ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಡಿಕೆಗೆ ಎಲೆಚುಕ್ಕಿ ರೋಗ: ಇನ್ನೂ ‘ನಿರ್ಧಾರವಾಗದ’ ನಿರ್ವಹಣಾ ನಿಧಿ ‘ಪಾಲು’

Published : 7 ಸೆಪ್ಟೆಂಬರ್ 2024, 5:11 IST
Last Updated : 7 ಸೆಪ್ಟೆಂಬರ್ 2024, 5:11 IST
ಫಾಲೋ ಮಾಡಿ
Comments

ಶಿರಸಿ: ಎಲೆಚುಕ್ಕಿ ಬಾಧೆಯಿಂದ ಕಂಗೆಟ್ಟ ಅಡಿಕೆ ಬೆಳೆಗಾರರಿಗೆ ನಿರ್ವಹಣಾ ಸಹಾಯಧನ ಒದಗಿಸಲು ತಜ್ಞರ ಸಮಿತಿ ಸಲ್ಲಿಸಿದ್ದ ಪ್ರಸ್ತಾವಕ್ಕೆ ಕೇಂದ್ರ ಸರ್ಕಾರದ ಅನುಮೋದನೆ ಸಿಕ್ಕಿದೆ. ಆದರೆ, ರಾಜ್ಯ ಸರ್ಕಾರದ ‘ಕೊಡುಗೆ’ ಇನ್ನೂ ನಿರ್ಧಾರದ ಹಂತದಲ್ಲೇ ಇರುವುದರಿಂದ ಬೆಳೆಗಾರರು ಆರ್ಥಿಕ ನೆರವಿಗೆ ಕಾಯುವಂತಾಗಿದೆ. 

ರಾಜ್ಯದ ಅಡಿಕೆ ಬೆಳೆಯುವ ಪ್ರಮುಖ ಏಳು ಜಿಲ್ಲೆಗಳಲ್ಲಿ 2023-24ನೇ ಸಾಲಿನಲ್ಲಿ 53,977.04 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಎಲೆಚುಕ್ಕಿ ರೋಗ ಬಾಧೆಯಿಂದ ಹಾನಿಯಾಗಿತ್ತು. ರೋಗದ ತೀವ್ರತೆ ಅರಿತ ಬೆಳೆಗಾರರು ಸೂಕ್ತ ಪರಿಹಾರ ಒದಗಿಸಲು ಸರ್ಕಾರಕ್ಕೆ ಕೋರಿದ್ದರು.

ತೋಟಗಾರಿಕಾ ಇಲಾಖೆ ಅಧಿಕಾರಿಗಳು ಮತ್ತು ಸರ್ಕಾರ ನೇಮಿಸಿದ್ದ ತಜ್ಞರ ಸಮಿತಿ ಜಂಟಿಯಾಗಿ ಎಲೆಚುಕ್ಕಿ ಬಾಧಿತ ತೋಟಗಳಿಗೆ ಭೇಟಿ ನೀಡಿ ಅಧ್ಯಯನ ವರದಿ ಸಿದ್ದಪಡಿಸಿದ್ದರು. ರೋಗ ಬಾಧಿತ ಅಡಿಕೆ ಮರಗಳಿಗೆ ರಾಸಾಯನಿಕ ಸಿಂಪಡಣೆ, ನಿಯಂತ್ರಣ ಕುರಿತು ಪ್ರಚಾರ ಕಾರ್ಯಾಗಾರ, ಪೋಷಕಾಂಶ ನಿರ್ವಹಣೆ ಹಾಗೂ ಮತ್ತಿತರ ಉದ್ದೇಶಕ್ಕೆ ₹225 ಕೋಟಿಗೂ ಅಧಿಕ ಮೊತ್ತ ಬಿಡುಗಡೆ ಮಾಡುವಂತೆ 2023ರ ಸೆಪ್ಟೆಂಬರ್‌ನಲ್ಲಿ ಕೇಂದ್ರ ಕೃಷಿ ಸಚಿವಾಲಯ ಮತ್ತು ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು. ಆದರೆ, ಈ ಪ್ರಕ್ರಿಯೆ ನಡೆದು ವರ್ಷವಾದರೂ ನಿರ್ವಹಣಾ ಪ್ಯಾಕೇಜ್ ಘೋಷಣೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.

‘ಕೇಂದ್ರ ಸರ್ಕಾರದ ಯಾವುದೇ ಯೋಜನೆ ರಾಜ್ಯದಲ್ಲಿ ಅನುಷ್ಠಾನ ಆಗಬೇಕಿದ್ದರೆ, ರಾಜ್ಯ ಸರ್ಕಾರದ ಸಹಭಾಗಿತ್ವ ಕಡ್ಡಾಯ. ಪ್ರಸ್ತುತ ಅಡಿಕೆ ಎಲೆಚುಕ್ಕಿ ನಿರ್ವಹಣಾ ಸಹಾಯಧನದ ಪ್ರಸ್ತಾವಕ್ಕೂ ಈ ನಿಯಮ ಅನ್ವಯ. ಕೇಂದ್ರವು ಶೇ 60ರಷ್ಟು ಸಹಾಯಧನದ ಮೊತ್ತ ನೀಡಲು ಈ ವರ್ಷದ ಜೂನ್ ತಿಂಗಳಲ್ಲೇ ಹಸಿರು ನಿಶಾನೆ ನೀಡಿದೆ. ಆದರೆ ಉಳಿದ ಶೇ 40ರಷ್ಟು ಮೊತ್ತ ರಾಜ್ಯ ಸರ್ಕಾರ ಭರಿಸಲು ಇನ್ನೂ ಅನುಮೋದನೆ ನೀಡಿಲ್ಲ. ಇದು ಪ್ಯಾಕೇಜ್ ಬಿಡುಗಡೆ ವಿಳಂಬವಾಗಲು ಕಾರಣವಾಗುತ್ತಿದೆ’ ಎಂದು ತಜ್ಞರ ಸಮಿತಿ ಸದಸ್ಯರೊಬ್ಬರು ತಿಳಿಸಿದರು.

ನಿರ್ವಹಣಾ ಧನ ಲಭಿಸಿದರೆ ರೋಗಪೀಡಿತ ಎಲೆ ಕತ್ತರಿಸಿ ಸುಡಲು ರೋಗನಾಶಕ ಖರೀದಿಸಿ ಸಿಂಪಡಿಸಲು ಅನುಕೂಲ ಆಗುತಿತ್ತು. ಗೊಬ್ಬರ ಖರೀದಿಗೂ ಸಹಾಯ ಆಗುತಿತ್ತು.
ನಾಗರಾಜ ನಾಯ್ಕ ಅಡಿಕೆ ಬೆಳೆಗಾರ
₹ 36 ಕೋಟಿ ನಿರ್ವಹಣಾ ನಿಧಿ ನೀಡಲು ಉತ್ತರ ಕನ್ನಡ ಜಿಲ್ಲೆಯಿಂದ ವರದಿ ನೀಡಲಾಗಿದೆ. ಸರ್ಕಾರದಿಂದ ಅಧಿಕೃತ ಆದೇಶ ಬರುವವರೆಗೆ ಬೆಳೆಗಾರರು ಕಾಯುವುದು ಅನಿವಾರ್ಯ
  ಬಿ.ಪಿ.ಸತೀಶ ಉಪನಿರ್ದೇಶಕ ತೋಟಗಾರಿಕಾ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT