ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಲ್‍ಟ್ರಾಲ್ ಮೀನುಗಾರಿಕೆ ತಡೆಯಿರಿ: ಮೀನುಗಾರರ ಪ್ರತಿಭಟನೆ

ಜಿಲ್ಲಾಧಿಕಾರಿ ಕಚೇರಿ ಎದುರು ನಾಡದೋಣಿ ಮೀನುಗಾರರ ಪ್ರತಿಭಟನೆ: ಆಗ್ರಹ
Last Updated 11 ಜನವರಿ 2023, 14:00 IST
ಅಕ್ಷರ ಗಾತ್ರ

ಕಾರವಾರ: ಸರ್ಕಾರ ಬೆಳಕು ಮೀನುಗಾರಿಕೆ (ಲೈಟ್ ಫಿಶಿಂಗ್) ಹಾಗೂ ಬುಲ್‌ಟ್ರಾಲ್ ಮೀನುಗಾರಿಕೆ ನಿಷೇಧಿಸಿದ್ದರೂ ಅರಬ್ಬಿ ಕಡಲಿನಲ್ಲಿ ಅವೈಜ್ಞಾನಿಕ ಮೀನುಗಾರಿಕೆ ನಡೆಯುತ್ತಿದೆ ಎಂದು ಆರೋಪಿಸಿ ಬುಧವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಸಾಂಪ್ರದಾಯಿಕ ನಾಡದೋಣಿ ಮೀನುಗಾರರು, ಇಂತಹ ಮೀನುಗಾರಿಕೆ ತಡೆಗೆ ಕಠಿಣ ಕ್ರಮವಾಗಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಬಂದಿದ್ದ ಮೀನುಗಾರರು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾವಣೆಗೊಂಡರು. ಅವೈಜ್ಞಾನಿಕ ಮೀನುಗಾರಿಕೆ ನಿಯಂತ್ರಿಸಲು ಮೀನುಗಾರಿಕೆ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿ ಘೋಷಣೆಗಳನ್ನು ಕೂಗಿದರು.

ಮೀನುಗಾರರ ಸಮಸ್ಯೆ ಆಲಿಸಲು ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ ಭೇಟಿ ನೀಡಿದ್ದರು. ಆದರೆ ಜಿಲ್ಲಾಧಿಕಾರಿಯೇ ಸ್ಥಳಕ್ಕೆ ಬಂದು ಸಮಸ್ಯೆ ಆಲಿಸಬೇಕು ಎಂದು ಮೀನುಗಾರರು ಪಟ್ಟು ಹಿಡಿದರು. ಬಳಿಕ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಮನವಿ ಸ್ವೀಕರಿಸಿದರು.

ನಾಡದೋಣಿ ಮೀನುಗಾರರ ಪ್ರಮುಖ ನಾಗರಾಜ ಹರಿಕಂತ್ರ, ‘ಅನುಮತಿ ಇಲ್ಲದಿದ್ದರೂ ಪರ್ಸಿನ್ ಬೋಟ್‍ಗಳ ಮೂಲಕ ಬೆಳಕಿನ ಮೀನುಗಾರಿಕೆ ನಡೆಸಲಾಗುತ್ತಿದೆ. ಇದು ಮತ್ಸ್ಯ ಸಂಕುಲದ ಮೇಲೆ ಅಡ್ಡಿ ಪರಿಣಾಮ ಬೀರುತ್ತಿದೆ. ಸಾವಿರಾರು ನಾಡದೋಣಿ ಮೀನುಗಾರರು ಮತ್ಸ್ಯಕ್ಷಾಮದ ಸಮಸ್ಯೆ ಎದುರಿಸಲು ಅವೂಜ್ಞಾನಿಕ ಮೀನುಗಾರಿಕೆ ಕಾರಣವಾಗಿದೆ’ ಎಂದು ಆರೋಪಿಸಿದರು.

ದೇವರಾಯ ಸೈಲ್, ‘ನೆರೆಯ ಗೋವಾ, ಮಹಾರಾಷ್ಟ್ರ ವ್ಯಾಪ್ತಿಯ ಸಮು್ರದಲ್ಲೂ ಅವ್ಯಾಹತವಾಗಿ ಬೆಳಕಿನ ಮೀನುಗಾರಿಕೆ ನಡೆಯುತ್ತಿದೆ. ಕೆಲವರು ಜಿಲ್ಲೆಯ ಗಡಿ ವ್ಯಾಪ್ತಿಗೆ ಬಂದು ಮೀನುಗಾರಿಕೆ ನಡೆಸುತ್ತಿದ್ದಾರೆ. ಮರಿ, ಮೊಟ್ಟೆಗಳೂ ಅವೈಜ್ಞಾನಿಕ ಮೀನುಗಾರಿಕೆಯಿಂದ ನಾಶ ಹೊಂದುತ್ತಿದೆ’ ಎಂದು ದೂರಿದರು.

ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ‘ಶೀಘ್ರ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಮೀನುಗಾರರರ ಮುಖಂಡರ ಜಂಟಿ ಸಭೆ ನಡೆಸಲಾಗುವುದು. ನಿಷೇಧಿತ ಮೀನುಗಾರಿಕೆ ತಡೆಯಲು ಕಟ್ಟುನಿಟ್ಟಿನ ಕ್ರಮ ವಹಿಸಲಾಗುವುದು’ ಎಂದು ಭರವಸೆ ನೀಡಿದರು.

ನಾಡದೋಣಿ ಮೀನುಗಾರರಾದ ಗೌರೀಶ್ ಕುರ್ಲೆ, ಶಿವು ಹರಿಕಂತ್ರ, ಕೃಷ್ಣ ಹರಿಕಂತ್ರ, ರವಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT