ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ‘ಡ್ರೋನ್’ ಕಾರ್ಯಾಚರಣೆ ಪ್ರಾತ್ಯಕ್ಷಿಕೆ

ಪೊಲೀಸ್ ಇಲಾಖೆಗೆ ಮಂಜೂರಾದ ಎರಡು ಡ್ರೋನ್‌ಗಳು: ಕಾರವಾರ, ಭಟ್ಕಳದಲ್ಲಿ ವ್ಯವಸ್ಥೆ
Last Updated 8 ಏಪ್ರಿಲ್ 2021, 14:21 IST
ಅಕ್ಷರ ಗಾತ್ರ

ಕಾರವಾರ: ‘ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪವಾದಾಗ ಕಾರ್ಯಾಚರಣೆಗೆ, ವಿವಿಧ ಸಂದರ್ಭಗಳಲ್ಲಿ ಕಾನೂನು ಸುರಕ್ಷತೆಯ ಪಾಲನೆಗೆ ಎರಡು ಡ್ರೋನ್ ಕ್ಯಾಮೆರಾಗಳನ್ನೂ ಬಳಸಲಾಗುವುದು. ಒಂದನ್ನು ಭಟ್ಕಳ ಭಾಗದಿಂದ ಹಾಗೂ ಮತ್ತೊಂದನ್ನು ಕಾರವಾರದಲ್ಲಿ ಇಡಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ತಿಳಿಸಿದರು.

ಜಿಲ್ಲಾ ಪೊಲೀಸ್ ಇಲಾಖೆಗೆ ಮಂಜೂರಾದ ‘ಡ್ರೋನ್’ ಕ್ಯಾಮೆರಾದ ಪ್ರಾತ್ಯಕ್ಷಿಕೆಯನ್ನು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗುರುವಾರ ಹಮ್ಮಿಕೊಳ್ಳಲಾಯಿತು.

ನಂತರ ಸುದ್ದಿಗಾರರ ಜೊತೆ ಮಾತನಾಡಿ, ಅದರ ಉದ್ದೇಶ ಮತ್ತು ಬಳಕೆಯ ಬಗ್ಗೆ ಮಾಹಿತಿ ನೀಡಿದರು.

‘ಭಟ್ಕಳ, ಕುಮಟಾ, ಹೊನ್ನಾವರ, ಸಿದ್ದಾಪುರ, ಶಿರಸಿ, ಯಲ್ಲಾಪುರ ತಾಲ್ಲೂಕುಗಳನ್ನು ಒಂದು ಉಪ ವಿಭಾಗವನ್ನಾಗಿ ಗುರುತಿಸಲಾಗಿದೆ. ಕಾರವಾರ, ಅಂಕೋಲಾ, ಜೊಯಿಡಾ, ದಾಂಡೇಲಿ ಮತ್ತು ಹಳಿಯಾಳ ತಾಲ್ಲೂಕುಗಳನ್ನು ಮತ್ತೊಂದು ಉಪ ವಿಭಾಗವನ್ನಾಗಿ ಮಾಡಲಾಗಿದೆ. ಒಂದು ಡ್ರೋನ್ ಅನ್ನು ಕಾರವಾರದಲ್ಲಿ, ಮತ್ತೊಂದನ್ನು ಭಟ್ಕಳ ಅಥವಾ ಹೊನ್ನಾವರದಲ್ಲಿ ಇಡಲಾಗುವುದು’ ಎಂದು ತಿಳಿಸಿದರು.

‘ಪ್ರಾಕೃತಿಕ ವಿಕೋಪ ನಿರ್ವಹಣೆ ನಿಧಿಯಿಂದ ಸುಮಾರು ₹12 ಲಕ್ಷ ವೆಚ್ಚದಲ್ಲಿ ಇವುಗಳು ಮಂಜೂರಾಗಿವೆ. ಪೊಲೀಸ್ ಇಲಾಖೆಯಲ್ಲಿ ಈಗಾಗಲೇ ಒಂದು ಡ್ರೋನ್ ಕ್ಯಾಮೆರಾವಿತ್ತು. ಅದು ನಿರಂತರವಾಗಿ 35ರಿಂದ 40 ನಿಮಿಷ ಹಾರಬಲ್ಲದು. ಈಚೆಗೆ ಎರಡನೇ ಡ್ರೋನ್ ತಲುಪಿದ್ದು, ಅದು 25 ನಿಮಿಷಗಳ ಹಾರಾಟದ ಸಾಮರ್ಥ್ಯ ಹೊಂದಿದೆ. ಎರಡೂ ಡ್ರೋನ್‌ಗಳು 200 ಮೀಟರ್ ಎತ್ತರದಲ್ಲಿ ಎರಡು ಕಿಲೋಮೀಟರ್‌ ಹಾರಬಲ್ಲವು’ ಎಂದು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾತನಾಡಿ, ‘ಡ್ರೋನ್‌ಗಳು ಮಂಜೂರಾಗಿರುವುದು ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆಗೆ ಸಹಕಾರಿಯಾಗಲಿದೆ. ಸಮುದ್ರದಲ್ಲಿ ಅವಘಡಗಳಾದರೆ, ದುರ್ಗಮ ಪ್ರದೇಶಗಳಲ್ಲಿ ಸಮಸ್ಯೆಗಳಾದರೆ ಪತ್ತೆ ಮಾಡಲು ಸಾಧ್ಯವಿದೆ. ಅಲ್ಲದೇ ಜನಸಂದಣಿಯ ಪ್ರದೇಶಗಳಲ್ಲಿ ಗಲಭೆ ನಡೆಸುವವರ ಮೇಲೆ ಕಣ್ಣಿಡಲೂ ಬಳಕೆಯಾಗಲಿದೆ’ ಎಂದು ಹೇಳಿದರು.

ಡ್ರೋನ್ ಬಳಕೆಯ ಬಗ್ಗೆ ಜಿಲ್ಲಾ ಪೊಲೀಸರಿಗೆ ಮೂರು ತಿಂಗಳ ತರಬೇತಿಯನ್ನು ಈಗಾಗಲೇ ನೀಡಲಾಗಿದೆ. ಪ್ರಾತ್ಯಕ್ಷಿಕೆ ನೀಡುವ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬದರಿನಾಥ ಹಾಗೂ ವಿವಿಧ ಠಾಣೆಗಳ ಪೊಲೀಸ್ ಇನ್‌ಸ್ಪೆಕ್ಟರ್‌ಗಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT