ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಬರಿದಾಯ್ತು ನದಿ ಒಡಲು, ಬಿಸಿಲ ಝಳಕ್ಕೆ ಒಣಗುತ್ತಿರುವ ಅಡಿಕೆ ಮರಗಳು

Published 15 ಮಾರ್ಚ್ 2024, 4:45 IST
Last Updated 15 ಮಾರ್ಚ್ 2024, 4:45 IST
ಅಕ್ಷರ ಗಾತ್ರ

ಶಿರಸಿ: ತಾಲ್ಲೂಕಿನ ಕೃಷಿ ಕ್ಷೇತ್ರದ ಜೀವನಾಡಿಯಾಗಿರುವ ಶಾಲ್ಮಲಾ, ಅಘನಾಶಿನಿ, ವರದಾ ಜಲಮೂಲಗಳು ಪ್ರಸಕ್ತ ಸಾಲಿನಲ್ಲಿ ಮಳೆಯ ಕೊರತೆ ಉಂಟಾಗಿರುವುದರಿಂದ ವಾಡಿಕೆಗೂ ಮೊದಲೇ ಬತ್ತಿವೆ. ನದಿಯಂಚಿನ ಸಾವಿರಾರು ಎಕರೆ ಅಡಿಕೆ ತೋಟಕ್ಕೆ ತಂಪು ವಾತಾವರಣ ಸಿಗದೆ ಸಂಕಷ್ಟ ತಂದೊಡ್ಡಿದೆ. 

ಶಾಲ್ಮಲಾ, ವರದಾ, ಅಘನಾಶಿನಿ ನದಿ ತಟದಲ್ಲಿ 10 ಸಾವಿರ ಹೆಕ್ಟೇರ್‌ಗಿಂತಲೂ ಹೆಚ್ಚು ಪ್ರದೇಶದಲ್ಲಿ ಅಡಿಕೆ ತೋಟವಿದೆ. ಬೇಸಿಗೆ ಆರಂಭದೊಂದಿಗೆ ಕೆಲವೆಡೆ ತಾತ್ಕಾಲಿಕ ಒಡ್ಡು ನಿರ್ಮಿಸಿ ತೋಟಗಳಿಗೆ ನೀರು ಹರಿಸಲಾಗುತ್ತಿತ್ತು. ಜತೆಗೆ ಕೆಲ ತೋಟಗಾರರು ವಿದ್ಯುತ್ ಪಂಪ್ ಮೂಲಕ ತೋಟಕ್ಕೆ ನೀರುಣಿಸುತ್ತಿದ್ದರು. ಇದರಿಂದ ತೋಟದ ಉಷ್ಣಾಂಶದಲ್ಲಿ ಬಹಳಷ್ಟು ಏರುಪೇರಾಗದೆ ಉತ್ಪನ್ನ ಉತ್ತಮವಾಗಿರುತ್ತಿತ್ತು.

ಆದರೆ ಈ ವರ್ಷ ಜಲಮೂಲಗಳ ಒಡಲು ಸಂಪೂರ್ಣ ಬರಿದಾಗಿದೆ. ಕೆಲವೆಡೆ ಒಡ್ಡು ಹಾಕಿದರೂ ಅದರಲ್ಲಿ ನೀರು ಸಂಗ್ರಹವಿಲ್ಲದೆ ಪ್ರಯೋಜನಕ್ಕೆ ಸಿಗುತ್ತಿಲ್ಲ. ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಿ ಅಡಿಕೆ ಮಿಳ್ಳೆ (ಎಳೆಯ ಕಾಯಿ) ನೆಲಕಚ್ಚುತ್ತಿದ್ದರೂ ನೀರು ಪೂರೈಸಲಾಗದೆ ತೋಟಗಾರರು ಆತಂಕಗೊಂಡಿದ್ದಾರೆ.

ಸ್ಥಗಿತಗೊಂಡ ಪಂಪ್‍ಸೆಟ್‍ಗಳು: ‘ಅನಾದಿ ಕಾಲದಿಂದಲೂ ನದಿಗಳ ನೀರನ್ನು ಕೃಷಿ, ತೋಟಗಾರಿಕಾ ಬೆಳೆಗಳಿಗೆ ಈ ಭಾಗದ ರೈತರು ಬಳಸಿಕೊಳ್ಳುತ್ತಾ ಬಂದಿದ್ದಾರೆ. ಅಂದಾಜು 5 ಸಾವಿರಕ್ಕೂ ಹೆಚ್ಚಿನ ಪಂಪ್‍ಸೆಟ್‌ಗಳು ಕಾರ್ಯನಿರ್ವಹಿಸುತ್ತಿವೆ. ಕೆಲ ವರ್ಷಗಳ ಹಿಂದೆ ಮಳೆ ಕೊರತೆಯಾದಾಗ ನದಿಗಳ ಗುಂಡಿಗಳಲ್ಲಿ ನೀರು ಇತ್ತು. ಆಗ ಅದನ್ನು ಬಳಸಿಕೊಂಡು ತೋಟಗಳ ರಕ್ಷಣೆ ಮಾಡಿಕೊಂಡಿದ್ದೆವು. ಈ ವರ್ಷ ಮಾರ್ಚ್ ಮಧ್ಯ ಭಾಗದಲ್ಲಿಯೇ ಗುಂಡಿಗಳ ನೀರು ಬತ್ತುವ ಹಂತಕ್ಕೆ ಬಂದಿದೆ. ಬಹುತೇಕ ಪಂಪ್‍ಸೆಟ್‍ಗಳನ್ನು ಸ್ಥಗಿತ ಮಾಡಲಾಗಿದೆ’ ಎನ್ನುತ್ತಾರೆ ಕೆಶಿನ್ಮನೆಯ ಗ್ರಾಮದ ಗಣಪತಿ ಭಟ್.

ಶುಂಠಿಗೆ ನೀರು: ಅಂತರ್ಜಲಕ್ಕೆ ಪೆಟ್ಟು

ಶಿರಸಿ ತಾಲ್ಲೂಕಿನ ಪೂರ್ವ ಭಾಗದಲ್ಲಿ ಎಂದೂ ಬತ್ತದ ಕೆರೆಗಳು ಬೇಸಿಗೆ ಮುನ್ನವೇ ಬತ್ತಿವೆ. ಗ್ರಾಮೀಣ ಜನರ ಜೀವನಾಡಿಯಾಗಿದ್ದ ಇಂತಹ ಕೆರೆಗಳಲ್ಲಿ ನೀರು ಒಣಗುತ್ತಿದ್ದಂತೆ ಕೃಷಿಕರು ಕಂಗಾಲಾಗಿದ್ದಾರೆ. ‘ಬನವಾಸಿ ಹೋಬಳಿಯಾದ್ಯಂತ ಭತ್ತವನ್ನು ಬೆಳೆಯುತ್ತಿದ್ದ ರೈತರು ಕಾರ್ಮಿಕರ ಜಾನುವಾರುಗಳ ಕೊರತೆಯಿಂದ ಭತ್ತ ಬೆಳೆಯದೆ ಶುಂಠಿ ಕೃಷಿ ಮಾಡುತ್ತಿದ್ದಾರೆ. ಅದಕ್ಕೆ ಅಳವಡಿಸಿರುವ ಕೊಳವೆ ಬಾವಿಯ ನೀರು ಮಾತ್ರ ಹಗಲಿರುಳೆನ್ನದೆ ಹರಿಯುತ್ತಲೇ ಇರುತ್ತದೆ. ಹೀಗಾದರೆ ಭೂಮಿಯೊಳಗಿನ ಅಂತರ್ಜಲದ ಪರಿಸ್ಥಿತಿ ಎಲ್ಲಿಗೆ ತಲುಪಬಹುದೆಂದು ಊಹಿಸಲು ಅಸಾಧ್ಯ. ವರದಾ ನದಿಯ ಜತೆಗೆ ಬೃಹತ್ ಕೆರೆಗಳೇ ಬತ್ತಿ ಹೋಗುತ್ತಿರುವುದು ಮಾತ್ರ ದುರಂತ’ ಎನ್ನುತ್ತಾರೆ ಸ್ಥಳೀಯ ಕೆರಿಯಾ ಗೌಡ.

ವಾರದೊಳಗೆ ಮಳೆ ಬೀಳದಿದ್ದರೆ ತೀವ್ರ ಸಂಕಷ್ಟ ಎದುರಾಗುವುದು ನಿಶ್ಚಿತ. ಕೇವಲ ಕೃಷಿಗಷ್ಟೇ ಅಲ್ಲ ಕುಡಿಯುವ ನೀರಿಗೂ ತೊಂದರೆ ಎದುರಾಗಲಿದೆ.
-ಆದರ್ಶ ಭಟ್ ಬಾಳೆಗದ್ದೆ, ಅಡಿಕೆ ಬೆಳೆಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT