ಹಂಚಿಕೆ ಮಾಡಲಾಗುವುದು. ಉಳಿದ ಮೊತ್ತಕ್ಕೆ ಜಿಲ್ಲಾ ಪಂಚಾಯ್ತಿ ಸಿಇಒ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದಾರೆ’ ಎಂದು ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಇಇ ಪ್ರಕಾಶ್ ತಿಳಿಸಿದರು.
‘ಕಳೆದ ವರ್ಷ ನೀರಿನ ಸಮಸ್ಯೆ ಇದ್ದ ಪ್ರದೇಶದಲ್ಲಿ ನೀರಿಗೆ ಅಗತ್ಯ ವ್ಯವಸ್ಥೆ ಆಗಿರಬೇಕು. ಪದೇ ಪದೇ ಟ್ಯಾಂಕರ್ ನೀರು ಪೂರೈಕೆ ಮಾಡುವ ಪ್ರಮೇಯ ಎದುರಾಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು. ಬಾಕಿ ಬಿಲ್ ಬಿಡುಗಡೆಗೆ ತ್ವರಿತ ಕ್ರಮಗಳಾಗಬೇಕು. ಜಲಮೂಲಗಳು ಬತ್ತಿದ ಪ್ರದೇಶಗಳಲ್ಲಿ ಕೊಳವೆ ಬಾವಿ ಕೊರೆಯಿಸಿ ನೀರು ಪೂರೈಕೆಗೆ ಕ್ರಮವಹಿಸಬೇಕು’ ಎಂದು ಸಚಿವರು ಸೂಚಿಸಿದರು.
‘ಜಿಲ್ಲೆಯಲ್ಲಿ ಶೇ 15 ರಷ್ಟು ಮಳೆ ಕೊರತೆ ಆಗಿದೆ. ಕುಡಿಯುವ ನೀರಿನ ಮೂಲಗಳ ಬಗ್ಗೆ ಅಧ್ಯಯನ ನಡೆಸಲು ಸೂಚಿಸಲಾಗಿದೆ. ಕೊಳವೆಬಾವಿ ಕೊರೆಯಿಸಲು ಅವಕಾಶ ಇಲ್ಲ. ಖಾಸಗಿ ಕೊಳವೆಬಾವಿ ಬಾಡಿಗೆ ಪಡೆಯಲು ಅವಕಾಶವಿದೆ. ತೀವ್ರ ಕೊರತೆ ಎದುರಾದರೆ ಗ್ರಾಮ ಪಂಚಾಯ್ತಿ ಪರವಾನಗಿ ಪಡೆದು ಪೈಪಲೈನ್ ಅಳವಡಿಸಬಹುದು ಎಂದು ಸೂಚನೆ ಇದೆ. ಮುಂಡಗೋಡಿನಲ್ಲಿ ಎರಡು ಕಡೆ ಕೊಳವೆಬಾವಿ ಬಾಡಿಗೆ ಪ್ರಸ್ತಾವ ಬಂದಿದೆ’ ಎಂದರು.
‘ಜಿಲ್ಲೆಯಲ್ಲಿ 86 ಖಾಸಗಿ ಕೊಳವೆಬಾವಿ ಗುರುತಿಸಿಟ್ಟುಕೊಳ್ಳಲಾಗಿದೆ. ಫೆಬ್ರವರಿ ಬಳಿಕ ನೀರಿನ ಕೊರತೆ ಎದುರಾಗುವ ಸಾಧ್ಯತೆ ಇದೆ. ಅದಕ್ಕಾಗಿ ತಯಾರಿ ಮಾಡಿಕೊಳ್ಳಲಾಗಿದೆ. 4,10,305 ಜಾನುವಾರುಗಳಿವೆ. 19,192 ಕುರಿಗಳಿವೆ. ಮೇವಿನ ಕೊರತೆ ಸದ್ಯಕ್ಕೆ ಎದುರಾಗುವ ಸಾಧ್ಯತೆ ಕಡಿಮೆ. ಫೆಬ್ರವರಿ ನಂತರ ಮೇವಿನ ಕೊರತೆ ಎದುರಾಗುವ ಸಾಧ್ಯತೆ ಇದೆ’ ಎಂದರು.
ಶಿರಸಿ ಶಾಸಕ ಭೀಮಣ್ಣ ನಾಯ್ಕ, ‘ಹಳೇಯ ಕೊಳವೆ ಬಾವಿಗಳಿದ್ದರೆ ಅವುಗಳನ್ನು ಪುನಶ್ಚೇತನಗೊಳಿಸಲು ಆದ್ಯತೆ ನೀಡಬೇಕು. ಪ್ರತಿ ಗ್ರಾಮದಲ್ಲಿ ಪರ್ಯಾಯ ಜಲಮೂಲ ಗುರುತಿಸಿಟ್ಟುಕೊಳ್ಳಬೇಕು’ ಎಂದು ಸೂಚಿಸಿದರು.
ಎಫ್.ಐ.ಡಿ ಪಟ್ಟಿಗೆ ಕೃಷಿಯೇತರ ಭೂಮಿ!
‘ಬರ ಪರಿಹಾರ ಸೇರಿದಂತೆ ಸರ್ಕಾರದ ಯಾವುದೇ ಯೋಜನೆಯ ಲಾಭ ಪಡೆಯಲು ರೈತರು ಎಫ್.ಐ.ಡಿ ನೋಂದಣಿ ಮಾಡುವುದು ಕಡ್ಡಾಯ. ಜಿಲ್ಲೆಯಲ್ಲಿ 6.48 ಲಕ್ಷ ಪ್ಲಾಟುಗಳಿವೆ. ಈ ಪೈಕಿ 3.68 ಲಕ್ಷ ಪ್ಲಾಟುಗಳಿಗೆ ಎಫ್.ಐ.ಡಿ ನೋಂದಣಿಯಾಗಿದೆ. 2.25 ಲಕ್ಷ ಬಾಕಿ ಇದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಹೊನ್ನಪ್ಪ ಗೌಡ ಮಾಹಿತಿ ನೀಡಿದರು. ‘ಎಫ್.ಐ.ಡಿ ನೋಂದಣಿ ಪಟ್ಟಿಯಲ್ಲಿರುವ ಪ್ಲಾಟುಗಳಲ್ಲಿ ಕೃಷಿಯೇತರ ಭೂಮಿಯಾಗಿ ಪರಿವರ್ತನೆಗೊಂಡಿರುವ ಜಾಗ 94ಸಿ 94ಸಿಸಿ ಅಡಿಯಲ್ಲಿ ಮಂಜೂರಾದ ಜಾಗವೂ ಸೇರಿಕೊಂಡಿದೆ. ಅವುಗಳ ಪ್ರತ್ಯೇಕ ಪಟ್ಟಿ ಮಾಡಲಾಗುತ್ತಿದೆ’ ಎಂದು ವಿವಿಧ ತಾಲ್ಲೂಕುಗಳ ತಹಶೀಲ್ದಾರರು ತಿಳಿಸಿದರು. ‘ಭೂಪರಿವರ್ತನೆ ಆದ ಜಾಗವನ್ನು ಪಹಣಿ ದಾಖಲೆಯಲ್ಲಿ ಇಟ್ಟುಕೊಂಡಿರುವುದು ಸರಿಯಲ್ಲ. ಪ್ರತಿ ಮನೆ ಮನೆ ಸರ್ವೆ ನಡೆಸಬೇಕು. ಬಿಟ್ಟು ಹೋದ ಜಾಗದ ಎಫ್.ಐ.ಡಿ ನೋಂದಣಿ ಮಾಡಬೇಕು. ಹದಿನೈದು ದಿನಗಳಲ್ಲಿ ಈ ಪ್ರಕ್ರಿಯೆಗಳು ಪೂರ್ಣಗೊಳ್ಳಬೇಕು’ ಎಂದು ಸಚಿವರು ಸೂಚಿಸಿದರು.
Cut-off box - ₹ 80 ಕೋಟಿ ಅಗತ್ಯವಿದೆ ‘ಜಿಲ್ಲೆಯಲ್ಲಿ ಬರ ಸ್ಥಿತಿಯಿಂದ ಉಂಟಾದ ಹಾನಿಗೆ ₹16.50 ಕೋಟಿ ಪರಿಹಾರವನ್ನು ಸರ್ಕಾರ ಈಗಾಗಲೆ ಬಿಡುಗಡೆ ಮಾಡಿದೆ. ಇನ್ನೂ ₹80 ಕೋಟಿಯಷ್ಟು ಮೊತ್ತದ ಅಗತ್ಯವಿದ್ದು ಅದನ್ನು ಶೀಘ್ರದಲ್ಲಿ ಬಿಡುಗಡೆ ಮಾಡುವ ವಿಶ್ವಾಸವಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು. ಸಭೆ ಬಳಿಕ ಮಾಧ್ಯಮದವರ ಜತೆ ಮಾತನಾಡಿದ ಅವರು ‘ಸಿ.ಎಂ ಡಿಸಿಎಂ ಒಂದೂವರೆ ತಿಂಗಳಿನಿಂದ ಬರ ಪರಿಸ್ಥಿತಿ ಅಧ್ಯಯನ ಮಾಡಿದ್ದಾರೆ. ಜನರಿಗೆ ಜಾನುವಾರುಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ’ ಎಂದರು. ‘ರಾಜ್ಯದಲ್ಲಿ 13 ಬಂದರುಗಳಲ್ಲಿ ಹೂಳು ತೆಗೆಯಬೇಕಾಗಿದೆ ಎಂದು ಪಟ್ಟಿ ಮಾಡಲಾಗಿದೆ. ಸಿಆರ್ ಝಡ್ ಅನುಮತಿ ಪಡೆಯಲು ಅಗತ್ಯ ಕ್ರಮವಹಿಸಲಾಗುವುದು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.