ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ| ಶಾಸಕ ಸುನೀಲ್ ನಾಯ್ಕಗೆ ಟಿಕೆಟ್ ನೀಡಬಾರದು: ಬಿಜೆಪಿ ಕಾರ್ಯಕರ್ತರ ಆಗ್ರಹ

ಹೊನ್ನಾವರ, ಭಟ್ಕಳದ ಬಿಜೆಪಿ ಕಾರ್ಯಕರ್ತರ ಆಗ್ರಹ
Last Updated 19 ಮಾರ್ಚ್ 2023, 13:58 IST
ಅಕ್ಷರ ಗಾತ್ರ

ಕಾರವಾರ: ‘ಬಿಜೆಪಿ ಸಿದ್ಧಾಂತಕ್ಕೆ ಬದ್ಧರಾಗಿರದೆ ಸ್ವಜನ ಪಕ್ಷಪಾತ, ಬಿಜೆಪಿ ಮೂಲ ಕಾರ್ಯಕರ್ತರ ತೇಜೋವಧೆಯಲ್ಲಿ ತೊಡಗಿರುವ ಭಟ್ಕಳ ಶಾಸಕ ಸುನೀಲ್ ನಾಯ್ಕಗೆ ಮುಂಬರುವ ಚುನಾವಣೆಯಲ್ಲಿ ಟಿಕೆಟ್ ನೀಡಬಾರದು’ ಎಂದು ಭಟ್ಕಳದ ಬಿಜೆಪಿ ಕಾರ್ಯಕರ್ತ ಶಂಕರ ನಾಯ್ಕ ಹೇಳಿದರು.

‘ತನ್ನ ತಪ್ಪುಗಳನ್ನು ಹುಡುಕಿ ಹೇಳಿದ ಬಿಜೆಪಿ ಮೂಲ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಜಾಲತಾಣದ ಮೂಲಕ ಕಾರ್ಯಕರ್ತರ ತೇಜೋವಧೆ ಮಾಡುತ್ತಿದ್ದಾರೆ. ಕಾರ್ಯಕರ್ತರ ಅಹವಾಲು ಆಲಿಸದೆ ಅನ್ಯ ಪಕ್ಷದ ಮುಖಂಡರಿಗೆ ಹೆಚ್ಚು ಒತ್ತು ನೀಡುತ್ತಿರುವ ಸುನೀಲ್‍ಗೆ ಸ್ಪರ್ಧೆಗೆ ಅವಕಾಶ ನೀಡಿದರೆ ಪಕ್ಷದ ವಿರುದ್ಧ ಕೆಲಸ ಮಾಡುವ ಅನಿವಾರ್ಯತೆ ಎದುರಾಗಲಿದೆ’ ಎಂದು ಭಾನುವಾರ ಸುದ್ದಿಗೋಷ್ಠಿ ನಡೆಸಿ ಎಚ್ಚರಿಸಿದರು.

‘ಅಧಿಕಾರದ ಆಸೆಗೆ ಬೇರೆ ಪಕ್ಷದಿಂದ ವಲಸೆ ಬಂದಿದ್ದ ಸುನೀಲ ನಾಯ್ಕಗೆ ಬಿಜೆಪಿ ಸಿದ್ದಾಂತ ಅರಿಯಲು ಆಗಿಲ್ಲ. ಬಿಜೆಪಿ ಮೂಲ ಕಾರ್ಯಕರ್ತರ ಅಹವಾಲು ಆಲಿಸುತ್ತಿಲ್ಲ. ಅವರು ಶಾಸಕ ಸ್ಥಾನಕ್ಕೆ ಯೋಗ್ಯವಲ್ಲದ ವ್ಯಕ್ತಿ. ಬಿಜೆಪಿ ಸದಸ್ಯರಾಗಲೂ ಅರ್ಹರಲ್ಲ’ ಎಂದರು.

‘ತಂಜೀಮ್ ಮುಖಂಡರ ಜತೆ ಸುನೀಲ್ ಔತಣಕೂಟ ಮಾಡಿರುವ ಚಿತ್ರಗಳು ಹರಿದಾಡುತ್ತಿದೆ. ತಂಜೀಮ್ ಜತೆಗಿನ ಸಂಬಂಧದ ಬಗ್ಗೆ ಸುನೀಲ್ ಸ್ಪಷ್ಟಪಡಿಸಬೇಕು. ಸಿ.ಟಿ. ರವಿ ಅವರನ್ನು ತೇಜೋವಧೆ ಮಾಡುವ ದುರುದ್ದೇಶದೊಂದಿಗೆ ತಂಜೀಮ್ ಸುಪಾರಿ ಪಡೆದು ಮಾಂಸದೂಟ ಮಾಡಿಸಿ ದೇವಸ್ಥಾನಕ್ಕೆ ಕರೆದೊಯ್ದಿದ್ದಾರೆ. ಸಿ.ಟಿ. ರವಿಗೆ ಊಟ ಮಾಡಿದ್ದು ಹಲಾಲ್ ಕಟ್ ಮಾಂಸದ ಊಟ. ಇದನ್ನು ಸುನೀಲ್ ಉದ್ದೇಶಪೂರ್ವಕವಾಗಿಯೇ ಮಾಡಿಸಿದ್ದು’ ಎಂದು ಆರೋಪಿಸಿದರು.

ಶಂಕರ ನಾಯ್ಕ ಹೊನ್ನಾವರ, ನಾಗೇಶ ನಾಯ್ಕ, ರಮೇಶ ನಾಯ್ಕ, ಕೃಷ್ಣ ನಾಯ್ಕ ಬಲಸೆ, ವಿನೋದ ಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT