ಶುಕ್ರವಾರ, ಫೆಬ್ರವರಿ 3, 2023
24 °C
ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಸಿದ್ಧತೆ ಕೈಗೊಂಡ ನಗರಸಭೆ

ಶಿರಸಿ: ಬೀದಿನಾಯಿಗಳಿಗೆ ದೀರ್ಘಾವಧಿ ಬಂಧನ!

ಗಣಪತಿ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಬೀದಿನಾಯಿಗಳ ಸಂಖ್ಯೆ ನಿಯಂತ್ರಣದಲ್ಲಿಡುವ ಉದ್ದೇಶಕ್ಕೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಕೈಗೊಳ್ಳಲು ಎಂಟು ದಿನಗಳ ಹಿಂದೆಯೇ ನಗರಸಭೆ ಸುಮಾರು 30ಕ್ಕೂ ಹೆಚ್ಚು ನಾಯಿಗಳನ್ನು ಸೆರೆಹಿಡಿದು ಲಾಲಗೌಡರ್ ನಗರದಲ್ಲಿರುವ ತ್ಯಾಜ್ಯ ವಿಲೇವಾರಿ ಘಟಕದಲ್ಲಿರಿಸಿದೆ.

ಒಂದೆಡೆ ಬೀದಿನಾಯಿಗಳನ್ನು ವಾರಗಟ್ಟಲೆ ಸೆರೆಹಿಡಿದಿಟ್ಟಿರುವುದಕ್ಕೆ ಪ್ರಾಣಿಪ್ರಿಯರಿಂದ ಆಕ್ಷೇಪ ವ್ಯಕ್ತವಾಗಿದ್ದರೆ, ನಾಯಿ ಉಪಟಳದಿಂದ ಬೇಸತ್ತಿದ್ದ ಜನರು ಕ್ರಮವನ್ನು ಸ್ವಾಗತಿಸಿದ್ದಾರೆ. ಆರಕ್ಕೂ ಹೆಚ್ಚು ಪಂಜರಗಳನ್ನಿಟ್ಟು ಅದರಲ್ಲಿ ಸೆರೆಹಿಡಿಯಲ್ಪಟ್ಟ ನಾಯಿಗಳನ್ನು ಕೂಡಿ ಇಡಲಾಗಿದೆ.

ನಗರದಲ್ಲಿ ಬೀದಿನಾಯಿಗಳ ಸಂಖ್ಯೆ ಏರಿಕೆಯಾಗಿದ್ದು, ಹಲವೆಡೆ ನಾಯಿಯು ಮಕ್ಕಳ ಮೇಲೆ ದಾಳಿ ನಡೆಸಿದ ಘಟನೆಗಳು ನಡೆದಿದ್ದವು. ಕಳೆದ ವರ್ಷವಷ್ಟೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಯನ್ನು ನೂರಾರು ನಾಯಿಗಳಿಗೆ ನಗರಸಭೆ ಮಾಡಿದ್ದರೂ ಬೀದಿನಾಯಿ ಸಂಖ್ಯೆ ಹೆಚ್ಚಳವಾಗಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿತ್ತು.

ಶಿವಾಜಿಚೌಕ, ಹುಬ್ಬಳ್ಳಿ ರಸ್ತೆ, ಐದು ರಸ್ತೆ ಸೇರಿದಂತೆ ವಿವಿಧ ಭಾಗಗಳಲ್ಲಿ ಖಾಸಗಿ ಸಂಸ್ಥೆಯ ಸಿಬ್ಬಂದಿ ನಗರಸಭೆ ಸೂಚನೆ ಮೇರೆಗೆ ಕಳೆದ ವಾರ ನಾಯಿಗಳನ್ನು ಸೆರೆಹಿಡಿಯುವ ಕಾರ್ಯಾಚರಣೆ ಕೈಗೊಂಡಿದ್ದರು.

‘ಬೀದಿನಾಯಿಗಳಿಗೆ ಶಸ್ತ್ರಚಿಕಿತ್ಸೆ ನಡೆಸಿ ಅವುಗಳನ್ನು ಶೋಷಿಸುವುದು ತಪ್ಪು. ಅದರ ಬದಲು ನಾಯಿಗಳ ಉಪಟಳಕ್ಕೆ ನಗರಸಭೆ ಪರ್ಯಾಯ ಮಾರ್ಗ ಕಂಡುಕೊಳ್ಳಬೇಕಿತ್ತು. ವಾರಗಟ್ಟಲೆ ತ್ಯಾಜ್ಯ ವಿಲೇವಾರಿ ಘಟಕದಂತ ಸ್ಥಳಗಳಲ್ಲಿ ನಾಯಿಗಳನ್ನು ಕೂಡಿಡುವುದು ಪ್ರಾಣಿ ಹಿಂಸೆ ಮಾಡಿದಂತಾಗುತ್ತದೆ’ ಎಂದು ಪ್ರಾಣಿಪ್ರಿಯೆ ಜ್ಯೋತಿ ಶಿರ್ಸಿಕರ್ ಹೇಳಿದರು.

‘ಬೀದಿನಾಯಿ ಉಪಟಳ ತಡೆಯಲು ಸಾರ್ವಜನಿಕರು‌ ಮಾಡಿದ್ದ ಮನವಿಗೆ ಸ್ಪಂದಿಸಿದ ಕೆಲವು ಬೀದಿನಾಯಿಗಳನ್ನು ತುರ್ತಾಗಿ ಸೆರೆಹಿಡಿಯಲಾಗಿದೆ. ಅವುಗಳನ್ನು ಪ್ರಾಣಿ ಸಂರಕ್ಷಣಾ ಕಾಯ್ದೆಯ ನಿಯಮಾವಳಿ ಅನುಸರಿಸಿ ಸುರಕ್ಷಿತವಾಗಿ ಇಟ್ಟಿದ್ದೇವೆ. ನಿತ್ಯವೂ ಅವುಗಳಿಗೆ ಆಹಾರ, ನೀರು ಒದಗಿಸಲಾಗುತ್ತಿದೆ’ ಎಂದು ಪೌರಾಯುಕ್ತ ಕೇಶವ ಚೌಗುಲೆ ಪ್ರತಿಕ್ರಿಯಿಸಿದರು.

ಚರ್ಚಿಸುವ ಮೊದಲೇ ಸೆರೆ?

ಬೀದಿನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸುವ ಸಂಬಂಧ ಪಶು ಸಂಗೋಪನಾ ಇಲಾಖೆ ಜತೆ ಚರ್ಚಿಸುವ ಮುನ್ನವೇ ನಗರಸಭೆ ಬೀದಿನಾಯಿ ಸೆರೆಹಿಡಿಯುವ ಕಾರ್ಯಾಚರಣೆ ನಡೆಸಿರುವುದು ಚರ್ಚೆಗೆ ಗ್ರಾಸವಾಗಿದೆ. ಕಳೆದ ವಾರವೇ ನಗರಸಭೆ ಸೂಚನೆ ಮೇರೆಗೆ ಖಾಸಗಿ ಸಂಸ್ಥೆಯ ಸಿಬ್ಬಂದಿ ನಾಯಿಗಳನ್ನು ಸೆರೆಹಿಡಿದ್ದಾರೆ.

‘ನಗರಸಭೆಯಿಂದ ಮೂರು ದಿನದ ಹಿಂದೆ ಪತ್ರ ಬಂದಿದೆ. ಉಪನಿರ್ದೇಶಕರ ಗಮನಕ್ಕೆ ತಂದ ಬಳಿಕ ನಿರ್ಧರಿಸಲಾಗುವುದು’ ಎಂದು ಪಶು ಸಂಗೋಪನಾ ಇಲಾಖೆಯ ಹಿರಿಯ ಅಧಿಕಾರಿ ತಿಳಿಸಿದರು.

‘ಶಸ್ತ್ರಚಿಕಿತ್ಸೆ ನಡೆಸುವ ಮೂರು ದಿನದ ಮೊದಲು ಸಾಮಾನ್ಯವಾಗಿ ನಾಯಿ ಸೆರೆಹಿಡಿಯಲಾಗುತ್ತದೆ. ವಾರಗಟ್ಟಲೆ ಮೊದಲು ಸೆರೆಹಿಡಿದು ಕೂಡಿಡುವುದು ಸಮಂಜಸವಲ್ಲ’ ಎಂದರು.

--------------------

ಬೀದಿನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಲು ಪಶು ಸಂಗೋಪನಾ ಇಲಾಖೆಗೆ ಪತ್ರ ಬರೆಯಲಾಗಿದೆ. ರೇಬಿಸ್ ಲಸಿಕೆ ನೀಡುವಂತೆಯೂ ವಿನಂತಿಸಿದ್ದೇವೆ.

ಕೇಶವ ಚೌಗುಲೆ, ಪೌರಾಯುಕ್ತ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು