ಶಿರಸಿ: ರೈತರ ಕೃಷಿ ಪಂಪ್‌ಸೆಟ್‌ಗಳ ಆರ್‌ಆರ್ ನಂಬರ್‌ಗೆ ಆಧಾರ್ ನಂಬರ್ ಜೋಡಿಸುವ ಹಾಗೂ ಆ ಮೂಲಕ ವಿದ್ಯುತ್ ಖಾಸಗೀಕರಣಕ್ಕೆ ಮುಂದಾಗಿರುವ ಸರ್ಕಾರಗಳ ನಡೆ ವಿರುದ್ಧ ಹೆಸ್ಕಾಂ ಕಚೇರಿ ಎದುರು ಹಸಿರು ಸೇನೆ ಹಾಗೂ ರೈತ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಸಂಘಟನೆ ಕಾರ್ಯಕರ್ತರು ಬುಧವಾರ ನಗರದ ಹೆಸ್ಕಾಂ ಕಚೇರಿ ಎದುರು ಜಮಾಯಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಸಂಘಟನೆ ರಾಜ್ಯ ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಕಿರವತ್ತಿ ಮಾತನಾಡಿ, ‘ಕೃಷಿ ಪಂಪ್ ಸೆಟ್‌ಗಳಿಗೆ ಆಧಾರ್ ಜೋಡಣೆ ಮೂಲಕ ಉಚಿತವಾಗಿ ವಿದ್ಯುತ್ ಪಡೆಯುತ್ತಿದ್ದ ರೈತರಿಗೆ ತೊಂದರೆ ನೀಡಲು ಸರ್ಕಾರ ಮುಂದಾಗಿದೆ’ ಎಂದರು.
‘ಕೃಷಿ ಚಟುವಟಿಕೆಗಳಿಗೆ ಮೂಲವಾದ ವಿದ್ಯುತ್ ಹಾಗೂ ಇದಕ್ಕೆ ಬೇಕಾದ ಪರಿವರ್ತಕ, ವಿದ್ಯುತ್ ಕಂಬ ಹಾಗೂ ತಂತಿಗಳನ್ನು ಇಂಧನ ಇಲಾಖೆಯ ವೆಚ್ಚದಲ್ಲಿ ಮಾಡಲಾಗುತ್ತಿತ್ತು. ಇದಕ್ಕೆ ರೈತರಿಂದ ವಂತಿಕೆಯಾಗಿ ₹17 ಸಾವಿರದಿಂದ ₹23 ಸಾವಿರದವರೆಗೆ ಪಡೆಯಲಾಗುತ್ತಿತ್ತು. ಅದನ್ನು 2023ರ ಅಕ್ಟೋಬರ್‌ನಿಂದ ಕೈಬಿಡಲಾಗಿದೆ. ರೈತರೇ ನೇರವಾಗಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪಡೆದುಕೊಳ್ಳಲು ₹3 ಲಕ್ಷದಿಂದ ₹4 ಲಕ್ಷ ವೆಚ್ಚ ಮಾಡಬೇಕಾದ ಪರಿಸ್ಥಿತಿಯನ್ನು ಸರ್ಕಾರ ಸೃಷ್ಟಿಸಿದೆ. ಇದು ತೀವ್ರ ಖಂಡನೀಯ’ ಎಂದರು.
‘ರಾಜ್ಯ ಸರ್ಕಾರ ಸೌರವಿದ್ಯುತ್ ಪಂಪ್‌ಸೆಟ್ ಹಾಕಿಸಿಕೊಂಡ ರೈತರಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಬಾರದು. ಕೈಗಾರಿಕೆಯಂತೆ ಕೃಷಿಗೂ ಹಗಲು ಹೊತ್ತಿನಲ್ಲೇ ವಿದ್ಯುತ್ ಪೂರೈಸಬೇಕು. ನಗರ ಹಾಗೂ ಗ್ರಾಮಾಂತರ ಪ್ರದೇಶ ಎಂಬ ತಾರತಮ್ಯ ಮಾಡಬಾರದು’ ಎಂದು ಒತ್ತಾಯಿಸಿದರು.
ಹೆಸ್ಕಾಂ ಹಿರಿಯ ಅಧಿಕಾರಿ ದೀಪಕ್ ಕಾಮತ್ ಅವರಿಗೆ ಮನವಿ ಸಲ್ಲಿಸಿದರು. ಸಂಘಟನೆಯ ಪದಾಧಿಕಾರಿಗಳಾದ ಪ್ರಮೋದ ಜಕಲಣ್ಣನವರ್, ರವೀಂದ್ರ ನಾಯ್ಕ, ಮೋಹನ, ವಿದ್ಯಾಧರ, ಶಶಿಕುಮಾರ್, ನಾಗರಾಜ ದಾಂಗೆ, ನವಿನ್ ಜಡೇದರ್, ಶ್ರೀಧರ ಪಾಟೀಲ ಇದ್ದರು.