ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಸಿ | ದಾರಿ ಯಾವುದಯ್ಯ ಜಲಪಾತಕೆ..?

ಪರಿಸರ ಪ್ರವಾಸೋದ್ಯಮಕ್ಕೆ ಹಿನ್ನಡೆ ಸಾಧ್ಯತೆ
Published 8 ಜೂನ್ 2024, 6:11 IST
Last Updated 8 ಜೂನ್ 2024, 6:11 IST
ಅಕ್ಷರ ಗಾತ್ರ

ಶಿರಸಿ: ಮಳೆಗಾಲ ಆರಂಭದೊಂದಿಗೆ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತಿದ್ದ ತಾಲ್ಲೂಕಿನ ಜಲಪಾತಗಳು ಪ್ರಸಕ್ತ ಸಾಲಿನಲ್ಲಿ ಪ್ರವಾಸಿಗರ ಕೊರತೆ ಅನುಭವಿಸುವ ಸಾಧ್ಯತೆಯಿದೆ. ಜಲಪಾತಗಳಿಗೆ ತೆರಳಲು ಸರಿಯಾದ ರಸ್ತೆ, ಮೂಲ ಸೌಕರ್ಯ ಇಲ್ಲದಿರುವುದು ಇದಕ್ಕೆ ಪ್ರಮುಖ ಕಾರಣ.  

ತಾಲ್ಲೂಕಿನಲ್ಲಿ ಮುರೇಗಾರ ಜಲಪಾತ, ಶಿವಗಂಗಾ ಜಲಪಾತ, ಬೆಣ್ಣೆಹೊಳೆ ಜಲಪಾತ, ಕೆಪ್ಪ ಜೋಗ, ಮತ್ತಿಘಟ್ಟ ಜಲಪಾತ  ಸೇರಿದಂತೆ ಹಲವು ನಯನ ಮನೋಹರ ಜಲಪಾತಗಳಿವೆ. ಮಳೆಗಾಲದಲ್ಲಿ ಇವು ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುತ್ತವೆ. ಆದರೆ ವರ್ಷದಿಂದ ವರ್ಷಕ್ಕೆ ಇವುಗಳ ಸೌಂದರ್ಯ ಸವಿಯುವ ಪ್ರವಾಸಿಗರ ಕೊರತೆ ಹೆಚ್ಚುತ್ತಿದೆ. ಜಲಪಾತಗಳಿಗೆ ತೆರಳಲು ಸರ್ವಋತು ರಸ್ತೆ ಇಲ್ಲದಿರುವುದು ಇದಕ್ಕೆ ಕಾರಣವಾಗಿದೆ. 

‘ತಾಲ್ಲೂಕಿನ ಸಾಲ್ಕಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುರೇಗಾರ ಜಲಪಾತ ತಲುಪುವ ಮಾರ್ಗದಲ್ಲಿ ದುಗ್ಗುಮನೆಯಿಂದ ಜಲಪಾತದವರೆಗಿನ 2 ಕಿ.ಮೀ ರಸ್ತೆ ಸಂಚಾರಕ್ಕೆ ಅಯೋಗ್ಯವಾಗಿದೆ. ಈ ರಸ್ತೆಯಲ್ಲಿ ಸಾಗುವ ಪ್ರಯಾಣಿಕರು ಹೈರಾಣಾಗುವಂತಾಗಿದೆ. ಪ್ರವಾಸಿಗರ ಹಾಗೂ ಸುತ್ತಲಿನ ಗ್ರಾಮಸ್ಥರ ಅನುಕೂಲಕ್ಕಾಗಿ ಈ ರಸ್ತೆ ದುರಸ್ತಿ ಮಾಡಬೇಕೆಂದು ಹಲವು ಬಾರಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಬಳಿ ಗೋಗರೆದರೂ ಸಂಪೂರ್ಣ ರಸ್ತೆ ಭಾಗ್ಯ ಮಾತ್ರ ಇನ್ನೂ ಕೂಡಿ ಬಂದಿಲ್ಲ’ ಎನ್ನುತ್ತಾರೆ ಗ್ರಾಮಸ್ಥರು.

‘ಕೋಡ್ನಗದ್ದೆ ಗ್ರಾಮ ಪಂಚಾಯಿತಿ ಶಿವಗಂಗಾ ಜಲಪಾತಕ್ಕೆ ತೆರಳುವ ಒಂದೂವರೆ ಕಿ.ಮೀ ರಸ್ತೆ ಹೊಂಡ, ಗುಂಡಿಗಳಿಂದ ತುಂಬಿದೆ. ಮೈದುಂಬಿ ಹರಿಯುವ ಜಲಪಾತದ ವೀಕ್ಷಣೆಯು ಮನಸ್ಸಿಗೆ ಅತ್ಯಂತ ಮುದ ನೀಡುತ್ತದೆ. ಆದರೆ, ಜಲಪಾತಕ್ಕೆ ಸಾಗುವ ರಸ್ತೆ ತೀರಾ ಹಾಳಾಗಿದ್ದು, ಪ್ರವಾಸಿಗರು ಪರದಾಡುವಂತಾಗಿದೆ. ಹಾಳಾದ ರಸ್ತೆಯು ಪ್ರವಾಸದ ಖುಷಿಯನ್ನು ಕಸಿಯುತ್ತದೆ’ ಎಂದು ಸ್ಥಳೀಯರಾದ ಪ್ರವೀಣ ಹೆಗಡೆ ಹೇಳಿದರು. 

‘ಶಿರಸಿ– ಕುಮಟಾ ಮಾರ್ಗದಲ್ಲಿ ಸಿಗುವ ಬೆಣ್ಣೆಹೊಳೆ ಜಲಪಾತಕ್ಕೆ ತೆರಳುವ ಸುಮಾರು 2 ಕಿ.ಮೀ ರಸ್ತೆ ಕಿರಿದಾದ, ತಗ್ಗು ದಿನ್ನೆಗಳಿಂದ ಕೂಡಿದೆ. ಬೃಹತ್‌ ವಾಹನಗಳಲ್ಲಿ ಬರುವ ಪ್ರವಾಸಿಗರು ನಡೆದೇ ಹೋಗುವ ಸ್ಥಿತಿ ಇದೆ. ಮಳೆಗಾಲದಲ್ಲಿ ವಾಹನಗಳು ಕೆಸರಿನಲ್ಲಿ ಸಿಲುಕುವುದು ಸಾಮಾನ್ಯ ಎನ್ನುವಂತಾಗಿದೆ. ಈ ಜಲಪಾತಗಳಿಗೆ ಪ್ರತಿವರ್ಷ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಬಹಳ ವರ್ಷಗಳಿಂದ ಪ್ರಮುಖ ಮಾರ್ಗದಿಂದ ಜಲಪಾತ ಸಾಗುವ ರಸ್ತೆಗಳನ್ನು ಅಭಿವೃದ್ಧಿಪಡಿಸುವಂತೆ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ವಿನಂತಿಸಿದರೂ ಪ್ರಯೋಜನವಾಗುತ್ತಿಲ್ಲ. ಮಳೆಗಾಲದಲ್ಲಿ ಜಲಪಾತದ ಸೌಂದರ್ಯ ನೋಡಲು ಬರುವ ಅನೇಕರು ರಸ್ತೆಯ ದುಸ್ಥಿತಿ ಕಂಡು ಮರುಗುತ್ತಾರೆ. ಹಾಗಾಗಿ ತಕ್ಷಣ ಮೂಲಸೌಲಭ್ಯ ಕಲ್ಪಿಸಲು ಸರ್ಕಾರ ಮುಂದಾಗಬೇಕು’ ಎನ್ನುತ್ತಾರೆ ಅವರು.

ಪ್ರವಾಸಿ ತಾಣಗಳಿಗೆ ರಸ್ತೆ ಸೇರಿದಂತೆ ಮೂಲಸೌಕರ್ಯ ಒದಗಿಸುವ ಸಂಬಂಧ ಪ್ರವಾಸೋದ್ಯಮ ಇಲಾಖೆ ಸಚಿವರಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಅನುದಾನ ಬಿಡುಗಡೆಯಾದ ನಂತರ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು ಭೀಮಣ್ಣ ನಾಯ್ಕ ಶಿರಸಿ

– ಸಿದ್ದಾಪುರ ಕ್ಷೇತ್ರ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT