ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಜಾಕ್‍ವೆಲ್‍ಗೆ ‘ಕಾಡುವ ಮರಳು’

ಕುಡಿಯುವ ನೀರಿನ ಮೂಲದಲ್ಲಿ ಎದುರಾದ ಸಮಸ್ಯೆ
Published 8 ಏಪ್ರಿಲ್ 2024, 8:30 IST
Last Updated 8 ಏಪ್ರಿಲ್ 2024, 8:30 IST
ಅಕ್ಷರ ಗಾತ್ರ

ಶಿರಸಿ: ನಿರಂತರವಾಗಿ ನೀರೆತ್ತುತ್ತಿದ್ದ ಕೆಂಗ್ರೆ ಜಾಕ್‍ವೆಲ್‍ನಲ್ಲಿ ಅಳವಡಿಸಿರುವ ಪಂಪ್‍‍ಸೆಟ್‍ಗಳಿಗೆ ಈಗ ದಿನಕ್ಕೆ ಐದು ಗಂಟೆ ಮಾತ್ರ ಕೆಲಸ! ಅದಕ್ಕಿಂತ ಹೆಚ್ಚು ಕೆಲಸ ಮಾಡಲು ನೀರಿನೊಟ್ಟಿಗೆ ಬರುವ ಮರಳು ಸಮಸ್ಯೆ ಮಾಡುತ್ತಿದೆ. 

ಇಲ್ಲಿನ ನಗರಸಭೆ ವ್ಯಾಪ್ತಿಯಲ್ಲಿ 80 ಸಾವಿರಕ್ಕೂ ಹೆಚ್ಚು ಜನಸಂಖ್ಯೆ, 10 ಸಾವಿರಕ್ಕೂ ಹೆಚ್ಚಿನ ನಳ ಸಂಪರ್ಕವಿದೆ. ಅಘನಾಶಿನಿ ನದಿಯ ಮಾರಿಗದ್ದೆ ಬಳಿ ಪಂಪ್ ಅಳವಡಿಸಿಕೊಂಡು ನಗರದ ಅರ್ಧ ಭಾಗಕ್ಕೆ ನೀರು ಸರಬರಾಜು ಮಾಡಲಾಗುತ್ತಿದೆ.
ಇನ್ನೊಂದೆಡೆ ಹುಲೇಕಲ್ ರಸ್ತೆಯ ಕೆಂಗ್ರೆಹೊಳೆಯಿಂದ ನೀರು ಪಂಪ್ ಮಾಡಿ ನಗರಕ್ಕೆ ತರಲಾಗುತ್ತಿದೆ. ಆದರೆ, ಈ ವರ್ಷ ಎರಡೂ ಕಡೆಗಳಲ್ಲಿ ಏಕಕಾಲಕ್ಕೆ ನೀರಿನ ತೊಂದರೆ ಕಾಣಿಸಿಕೊಂಡಿದೆ. ‘ಈ ಹಿಂದೆ ನಿರಂತರವಾಗಿ ತಿರುಗುತ್ತಿದ್ದ ಇಲ್ಲಿನ ಪಂಪ್‍ಗಳು ಈಗ ದಿನದ ಕೆಲ ಗಂಟೆ ಮಾತ್ರ ಕೆಲಸ ಮಾಡುವಂತಾಗಿದೆ. ನೀರಿನ ಕೊರತೆ ಕಾರಣ ಹೆಚ್ಚುವರಿ ನೀರು ಪಂಪ್ ಮಾಡಲು ಪ್ರಯತ್ನಿಸಿದರೆ ಜಾಕ್‍ವೆಲ್‍ಗೆ ಮರಳು ಬರುತ್ತದೆ‘ ಎನ್ನುತ್ತಾರೆ ಸ್ಥಳದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ.

ನಗರಕ್ಕೆ ಪ್ರತಿ ದಿನ 37 ಲಕ್ಷ ಲೀಟರ್ ನೀರು ಬೇಕು. ಈ ನಿಟ್ಟಿನಲ್ಲಿ 24 ಗಂಟೆ ನೀರು ಪೂರೈಕೆಗೆ ಪೂರಕವಾಗಿ ಕೆಂಗ್ರೆ ಜಾಕ್‌ವೆಲ್‌ನಲ್ಲಿ ಕಳೆದ ವರ್ಷ ಚೆಕ್ ಡ್ಯಾಂ ಎತ್ತರ ಮಾಡುವ ಜತೆ ಹೊಸ ಪಂಪ್‌ಗಳನ್ನು ಅಳವಡಿಸಿ, ಪೈಪ್ ಮಾರ್ಗವನ್ನೂ ಹೊಸದಾಗಿ ನಿರ್ಮಿಸಲಾಗಿತ್ತು. 6 ಹೊಸ ಜಲಸಂಗ್ರಹಾಗಾರ ಕೂಡ ನಿರ್ಮಿಸಲಾಗಿತ್ತು. ಆದರೆ, ಅಘನಾಶಿನಿ ನದಿ ಮತ್ತು ಕೆಂಗ್ರೆಯ ಚೆಕ್ ಡ್ಯಾಂನಲ್ಲಿ ಸಂಗ್ರಹಿಸಿಟ್ಟಿದ್ದ ಶೇ 90ರಷ್ಟು ನೀರು ಖಾಲಿಯಾಗಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ನಗರಸಭೆಗೆ ನೀರು ಪೂರೈಕೆ ಸವಾಲಾಗುವ ಸಾಧ್ಯತೆಯಿದೆ. 

‘ನಗರಸಭೆ ವ್ಯಾಪ್ತಿಯಲ್ಲಿ ಸದ್ಯ ಕೊಳವೆಬಾವಿ ಸೇರಿ ಎಲ್ಲ ಜಲಮೂಲಗಳಿಂದ 10-15 ಲಕ್ಷ ಲೀಟರ್ ನಿತ್ಯ ಲಭ್ಯವಾಗುತ್ತಿದೆ. ನಗರದಲ್ಲಿ ಭೀಮನಗುಡ್ಡ ಮತ್ತು ರಾಘವೇಂದ್ರ ಮಠದ ಸಮೀಪ ನೀರು ಶುದ್ದೀಕರಿಸಿ 9 ಟ್ಯಾಂಕ್‍ಗಳಲ್ಲಿ ಶೇಖರಿಸಿ ನಗರವಾಸಿಗಳಿಗೆ ನೀಡಲಾಗುತ್ತಿತ್ತು. ಆದರೆ ಈಗ ಪಂಪ್‍ನ ಪುಟ್‍ಬಾಲ್‍ಗಳಿಗೆ ನೀರಿನ ಕೊರತೆ ಕಾಡುವಂತಾಗಿದೆ. 4ರಿಂದ 5 ಗಂಟೆ ಮಾತ್ರ ಪಂಪ್ ಚಾಲೂ ಇಡಲು ಸಾಧ್ಯವಾಗುತ್ತದೆ. ಹೀಗಾಗಿ ನಗರದೊಳಗಿನ ವಿವಿಧ ಟ್ಯಾಂಕ್ ಭರ್ತಿ ಮಾಡಲು ನಗರಾಡಳಿತಕ್ಕೆ ಸಾಧ್ಯವಾಗಿಲ್ಲ. ಈ ಕಾರಣಕ್ಕೆ ಎರಡು ದಿನಗಳಿಗೊಮ್ಮೆ ನೀರು ವಿತರಿಸುತ್ತಿದ್ದೇವೆ. ಇದೇ ಪರಿಸ್ಥಿತಿ ಮುಂದುವರೆದರೆ ವಾರಕ್ಕೊಮ್ಮೆ ನೀರು ಬಿಡುವ ಸ್ಥಿತಿ ಬರಬಹುದು’ ಎಂಬುದು ನಗರಾಡಳಿತದ ಅಧಿಕಾರಿಗಳ ಮಾತಾಗಿದೆ. 

ಕೆಂಗ್ರೆ ಜಾಕ್‍ವೆಲ್‍ನಲ್ಲಿ ನಿತ್ಯ 5 ಗಂಟೆ ನೀರನ್ನು ಪಂಪ್ ಮಾಡಲಾಗುತ್ತದೆ. ಉಳಿದಂತೆ ಮಾರಿಗದ್ದೆ ಜಾಕ್‍ವೆಲ್‍ನಿಂದ ಸ್ವಲ್ಪ ನೀರು ಪಡೆಯಲಾಗುತ್ತಿದೆ. ನಗರದ 13 ಕೊಳವೆಬಾವಿಗಳು ಉತ್ತಮ ಸ್ಥಿತಿಯಲ್ಲಿದ್ದು ಅವುಗಳ ಬಳಕೆ ಮಾಡಿಕೊಳ್ಳಲಾಗುತ್ತಿದೆ
ಕಾಂತರಾಜ್- ಪೌರಾಯುಕ್ತ ಶಿರಸಿ ನಗರಸಭೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT