ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಬೆಳೆಯಾಗಿ ಕಾಫಿ: ಅಡಿಕೆ ಇಳುವರಿಯಲ್ಲಿ ಕುಂಠಿತವಿಲ್ಲ -ಸೀತಾರಾಮ ಹೆಗಡೆ

Published 27 ಜೂನ್ 2023, 13:43 IST
Last Updated 27 ಜೂನ್ 2023, 13:43 IST
ಅಕ್ಷರ ಗಾತ್ರ

ಶಿರಸಿ: ಅಡಿಕೆಯೊಂದಿಗೆ ಉಪಬೆಳೆಯಾಗಿ ಕಾಫಿ ಬೆಳೆದರೆ ಅಡಿಕೆಯ ಇಳುವರಿಯಲ್ಲಿ ಯಾವುದೇ ವ್ಯತ್ಯಾಸವಾಗದು ಎಂದು ಪ್ರಗತಿಪರ ಕೃಷಿಕ ಸೀತಾರಾಮ ಹೆಗಡೆ ನೀರ್ನಳ್ಳಿ ಹೇಳಿದರು.

ನಗರದ ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿ, ಕಾಫಿ ಅಭಿವೃದ್ಧಿ ಮಂಡಳಿ ಚಿಕ್ಕಮಗಳೂರು ಹಾಗೂ ಸಹ್ಯಾದ್ರಿ ಕಾಫಿ ಸೊಸೈಟಿ ಸಾಗರ ಇವರ ಸಂಯುಕ್ತ ಆಶ್ರಯದಲ್ಲಿ ಕದಂಬ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದಅಡಿಕೆ ತೋಟದಲ್ಲಿ ಉಪಬೆಳೆಯಾಗಿ ಕಾಫಿ ಕುರಿತ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಹಲವು ರೈತರಿಗೆ ಅಡಿಕೆ ತೋಟದಲ್ಲಿ ಉಪಬೆಳೆಯಾಗಿ ಕಾಫಿ ಬೆಳೆದರೆ ಇಳುವರಿ ಕುಂಠಿತವಾಗುತ್ತದೆ ಎಂಬ ಭಾವನೆಯಿದೆ. ಇದು ಸತ್ಯಕ್ಕೆ ದೂರವಾದ ಮಾತಾಗಿದೆ. ಕಾಫಿ ಬೆಳೆಯುವುದರಿಂದ ಅಡಿಕೆ ಇಳುವರಿಗೆ ಯಾವುದೇ ವ್ಯತ್ಯಾಸ ಆಗುವುದಿಲ್ಲ ಎಂದರು. ಹೆಚ್ಚಿನ ಶ್ರಮ, ತಾಂತ್ರಿಕ ಜ್ಞಾನ ಬೇಡದ ಲಾಭದಾಯಕ ಬೆಳೆ ಇದಾಗಿದ್ದು, ಪ್ರತಿಯೊಬ್ಬ ಅಡಿಕೆ ಬೆಳೆಗಾರ ಇದನ್ನು ಬೆಳೆಯುವಲ್ಲಿ ಆಸಕ್ತಿ ತೋರಬೇಕು ಎಂದರು.

ಸಹ್ಯಾದ್ರಿ ಕಾಫಿ ಸೊಸೈಟಿ ಅಧ್ಯಕ್ಷ ಪಿ.ಎನ್.ಶಶಿಧರ ಹರ್ತಾಳು ಮಾತನಾಡಿ, ಶಿರಸಿ, ಸಾಗರ ಭಾಗದ ಕಾಫಿ ಬೆಳೆಗಾರರು ಸರ್ಕಾರದ ಸಹಾಯಧನದಿಂದ ವಂಚಿತರಾಗುತ್ತಿದ್ದು, ರೈತರು ಈ ಕುರಿತು ಧ್ವನಿ ಎತ್ತಬೇಕಿದೆ. ಕಾಫಿ ಮಂಡಳಿಯವರೂ ಈ ಭಾಗದಲ್ಲಿ ಸೂಕ್ತ ಸಮೀಕ್ಷೆ ಮಾಡಿ ಕಾಫಿಯನ್ನು ಪ್ರಧಾನ ಉಪಬೆಳೆಯೆಂದು ಪರಿಗಣಿಸಬೇಕಿದೆ ಎಂದರು. ಕಾಫಿ ಬೋರ್ಡ್ ಸಂಶೋಧನಾ ವಿಭಾಗದ ಜಂಟಿ ನಿರ್ದೇಶಕ ನಾಗರಾಜ ಅವರು ಕಾಫಿ ಬೆಳೆಯುವ ವಿಧಾನ, ಸಂಸ್ಕರಣೆ, ಮಾರುಕಟ್ಟೆ ಇತ್ಯಾದಿ ವಿಷಯಗಳ ಕುರಿತು ತಾಂತ್ರಿಕ ಮಾಹಿತಿ ನೀಡಿದರು. 

ಕದಂಬ ಅಧ್ಯಕ್ಷ ಶಂಭುಲಿಂಗ ಗಣಪತಿ ಹೆಗಡೆ ಮಾತನಾಡಿ, ಭವಿಷ್ಯದ ಒಳಿತಿಗಾಗಿ ಕಾಫಿ ಪೂರಕ ಬೆಳೆ. ಯುವ ರೈತರ ಆಸಕ್ತಿ ಕಾಫಿ ಬೆಳೆಯ ಕಡೆ ಬರಬೇಕು ಎಂದರು. ಹಿಂದಿನ ವರ್ಷ ಕದಂಬ ಮಾರ್ಕೆಟಿಂಗ್ ಸ್ಥಳೀಯ 192 ರೈತರಿಂದ 600 ಕ್ವಿಂಟಲ್ ಗೂ ಅಧಿಕ ಪ್ರಮಾಣದಲ್ಲಿ ಕಾಫಿ ಖರೀದಿ ಮಾಡಿದೆ ಹಾಗೂ ಮುಂದಿನ ದಿನದಲ್ಲಿ ಇನ್ನಷ್ಟು ಪ್ರಮಾಣದ ಕಾಫಿ ನಿರೀಕ್ಷಿಸುತ್ತಿದ್ದೇವೆ ಎಂದರು.

ಕಾಫಿ ಬೋರ್ಡ್ ಹಿರಿಯ ಸಂಯೋಜನಾಧಿಕಾರಿ ಪ್ರಭುಗೌಡ ಕೆ., ಕೃಷಿ ತಜ್ಞ ವಿಜಯೇಂದ್ರ ಹೆಗಡೆ, ಸಲಹೆಗಾರ ವಿಶ್ವೇಶ್ವರ ಭಟ್ಟ ಕೋಟೇಮನೆ ಇದ್ದರು. ಸಹಕಾರಿಯ ವ್ಯವಸ್ಥಾಪಕ ರಾಜೇಂದ್ರ ಜೋಶಿ ವಂದಿಸಿದರು. ಕಾರ್ಯಾಗಾರದ ನಂತರ ಅಡಿಕೆ ತೋಟದಲ್ಲಿ ಯಶಸ್ವಿಯಾಗಿ ಕಾಫಿ ಕೃಷಿ ಮಾಡುತ್ತಿರುವ ಸೀತಾರಾಮ ಹೆಗಡೆ ನೀರ್ನಳ್ಳಿ ಅವರ ತೋಟಕ್ಕೆ ಭೇಟಿ ನೀಡಿ ರೈತರು ಮಾಹಿತಿ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT