ಭಾನುವಾರ, ಡಿಸೆಂಬರ್ 4, 2022
19 °C
ಕರಿಕಾನ ಪರಮೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ

ಹೊನ್ನಾವರ: ಪ್ರಕೃತಿ ಮಡಿಲಲ್ಲಿ ನವರಾತ್ರಿ ಸಂಭ್ರಮ

ಎಂ.ಜಿ.ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಹೊನ್ನಾವರ: ತಾಲ್ಲೂಕಿನ ಅರೆ ಅಂಗಡಿ ಸಮೀಪ ನೀಲ್ಕೋಡ ಗ್ರಾಮದಲ್ಲಿರುವ ಕರಿಕಾನ ಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿಯ ಸಂಭ್ರಮ ಗರಿಗೆದರಿದೆ. ನಿತ್ಯ ಸಾವಿರಾರು ಭಕ್ತರು ಸಾಲುಗಟ್ಟಿ ಇಲ್ಲಿಗೆ ಬರುತ್ತಿದ್ದಾರೆ.

ಸುಂದರ ಪ್ರಕೃತಿಯ ಮಡಿಲಲ್ಲಿ ದೇವಸ್ಥಾನವಿದೆ. ಅರೆ ಅಂಗಡಿಯಿಂದ 6 ಕಿ.ಮೀ. ದೂರದಲ್ಲಿರುವ ದೇವಸ್ಥಾನ ದಟ್ಟ ಅಡವಿಯಿಂದ ಆವೃತವಾಗಿದೆ. ಗುಡ್ಡದ ತುದಿಯಲ್ಲಿರುವ ದೇವಾಲಯದ ಪ್ರಾಂಗಣದಲ್ಲಿ ನಿಂತು ಕೆಳಭಾಗದ ಕಣಿವೆಯ ವೀಕ್ಷಣೆ ಒಂದು ಅಪೂರ್ವ ಆಧ್ಯಾತ್ಮಿಕ ಅನುಭವ ನೀಡುತ್ತದೆ. ಹೀಗಾಗಿಯೇ ಭಕ್ತರು, ಪ್ರಕೃತಿಯ ಆರಾಧಕರ ದಂಡೇ ಇಲ್ಲಿ ನೆರೆದಿರುತ್ತದೆ.

ದೇವಸ್ಥಾನಕ್ಕೆ ಸುಮಾರು 600 ವರ್ಷಗಳ ಐತಿಹ್ಯವಿದೆ. ಹೊನ್ನಾವರ ಸಮೀಪ ಅರಬ್ಬಿ ಸಮುದ್ರದಲ್ಲಿರುವ ಬಸವರಾಜದುರ್ಗ ದ್ವೀಪ, ದೇವಿಯ ಮೂಲ ಸ್ಥಾನ ಎನ್ನುವುದು ಐತಿಹ್ಯಗಳಲ್ಲೊಂದು. ನವಿಲಗೋಣದ ಅಮ್ನೋರರ್ಮನೆ ಭಟ್ಟರ ಮನೆತನದವರು ಆರಂಭದಲ್ಲಿ ಇಲ್ಲಿ ಪೂಜಾ ಕೈಂಕರ್ಯ ನಡೆಸುತ್ತಿದ್ದರು.

ಶ್ರೇಷ್ಠ ಯತಿವರ್ಯ ಎಂದು ಜನಮನ್ನಣೆ ಗಳಿಸಿರುವ ಶ್ರೀಧರ ಸ್ವಾಮೀಜಿ, 1956ರಲ್ಲಿ ಪ್ರಸ್ತುತ ದೇವಸ್ಥಾನವಿರುವ ಜಾಗಕ್ಕೆ ಭೇಟಿ ನೀಡಿ ದೇವಸ್ಥಾನದ ಜೀರ್ಣೋದ್ಧಾರ ಕೈಗೊಂಡರು ಎಂದು ದೇವಸ್ಥಾನದ ಕುರಿತಾಗಿ ಪ್ರಕಟಗೊಂಡಿರುವ ಪುಸ್ತಕದಲ್ಲಿ ಉಲ್ಲೇಖವಿದೆ.

‘ದುಷ್ಟರನ್ನು ಸಂಹರಿಸಿ ಶ್ರೀದೇವಿ ಶಿಷ್ಟರನ್ನು ಸಲಹಿದ ಹಲವು ದಂತಕಥೆಗಳು ದೇವಸ್ಥಾನದ ಕುರಿತಾಗಿ ಇದ್ದು ನಾಡಿನ ಉದ್ದಗಲದಲ್ಲಿ ದೇವಿಯ ಭಕ್ತರಿದ್ದಾರೆ’ ಎಂದು ಉಪನ್ಯಾಸಕ ಶ್ರೀಕಾಂತ ಭಟ್ಟ ತಿಳಿಸಿದರು.

ಕರಿಕಾನ ಪರಮೇಶ್ವರಿ ದೇವಸ್ಥಾನದಿಂದ ಅನತಿ ದೂರದಲ್ಲಿ ಹಸಿರು ಸಿರಿಯ ನಡುವೆ ವಂದಡಿಕೆ ಶಂಭುಲಿಂಗ ದೇವಸ್ಥಾನವಿದೆ. ಈ ಕಡೆ ದೇವರಿಗೆ ನವರಾತ್ರಿ ಸೇರಿದಂತೆ ವಿಶೇಷ ಸಂದರ್ಭಗಳಲ್ಲೆಲ್ಲ ಒಟ್ಟಿಗೆ ಪೂಜೆ ಪುನಸ್ಕಾರಗಳು ಸಲ್ಲುತ್ತಿವೆ.

ನವರಾತ್ರಿ ವಿಶೇಷ:

ನವಮಿಯವರೆಗೆ ಸಂಜೆ ಶರನ್ನವರಾತ್ರಿ ಪೂಜೆ ನಡೆಯುತ್ತದೆ. ದೇವಿ ಸನ್ನಿಧಿಯಲ್ಲಿ ಪ್ರತಿದಿನ ಚಂಡಿಹವನ ಜರುಗುವುದು. ಸೆ.30ರಂದು ವಿಶೇಷ ಪಂಚಾಮೃತ ಹಾಗೂ ಕ್ಷೀರಾಭಿಷೇಕ, ಅ.5ರಂದು ವಿದ್ಯಾದಶಮಿ ಉತ್ಸವ, ಕಲಶದಲ್ಲಿ ಶ್ರೀದೇವಿಯ ಆವಾಹನೆ, ಚಿಕ್ಕಳೋತ್ಸವ ನಡೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು