ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂಳು ತುಂಬಿದ ಚರಂಡಿಗೆ ಮುಕ್ತಿ ಎಂದು?

ನಗರದಾದ್ಯಂತ ತ್ಯಾಜ್ಯದಿಂದ ತುಂಬಿರುವ ಚರಂಡಿಗಳು
Published 27 ಏಪ್ರಿಲ್ 2024, 5:00 IST
Last Updated 27 ಏಪ್ರಿಲ್ 2024, 5:00 IST
ಅಕ್ಷರ ಗಾತ್ರ

ಶಿರಸಿ: ಬಿಸಿಲಿನ ಬೇಗೆ ಹೆಚ್ಚುತ್ತಲೇ ಇದೆ. ಮಳೆಯ ನಿರೀಕ್ಷೆ ಎಲ್ಲರಲ್ಲೂ ಮನೆ ಮಾಡಿದೆ. ಒಂದೊಮ್ಮೆ ಮಳೆ ಬಂದರೆ ಹೂಳು ತುಂಬಿದ ಬಹುತೇಕ ಚರಂಡಿಗಳ ನೀರು ರಸ್ತೆಯ ಮೇಲೆ ಹರಿಯುವ ಆತಂಕ ಸಾರ್ವಜನಿಕರಿಂದ ವ್ಯಕ್ತವಾಗಿದೆ. 

ನಗರದಲ್ಲಿ ತೆರೆದ ಚರಂಡಿ ವ್ಯವಸ್ಥೆ ಇದೆ. ಎಲ್ಲ ಚರಂಡಿಗಳೂ ಹೂಳು ತುಂಬಿದ್ದು, ಕೆಸರು ನೀರು ಮುಂದೆ ಸಾಗದೇ ತೊಂದರೆ ಅನುಭವಿಸುವಂತಾಗಿದೆ. ಇತ್ತೀಚೆಗೆ ನಡೆದ ಮಾರಿಕಾಂಬಾ ಜಾತ್ರೆ ನಂತರ ಚರಂಡಿಗಳು ತ್ಯಾಜ್ಯದಿಂದ ತುಂಬಿದ್ದು, ಸ್ವಚ್ಛತೆ ಕಾರ್ಯ ಪೂರ್ಣವಾಗಿಲ್ಲ ಎಂಬುದು ಜನರ ದೂರು. 

‘ಬಿಸಿಲಿನ ತಾಪಕ್ಕೆ ಚರಂಡಿಯ ದುರ್ವಾಸನೆ ಜನರ ನಿದ್ದೆಗೆಡಿಸಿದೆ. ಅಲ್ಲದೆ ಸೊಳ್ಳೆಗಳ ಕಾಟವೂ ವಿಪರೀತವಾಗಿದೆ. ಬಿಸಿಲು ಇದ್ದಾಗಲೇ ಇಷ್ಟೊಂದು ತೊಂದರೆ ಅನುಭವಿಸುತ್ತಿರುವ ಜನರು, ಮಳೆ ಶುರುವಾದ ಮೇಲೆ ಇನ್ನಷ್ಟು ತೊಂದರೆ ಅನುಭವಿಸುವಂತಾಗಲಿದೆ’ ಎನ್ನುತ್ತಾರೆ ನಗರದ ನಿವಾಸಿಗಳು.

‘ಚರಂಡಿಗಳಲ್ಲಿ ತುಂಬಿರುವ ಹೂಳು ಸ್ವಚ್ಛ ಮಾಡಲು ಈಗಲೇ ನಗರಸಭೆ ಕ್ರಮ ಕೈಗೊಳ್ಳಬೇಕು. ಇಲ್ಲದೇ ಇದ್ದರೆ, ಮಳೆಯ ನೀರೆಲ್ಲ ಮನೆಯ ಅಂಗಳಕ್ಕೆ ಬಂದು ನಿಲ್ಲುತ್ತದೆ. ಚರಂಡಿಗಳಲ್ಲಿ ನಿಂತಿರುವ ಕಸ-ಕಡ್ಡಿಗಳನ್ನು ಸ್ವಚ್ಛಗೊಳಿಸಿ, ನೀರು ಸರಾಗವಾಗಿ ಮುಂದೆ ಸಾಗಲು ಅನುವು ಮಾಡಿದಲ್ಲಿ ಮಳೆಗಾಲವನ್ನು ಸಮರ್ಥವಾಗಿ ನಿಭಾಯಿಸಬಹುದು’ ಎನ್ನುತ್ತಾರೆ ನಗರದ ನಿವಾಸಿ ಯೋಗೀಶ ಹೆಗಡೆ.

‘ಚರಂಡಿಯ ಹೂಳಿನ ಸಮಸ್ಯೆ ನಗರದಾದ್ಯಂತ ಇದೆ. ಮಳೆಗಾಲಕ್ಕೂ ಮುನ್ನವೇ ಈ ಸಮಸ್ಯೆಯ ನಿವಾರಣೆ ಅಗತ್ಯವಾಗಿದೆ. ಮಳೆಯ ನೀರು ಹರಿದು ಹೋಗಲು ಆಗದೇ ಇರುವಂತಹ ಸ್ಥಿತಿ ಇದ್ದು, ಇದನ್ನು ನಿವಾರಿಸಲು ಕ್ರಮಗಳನ್ನು ಕೈಗೊಳ್ಳಬೇಕು’ ಎಂದರು.

‘ರಾತ್ರಿ ಇಡೀ ಸೊಳ್ಳೆಗಳ ಕಾಟದಿಂದ ಜನರು ತತ್ತರಿಸುವಂತಾಗಿದೆ. ಮನೆಯ ಎದುರಿಗೆ ಚರಂಡಿಯ ನೀರು ಹರಿಯುತ್ತಿದ್ದು, ಈ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ. ಇದನ್ನು ನಿವಾರಿಸಲು ನಗರಸಭೆ ಹಾಗೂ ಆರೋಗ್ಯ ಇಲಾಖೆಗಳು ಅಲ್ಲಲ್ಲಿ ಚರಂಡಿಯಲ್ಲಿ ಗಪ್ಪ ಮೀನುಗಳು ಬಿಟ್ಟಿದ್ದರೆ ಅನುಕೂಲ ಆಗುತ್ತಿತ್ತು’ ಎಂಬುದು ಜನರ ಅಭಿಪ್ರಾಯ.

ಈಗಾಗಲೇ ಕೆಲವೆಡೆ ಚರಂಡಿ ಸ್ವಚ್ಛ ಮಾಡಲಾಗಿದ್ದು ಮಳೆಗಾಲಪೂರ್ವ ಎಲ್ಲ ಚರಂಡಿ ಸ್ವಚ್ಛಗೊಳಿಸಲಾಗುವುದು

-ಕಾಂತರಾಜ್ ಪೌರಾಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT