ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ | ‘ಝರಿ ನೀರು ವಿದ್ಯುತ್’ ಉತ್ಪಾದನೆ ಸ್ತಬ್ಧ

Published 20 ಡಿಸೆಂಬರ್ 2023, 4:59 IST
Last Updated 20 ಡಿಸೆಂಬರ್ 2023, 4:59 IST
ಅಕ್ಷರ ಗಾತ್ರ

ಶಿರಸಿ: ನೈಸರ್ಗಿಕವಾಗಿ ಹರಿಯುವ ಝರಿ ನೀರು ಬಳಸಿ ವಿದ್ಯುತ್ ಉತ್ಪಾದಿಸುತ್ತಿದ್ದ ಉತ್ತರ ಕನ್ನಡ ಜಿಲ್ಲೆಯ ಗುಡ್ಡಗಾಡು ಗ್ರಾಮಗಳ ಹೈಡ್ರೋಪಿಕ್ ಘಟಕಗಳು ನೀರು ಕೊರತೆಯಿಂದ ಬಹುತೇಕ ಸ್ತಬ್ಧವಾಗಿವೆ. ಇದರಿಂದ ವಿದ್ಯುತ್ ಸ್ವಾವಲಂಬನೆ ಸಾಧಿಸಿದ್ದವರು ಚಿಂತೆಗೊಳಗಾಗಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಗಾಲ ಹಾಗೂ ಮಳೆಗಾಲ ಮುಗಿದ ಕೆಲ ತಿಂಗಳು ಹಳ್ಳಕೊಳ್ಳಗಳಲ್ಲಿ ನೈಸರ್ಗಿಕ ನೀರು ಧಾರಾಳವಾಗಿ ಹರಿಯುತ್ತದೆ. ಈ ನೀರ ಸದ್ಬಳಕೆ ಮಾಡಿಕೊಂಡಿದ್ದ ಹಲವು ಗ್ರಾಮಸ್ಥರು ಮನೆಯಲ್ಲೇ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದರು. ಆ ಮೂಲಕ ವಿದ್ಯುತ್ ಕಿರಿಕಿರಿಗೆ ಮುಕ್ತಿ ಕಂಡುಕೊಂಡಿದ್ದರು. ಆದರೆ ಈ ಬಾರಿ ತೀವ್ರ ಮಳೆ ಕೊರತೆ ಕಾರಣಕ್ಕೆ ಹಳ್ಳಕೊಳ್ಳಗಳ ಹಾಗೂ ನೈಸರ್ಗಿಕವಾಗಿ ಹರಿವ ಝರಿ ನೀರ ಪ್ರಮಾಣ ತೀವ್ರ ಇಳಿಕೆಯಾಗಿದೆ. ಇದರಿಂದ ವಿದ್ಯುತ್ ಉತ್ಪಾದನೆಗೆ ಪೂರಕವಾಗಿದ್ದ ಹೈಡ್ರೋಪಿಕ್ ಟರ್ಬೈನ್ ಯಂತ್ರ ತಿರುಗಲು ನೀರಿನ ಒತ್ತಡ ಸಾಲದಂತಾಗಿದೆ. ಹೀಗಾಗಿ ವಿದ್ಯುತ್ ಉತ್ಪಾದನೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. 

ಜಿಲ್ಲೆಯ ಶಿರಸಿ ತಾಲ್ಲೂಕಿನ ಹೆಬ್ಬಾರನಗದ್ದೆ, ಮತ್ತಿಘಟ್ಟ, ಕೆಳಗಿನಕೇರಿ, ತುಳಗೇರಿ, ತೆಂಗಿನಮುಡಿ, ಅಂಕೋಲಾದ ಮೋತಿಗುಡ್ಡ, ಅರೆಕಟ್ಟ, ಮಾದನಮನೆ, ಸಿದ್ದಾಪುರದ ಕಾನಸೂರು ಸೇರಿದಂತೆ ಜಿಲ್ಲೆಯ ಗುಡ್ಡಗಾಡು ಹಳ್ಳಿಗಳಲ್ಲಿ ಹಲವು ವರ್ಷಗಳಿಂದ ವಿದ್ಯುತ್ ಸ್ವಾವಲಂಬನೆ ಸಾಧ್ಯವಾಗಿತ್ತು. ಈ ಹಳ್ಳಿಗಳೆಲ್ಲ ತಾಲ್ಲೂಕು ಕೇಂದ್ರದಿಂದ 40-50 ಕಿ.ಮೀ. ದೂರದಲ್ಲಿ ದಟ್ಟಾರಣ್ಯದಲ್ಲಿವೆ. ಹೀಗಾಗಿ ಮೂಲಸೌಕರ್ಯ ಒದಗಿಸುವುದು ಸವಾಲಿನ ಕಾರ್ಯವಾಗಿದೆ. ಒಂದೊಮ್ಮೆ ಒದಗಿಸಿದರೂ ಮರ ಬೀಳುವುದು, ಭೂಕುಸಿತದಂಥ ಕಾರಣಕ್ಕೆ ಪದೇ ಪದೇ ಸಮಸ್ಯೆ ಆಗುತ್ತದೆ. ಈ ಕಾರಣ ನೆಟ್ವರ್ಕ್, ಇಂಟರ್‌ನೆಟ್‌, ದೂರವಾಣಿ, ಮನೆಗೆ ಬೆಳಕಿನ ಸೌಕರ್ಯ, ಅಡುಗೆ ಯಂತ್ರಗಳ ಚಾಲನೆ, ಕೃಷಿಗೆ ನೀರಾವರಿ ಒದಗಿಸಲು ನೈಸರ್ಗಿಕವಾಗಿ ಹರಿಯುವ ಝರಿ ನೀರ ವಿದ್ಯುತ್ ಇವರಿಗೆ ಆಸರೆಯಾಗಿತ್ತು. ಪ್ರಸ್ತುತ ಹರಿವ ಝರಿಗಳು ಶಕ್ತಿ ಕುಂದಿವೆ. ಅದರಿಂದ ಟರ್ಬೈನ್ ಯಂತ್ರಕ್ಕೆ ಹರಿವು ನಿಂತಿದೆ. ಹೀಗಾಗಿ ಈಗ ಪರ್ಯಾಯ ವಿದ್ಯುತ್ ಬಳಕೆ ಅನಿವಾರ್ಯವಾಗಿದೆ' ಎಂಬುದು ವಿದ್ಯುತ್ ಉತ್ಪಾದಕ ರೈತರ ಮಾತಾಗಿದೆ. 

'ನಿತ್ಯ ಒಂದು ಕಿಲೋ ವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿತ್ತು. ಈಗ ಅರ್ಧ ಕಿಲೋ ವ್ಯಾಟ್ ಕೂಡ ಉತ್ಪಾದನೆಯಾಗುತ್ತಿಲ್ಲ. ಕೆಲವೆಡೆ ನೀರಿಲ್ಲದೇ ಯಂತ್ರ ಸ್ಥಗಿತ ಮಾಡಿದ್ದಾರೆ' ಎಂದು ಮತ್ತಿಘಟ್ಟ ಕೆಳಗಿನಕೇರಿಯ ನಿತ್ಯಾನಂದ ಭಟ್ ಹೇಳುತ್ತಾರೆ. 'ಒಂದೂವರೆ ಕಿಮೀ ದೂರದಿಂದ ಗುರುತ್ವಾಕರ್ಷಣೆ ಬಲದ ಮೂಲಕ ನೀರು ಪೈಪ್‌ ಮೂಲಕ ನಿರಂತರವಾಗಿ ಮನೆ ಸಮೀಪದ ಹೈಡ್ರೋಪಿಕ್ ಘಟಕಕ್ಕೆ ಬರುವಂತೆ ಮಾಡಿಕೊಳ್ಳಲಾಗಿತ್ತು. ಆದರೆ ಈ ಬಾರಿ ನೀರು ಸ್ಥಗಿತವಾಗಿದೆ' ಎನ್ನುತ್ತಾರೆ ಅವರು. 

ಕೇಂದ್ರ ಸರ್ಕಾರದ ಅಸಾಂಪ್ರದಾಯಿಕ ಇಂಧನ ಮೂಲ ಯೋಜನೆಯಡಿ 2015ರಲ್ಲಿ ಮತ್ತಿಘಟ್ಟ ಭಾಗದ ಹಳ್ಳಿಯಲ್ಲಿ 16ಕ್ಕೂ ಹೆಚ್ಚು ಹೈಡ್ರೋಪಿಕ್‌ ಘಟಕ ಸ್ಥಾಪಿಸಲಾಗಿದೆ. ಘಟಕದ ಬಹುಪಾಲು ವೆಚ್ಚವನ್ನು ಕೇಂದ್ರ ಸರ್ಕಾರ ಸಹಾಯಧನ ರೂಪದಲ್ಲಿ ನೀಡಿತ್ತು. ಅದರಿಂದ ಈ ಭಾಗದಲ್ಲಿ ವಿದ್ಯುತ್ ಸ್ವಾವಲಂಬನೆ ಸಾಧ್ಯವಾಗಿತ್ತು' ಎಂಬುದು ಇಲ್ಲಿನ ಭಾಸ್ಕರ್ ಹೆಗಡೆ ಮಾತಾಗಿದೆ.

ಹೈಡ್ರೋಪಿಕ್ ಯಂತ್ರ ಅಳವಡಿಸಿ 15 ವರ್ಷದಲ್ಲಿ ಈ ಬಾರಿ ಡಿಸೆಂಬರ್ ಆರಂಭದಲ್ಲೇ ನೀರು ಸ್ಥಗಿತವಾಗಿದೆ. ಇದರಿಂದ ವಿದ್ಯುತ್ ಉತ್ಪಾದನೆಗೆ ಹೊಡೆತವಾಗಿದೆ.
ಸಂತೋಷ ಹೆಗಡೆ, ತೆಂಗಿನಮುಡಿ ವಿದ್ಯುತ್ ಉತ್ಪಾದಕ
ದಶಕಗಳಿಂದ ನೈಸರ್ಗಿಕವಾಗಿ ಸಿಗುವ ನೀರು ಬಳಸಿಕೊಂಡು ವಿದ್ಯುತ್ ಸ್ವಾವಲಂಬಿಯಾಗಿದ್ದ ಜನರು ಈ ಬಾರಿ ಬರದ ಕೈಗೆ ಸಿಕ್ಕಿ ವಿದ್ಯುತ್ ಖರೀದಿಸುವ ಸ್ಥಿತಿ ತಲುಪಿರುವುದು ಖೇದಕರ
ಶಿವಾನಂದ ಕಳವೆ, ಪರಿಸರ ತಜ್ಞ
ಶಿರಸಿಯ ಮತ್ತಿಘಟ್ಟ ಕೆಳಗಿನಕೇರಿಯ ಕೋಣೆಪಾಲದಲ್ಲಿ ಅಳವಡಿಸಿರುವ ಹೈಡ್ರೋಪಿಕ್ ಘಟಕ

ಶಿರಸಿಯ ಮತ್ತಿಘಟ್ಟ ಕೆಳಗಿನಕೇರಿಯ ಕೋಣೆಪಾಲದಲ್ಲಿ ಅಳವಡಿಸಿರುವ ಹೈಡ್ರೋಪಿಕ್ ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT