ರಾಜೇಂದ್ರ ಹೆಗಡೆ
ಶಿರಸಿ: ಕೆರೆ ದಂಡೆಯಲ್ಲಿ ಎರಡೆರಡು ಗಿಡ ನೆಟ್ಟು 4 ವರ್ಷ ಉತ್ತಮ ರೀತಿ ಪೋಷಿಸುವ ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಪದವಿ ಅಂತಿಮ ಪರೀಕ್ಷೆಯಲ್ಲಿ 5 ಅಂಕಗಳು ಸಿಗುತ್ತವೆ.
ಧಾರವಾಡದ ಕೃಷಿ ವಿಶ್ವವಿದ್ಯಾಲಯ ವ್ಯಾಪ್ತಿಯ ಶಿರಸಿಯ ಅರಣ್ಯ ಮಹಾವಿದ್ಯಾಲಯದ ‘ಗ್ರೀನ್ ಗ್ರ್ಯಾಜ್ಯುಯೇಶನ್ ಪ್ರೋಗ್ರಾಂ’ (ಜಿಜಿಪಿ) ಅಡಿ ಪ್ರಸಕ್ತ ಸಾಲಿನಿಂದ ಪದವಿ ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಇದನ್ನು ಪರಿಚಯಿಸಲಾಗಿದೆ.
‘ಹಸಿರು ಪರಿಸರವನ್ನು ಸಂಭ್ರಮಿಸಿದರಷ್ಟೇ ಸಾಲದು, ಅದನ್ನು ವಿಸ್ತರಿಸಬೇಕು’ ಎಂಬ ಮಹಾವಿದ್ಯಾಲಯದ ಆಶಯದಂತೆ ವಿದ್ಯಾರ್ಥಿಗಳು ನಗರದ ರಾಯನಕೆರೆ ದಂಡೆಯಲ್ಲಿ ಪದವಿ ಮೊದಲ ವರ್ಷದ 60 ವಿದ್ಯಾರ್ಥಿಗಳು ತಲಾ ಎರಡರಂತೆ 120 ವಿವಿಧ ತಳಿಗಳ ಗಿಡಗಳನ್ನು ನಾಟಿ ಮಾಡಿದ್ದಾರೆ. ಪಿಕಾಸಿ ಹಿಡಿದು ಹೊಂಡ ತೋಡಿ, ಗಿಡ ನಾಟಿ ಮಾಡಿ, ಗೊಬ್ಬರ ಹಾಕಿ ನೀರೆರೆದಿದ್ದಾರೆ. ನಿರಂತರ ಪೋಷಣೆಗೆ ಪಣ ತೊಟ್ಟಿದ್ದಾರೆ.
‘ವಿಶ್ವಸಂಸ್ಥೆಯ ಮಹತ್ತರ ಯೋಜನೆಯಾದ ‘ಜಿಜಿಪಿ’ಯನ್ನು ಜಗತ್ತಿನ 500 ವಿಶ್ವವಿದ್ಯಾಲಯಗಳು ಅನುಸರಿಸುತ್ತಿವೆ. ಜಿಜಿಪಿ ನಿಯಮದಂತೆ ಅಂತಿಮ ಪರೀಕ್ಷೆ ಅಂಕಗಳ ಜೊತೆಗೆ 5 ಅಂಕ ನೀಡಲು ಅವಕಾಶವಿದೆ. ವಿದ್ಯಾರ್ಥಿಗಳಿಗೆ ಪ್ರಕೃತಿಯ ಮೇಲೆ ಪ್ರೀತಿ ಹೆಚ್ಚಿಸುವ ಜೊತೆ ಮಾಲೀಕತ್ವ ಜವಾಬ್ದಾರಿ ಕೊಡುವುದು ಇದರ ಉದ್ದೇಶ. ಪದವಿ ಬಳಿಕವೂ ವಿದ್ಯಾರ್ಥಿಗಳಿಗೆ ನೆಟ್ಟ ಗಿಡಗಳ ನಂಟು ಇರುತ್ತದೆ’ ಎಂದು ಅರಣ್ಯ ಮಹಾವಿದ್ಯಾಲಯದ ಡೀನ್ ಆರ್.ವಾಸುದೇವ್ ತಿಳಿಸಿದರು.
‘ಭೂಮಿಯನ್ನು ರಕ್ಷಿಸುವ ಮತ್ತು ಪರಿಸರ ಸಮತೋಲನ ಕಾಪಾಡುವ ದೃಷ್ಟಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಗಿಡಗಳನ್ನು ನಾಟಿ ಮಾಡಬೇಕು. ಸಾಮಾಜಿಕ ಅರಣ್ಯ ಯೋಜನೆಯಡಿ ಬಹಳಷ್ಟು ಶಾಲಾವನಗಳು ನಿರ್ಮಾಣವಾಗಿವೆ. ಈ ಯೋಜನೆಯೂ ಯಶಸ್ವಿಯಾಗುವ ವಿಶ್ವಾಸವಿದೆ’ ಎಂದು ಪರಿಸರ ಬರಹಗಾರ ಶಿವಾನಂದ ಕಳವೆ ‘ಪ್ರಜಾವಾಣಿ’ಗೆ ತಿಳಿಸಿದರು.
Quote - ವಿದ್ಯಾರ್ಥಿಗಳಿಗೆ ಪದವಿ ಶಿಕ್ಷಣದ ಆರಂಭದಲ್ಲೇ ಪರಿಸರ ಪ್ರಾತ್ಯಕ್ಷಿಕೆ ಕ್ಷೇತ್ರ ಭೇಟಿಯಂಥ ಪಾಠ ಕಲಿಸುತ್ತಿರುವುದು ಶ್ಲಾಘನೀಯ.. –ಜಿ.ಆರ್.ಅಜ್ಜಯ್ಯ ಡಿಎಫ್ಒ ಶಿರಸಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.