ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚುತ್ತಿರುವ ಮಂಗನಕಾಯಿಲೆ ಪ್ರಕರಣ: ಕಾರವಾರ, ಶಿರಸಿಯಲ್ಲಿ ಕೆ.ಎಫ್.ಡಿ ಲ್ಯಾಬ್!

ತುರ್ತು ಸ್ಪಂದನೆಗೆ ಯತ್ನ
Published 3 ಫೆಬ್ರುವರಿ 2024, 5:51 IST
Last Updated 3 ಫೆಬ್ರುವರಿ 2024, 5:51 IST
ಅಕ್ಷರ ಗಾತ್ರ

ಕಾರವಾರ: ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ 31 ಮಂಗನ ಕಾಯಿಲೆ (ಕೆ.ಎಫ್.ಡಿ) ಪ್ರಕರಣ ದೃಢಪಟ್ಟಿವೆ. ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಪ್ರಕರಣ ದಾಖಲಾಗಿರುವುದು ಆರೋಗ್ಯ ಇಲಾಖೆಯನ್ನು ಚಿಂತೆಗೆ ದೂಡಿದೆ. ರೋಗ ಪತ್ತೆ ತ್ವರಿತವಾಗಿಸುವ ನಿಟ್ಟಿನಲ್ಲಿ ಕಾರವಾರ ಮತ್ತು ಶಿರಸಿಯಲ್ಲಿ ಮಂಗನ ಕಾಯಿಲೆ ಪತ್ತೆ ಹಚ್ಚುವ ಪ್ರಯೋಗಾಲಯ ಸ್ಥಾಪನೆಗೆ ಪ್ರಸ್ತಾವ ಸಲ್ಲಿಕೆಯಾಗಿದೆ.

ಸದ್ಯ ಜಿಲ್ಲೆಯಿಂದ ಶಂಕಿತ ರೋಗಿಗಳ ರಕ್ತ ಮಾದರಿಯನ್ನು ಶಿವಮೊಗ್ಗದಲ್ಲಿರುವ ಕೆ.ಎಫ್.ಡಿ ಪ್ರಯೋಗಾಲಯಕ್ಕೆ ರವಾನಿಸಲಾಗುತ್ತಿದೆ. ಅದರ ಬದಲು ಕಾರವಾರದ ಕ್ರಿಮ್ಸ್ ಹಾಗೂ ಶಿರಸಿಯ ಪಂಡಿತ ಸಾರ್ವಜನಿಕ ಆಸ್ಪತ್ರೆಯಲ್ಲಿರುವ ಕೋವಿಡ್ ಪತ್ತೆ ಪ್ರಯೋಗಾಲಯದಲ್ಲಿಯೇ ಕೆ.ಎಫ್.ಡಿ ಪತ್ತೆ ಪ್ರಯೋಗಾಲಯ ಆರಂಭಕ್ಕೆ ಆರೋಗ್ಯ ಇಲಾಖೆ ಪ್ರಯತ್ನ ನಡೆಸಿದೆ.

‘ಕಳೆದ ಎರಡು ವರ್ಷದಿಂದ ಮಂಗನ ಕಾಯಿಲೆ ಪ್ರಕರಣಗಳು ಕಡಿಮೆ ಇದ್ದವು. ಈ ಬಾರಿ ಏಕಾಏಕಿ ಹೆಚ್ಚಳವಾಗಿವೆ. ಸಿದ್ದಾಪುರ ತಾಲ್ಲೂಕಿನ ಹಲಗೇರಿ ವ್ಯಾಪ್ತಿ, ಮತ್ತಿತರ ಕಡೆಗಳಲ್ಲಿ 31 ಪ್ರಕರಣಗಳು ವರದಿಯಾಗಿವೆ. ಸೋಂಕಿತರ ಸಂಖ್ಯೆ ಹೆಚ್ಚಳಕ್ಕೆ ತಡವಾಗಿ ಸೋಂಕು ಪತ್ತೆಯಾಗುತ್ತಿರುವುದೂ ಒಂದು ಕಾರಣ. ರೋಗವನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿದರೆ ನಿಯಂತ್ರಣ ಸಾಧ್ಯವಾಗಲಿದೆ. ಈ ಕಾರಣದಿಂದ ರಕ್ತ ಮಾದರಿ ಪರೀಕ್ಷೆಗೆ ಜಿಲ್ಲೆಯಲ್ಲಿಯೇ ಎರಡು ಪ್ರಯೋಗಾಲಯ ಆರಂಭಿಸಲು ಪುಣೆಯಲ್ಲಿರುವ ರಾಷ್ಟ್ರೀಯ ವೈರಾಣು ಸಂಸ್ಥೆಗೆ (ಎನ್.ಐ.ವಿ) ಅನುಮತಿ ಕೋರಲಾಗಿದೆ’ ಎಂದು ಹೊನ್ನಾವರದ ಕೆ.ಎಫ್.ಡಿ ಘಟಕದ ವೈದ್ಯಾಧಿಕಾರಿ ಡಾ.ಸತೀಶ ಶೇಟ್ ತಿಳಿಸಿದರು.

‘ಸೋಂಕಿತರೆಲ್ಲರ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ. ಗಂಭೀರ ಸ್ಥಿತಿಯಲ್ಲಿ ಯಾರೊಬ್ಬರೂ ಇಲ್ಲ. ಆದರೆ, ತಡವಾಗಿ ರೋಗಲಕ್ಷಣಗಳ ಬಗ್ಗೆ ಮಾಹಿತಿ ನೀಡುತ್ತಿರುವುದರಿಂದ ಸೋಂಕು ನಿಯಂತ್ರಣಕ್ಕೆ ಅಡ್ಡಿಯಾಗುತ್ತಿದೆ. ಸೋಂಕು ಪತ್ತೆಯಾದ ಗ್ರಾಮಗಳಲ್ಲಿ ನಿರಂತರವಾಗಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಸಂಜೆಯ ವೇಳೆಗೆ ಪ್ರತಿ ಗ್ರಾಮಗಳಲ್ಲಿ ಮಂಗನ ಕಾಯಿಲೆ ಕುರಿತ ಜಾಗೃತಿಗೆ ಕಿರುಚಿತ್ರ ಪ್ರದರ್ಶಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ’ ಎಂದೂ ಹೇಳಿದರು.

ಜಿಲ್ಲೆಯಲ್ಲಿಯೇ ಮಂಗನ ಕಾಯಿಲೆ ಪತ್ತೆಗೆ ಸುಸಜ್ಜಿತ ಪ್ರಯೋಗಾಲಯ ಆರಂಭಿಸುವ ಬಗ್ಗೆ ಆರೋಗ್ಯ ಇಲಾಖೆ ಸಚಿವರ ಜತೆಗೆ ಮಾತುಕತೆ ನಡೆಸಲಾಗುತ್ತಿದೆ.
–ಭೀಮಣ್ಣ ನಾಯ್ಕ ಶಾಸಕ

ಮನೆ ಬಾಗಿಲಿಗೆ ತೆರಳಿ ಸಮೀಕ್ಷೆ

‘ಮಂಗನ ಕಾಯಿಲೆ ಪ್ರಕರಣ ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು ಜ್ವರ ಇನ್ನಿತರ ರೋಗ ಲಕ್ಷಣ ಹೊಂದಿರುವವರನ್ನು ಪತ್ತೆ ಹಚ್ಚಲು ಸಿದ್ದಾಪುರ ತಾಲ್ಲೂಕಿನ ಹಲಗೇರಿ ಭಾಗ ಸೇರಿದಂತೆ ವಿವಿಧೆಡೆಗಳಲ್ಲಿ ಮನೆ ಮನೆಗೆ ಭೇಟಿ ನೀಡಿ ಆರೋಗ್ಯ ಸಮೀಕ್ಷೆ ನಡೆಸಲಾಗುತ್ತಿದೆ. ಇಲಾಖೆ ಸಿಬ್ಬಂದಿ ಆಶಾ ಕಾರ್ಯಕರ್ತೆಯರು ಸಂರಕ್ಷೆಯಲ್ಲಿ ಪಾಲ್ಗೊಂಡಿದ್ದಾರೆ. ಈಗಾಗಲೆ 11 ಸಾವಿರಕ್ಕೂ ಹೆಚ್ಚು ಮನೆಗಳಿಗೆ ಡಿ.ಎಂ.ಪಿ ತೈಲ ವಿತರಿಸಲಾಗಿದೆ. ಹಲಗೇರಿಯಲ್ಲಿ ದಿನದ ಇಪ್ಪತ್ನಾಲ್ಕು ತಾಸು ಕಾರ್ಯನಿರ್ವಹಿಸುವ ಆಂಬ್ಯುಲೆನ್ಸ್ ಇರಿಸಲಾಗಿದೆ. ಮಂಗನ ಕಾಯಿಲೆ ಹರಡಬಹುದಾದ ಜಿಲ್ಲೆಯ ಇತರ ಏಳು ತಾಲ್ಲೂಕುಗಳಲ್ಲಿಯೂ ಕಟ್ಟೆಚ್ಚರ ವಹಿಸಿದ್ದೇವೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ನೀರಜ್ ಬಿ.ವಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT