ಶಿರಸಿ: ಕಳೆದ ಸಾಲಿನಲ್ಲಿ ಮೆಕ್ಕೆಜೋಳ ಬೆಳೆದು ಲಾಭ ಕಂಡಿದ್ದ ಬೆಳೆಗಾರರಿಗೆ ಈ ಬಾರಿಯ ಅತಿವೃಷ್ಟಿಯು ನಷ್ಟ ತಂದಿದೆ. ಮಳೆ ಹೆಚ್ವಿದ ಪರಿಣಾಮ ನೂರಾರು ಎಕರೆಯಲ್ಲಿ ಬೆಳೆದ ಮೆಕ್ಕೆಜೋಳದ ಗಿಡಗಳಿಗೆ ರೋಗ ಬರುವ ಜತೆ ಕೊಳೆತು ನಾಶವಾಗಿವೆ.
ಕಳೆದ ವರ್ಷ ಮಳೆ ಕಡಿಮೆ ಇದ್ದ ಕಾರಣ ತಾಲ್ಲೂಕಿನಲ್ಲಿ ಮೆಕ್ಕೆಜೋಳ ಉತ್ತಮ ಇಳುವರಿ ಬಂದಿತ್ತು. ಈ ವರ್ಷವೂ ಮಳೆ ಕಡಿಮೆ ಆಗಲಿದೆ ಎಂಬ ಹಿನ್ನೆಲೆಯಲ್ಲಿ ಅರೆ ಬಯಲು ನಾಡಿನ ವಾತಾವರಣವಿರುವ ಬನವಾಸಿ ಮತ್ತು ದಾಸನಕೊಪ್ಪ ಭಾಗದಲ್ಲಿ ಅಂದಾಜು 2 ಸಾವಿರ ಎಕರೆ ಪ್ರದೇಶದಲ್ಲಿ ರೈತರು ಮೆಕ್ಕೆಜೋಳ ಬೆಳೆದಿದ್ದಾರೆ. ಆದರೆ, ಮಳೆ ಹೆಚ್ಚಾದ ಕಾರಣ ಅಂದಾಜು 500 ಎಕರೆ ಪ್ರದೇಶದಲ್ಲಿ ಬೆಳೆದ ಮೆಕ್ಕೆಜೋಳದ ಗಿಡಗಳೆಲ್ಲ ಕೊಳೆತು ಹೋಗಿವೆ. ಈಗಾಗಲೇ ಕೊಳೆತ ಮೆಕ್ಕೆಜೋಳದ ಗಿಡಗಳನ್ನು ರೈತರು ಕಿತ್ತೊಗೆಯುತ್ತಿದ್ದಾರೆ.
'ಮೆಕ್ಕೆಜೋಳ ಕಡಿಮೆ ನೀರು ಬೇಡುವ ಬೆಳೆ. ಆದರೆ, ಈ ಬಾರಿ ಜೂನ್ ಆರಂಭದಿಂದಲೂ ಮಳೆಯಾಗುತ್ತಲೇ ಇದೆ. ಆರಂಭದ ಮಳೆಗೆ ರೈತರು ಎಂದಿನಂತೆ ಮೆಕ್ಕೆಜೋಳ ಬಿತ್ತಿದರು. ಆನಂತರದಲ್ಲಿ ಮಳೆಯಿಂದಾಗಿ ತೇವಾಂಶ ಹೆಚ್ಚಾಗಿ ಗಿಡಗಳು ಸರಿಯಾಗಿ ಮೇಲೇಳಲಿಲ್ಲ. ವರದಾ ನದಿ ತಟದ ಜಮೀನಿನಲ್ಲಿ 15 ದಿನಗಳ ಕಾಲ ಪ್ರವಾಹ ನೀರು ನಿಂತು ಗಿಡಗಳೆಲ್ಲ ಕೊಳೆತು ನಾಶವಾಗಿವೆ. ಮಳೆಯ ಕಾರಣಕ್ಕೆ ಬೆಳೆಗೆ ಸರಿಯಾಗಿ ಗೊಬ್ಬರ ಹಾಕಲಾಗದ ಕಾರಣ ಭೂಮಿ ಸತ್ವ ಕಳೆದುಕೊಂಡಿದೆ. ತಡವಾಗಿ ನಾಟಿ ಮಾಡಿದ ಗಿಡಗಳು ಬೇರು ಬಿಡಲಾಗದೆ ಸಾಯುತ್ತಿವೆ. ಇದರ ಜತೆ, ಹಳದಿ ರೋಗವೂ ವ್ಯಾಪಿಸುತ್ತಿದ್ದು, ಬೆಳೆಗಾರರು ಅಳಿದುಳಿದ ಗಿಡಗಳನ್ನು ಉಳಿಸಿಕೊಳ್ಳುವ ಆತುರದಲ್ಲಿದ್ದಾರೆ' ಎನ್ನುತ್ತಾರೆ ಬನವಾಸಿಯ ರೈತ ಗಣೇಶ ಗೌಡ.
'ಒಂದು ಎಕರೆ ಮೆಕ್ಕೆಜೋಳದ ಬಿತ್ತನೆ ಮಾಡಬೇಕಾದರೆ ಬೀಜ, ಗೊಬ್ಬರ, ಕೂಲಿ ಸೇರಿದಂತೆ ಕನಿಷ್ಠ ಹತ್ತು ಸಾವಿರ ರೂಪಾಯಿ ಖರ್ಚು ಮಾಡಬೇಕು. ಉತ್ತಮ ಬೆಳೆ ಬಂದರೆ ಮಾತ್ರ ಲಾಭ ಬರುತ್ತಿತ್ತು. ಜೋರು ಮಳೆ ಸುರಿದು, ಆಗಾಗ ಬಿಡುವು ನೀಡಿದ್ದರೆ, ಬೆಳೆಗಳಿಗೆ ಹೆಚ್ಚಿನ ಹಾನಿಯಾಗುತ್ತಿರಲಿಲ್ಲ. ಆದರೆ, ಒಂದು ದಿನವೂ ಬಿಡುವು ನೀಡದೇ ಮಳೆ ಸುರಿಯುತ್ತಿರುವುದರಿಂದ ಗಿಡಗಳೆಲ್ಲ ಹಾಳಾಗಿವೆ. ಈಗ ಆ ಬೆಳೆಯ ನಿರೀಕ್ಷೆಯನ್ನೂ ಮಾಡುವಂತಿಲ್ಲ' ಎಂಬುದು ಬಹುತೇಕ ರೈತರ ಮಾತು.
ಈ ಬಾರಿ ಮೆಕ್ಕೆಜೋಳದ ಗದ್ದೆಯಲ್ಲಿ ಅಂತರ ಬೇಸಾಯವೂ ಸಾಧ್ಯವಾಗಿಲ್ಲ. ಅಧಿಕ ಮಳೆಯ ಕಾರಣಕ್ಕೆ ಕುಂಟೆ ಹೊಡೆಯದ ಕಾರಣ ಭಾರಿ ಕಳೆ ಬೆಳೆದಿದೆ. ಪ್ರಸ್ತುತ ರೈತರು ಮಳೆ ಬಿಡುವಿನ ಸಮಯದಲ್ಲಿ ಜೋಳದ ಸಾಲು ನಡುವೆ ನೇಗಿಲು ಹೂಡಿ ಕಳೆ ತೆಗೆಯುವ ಪ್ರಯತ್ನ ನಡೆಸಿದ್ದಾರೆ.
ಅತಿವೃಷ್ಟಿಯಿಂದಾಗಿ ಮೆಕ್ಕೆಜೋಳ ನಾಶವಾಗಿದೆ. ಗೊಬ್ಬರ ಬೀಜ ಹಾಗೂ ಬಿತ್ತನೆಗೆ ಖರ್ಚು ಮಾಡಿದ ಬಂಡವಾಳವೂ ಬರದಂತಾಗಿದೆ. ಸರ್ಕಾರ ಸೂಕ್ತ ಪರಿಹಾರ ನೀಡಬೇಕುಯುವರಾಜ ಗೌಡ ಸಂತೊಳ್ಳಿ ರೈತ
ಮೆಕ್ಕೆಜೋಳದ ಕ್ಷೇತ್ರದಲ್ಲಿ ನೀರು ನಿಲ್ಲದಂತೆ ಕ್ರಮವಹಿಸಬೇಕು. ಗದ್ದೆಗಳಲ್ಲಿ ಕಾಲುವೆ ತೋಡಿ ನೀರು ಹೊರಹಾಕಿದರೆ ಪರಿಣಾಮಕಾರಿಯಾಗಲಿದೆ–ಮಧುಕರ ನಾಯ್ಕ– ಕೃಷಿ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.