ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರವಾರ ‌| ಎಚ್ಚರಿಕೆ ಗಂಟೆ ಬಾರಿಸುತ್ತಿವೆ ಹಳೆ ಸೇತುವೆ

ಉತ್ತರ ಕನ್ನಡದಲ್ಲಿ 40 ವರ್ಷ ಮೇಲ್ಪಟ್ಟ ಸೇತುವೆಗಳ ಸಂಖ್ಯೆ ಅಧಿಕ
Published : 12 ಆಗಸ್ಟ್ 2024, 5:53 IST
Last Updated : 12 ಆಗಸ್ಟ್ 2024, 5:53 IST
ಫಾಲೋ ಮಾಡಿ
Comments

ಕಾರವಾರ: ಇಲ್ಲಿನ ಕೋಡಿಬಾಗದ ಕಾಳಿ ಸೇತುವೆ ಕುಸಿದು ಬಿದ್ದಿರುವ ಬೆನ್ನಲ್ಲೆ ಜಿಲ್ಲೆಯಲ್ಲಿರುವ ಹಳೆಯ ಸೇತುವೆಗಳ ಧಾರಣಾ ಸಾಮರ್ಥ್ಯದ ಕುರಿತು ಸಾರ್ವಜನಿಕ ವಲಯದಲ್ಲಿ ಪ್ರಶ್ನೆ ಮೂಡಿದೆ.

‘ಸೇತುವೆಯೊಂದು ನಿರ್ಮಾಣಗೊಂಡ ಗರಿಷ್ಠ 40 ವರ್ಷಗಳ ಕಾಲ ಸುಸಜ್ಜಿತವಾಗಿ ಬಾಳಿಕೆಗೆ ಯೋಗ್ಯವಾಗಿ ಇರಬಲ್ಲದು. ಈ ಅವಧಿಯ ಬಳಿಕ ಸೇತುವೆಯನ್ನು ಪದೇ ಪದೇ ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡುತ್ತಿದ್ದರೆ ಮಾತ್ರ ಅವುಗಳ ಬಾಳಿಕೆ ಅವಧಿ ಮುಂದೂಡಿಕೆಯಾಗುತ್ತ ಸಾಗುತ್ತದೆ. ಇಲ್ಲವಾದರೆ ಅವು ಯಾವುದೇ ಕ್ಷಣದಲ್ಲೂ ಕುಸಿದು ಬೀಳುವ ಅಪಾಯ ಎದುರಾಗಬಹುದು’ ಎಂಬುದು ಪರಿಣಿತ ಎಂಜಿನಿಯರಗಳ ಅಭಿಪ್ರಾಯ.

ನಿರ್ಮಾಣಗೊಂಡು 40 ವರ್ಷ ದಾಟಿದ 20 ಪ್ರಮುಖ ಸೇತುವೆಗಳು ಸದ್ಯ ಜಿಲ್ಲೆಯಲ್ಲಿರುವುದು ಬೆಳಕಿಗೆ ಬಂದಿದೆ. ಅವುಗಳ ಪೈಕಿ ಬಹುತೇಕ ದುರಸ್ತಿಯ ನಿರೀಕ್ಷೆಯಲ್ಲಿದ್ದರೆ, ಮತ್ತೆ ಕೆಲವು ಸಂಪೂರ್ಣ ಶಿಥಿಲಾವಸ್ತೆಗೆ ತಲುಪಿವೆ. ರಾಷ್ಟ್ರೀಯ ಹೆದ್ದಾರಿ, ಪ್ರಮುಖ ರಾಜ್ಯ ಹೆದ್ದಾರಿಗಳಲ್ಲಿರುವ ಇಂಥ ಸೇತುವೆಗಳ ಬಗ್ಗೆ ಸ್ಥಳೀಯವಾಗಿ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಯೂ ಏರ್ಪಟ್ಟಿದೆ.

‘ಜಿಲ್ಲೆಯಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗಳಲ್ಲಿ ಈ ಹಿಂದೆ ನಿರ್ಮಾಣಗೊಂಡಿರುವ ಸೇತುವೆಗಳು ನಾಲ್ಕು ದಶಕಗಳಷ್ಟು ಹಳೆಯದಾಗಿವೆ. ಕೆಲವೇ ಸೇತುವೆಗಳನ್ನು ಆಗೀಗ ನಿರ್ವಹಣೆ ಮಾಡಲಾಗಿತ್ತಾದರೂ ಪ್ರವಾಹಗಳನ್ನು ತಡೆದುಕೊಂಡಿರುವ ಕಾರಣಕ್ಕೆ ಬಹುತೇಕ ಸೇತುವೆಗಳ ಕಂಬವು ಶಿಥಿಲಗೊಂಡಿರುವ ಸಾಧ್ಯತೆ ಇದೆ. ಕಾಳಿ ಸೇತುವೆ ಬಿದ್ದ ಬೆನ್ನಲ್ಲೆ ಸಹಜವಾಗಿ ಜನರು ಹಳೆಯ ಸೇತುವೆಗಳತ್ತ ಆತಂಕದ ದೃಷ್ಟಿ ನೆಟ್ಟಿದ್ದಾರೆ’ ಎನ್ನುತ್ತಾರೆ ಲೋಕೋಪಯೋಗಿ ಇಲಾಖೆಯ ನಿವೃತ್ತ ಕಾರ್ಯನಿರ್ವಾಹಕ ಎಂಜಿನಿಯರ್ ಒಬ್ಬರು.

‘ಉತ್ತರ ಕನ್ನಡದಲ್ಲಿ ಮಳೆಯ ರಭಸ ಹೆಚ್ಚು. ಮಳೆಗಾಲದ ನಾಲ್ಕು ತಿಂಗಳು ಇಲ್ಲಿನ ನದಿಗಳು ರಭಸವಾಗಿ ಹರಿಯುವ ಪರಿಣಾಮ ಸೇತುವೆಗಳಿಗೆ ಧಕ್ಕೆ ಉಂಟಾಗಿರುತ್ತವೆ. ನದಿಗಳಲ್ಲಿ ತೇಲಿ ಬಂದ ಮರದ ದಿಮ್ಮಿಗಳು ಬಡಿದು ಸೇತುವೆಗೆ ಹಾನಿಯುಂಟಾಗುತ್ತಿರುತ್ತವೆ. ಪ್ರತಿ ಎರಡರಿಂದ ಮೂರು ವರ್ಷಕ್ಕೊಮ್ಮೆ ಎಲ್ಲ ಸೇತುವೆಗಳ ಧಾರಣ ಸಾಮರ್ಥ್ಯ ಪರಿಶೀಲಿಸುವುದು ಸೂಕ್ತ’ ಎಂದು ಸಲಹೆ ನೀಡಿದರು.

‘ಕಾರವಾರ ವಿಭಾಗದಲ್ಲಿನ ಪ್ರಮುಖ ಸೇತುವೆಗಳ ಗುಣಮಟ್ಟದ ಬಗ್ಗೆ ಪರಿಶೀಲಿಸಿದ್ದು, ಕುಮಟಾದ ಸಂತೆಗುಳಿ ಹೊರತುಪಡಿಸಿದರೆ ಉಳಿದ ಸೇತುವೆಗಳು ಸುರಕ್ಷಿತವಾಗಿವೆ’ ಎಂದು ಲೋಕೋಪಯೋಗಿ ಇಲಾಖೆಯ ಕಾರವಾರ ವಿಭಾಗದ ಇಇ ದುರ್ಗಾದಾಸ ಪ್ರತಿಕ್ರಿಯಿಸಿದರು.

‘ಶಿರಸಿ ವಿಭಾಗದಲ್ಲಿ 40 ವರ್ಷಕ್ಕಿಂತ ಹಳೆಯದಾದ 8ಕ್ಕೂ ಹೆಚ್ಚು ಸೇತುವೆಗಳಿವೆ. ಈ ಪೈಕಿ ಕೆಲ ಸೇತುವೆಗಳ ದುರಸ್ತಿಗೆ ಕಳೆದ ವರ್ಷವೇ ಪ್ರಸ್ತಾವ ಸಲ್ಲಿಕೆಯಾಗಿದೆ. ಅನುದಾನದ ಕೊರತೆಯಿಂದ ಕಾಮಗಾರಿ ಕೈಗೆತ್ತಿಕೊಳ್ಳಲು ಆಗಿಲ್ಲ’ ಎಂದು ಶಿರಸಿ ವಿಭಾಗದ ಇಇ ಮಲ್ಲಿಕಾರ್ಜುನ್ ತಿಳಿಸಿದರು.

ಜಿಲ್ಲೆಯ ಎಲ್ಲ ಸೇತುವೆಗಳ ಸುರಕ್ಷತೆಯ ಕುರಿತು ವರದಿ ಪಡೆಯಲಾಗಿದ್ದು ದುರಸ್ತಿ ಮತ್ತು ಮರುನಿರ್ಮಾಣದ ಅಗತ್ಯತತೆಯ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆಯಾಗಲಿದೆ
ಕೆ.ಲಕ್ಷ್ಮಿಪ್ರಿಯಾ ಜಿಲ್ಲಾಧಿಕಾರಿ
ಹೊಸಕಂಬಿ ಸೇತುವೆ ಸೇರಿದಂತೆ ಜಿಲ್ಲೆಯ ಬಹುತೇಕ ಸೇತುವೆ ಸಾಕಷ್ಟು ಹಳತಾಗಿವೆ. ಭಾರಿ ವಾಹನಗಳು ಅವುಗಳ ಮೇಲೆ ಓಡಾಡುತ್ತಿವೆ. ಅವುಗಳ ನಿರ್ವಹಣೆಗೆ ಗಮನಹರಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ
ಜಿ.ಎಂ.ಶೆಟ್ಟಿ ಅಚವೆ ಸಾಮಾಜಿಕ ಕಾರ್ಯಕರ್ತ

ಎಲ್ಲೆಲ್ಲಿ ಹಳೆಯ ಸೇತುವೆಗಳು? * ಶಿರಸಿ ತಾಲ್ಲೂಕಿನ ಪಟ್ಟಣದ ಹೊಳೆ ಸೇತುವೆ ಕೆಂಗ್ರೆಹೊಳೆ ಸೇತುವೆ ಸೋಂದಾ ಸೇತುವೆ ಸರಕುಳಿ ಸೇತುವೆ. * ದಾಂಡೇಲಿಯ ಬೈಯಲುಪಾರು ಸೇತುವೆ ಕುಳಗಿ ಸೇತುವೆ. * ಅಂಕೋಲಾ ತಾಲ್ಲೂಕಿನ ಹೊಸೂರು ಸೇತುವೆ ಹೊಸಕಂಬಿ ಸೇತುವೆ ಪೂಜಗೆರಿ ಸೇತುವೆ ಗುಳ್ಳಾಪುರ ಮತ್ತು ಹಳವಳ್ಳಿ ಸಂಪರ್ಕ ಸೇತುವೆ * ಹಳಿಯಾಳದ ದುಸಗಿ ಸೇತುವೆ * ಸಿದ್ದಾಪುರ–ಕುಮಟಾ ರಸ್ತೆಯಲ್ಲಿರುವ ಬಿಳಗಿ ಸೇತುವೆ * ಭಟ್ಕಳ ಚೌಥನಿ ಪುರವರ್ಗ ಸಂಪರ್ಕ ಕಲ್ಪಿಸುವ  ಬ್ರಿಟಿಷ್ ಕಾಲದ ಚೌಥನಿ ಸೇತುವೆ ತಲಾಂದ ಹೊಳೆಕಟ್ಟೆ ಪುರಾತನ‌ ಸೇತುವೆ. * ಯಲ್ಲಾಪುರದ ತಾಟವಾಳ ಸೇತುವೆ. *ಗಣೇಶಗುಡಿಯಲ್ಲಿ ಸುಪಾ ಜಲಾಶಯದ ಕೆಳಭಾಗದಲ್ಲಿ ಇರುವ ಕಾಳಿ ನದಿ ಸೇತುವೆ ಜೊಯಿಡಾದಿಂದ ರಾಮನಗರ ಬೆಳಗಾವಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಸೇತುವೆ ಅಣಶಿ ಸಮೀಪದ ಬಾಡಪೋಲಿ ನುಜ್ಜಿ ಕಾನೇರಿ ನದಿ ಮತ್ತು ದೋಣಪಾದಲ್ಲಿ ಒಂದು ಹಳ್ಳಕ್ಕೆ ಕಟ್ಟಿರುವ ಸೇತುವೆ. * ಮುಂಡಗೋಡ ತಾಲ್ಲೂಕಿನ ಬಾಚಣಕಿ ಜಲಾಶಯದ ಮೇಲಿರುವ ರಾಜ್ಯ ಹೆದ್ದಾರಿ ಸೇತುವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT