ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಸಿ: ರಸ್ತೆ ವಿಸ್ತರಣೆಗೆ ಸಿಗದ ‘ಅನುಮತಿ’

ಪರಿಸರ ಮಂತ್ರಾಲಯದ ಅನುಮತಿ ಕಾಯುತ್ತಿರುವ ಗುತ್ತಿಗೆದಾರರು
Published 2 ಜೂನ್ 2024, 4:46 IST
Last Updated 2 ಜೂನ್ 2024, 4:46 IST
ಅಕ್ಷರ ಗಾತ್ರ

ಶಿರಸಿ: ಪರಿಸರ ಮಂತ್ರಾಲಯದ ಅನುಮತಿಯಿಲ್ಲದ ಕಾರಣಕ್ಕೆ ಅರೆಬರೆ ಕಾಮಗಾರಿಯಾಗಿ ಸ್ಥಗಿತಗೊಂಡ ಶಿರಸಿ–ಹಾವೇರಿ (766ಇ) ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ ಇನ್ನೂ ಮೊದಲ ಹಂತದ ಅನುಮತಿ ಸಿಕ್ಕಿಲ್ಲ. ಹೀಗಾಗಿ ಪ್ರಸಕ್ತ ಸಾಲಿನ ಮಳೆಗಾಲದಲ್ಲೂ ಹೊಂಡಗುಂಡಿಗಳ ರಸ್ತೆಯನ್ನೇ ಬಳಸುವ ದುಸ್ಥಿತಿ ಪ್ರಯಾಣಿಕರದ್ದಾಗಲಿದೆ.

ಸಾಗರಮಾಲಾ ಯೋಜನೆಯಡಿ ಹಾವೇರಿ-ಶಿರಸಿ- ಕುಮಟಾ ಮಾರ್ಗ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆಯಾಗುತ್ತಿದ್ದು, ಎರಡು ವಿಭಾಗದಲ್ಲಿ ಕಾಮಗಾರಿ ನಡೆದಿದೆ. ಅದರಲ್ಲಿ ಶಿರಸಿ ಅಗಸೇಬಾಗಿಲು ಮೀನು ಮಾರುಕಟ್ಟೆಯಿಂದ ಹಾವೇರಿ ನಾಲ್ಕರ ಕ್ರಾಸ್‍ವರೆಗಿನ ಹೆದ್ದಾರಿ ವಿಸ್ತರಣೆ ಆಗಬೇಕಿದೆ. ಅಮ್ಮಾಪುರ ಕನ್‍ಸ್ಟ್ರಕ್ಷನ್ ಗುತ್ತಿಗೆ ಪಡೆದಿದ್ದು, ಕಾಮಗಾರಿ ನಿಂತ ನೀರಾಗಿದೆ. ಒಟ್ಟು ಈ ಮಾರ್ಗದ ರಸ್ತೆ 74 ಕಿ.ಮೀ ರಸ್ತೆ ಸುಧಾರಣೆಯಾಗಬೇಕಿದ್ದು, ಅದರಲ್ಲಿ ತಾಲ್ಲೂಕಿನ ವ್ಯಾಪ್ತಿ 22 ಕಿಮೀ ಇದೆ. ಆದರೆ ಈವರೆಗೆ 5-6 ಕಿಮೀ ಮಾತ್ರ ಕಾಮಗಾರಿ ನಡೆದಿದೆ. 

‘ರಾಜ್ಯ ಹೆದ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿಗೆ ನೀಡುವಾಗ ಈ ರಸ್ತೆ ಕಂದಾಯ ಜಾಗ ಎಂದು ನೀಡಿದ್ದರು. ಕಾಮಗಾರಿ ನಡೆಸುತ್ತಿರುವಾಗ ಪರಿಶೀಲನೆ ನಡೆಸಿದ ಅರಣ್ಯ ಇಲಾಖೆಯವರು ರಸ್ತೆ ಕಂದಾಯ ಇಲಾಖೆ ಜಾಗದಲ್ಲಿಲ್ಲ ಅರಣ್ಯದಲ್ಲಿದೆ ಎಂದು ಕಾಮಗಾರಿ ನಿಲ್ಲಿಸಿದರು. ಈಗಿರುವ ರಸ್ತೆ ಅರಣ್ಯ ವ್ಯಾಪ್ತಿಯಲ್ಲಿರುವುದರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಕಾರ ಪಾರೆಸ್ಟ್ ಕ್ಲಿಯರೆನ್ಸ್ ಪಡೆಯದೇ ಕಾಮಗಾರಿ ನಡೆಸಲು ಆಗುವುದಿಲ್ಲ. ಶಿರಸಿ, ಯಲ್ಲಾಪುರ, ಹಾವೇರಿ ಅರಣ್ಯ ವಿಭಾಗಗಳಿಂದ ದಾಖಲಾತಿಗಳು ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಅಲ್ಲಿಂದ ಕೇಂದ್ರ ಸರ್ಕಾರಕ್ಕೆ ಹೋಗಿ ಮೊದಲ ಹಂತದ ಅನುಮತಿ ದೊರೆಯಬೇಕಿದೆ. ಇವೆಲ್ಲ ಪ್ರಕ್ರಿಯೆ ನಡೆದು ಆರೆಂಟು ತಿಂಗಳು ಕಳೆದರೂ ಇನ್ನೂ ಫಾರೆಸ್ಟ್ ಕ್ಲೀಯರನ್ಸ್ ಸಿಕ್ಕಿಲ್ಲ. ಪ್ರಸ್ತುತ ಚುನಾವಣಾ ನೀತಿ ಸಂಹಿತೆ ಇದ್ದು, ತಿಂಗಳೊಳಗೆ ಅನುಮತಿ ಸಿಗುವ ಸಾಧ್ಯತೆಯಿದೆ’ ಎನ್ನುತ್ತಾರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು.

ತಾಲ್ಲೂಕಿನ ಮಳಲಗಾಂವ, ದನಗನಹಳ್ಳಿ, ದಾಸನಕೊಪ್ಪ ಹೀಗೆ ಹೆದ್ದಾರಿಗಾಗಿ ಅಲ್ಲಲ್ಲಿ ಕಲ್ವರ್ಟ್ ಚರಂಡಿ (ಸಿ.ಡಿ) ಕಾಮಗಾರಿ ಮುಗಿದಿದೆ. ಅದು ಸರಿಯಾದ ನಿರ್ವಹಣೆಯಿಲ್ಲದೇ ಅಸ್ತವ್ಯಸ್ತವಾಗಿದೆ. ಇನ್ನು ರಸ್ತೆ ಕಾಮಗಾರಿ ಆರಂಭವಾಗದೇ ಇರುವುದು ಈ ಸಿ.ಡಿ ಮೇಲೆ ರಸ್ತೆ ಸೇರಿದಂತೆ ಎಲ್ಲೆಡೆ ರಸ್ತೆ ದೂಳು ಎನ್ನುವಂತಾಗಿದ್ದು ಜನರನ್ನು ಹೈರಾಣಾಗಿಸಿದೆ. ಈ ರಸ್ತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರ ಆಗಿರುವುದರಿಂದ ಪಿಡಬ್ಲುಡಿ ಇಲಾಖೆ ಅತ್ತ ಲಕ್ಷ್ಯ ಹಾಕದ ಸ್ಥಿತಿ ಪರಿಸ್ಥಿತಿ ಎದುರಾಗಿದೆ. ಅತ್ತ ಎನ್‍ಎಚ್‍ನವರು ರಸ್ತೆ ಸುಧಾರಿಸುತ್ತಿಲ್ಲ. ಇತ್ತ ಪಿಡಬ್ಲುಡಿ ಇಲಾಖೆಯವರ ಜವಾಬ್ದಾರಿ ಇಲ್ಲದಾಗಿದೆ. ಇದರಿಂದ ಬೇಸಿಗೆಯಲ್ಲಿ ದೂಳಿನ ಸಮಸ್ಯೆಯಾದರೆ, ಮಳೆಗಾಲದಲ್ಲಿ ರಾಡಿಯಿಂದ ಕೂಡಿ ಸಂಚಾರಕ್ಕೆ ತಲೆನೋವು ತರುತ್ತಿದೆ’ ಎಂಬುದು ಪ್ರಯಾಣಿಕರ ದೂರಾಗಿದೆ.

ಹೆದ್ದಾರಿ ಕಾಮಗಾರಿ ಅರೆಬರೆಯಾಗಿರುವುದು ಜನರನ್ನು ಹೈರಾಣಾಗಿಸಿದೆ. ಯಾವುದೇ ತಾಂತ್ರಿಕ ಸಮಸ್ಯೆ ಇದ್ದರೂ ಅದನ್ನು ಶೀಘ್ರ ಪರಿಸಿಹರಿಸಿಕೊಂಡು ಕಾಮಗಾರಿ ನಡೆಸಬೇಕು. ಸಂಚಾರಕ್ಕೆ ತೊಂದರೆಯಾಗಿರುವಲ್ಲಿ ತಾತ್ಕಾಲಿಕವಾಗಿಯಾದರೂ ಸಮಸ್ಯೆ ಪರಿಹಾರ ಮಾಡಬೇಕು.
-ರಮೇಶ ನಾಯ್ಕ, ಸ್ಥಳೀಯ ನಿವಾಸಿ
ಗುತ್ತಿಗೆ ಕಂಪನಿಯವರು ದಾಖಲಾತಿ ಸರಿಯಾಗಿ ಒದಗಿಸದ ಕಾರಣ ಈ ಹಿಂದೆ ಒಪ್ಪಿಗೆ ಸಿಕ್ಕಿರಲಿಲ್ಲ. ಪ್ರಸ್ತುತ ಅರಣ್ಯ ಇಲಾಖೆಯೇ ಮುಂದಾಗಿ ದಾಖಲೆ ಒದಗಿಸಿದ್ದು ತಿಂಗಳೊಳಗೆ ಪಾರೆಸ್ಟ್ ಕ್ಲಿಯರೆನ್ಸ್ ದೊರೆಯಬಹುದು.
-ಅಜ್ಜಯ್ಯ ಜಿ.ಆರ್, ಡಿಸಿಎಫ್ ಶಿರಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT