ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಂಕೋಲಾ | ನೂರಾರು ಮನೆಗಳಿಗೆ ಕಾಲುದಾರಿಯೇ ಆಸರೆ

ಕೇಣಿ ಮೇಲಿನ ಭಾಗ, ಕೋಮಾರಪಂತವಾಡಾ ಜನರಿಗೆ ಸಮಸ್ಯೆ
ಮೋಹನ ದುರ್ಗೇಕರ
Published 13 ಮಾರ್ಚ್ 2024, 4:54 IST
Last Updated 13 ಮಾರ್ಚ್ 2024, 4:54 IST
ಅಕ್ಷರ ಗಾತ್ರ

ಅಂಕೋಲಾ: ನೂರಕ್ಕೂ ಹೆಚ್ಚು ಮನೆಗಳಿದ್ದರೂ ತಾಲ್ಲೂಕಿನ ಭಾವಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೇಣಿ ಮೇಲಿನ ಭಾಗ, ಕೋಮಾರಪಂತವಾಡಾ ಗ್ರಾಮದ ಜನರು ಮುಖ್ಯ ರಸ್ತೆಯಿಂದ ಕಿ.ಮೀ ದೂರದ ವರೆಗೆ ಕಿರಿದಾದ ಕಾಲುದಾರಿಯಲ್ಲೇ ಸಾಗುವ ಅನಿವಾರ್ಯತೆ ಇದೆ. ವಾಹನಗಳಿದ್ದರೂ ಮನೆಯ ಬಾಗಿಲವರೆಗೆ ಅವು ತೆರಳುತ್ತಿಲ್ಲ.

ಗ್ರಾಮದಲ್ಲಿ ಯಾರಾದರೂ ಅನಾರೋಗ್ಯಕ್ಕೆ ತುತ್ತಾದರೆ ಅವರನ್ನು ಎತ್ತಿಕೊಂಡು ದೂರದಲ್ಲಿರುವ ಮುಖ್ಯ ರಸ್ತೆವರೆಗೆ ಸಾಗಬೇಕು. ಅಲ್ಲಿಂದ ವಾಹನದಲ್ಲಿ ಕರೆದೊಯ್ಯಬೇಕಾದ ಸ್ಥಿತಿ ಇದೆ. ಸುಸಜ್ಜಿತ ರಸ್ತೆಯನ್ನೇ ಕಾಣದೆ ಗ್ರಾಮಸ್ಥರು ನಿತ್ಯ ಪರದಾಟ ಪಡುತ್ತಿದ್ದಾರೆ. ಕೇಣಿ ಮೇಲಿನಬಾಗ, ಕೋಮಾರಪಂತ ವಾಡಾ ಗ್ರಾಮದಲ್ಲಿ 200ಕ್ಕೂ ಹೆಚ್ಚು ಮನೆಗಳಿದ್ದು, 450ಕ್ಕಿಂತ ಅಧಿಕ ಜನಸಂಖ್ಯೆ ಇದೆ.

‘ಗ್ರಾಮದಲ್ಲಿ ಮಕ್ಕಳಿಗಾಗಿ ಅಂಗನವಾಡಿ ಇದೆ. ಶಾಲೆಗೆ ಮಕ್ಕಳನ್ನು ಕರೆದುಕೊಂಡು ಹೋಗಲು ಸರಿಯಾದ ರಸ್ತೆಯಿಲ್ಲ. ಕಿರಿದಾದ ಗದ್ದೆಯ ದಾರಿಯಲ್ಲೆ ನಡೆದು ಸಾಗಬೇಕು. ಮಳೆಗಾಲ ಬಂತೆಂದರೆ ಗದ್ದೆಯಲ್ಲಿ ನೀರು ತುಂಬಿ ನಡೆದಾಡಲು ದಾರಿಯೆ ಇಲ್ಲದಂತಾಗುತ್ತದೆ. ಬಹಳ ಕಷ್ಟಪಟ್ಟು ದಾರಿಯಲ್ಲಿ ಸಾಗಬೇಕು. ಈ ಭಾಗದಲ್ಲಿ ಯಾರಾದರು ಸಾವಿಗೀಡಾದರೆ, ಶವ ಸಂಸ್ಕಾರಕ್ಕಾಗಿ ಶವವನ್ನು ಹೊತ್ತು ಹೋಗಲು ಕಷ್ಟಪಡಬೇಕಾಗುತ್ತದೆ’ ಎಂದು ಸಮಸ್ಯೆ ಬಗ್ಗೆ ವಿವರಿಸಿದರು ಗ್ರಾಮಸ್ಥೆ ವಿಮಲಾ.

‘ಬಿರು ಬೇಸಿಗೆ ಆರಂಭಗೊಳ್ಳುವ ಮುನ್ನವೇ ನೀರಿನ ಸಮಸ್ಯೆ ತಲೆದೋರಿದೆ. ಗ್ರಾಮ ಪಂಚಾಯಿತಿಯಿಂದ ನೀರು ಸರಬರಾಜಿಗೆ ಅಳವಡಿಸಿದ್ದ ಪೈಪ್‍ಲೈನ್ ಮೂಲಕ ಆರಂಭದ ಕೆಲ ದಿನ ನೀರು ಹರಿದಿತ್ತು. ಯೋಜನೆ ಅಡಿಯಲ್ಲಿ ಪೈಪ್‍ಲೈನ್ ಮುಖಾಂತರ ನೀರಿನ ಸರಬರಾಜು ಮಾಡಲಾಗಿತ್ತಾದರೂ ಅದು ಒಂದೇ ವರ್ಷಕ್ಕೆ ಮಾತ್ರ ಸೀಮಿತವಾಗಿದೆ. ಪೈಪ್ ಪದೇ ಪದೇ ಕೆಟ್ಟುಹೋದರೂ ಅದನ್ನು ದುರಸ್ತಿ ಮಾಡಿಲ್ಲ’ ಎಂದು ಗ್ರಾಮಸ್ಥರು ದೂರುತ್ತಾರೆ.

‘ಗ್ರಾಮದ ಅಂಚಿನಲ್ಲಿ ಹರಿದಿರುವ ಹಳ್ಳದಲ್ಲಿ ಉಪ್ಪುನೀರು ಹರಿವು ಹೆಚ್ಚಿದೆ. ಬೇಸಿಗೆಯಲ್ಲಿ ಅಕ್ಕಪಕ್ಕದಲ್ಲಿರುವ ಜಲಮೂಲಗಳಿಗೂ ಸೇರಿ ನೀರು ಸವುಳಾಗುತ್ತದೆ. ಕುಡಿಯಲು ನೀರು ಸಿಗದೆ ಪರದಾಡುತ್ತಿದ್ದೇವೆ’ ಎಂದೂ ಹೇಳುತ್ತಾರೆ.

ಗ್ರಾಮಕ್ಕೆ ಹಲವಾರು ಬಾರಿ ರಸ್ತೆ ನಿರ್ಮಿಸಲು ಪ್ರಯತ್ನಿಸಲಾಗಿದೆ. ಖಾಸಗಿ ಜಮೀನಿನ ಮೂಲಕ ಹಾದುಹೋಗಬೇಕಿರುವುದರಿಂದ ಸಮಸ್ಯೆ ಇದೆ
ಮಾದೇವ ಗೌಡ ಭಾವಿಕೇರಿ, ಗ್ರಾ.ಪಂ ಪಿಡಿಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT