ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಸಿ: ರೈತರ ಖಾತೆಗೆ ಹವಾಮಾನ ಆಧಾರಿತ ಬೆಳೆ ವಿಮೆ ಮೊತ್ತ ಜಮೆ

79,197 ಪ್ರಸ್ತಾವಗಳಿಗೆ ₹78.39 ಕೋಟಿ ವಿಮಾ ಪರಿಹಾರ ಘೋಷಣೆ
Published 24 ನವೆಂಬರ್ 2023, 14:25 IST
Last Updated 24 ನವೆಂಬರ್ 2023, 14:25 IST
ಅಕ್ಷರ ಗಾತ್ರ

ಶಿರಸಿ: ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಅಡಿಕೆ ಮತ್ತು ಕಾಳುಮೆಣಸು ಕ್ಷೇತ್ರದ ಬೆಳೆ ವಿಮೆ ವ್ಯಾಪ್ತಿಗೆ ಒಳಪಟ್ಟ 79,197 ಪ್ರಸ್ತಾವಗಳಿಗೆ ಒಟ್ಟೂ ₹ 78.39 ಕೋಟಿ ವಿಮಾ ಪರಿಹಾರ ಘೋಷಣೆ ಆಗಿದ್ದು, ಆಧಾರ್ ಲಿಂಕ್ ಆದ ರೈತರ ಉಳಿತಾಯ ಖಾತೆಗಳಿಗೆ ಜಮಾ ಆಗುತ್ತಿದೆ ಎಂದು ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವರಾಮ ಹೆಬ್ಬಾರ ತಿಳಿಸಿದ್ದಾರೆ.

ಈ ಕುರಿತು ಶುಕ್ರವಾರ ಮಾಹಿತಿ ನೀಡಿರುವ ಅವರು, ‘ಶಿರಸಿ ತಾಲ್ಲೂಕಿನಲ್ಲಿ ಪ್ರತಿ ಗುಂಟೆಗೆ ಸರಾಸರಿ ₹ 414.66ರಂತೆ ₹ 29.57 ಕೋಟಿ, ಸಿದ್ದಾಪುರ ತಾಲ್ಲೂಕಿನಲ್ಲಿ ಪ್ರತಿ ಗುಂಟೆಗೆ ₹ 428.60ರಂತೆ ₹ 13.48 ಕೋಟಿ, ಮುಂಡಗೋಡ ತಾಲ್ಲೂಕಿನಲ್ಲಿ ಪ್ರತಿ ಗುಂಟೆಗೆ ₹ 625.93ರಂತೆ ₹ 9.26 ಕೋಟಿ, ಯಲ್ಲಾಪುರ ತಾಲ್ಲೂಕಿನಲ್ಲಿ ಪ್ರತಿ ಗುಂಟೆಗೆ ₹ 458.88ರಂತೆ ₹ 16.78 ಕೋಟಿ, ಜೊಯಿಡಾ ತಾಲ್ಲೂಕಿನಲ್ಲಿ ಪ್ರತಿ ಗುಂಟೆಗೆ ₹ 269.75ರಂತೆ ₹ 1.31 ಕೋಟಿ, ಅಂಕೋಲಾ ತಾಲ್ಲೂಕಿನಲ್ಲಿ ಪ್ರತಿ ಗುಂಟೆಗೆ ₹ 471.96 
ರಂತೆ ₹ 4.62 ಕೋಟಿ, ಕುಮಟಾ ತಾಲ್ಲೂಕಿನಲ್ಲಿ ಪ್ರತಿ ಗುಂಟೆಗೆ  ₹ 191.73ರಂತೆ ₹ 52.82 ಲಕ್ಷ, ಹೊನ್ನಾವರ ತಾಲ್ಲೂಕಿನಲ್ಲಿ ಪ್ರತಿ ಗುಂಟೆಗೆ ₹ 190.17ರಂತೆ ₹ 1.76 ಕೋಟಿ, ಭಟ್ಕಳ ತಾಲ್ಲೂಕಿನಲ್ಲಿ ಪ್ರತಿ ಗುಂಟೆಗೆ ₹ 335.56ರಂತೆ ₹ 1.06 ಕೋಟಿ ಪರಿಹಾರ ದೊರಕಿದೆ. ಹಳಿಯಾಳ ಮತ್ತು ಕಾರವಾರ ತಾಲ್ಲೂಕುಗಳಿಗೆ ಪರಿಹಾರ ದೊರೆತಿಲ್ಲ. ಮುಂದಿನ ಕಂತಿನಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ.

ಅಡಿಕೆ ಬೆಳೆಗೆ 75,776 ಪ್ರಸ್ತಾವಗಳಿಗೆ ₹ 77.18 ಕೋಟಿ ವಿಮೆ ಪರಿಹಾರ ದೊರಕಿದ್ದು, ಕಾಳುಮೆಣಸು ಬೆಳೆಗೆ ಸಂಬಂಧಿಸಿ 3,421 ಪ್ರಸ್ತಾವಗಳಿಗೆ ₹ 1.21 ಕೋಟಿ ವಿಮೆ ಪರಿಹಾರ ದೊರಕಿದೆ. ಮಳೆ ಕೊರತೆಯಿಂದ ಬರಗಾಲದ ಸಂಕಷ್ಟದಲ್ಲಿರುವ ರೈತಾಪಿ ವರ್ಗಕ್ಕೆ ಬೆಳೆ ವಿಮಾ ಯೋಜನೆಯ ಪರಿಹಾರವು ಜಮೆ ಆಗಿರುವುದು ವರದಾನವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಅಳವಡಿಸಿಕೊಂಡು 2022-23ನೇ ಸಾಲಿನ ಹಂಗಾಮಿಗೆ ಸಂಬಂಧಿಸಿ ಬೆಳೆ ವಿಮೆ ರಖಂ ರೈತರಿಗೆ ಸಕಾಲದಲ್ಲಿ ದೊರೆತಿರುವುದು ಕೆ.ಡಿ.ಸಿ.ಸಿ. ಬ್ಯಾಂಕ್ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಹಗಲಿರುಳು ಶ್ರಮಿಸಿರುವುದರ ಫಲಶೃತಿಯಾಗಿದೆ. ರೈತರ ಆರ್ಥಿಕ ಅಭಿವೃದ್ಧಿಗೆ ಸ್ಪಂದಿಸಲು ಬ್ಯಾಂಕ್ ಸದಾ ಸಿದ್ಧ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT