ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರವಾರ: ಪಿಡಿಒ ಕೊರತೆಗೆ ಬಳಲಿದೆ ‘ಗ್ರಾಮಾಡಳಿತ’

ನೀತಿ ಸಂಹಿತೆ, ಬರ ಪರಿಸ್ಥಿತಿ: ಹಳ್ಳಿಗರ ಗೋಳು ಕೇಳೋರಿಲ್ಲ
Published : 21 ಮಾರ್ಚ್ 2024, 5:29 IST
Last Updated : 21 ಮಾರ್ಚ್ 2024, 5:29 IST
ಫಾಲೋ ಮಾಡಿ
Comments

ಕಾರವಾರ: ಒಂದೆಡೆ ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಎದುರಾಗಿದ್ದು ಗ್ರಾಮ ಪಂಚಾಯಿತಿ ಸದಸ್ಯರಿಗೆ ಅಧಿಕಾರ ಇದ್ದೂ ಇಲ್ಲದಂತಾಗಿದೆ. ಇನ್ನೊಂದೆಡೆ ಗ್ರಾಮದ ಆಡಳಿತ ನಿರ್ವಹಣೆ ಹೊತ್ತಿರುವ ಪಿಡಿಒಗಳಿಗೆ ಹಲವು ಜವಾಬ್ದಾರಿಗಳು ಹೆಗಲೇರಿಕೊಂಡಿವೆ. ಇದರಿಂದ ಸದ್ಯ ಎದುರಾಗಿರುವ ಬರದ ಸ್ಥಿತಿಯೂ ಸೇರಿದಂತೆ ಹಳ್ಳಿಗಳಲ್ಲಿ ಆಡಳಿತ ನಿರ್ವಹಣೆಗೆ ತೊಡಕು ಎದುರಾಗುತ್ತಿರುವ ದೂರು ಕೇಳಿಬರುತ್ತಿದೆ.

ಜಿಲ್ಲೆಯ 12 ತಾಲ್ಲೂಕುಗಳಿಂದ 229 ಗ್ರಾಮ ಪಂಚಾಯಿತಿಗಳಿವೆ. ಈ ಪೈಕಿ 197 ಕಡೆಗಳಲ್ಲಿ ಮಾತ್ರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ಇದ್ದಾರೆ. ಅವರಲ್ಲಿಯೂ ಐದು ಮಂದಿ ಅಂತರ್ ಜಿಲ್ಲೆ ನಿಯೋಜನೆ ಮೂಲಕ ಬೇರೆ ಜಿಲ್ಲೆಗಳಿಗೆ ತೆರಳಿದ್ದಾರೆ. 9 ಪಿಡಿಒಗಳು ಸಚಿವರು, ಶಾಸಕರ ಆಪ್ತ ಸಹಾಯಕರಾಗಿ ನಿಯೋಜನೆಗೊಂಡಿದ್ದಾರೆ. ನಾಲ್ಕು ಮಂದಿಯನ್ನು ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಯ ವಿವಿಧ ವಿಭಾಗಕ್ಕೆ ನೇಮಿಸಲಾಗಿದೆ.

‘50 ಗ್ರಾಮ ಪಂಚಾಯಿತಿಗಳಲ್ಲಿ ಕಾಯಂ ಪಿಡಿಒಗಳ ಕೊರತೆ ಇರುವುದು ನಿಜ. ಅದನ್ನು ನಿಭಾಯಿಸಲು ಒಬ್ಬೊಬ್ಬ ಪಿಡಿಒಗೆ ಎರಡು ಅಥವಾ ಮೂರು ಗ್ರಾಮ ಪಂಚಾಯಿತಿಗಳ ಆಡಳಿತದ ಜವಾಬ್ದಾರಿ ವಹಿಸಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿಯ ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.

‘ಗ್ರಾಮ ಪಂಚಾಯಿತಿಯ ಯಾವುದೇ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು, ನಿರ್ಣಯಿಸಲು ಪಿಡಿಒ ಅಗತ್ಯ. ಒಬ್ಬೊಬ್ಬರಿಗೆ ಎರಡು ಮೂರು ಕಡೆ ಜವಾಬ್ದಾರಿ ನೀಡಿದ್ದರಿಂದ ವಾರದಲ್ಲಿ ಒಂದು ಅಥವಾ ಎರಡು ದಿನ ಮಾತ್ರ ಕಚೇರಿಯಲ್ಲಿ ಅವರು ಲಭ್ಯರಾಗುತ್ತಿದ್ದಾರೆ. ಇದರಿಂದ ಆಡಳಿತ ವ್ಯವಸ್ಥೆ ಬಲಗೊಳಿಸಲು ಸಾಧ್ಯವಾಗುತ್ತಿಲ್ಲ. ಇದು ಹಲವು ಗ್ರಾಮ ಪಂಚಾಯಿತಿಗಳು ಎದುರಿಸುತ್ತಿರುವ ಸಮಸ್ಯೆ’ ಎಂಬುದು ಕದ್ರಾ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಅಶ್ವಿನಿ ಪೆಡ್ನೇಕರ ಅವರ ದೂರು.

‘ಬರಗಾಲದ ಸ್ಥಿತಿ ಎದುರಾಗಿರುವುದರಿಂದ ಗ್ರಾಮದಲ್ಲಿ ಜಲಮೂಲಗಳು ಬತ್ತಿ ಹೋಗುತ್ತಿವೆ. ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾದರೆ ಜನರು ಸದಸ್ಯರನ್ನು ಕೇಳುತ್ತಿದ್ದಾರೆ. ನೀತಿ ಸಂಹಿತೆ ಎದುರಾಗಿರುವ ಕಾರಣ ನಾವು ಯಾವ ನಿರ್ಧಾರವನ್ನೂ ಕೈಗೊಳ್ಳುವಂತಿಲ್ಲ. ಪಿಡಿಒಗಳಿಗೆ ವಿಚಾರಿಸಬೇಕೆಂದರೆ ಅವರಿಗೆ ಬೇರೆ ಗ್ರಾಮ ಪಂಚಾಯಿತಿಯ ಜವಾಬ್ದಾರಿಯೂ ಇರುವುದರಿಂದ ಸಂಪರ್ಕಕ್ಕೆ ಲಭಿಸುವುದು ಅಪರೂಪ. ಕಾಯಂ ಪಿಡಿಒ ನೇಮಿಸುವಂತೆ ಹಲವು ಬಾರಿ ಒತ್ತಾಯಿಸಿದರೂ ಸ್ಪಂದನೆ ಸಿಗುತ್ತಿಲ್ಲ’ ಎಂದು ಕಡವಾಡ ಗ್ರಾಮ ಪಂಚಾಯಿತಿ ಸದಸ್ಯ ದೇವರಾಜ ನಾರ್ವೇಕರ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT