ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಸಿ: ಹೆಚ್ಚಿದ ಹುಚ್ಚು ನಾಯಿ ಹಾವಳಿ

ನಗರಸಭೆ ನಿರ್ಲಕ್ಷ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನ
Published 26 ಮೇ 2024, 4:20 IST
Last Updated 26 ಮೇ 2024, 4:20 IST
ಅಕ್ಷರ ಗಾತ್ರ

ಶಿರಸಿ: ನಗರ ಪ್ರದೇಶದಲ್ಲಿ ಸಾರ್ವಜನಿಕರಿಗೆ ಬೀದಿ ನಾಯಿಗಳ ಕಾಟ ಒಂದೆಡೆಯಾದರೆ, ಅವುಗಳೊಟ್ಟಿಗೆ ಅಲೆದಾಡುವ ರೇಬಿಸ್ ಪೀಡಿತ ನಾಯಿಗಳು ಜಾನುವಾರುಗಳ ಸಾವಿಗೆ ಕಾರಣವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. 

ನಗರದ ವಿವಿಧ ಭಾಗಗಳಲ್ಲಿ ಕಳೆದ 6 ತಿಂಗಳ ಅವಧಿಯಲ್ಲಿ 20ಕ್ಕೂ ಹೆಚ್ಚು ಜಾನುವಾರುಗಳಿಗೆ ಹುಚ್ಚು ನಾಯಿ ಕಡಿತದಿಂದ ರೇಬೀಸ್ ರೋಗ ತಗುಲಿ ಸಾವು ಕಂಡಿವೆ.

‘ನಗರದಲ್ಲಿ ನೂರಾರು ಬಿಡಾಡಿ ದನಗಳಿದ್ದು, ಅವುಗಳ ರಕ್ಷಣೆಗೆ ಯಾವುದೇ ಕಾರ್ಯವಾಗುತ್ತಿಲ್ಲ. ಗ್ರಾಮೀಣ ಭಾಗದಿಂದಲೂ ನಗರಕ್ಕೆ ನಿತ್ಯವೂ ಜಾನುವಾರುಗಳು ಬರುತ್ತವೆ. ಅವುಗಳಲ್ಲಿ ಕೆಲವಕ್ಕೆ ಹುಚ್ಚು ನಾಯಿ ಕಡಿದಿರುವ ಬಗ್ಗೆ ಸಾರ್ವಜನಿಕರು ನಗರಸಭೆಗೆ ತಿಳಿಸಿದ್ದಾರೆ. ಆದರೆ ನಗರಾಡಳಿತ ಮಾತ್ರ ತನ್ನ ಜವಾಬ್ದಾರಿ ಮರೆತಿದೆ’ ಎನ್ನುತ್ತಾರೆ ಮರಾಠಿಕೊಪ್ಪದ ಜನಾರ್ಧನ ಪೂಜಾರಿ.

‘ಹೊರಗಡೆ ಮೇಯಲು ಬಿಟ್ಟ ದನಕ್ಕೆ ನಾಯಿ ಕಡಿದಿರುವುದು ತಡವಾಗಿ ತಿಳಿದು ಬಂದಿದೆ. ಆಗ ಚಿಕಿತ್ಸೆ ನೀಡಿದರೂ ಪ್ರಯೋಜನವಾಗಿಲ್ಲ. ಬೀದಿ ನಾಯಿಗಳ ಸಂಖ್ಯೆ ಮಿತಿ ಮೀರಿದ್ದು, ಹುಚ್ಚು ನಾಯಿಗಳು ಸಾಕಷ್ಟಿವೆ. ಈ ಬಗ್ಗೆ ಸಾಕಷ್ಟು ಬಾರಿ ನಗರಸಭೆಗೆ ದೂರು ನೀಡಿದರೂ ಕ್ರಮವಾಗಿಲ್ಲ' ಎಂದು ದೂರಿದರು. 

‘ರೆಬೀಸ್ ಪೀಡಿತ ನಾಯಿಗಳು ಎಲ್ಲೆಂದರಲ್ಲಿ ಜಾನುವಾರುಗಳ ಎರಗುತ್ತಿವೆ. ಕೆಲವೆಡೆ ಜನರ ಮೇಲೂ ದಾಳಿ ಮಾಡಿವೆ. ವೃದ್ಧರು, ಮಕ್ಕಳು ನಗರದಲ್ಲಿ ಸಂಚರಿಸಲು ತೀವ್ರ ಸಮಸ್ಯೆ ಆಗುತ್ತಿದೆ. ದಿನೇ ದಿನೇ ನಾಯಿಗಳ ಸಂಖ್ಯೆ ಹೆಚ್ಚುತ್ತಿರುವುದು ಜೀವಾಪಾಯ ಆಗುವ ಸಾಧ್ಯತೆಯಿದೆ’ ಎಂದು ಆತಂಕ ಹೊರಹಾಕಿದರು. 

‘ಬಿಡಾಡಿ ದನಗಳಿಗೆ ಯಾವುದೇ ಚಿಕಿತ್ಸೆಯಾಗಲಿ, ರೆಬೀಸ್ ಪೀಡಿತ ನಾಯಿಗಳ ಗುರುತಿಸುವ ಕಾರ್ಯವಾಗಲಿ ಆಗಿಲ್ಲ. ಕಳೆದ ಎರಡು ವರ್ಷಗಳ ಹಿಂದೆ ಬೀದಿ ನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಆದರೆ ಈಗಿನ ನಾಯಿಗಳ ಸಂಖ್ಯೆ ಗಮನಿಸಿದರೆ ಚಿಕಿತ್ಸೆ ಯಶಸ್ವಿಯಾದಂತೆ ಕಾಣುತ್ತಿಲ್ಲ’ ಎಂದು ನಗರ ನಿವಾಸಿ ರೇಣುಕಾ ನಾಯ್ಕ ಹೇಳಿದರು.

ನಾಯಿಗಳನ್ನು ಹಿಡಿದರೆ ಪ್ರಾಣಿ ದಯಾ ಸಂಘದವರು ನಗರಸಭೆ ವಿರುದ್ಧ ದೂರು ದಾಖಲಿಸುತ್ತಾರೆ. ಆದ್ದರಿಂದ ಅವುಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಬಹುದು. ಈ ಬಗ್ಗೆ ಸಭೆ ಕರೆದು ತೀರ್ಮಾನ ತೆಗೆದುಕೊಳ್ಳುತ್ತೇವೆ
ಕಾಂತರಾಜ್ ಪೌರಾಯುಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT