ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಖಾಸಗಿ ಶಿಕ್ಷಣ ಸಂಸ್ಥೆಗೆ ಸವಾಲೊಡ್ಡುವ ಸರ್ಕಾರಿ ಕಾಲೇಜು

Published 17 ಮೇ 2024, 6:14 IST
Last Updated 17 ಮೇ 2024, 6:14 IST
ಅಕ್ಷರ ಗಾತ್ರ

ಶಿರಸಿ: ಹಲವು ವರ್ಷಗಳಿಂದ ಮೂಲ ಸೌಲಭ್ಯದ ಕೊರತೆಯ ನಡುವೆ ಕುಂಟುತ್ತ ಸಾಗಿದ್ದ ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಪ್ರಸ್ತುತ ಅತ್ಯುತ್ತಮ ಸೌಲಭ್ಯ ಹೊಂದಿದೆ.  

ರಾಜ್ಯದಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದುವ ಸರ್ಕಾರಿ ಕಾಲೇಜುಗಳ ಪೈಕಿ ಒಂದೆನಿಸಿರುವ ಇಲ್ಲಿಯ ಸರ್ಕಾರಿ ಪದವಿ ಕಾಲೇಜಿಗೆ ಕೇವಲ ಉತ್ತರ ಕನ್ನಡ ಮಾತ್ರವಲ್ಲ ಶಿವಮೊಗ್ಗ, ಹಾವೇರಿ ಜಿಲ್ಲೆಗಳ ವಿದ್ಯಾರ್ಥಿಗಳೂ ಬರುತ್ತಾರೆ. ಬಿ.ಎ, ಬಿ.ಕಾಂ, ಬಿ.ಎಸ್‌ಸಿ, ಬಿ.ಬಿ.ಎ, ಬಿ.ಸಿ.ಎ ಪದವಿಗಳು ಇಲ್ಲಿ ಲಭ್ಯವಿವೆ. 2,700ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ಇಲ್ಲಿ ಕಲಿಕೆಯಲ್ಲಿ ತೊಡಗಿದ್ದಾರೆ.

‘ಆರಂಭದ ವರ್ಷಗಳಲ್ಲಿ ನಗರದ ಹೃದಯ ಭಾಗದ ರಾಯಪ್ಪ ಹುಲೇಕಲ್ ಪ್ರೌಢಶಾಲೆಯ ಕಟ್ಟಡದಲ್ಲಿ ಕಾಲೇಜು ನಡೆಯುತ್ತಿತ್ತು. ಒಮ್ಮೆಲೆ ತರಗತಿ ನಡೆಸುವುದು ಅಸಾಧ್ಯವಾದ ಕಾರಣ ಪಾಳಿ ಪ್ರಕಾರ ಪಾಠ ಮಾಡಲಾಗುತ್ತಿತ್ತು. ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ ಪರಿಣಾಮವಾಗಿ ಬನವಾಸಿ ರಸ್ತೆಯ ಟಿಪ್ಪು ನಗರದಲ್ಲಿ ಕಾಲೇಜಿಗೆ ಮಂಜೂರಾದ ಕಟ್ಟಡ ನಿರ್ಮಿಸಿ ತರಗತಿಗಳನ್ನು ಅಲ್ಲಿಗೆ ವರ್ಗಾಯಿಸಲಾಯಿತು. ಈಚಿನ ವರ್ಷಗಳಲ್ಲಿ ಕಾಲೇಜ್ ಎಲ್ಲ ಸೌಲಭ್ಯ ಒಳಗೊಂಡಿದೆ’ ಎಂದು ಶಿಕ್ಷಣ ಪ್ರೇಮಿಯೊಬ್ಬರು ಹೇಳಿದರು.

‘ಉತ್ತಮ ಪ್ರಯೋಗಾಲಯಗಳು, ನೂರಕ್ಕೂ ಹೆಚ್ಚು ಕಂಪ್ಯೂಟರಗಳು, ಬೃಹತ್ ಸಭಾಂಗಣ, ಡಿಜಿಟಲ್ ಗ್ರಂಥಾಲಯ, ನಾಲ್ಕು ಲಕ್ಷಕ್ಕೂ ಹೆಚ್ಚಿನ ಪುಸ್ತಕಗಳ ಸಂಗ್ರಹ, ಕಣ್ಗಾವಲಿಗೆ 80ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಸೇರಿ ಎಲ್ಲ ರೀತಿಯಿಂದ ಕಾಲೇಜು ಗುಣಮಟ್ಟ ಕಾಯ್ದುಕೊಂಡಿದೆ. ವಿಶೇಷವಾಗಿ ಬಿ.ಎ, ಬಿ.ಕಾಂ, ಬಿ.ಎಸ್‌ಸಿ ಹಾಗೂ ಬಿ.ಬಿ.ಎ. ಪದವಿಗಳು ವಿಶ್ವವಿದ್ಯಾಲಯದ ಶಾಶ್ವತ ಸಂಯೋಜನೆ ಪಟ್ಟಿಗೆ ಸೇರಿವೆ’ ಎಂದು ಹಿರಿಯ ಉಪನ್ಯಾಸಕರೊಬ್ಬರು ಮಾಹಿತಿ ಹಂಚಿಕೊಂಡರು. 

‘ನಾಗರಿಕ ಸೇವಾ ಪರೀಕ್ಷೆ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಮಾರ್ಗದರ್ಶನಕ್ಕೆ ವಿಶೇಷ ಉಪನ್ಯಾಸ ವ್ಯವಸ್ಥೆ ಇದೆ. ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವುದಕ್ಕಾಗಿ ಉದ್ಯೋಗ ಕೋಶವಿದೆ’ ಎಂದು ವಿದ್ಯಾರ್ಥಿ ನಿಖಿಲ್ ಎನ್. ಹೇಳುತ್ತಾರೆ.

‘ಉಪನ್ಯಾಸಕ ವರ್ಗ ಇನ್ನಷ್ಟು ಪ್ರಾಮಾಣಿಕವಾಗಿ, ಗುಣಮಟ್ಟದ ಶಿಕ್ಷಣ ನೀಡುವ ಅಗತ್ಯವಿದೆ. ಕೆಲವು ಉಪನ್ಯಾಸಕರು ದಿನದ ನಾಲ್ಕು ಗಂಟೆ ಮಾತ್ರ ಕಾಲೇಜಿನಲ್ಲಿ ಕೆಲಸ ಮಾಡುತ್ತಾರೆ. ಇದು ಯುಜಿಸಿ ನಿಯಮಾವಳಿಗೆ ವಿರುದ್ಧವಾಗಿದೆ’ ಎಂದು ಪಾಲಕರೊಬ್ಬರು ದೂರಿದರು.

‘ಕಾಲೇಜಿಗೆಂದೇ ಪ್ರತ್ಯೇಕ ಬಸ್ ಸೌಕರ್ಯವಿಲ್ಲ. ಬನವಾಸಿ ಭಾಗಕ್ಕೆ ತೆರಳುವ ಬಸ್ ಹಿಡಿದು ತರಗತಿಗೆ ಬರಬೇಕು. ಒಂದೊಮ್ಮೆ ಬಸ್ ತುಂಬಿದ್ದರೆ ಸಮಯಕ್ಕೆ ಸರಿಯಾಗಿ ಕಾಲೇಜಿಗೆ ಹಾಜರಾಗಲು ಸಾಧ್ಯವಾಗುವುದಿಲ್ಲ. ಕಾಲೇಜ್ ಸಮೀಪ ವಿದ್ಯಾರ್ಥಿ ನಿಲಯ ನಿರ್ಮಿಸಿ ಹಲವು ವರ್ಷ ಕಳೆದಿವೆ. ಆದರೆ ಬಳಕೆಯಿಲ್ಲದೆ ಹಾಳು ಬಿದ್ದಿದೆ’ ಎಂದೂ ಹೇಳಿದರು.

ಪ್ರಯೋಗಾಲಯದಲ್ಲಿ ಪ್ರಾಯೋಗಿಕ ಕಲಿಕೆಯಲ್ಲಿ ನಿರತರಾಗಿರುವ ವಿದ್ಯಾರ್ಥಿಗಳು 
ಪ್ರಯೋಗಾಲಯದಲ್ಲಿ ಪ್ರಾಯೋಗಿಕ ಕಲಿಕೆಯಲ್ಲಿ ನಿರತರಾಗಿರುವ ವಿದ್ಯಾರ್ಥಿಗಳು 
ಕೇಂದ್ರ ಸರ್ಕಾರದ ಯುವಸತ್ವ ಯೋಜನೆಗೆ ಆಯ್ಕೆ ಆಗಿದ್ದು ಇನ್ನೂ ಹೆಚ್ಚಿನ ಮೂಲ ಸೌಕರ್ಯ ಪಡೆಯಲು ಅನುಕೂಲವಾಗಿದೆ
- ದಾಕ್ಷಾಯಣಿ ಹೆಗಡೆ ಶಿರಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯೆ

ಹೊಸ ಪದವಿ ಪರಿಚಯ

‘2023-24ನೇ ಸಾಲಿನಿಂದ ಬಿಸಿಎ ಪದವಿ ಆರಂಭಿಸಲಾಗಿದೆ. ಪ್ರಸಕ್ತ ವರ್ಷ ಬ್ಯಾಂಕ್ ಮತ್ತು ಇನ್ಷುರೆನ್ಸ್ ಕ್ಷೇತ್ರದ ಕುರಿತು ಹೆಚ್ಚು ಮಾಹಿತಿ ನೀಡಬಲ್ಲ ಕೋರ್ಸ್ ಆರಂಭಿಸಲಾಗಿದೆ. ಜತೆಗೆ 2024-25ನೇ ಸಾಲಿನಲ್ಲಿ ಇಲಾಖೆಯಿಂದ ಎಂ.ಕಾಂ ಎಂಬಿಎ ಸ್ನಾತಕೋತ್ತರ ಪದವಿ ಆರಂಭಿಸಲು ಅನುಮತಿ ದೊರೆತಿದ್ದು ಆಗಸ್ಟ್ ತಿಂಗಳಲ್ಲಿ ಪ್ರವೇಶಾತಿ ಆರಂಭವಾಗಲಿದೆ’ ಎಂದು ಕಾಲೇಜಿನ ಪ್ರಾಚಾರ್ಯೆ ದಾಕ್ಷಾಯಣಿ ಹೆಗಡೆ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT